ಬಿಎಸ್ ವೈ ಮತ್ತು ಬೊಮ್ಮಾಯಿ ಅವರೇ ನನ್ನ ಹೆಸರೆತ್ತದೆಯೇ ಐದು ನಿಮಿಷ ಭಾಷಣ ಮಾಡಿ – ಸಿದ್ಧರಾಮಯ್ಯ ಸವಾಲು.

ಬೆಂಗಳೂರು,ಅಕ್ಟೋಬರ್,12,2022(www.justkannada.in): ಜನಸಂಕಲ್ಪ ಯಾತ್ರೆಗೆ ಹೊರಟಿರುವ ಮಾಜಿ ಮುಖ್ಯಮಂತ್ರಿವ ಬಿಎಸ್ ವೈ  ಮತ್ತು ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಅವರಿಗೆ ನನ್ನ ಎರಡೇ ಎರಡು ಸವಾಲು.. ಕಾರು-ಜೀಪು ಬಿಟ್ಟು ನಾಲ್ಕು ಕಿ.ಮೀ. ಎಡವದೆ ನಡೆದುಕೊಂಡು ಹೋಗಿ. ಸಿದ್ದರಾಮಯ್ಯ ಎಂಬ ಹೆಸರೆತ್ತದೆ ಐದು ನಿಮಿಷ ಭಾಷಣ ಮಾಡಿ  ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಸವಾಲು ಹಾಕಿದ್ದಾರೆ.

ಟ್ವೀಟ್ ಮಾಡಿ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದ ಮಾಜಿ ಸಿಎಂ ಸಿದ್ಧರಾಮಯ್ಯ,  ಸಿಎಂ ಬೊಮ್ಮಾಯಿ ಅವರಿಗೆ ಒಬ್ಬಂಟಿಯಾಗಿ ಯಾತ್ರೆ ಹೊರಡುವ ಧೈರ್ಯ ಇಲ್ಲ, ಜನ ಕಲ್ಲು ಹೊಡೆಯುತ್ತಾರೋ ಎಂಬ ಭಯ. ಇದಕ್ಕಾಗಿ ರಕ್ಷಣೆಗಾಗಿ ಬಿಎಸ್ ವೈ ಅವರನ್ನ ಜೊತೆಯಲ್ಲಿ ಕರೆದುಕೊಂಡು ಬಂದಿದ್ದಾರೆ.

ಮುಖ್ಯಮಂತ್ರಿ ಸ್ಥಾನವನ್ನು ಕಿತ್ತುಕೊಂಡಾಗ ಬಹಿರಂಗವಾಗಿಯೇ ಬಿಎಸ್ ವೈ ಅವರು ಕಣ್ಣೀರು ಹಾಕಿದ್ದನ್ನು ರಾಜ್ಯದ ಜನ ನೋಡಿದ್ದಾರೆ. ಅವರ ಬೆನ್ನಿಗೆ ಇರಿದವರು ಯಾರು ಎನ್ನುವುದೂ ಜನರಿಗೆ ಗೊತ್ತು. ಯಡಿಯೂರಪ್ಪನವರನ್ನು ಕರೆದುಕೊಂಡು ಬಂದ ಕೂಡಲೇ ಜನ ನಿಮ್ಮ ದ್ರೋಹವನ್ನು ಮರೆಯಲಾರರು ಎಂದು ಟೀಕಿಸಿದರು.

ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಹೇಳುವಂತೆ ಬೊಮ್ಮಾಯಿ ಅವರೊಬ್ಬ ‘ಎರಡುವರೆ ಸಾವಿರ ಕೋಟಿ ರೂಪಾಯಿಯ ಪೇ ಸಿಎಂ. ಹೈಕಮಾಂಡ್ ಗೆ ಸರಿಯಾಗಿ ಕಂತು ಪಾವತಿಯಾದರೆ ಮಾತ್ರ ಅವರು ಸುರಕ್ಷಿತ. ತಪ್ಪಿದರೆ ಮನೆಗೆ ಎಂದು ಲೇವಡಿ ಮಾಡಿದ್ದಾರೆ.

ರಾಹುಲ್ ಗಾಂಧಿಯವರನ್ನು ಬಚ್ಚಾ ಎಂದು ಹೇಳುವ ಬೊಮ್ಮಾಯಿ ಅವರೇ, ನಿಮ್ಮ ನರೇಂದ್ರ ಮೋದಿ ಅವರು ವಿಶ್ವಗುರು ಅಲ್ಲ ಅವರೊಬ್ಬ ಪುಕ್ಕಲು ಗುರು. ಅವರು ನಮ್ಮನ್ನು ಎದುರಿಸುವುದು ಬೇಡ, ಧೈರ್ಯವಿದ್ದರೆ ಒಂದು ಪತ್ರಿಕಾಗೋಷ್ಠಿ ನಡೆಸಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ಹೇಳಿ

ಪಾಪ ಬಿ ಎಸ್ ವೈ ಅವರು ಯಾರೋ ಬರೆದುಕೊಟ್ಟದ್ದನ್ನು ಓದಿ ನನ್ನ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಅವರು ಈ ರೀತಿ ಕಾಲ ವ್ಯರ್ಥ ಮಾಡುವುದರ ಬದಲಿಗೆ ಒಳ್ಳೆಯ ವಕೀಲರ ಜೊತೆ ಸಮಾಲೋಚಿಸಿ ಮತ್ತೊಮ್ಮೆ ಜೈಲು ಪಾಲಾಗದಂತೆ ನೋಡಿಕೊಳ್ಳುವುದು ಒಳ್ಳೆಯದು ಎಂದು ಸಿದ್ಧರಾಮಯ್ಯ ಟಾಂಗ್ ನೀಡಿದರು.

ಹಿಂದುಳಿದ ಜಾತಿಗಳಿಗೆ ಮೀಸಲಾತಿ ಕಲ್ಪಿಸಿದ ಮಂಡಲ್ ವರದಿಯಿಂದ ಹಿಡಿದು ಇಲ್ಲಿಯವರೆಗೆ ಮೀಸಲಾತಿಯನ್ನು ಅಡಿಯಿಂದ ಮುಡಿವರೆಗೆ ವಿರೋಧಿಸುತ್ತಾ ಬಂದಿರುವ ಬಿಜೆಪಿಯ ಡಿ.ಎನ್.ಎ ಯಲ್ಲಿಯೇ ಮೀಸಲಾತಿ ವಿರೋಧ ಇದೆ. ಈ ನಾಲ್ಕು ದಿನಗಳ ನಾಟಕದ ಮಾತುಗಳನ್ನು ನಂಬುವಷ್ಟು ಜನ ಮೂರ್ಖರಲ್ಲ ಎಂದು ಸಿದ್ಧರಾಮಯ್ಯ ಚಾಟಿ ಬೀಸಿದರು.

Key words: former CM-Siddaramaiah-bs yeddyurappa-CM-Basavaraj bommai