ಕೊಟ್ಟ ಕುದುರೆಯನ್ನು ಏರದವನು ವೀರನೂ ಅಲ್ಲ, ಶೂರನೂ ಅಲ್ಲ- ಹೆಚ್.ಡಿಕೆ ವಿರುದ್ದ ಸಿದ್ಧರಾಮಯ್ಯ ಮತ್ತೆ ಕಿಡಿ.

ಬಾಗಲಕೋಟೆ,ಫೆಬ್ರವರಿ,27,2023(www.justkannada.in): ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರೆ ಅವರು ತಾಜ್ ​ವೆಸ್ಟ್​ಎಂಡ್​ನಲ್ಲಿ ಅಧಿಕಾರ ಮಾಡುತ್ತಿದ್ದರು. ಅವರು ಹೋಟೆಲ್​ನಿಂದ ಅಧಿಕಾರ ನಡೆಸುತ್ತಿದ್ದಕ್ಕೆ ಸರ್ಕಾರ ಪತನವಾಯಿತು. ಆದರೆ ಸಿದ್ದರಾಮಯ್ಯರಿಂದ ಸರ್ಕಾರ ಪತನ ಆಯ್ತು ಅಂತಾ ಆರೋಪಿಸುತ್ತಾರೆ. ಕೊಟ್ಟ ಕುದುರೆಯನ್ನು ಏರದವನು ವೀರನೂ ಅಲ್ಲ, ಶೂರನೂ ಅಲ್ಲ ಎಂದು ಮತ್ತೆ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ವಿಪಕ್ಷ ನಾಯಕ ಸಿದ್ಧರಾಮಯ್ಯ ಕಿಡಿಕಾರಿದರು.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ  ಮಾತನಾಡಿದ ಸಿದ್ಧರಾಮಯ್ಯ, ಅನ್ನ ಹಳಸಿತ್ತು ನಾಯಿ ಕಾದಿತ್ತು ಎಂಬಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ ಪತನಕ್ಕೆ ಬಿಜೆಪಿಯವರು ಕಾಯುತ್ತಿದ್ದರು,ಬಿಎಸ್ ವೈ  ಅವರು ದುಡ್ಡು ಇಟ್ಟುಕೊಂಡು ಕಾಯುತ್ತಿದ್ದರು. 17 ಶಾಸಕರಿಗೆ ಕೋಟಿ ಕೋಟಿ ಹಣ ಕೊಟ್ಟು ಖರೀದಿಸಿ ಅನೈತಿಕವಾಗಿ ಸರ್ಕಾರ ರಚಿಸಿದರು ಎಂದು  ಟೀಕಿಸಿದರು.

ಬಿಜೆಪಿ ನಾಯಕರು ಸುಳ್ಳು ಹೇಳುವುದರಲ್ಲಿ ಬಹಳ ನಿಸ್ಸೀಮರು. ಸುಳ್ಳೇ ಇವರ ಮನೆ ದೇವರು ಅಂತ ನಾನು ಆಗಾಗ ಹೇಳುತ್ತೇನೆ. ಹೇಗಾದರೂ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಅಮಿತ್​ ಶಾ ಮತ್ತು ಮೋದಿಯನ್ನು ಕರೆತರುತ್ತಿದ್ದಾರೆ. ಕಪ್ಪುಹಣ ತಂದು ಪ್ರತಿಯೊಬ್ಬರಿಗೂ 15 ಲಕ್ಷ ಕೊಡುವುದಾಗಿ ಹೇಳಿದ್ದರು. ಪ್ರಧಾನಿ ಮೋದಿ 15 ಪೈಸೆಯಾದರೂ ಕೊಟ್ಟಿದ್ದಾರಾ? ಉದ್ಯೋಗ ಕೊಡುತ್ತೇವೆ ಅಂತ ಹೇಳಿದರು, ಅದರಂತೆ ಉದ್ಯೋಗ ಕೊಡಿ ಅಂದರೆ ಮೋದಿಯವರು ಪಕೋಡಾ ಮಾರಿ ಅಂತಾರೆ. ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಅಂದರು, ಆದರೆ ಆಗಿದೆಯಾ? ರೈತರ ಸಾಲ ಮಾತ್ರ ದುಪ್ಪಟ್ಟಾಗಿದೆ ಎಂದು ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.

Key words: Former CM-Siddaramaiah-outrage-against-HD kumaraswamy