ಬಿಜೆಪಿ ವಿಕೃತ, ವಿಲಕ್ಷಣ, ವಿನಾಶಕಾರಿ ಪಕ್ಷ: ಬಡ ಯುವಕರ ರಕ್ತವೇ ಬಿಜೆಪಿ ಪಾಲಿನ ಅಧಿಕಾರಾಮೃತ- ಮಾಜಿ ಸಿಎಂ ಹೆಚ್.ಡಿಕೆ ಆಕ್ರೋಶ.

ಬೆಂಗಳೂರು,ಆಗಸ್ಟ್,2,2022(www.justkannada.in):  ಬಿಜೆಪಿ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಿರುವ ಮಾಜಿ ಮುಖ್ಯಮಂತ್ರಿ ಹೆಚ್.‌ಡಿ.ಕುಮಾರಸ್ವಾಮಿ ಅವರು; ಅದು ವಿಕೃತ, ವಿಲಕ್ಷಣ ಪಕ್ಷ ಎಂದು ಹೇಳಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಹೆಚ್.ಡಿ ಕುಮಾರಸ್ವಾಮಿ,  ನಾಗಮಂಗಲದ ಜೆಡಿಎಸ್ ಸಮಾವೇಶವನ್ನು ನಮ್ಮ ತಂದೆಯವರು ಬೆಂಗಳೂರಿನ ನಿವಾಸದಿಂದಲೇ ನೇರ ವೀಕ್ಷಣೆ ಮಾಡಿದ ಕ್ಷಣದಲ್ಲಿ ನಾನು, ನನ್ನ ಸಹೋದರ, ಅಲ್ಲಿದ್ದವರೆಲ್ಲರೂ ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರಿಟ್ಟಿದ್ದನ್ನು ಬಿಜೆಪಿ ವಿಕೃತವಾಗಿ ತಿರುಚಿದೆ. ಇನ್ನೊಬ್ಬರ ಕಣ್ಣೀರಿನ ಬಗ್ಗೆ ಇದೆಂಥಾ ವಿಕಾರ? ಇದೇನಾ ʼಸಂಘʼ ಕಲಿಸಿದ ಸಂಸ್ಕಾರ? ಛೇ!! ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಬಿಜೆಪಿ ವಿಲಕ್ಷಣ, ವಿಕೃತ ಪಕ್ಷ. ಭೀಭತ್ಸ ಬಿಜೆಪಿ. ಅಪರೇಷನ್‌ ಕಮಲವನ್ನೇ ನೆಚ್ಚಿಕೊಂಡ ವಿನಾಶಕಾರಿ ಪಕ್ಷ. ಕಗ್ಗೊಲೆಗಳೇ ಅದರ ಕಸುಬು, ಬಡಯುವಕರ ರಕ್ತವೇ ಅದರ ಪಾಲಿನ ʼಅಧಿಕಾರಾಮೃತʼ. ಅದೆಷ್ಟು ಹೆತ್ತ ಕರುಳುಗಳು ಕಣ್ಣೀರಿಡುತ್ತಿವೆ. ಅದಕ್ಕೆ ಉತ್ತರ ಕೊಡುವ ನೈತಿಕತೆ ಇದೆಯಾ? ಆಮೇಲೆ ನನ್ನ ಕಣ್ಣೀರ ಬಗ್ಗೆ ಮಾತನಾಡಿ ಎಂದು ಟಾಂಗ್‌ ನೀಡಿದ್ದಾರೆ.

ನಾನು ಇನ್ನೊಬ್ಬರ ಕಣ್ಣೀರಿನ ಬಗ್ಗೆ, ಭಾವೋದ್ವೇಗದ ಕುರಿತು ಲಘುವಾಗಿ ಮಾತನಾಡಲಾರೆ. ಆದರೂ ವಿಕೃತ ಬಿಜೆಪಿಗೆ ನೆನಪು ಮಾಡಿಕೊಡಲು ಬಯಸುತ್ತೇನೆ. ಅಧಿಕಾರ ಹೋಗುತ್ತದೆ ಎಂದು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ʼನಲ್ಲಿ ವಿದಾಯ ಭಾಷಣ ಮಾಡುತ್ತಾ ವೇದಿಕೆಯ ಮೇಲೆಯೇ ಕಣ್ಣೀರಧಾರೆ ಹರಿಸಿದವರು ಯಾವ ಪಕ್ಷದವರು? ಎಂದು ಬಿಜೆಪಿ ಮೇಲೆ ಚಾಟಿ ಬೀಸಿದ್ದಾರೆ.

ಪ್ರವಾಹಕ್ಕೆ ತುತ್ತಾಗಿ ಸತ್ತವರ ಬಗ್ಗೆ ಹನಿ ಕಂಬನಿ ಇಲ್ಲ, ಪಾತಕ ರಾಜಕೀಯಕ್ಕೆ ನಡುರಸ್ತೆಗಳಲ್ಲಿ ಕೊಲೆಯಾದ ಯುವಕರ ಬಗ್ಗೆ ಎಳ್ಳಷ್ಟು ಕರುಣೆ ಇಲ್ಲ. ಬಣ್ಣದ ಮಾತು, ಕೃತಕ ಸಾಂತ್ವನ. ಆದರೂ, ಸಿನಿಮಾದಲ್ಲಿ ನಾಯಿ ಸತ್ತ ದೃಶ್ಯ ನೋಡಿ ಮಾಧ್ಯಮಗಳ ಮುಂದೆ ಗಳಗಳನೇ ಕಣ್ಣೀರಕೋಡಿ ಹರಿಸಿದ ಮಹಾಶಯರು ಯಾವ ಪಕ್ಷದ ಮುಖ್ಯಮಂತ್ರಿಗಳು? ಸ್ವಲ್ಪ ಹೇಳಿ? ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೆಸರು ಹೇಳದೆಯೇ ಛೇಡಿಸಿದ್ದಾರೆ.

ಹೌದು. ಅಳುವೇ ನಮ್ಮ ಸಹಜ ಧರ್ಮ. ಆದರೆ ನಿಮ್ಮಂತೆ ಇನ್ನೊಬ್ಬರನ್ನು ಅಳಿಸುವ ರಾವಣ ಸಂಸ್ಕೃತಿಯಲ್ಲ. ಬದುಕಿಗೆ ಬೆಂಕಿ ಇಡಲ್ಲ. ಮತ್ತೊಬ್ಬರ ಮಕ್ಕಳ ಸಾವಿನಿಂದ ಉನ್ಮಾದಗೊಂಡು ರಣಕೇಕೆ ಹಾಕುತ್ತಿಲ್ಲ.

ಹಿಂಸೆ, ಕಗ್ಗೊಲೆಯೇ ನಿಮ್ಮ ಧರ್ಮ, ಹೌದಲ್ಲವೇ? ಎಂದಿರುವ ಅವರು; ಕೊಲೆಗಳನ್ನೇ ಸೋಪಾನ ಮಾಡಿಕೊಂಡು ʼಕಾಶಿ ಕಾರಿಡಾರುʼ ಮಾಡಿ ಮೆರೆದರೆ ಆ ಶಿವ ಮೆಚ್ಚಾನೆಯೇ?. ನಮ್ಮ ಜನತಾ ಜಲಧಾರೆ ನಿಮ್ಮನ್ನು ವಿಚಲಿತಗೊಳಿಸಿದೆ ಎನ್ನುವುದಕ್ಕೆ ನಿಮ್ಮ ಈ ವ್ಯರ್ಥ ಪ್ರಲಾಪವೇ ಸಾಕ್ಷಿ. ಇಡೀ ರಾಜ್ಯವೇ ಕಣ್ಣೀರಧಾರೆಯಲ್ಲಿ ಕೈತೊಳೆಯುತ್ತಿದೆ. ಮಾಧ್ಯಮಗಳಲ್ಲಿ ಕರ್ನಾಟಕವೇ ತೇಲುತ್ತಿರುವ ದೃಶ್ಯಗಳು ಕಣ್ಣಿಗೆ ಕಾಣುತ್ತಿಲ್ಲವೇ? ನೆರೆ ಸೃಷ್ಟಿಸಿದ ಭೀಭತ್ಸತೆ ಬಿಜೆಪಿಗೆ ಕಾಣತ್ತಿಲ್ಲವೇಕೆ? ಎಂದು ಟೀಕಿಸಿದ್ದಾರೆ.

ಸಾಯಿ ಲೇಔಟ್‌ ಪುನಾ ತೇಲುತ್ತಿದೆ. ಅರ್ಕಾವತಿ ಲೇಔಟ್‌ ಪಕ್ಕದ ಆರ್ತನಾದ ಕೇಳುತ್ತಿಲ್ಲವೆ ಬಿಜೆಪಿಗರೇ? ಬೆಂಗಳೂರಿನ ಬಹುತೇಕ ಪ್ರದೇಶಗಳು ಜಲಾವೃತವಾಗಿ ದ್ವೀಪಗಳಾಗಿವೆ. ಅಲ್ಲಿ ಹರಿಯುತ್ತಿರುವುದು ನಿಜಕ್ಕೂ ಜನರ ಕಣ್ಣೀರಧಾರೆ. ʼಕೊಮುಪೊರೆʼಯ ಅಮಲಿನಲ್ಲಿ ಮುಚ್ಚಿಹೋಗಿರುವ ನಿಮ್ಮ ಕಣ್ಣುಗಳಿಗೆ ಜನರ ಕಣ್ಣೀರು ಕಾಣುವುದಿಲ್ಲ, ಅಲ್ಲವೇ?. ಸರಣಿ ಕಗ್ಗೊಲೆಗಳು,ಆಚಾರ,ವಿಚಾರ,ವ್ಯಾಪಾರ,ಉಡುಗೆ-ತೊಡುಗೆ; ಅಷ್ಟೇ ಏಕೆ? ತಿನ್ನುವ ಅನ್ನದಲ್ಲೂ ನಿಮ್ಮ ವಿಕೃತಿ ಮೆರೆದಿದೆ. ತಂದೆ-ಮಕ್ಕಳ ಬಾಂಧವ್ಯದ ಬಗ್ಗೆ ವಿಕೃತಿ ತೋರುವ ನಿಮಗೆ, ಬಾಂಧವ್ಯಗಳ ಬಗ್ಗೆ ಜನರೇ ಪಾಠ ಕಲಿಸುವ ದಿನ ಹತ್ತಿರದಲ್ಲಿದೆ. ನಾವು ಮುಳುಗುವುದು, ತೇಲುವುದು ಆಮೇಲೆ. ನಿಮ್ಮನ್ನು ಜನ ಮುಳುಗಿಸಿಬಿಟ್ಟಾರು! ಎಚ್ಚರಿಕೆ!! ಎಂದು ತಿರುಗೇಟು ನೀಡಿದ್ದಾರೆ.

30 ಸೀಟು ಉಳಿಸಿಕೊಳ್ಳಲು ನಾವು ಹೆಣಗುತ್ತಿದ್ದೇವೆ ಎನ್ನುತ್ತೀರಿ. ಅಧಿಕಾರಕ್ಕಾಗಿ ಇದೇ 30 ಸೀಟಿನ ಪಕ್ಷದ ಬಾಗಿಲಿಗೆ ಬಂದು ನಿಂತಿದ್ದನ್ನು ಮರೆತುಬಿಟ್ಟಿರಾ? ಇಡೀ ದೇಶದ ತುಂಬೆಲ್ಲ ʼಆಪರೇಷನ್‌ ಕಮಲʼದ ಗಬ್ಬುನಾತ ಹಬ್ಬಿದೆ. ಅಸಹ್ಯ ಎನಿಸುವುದಿಲ್ಲವೇ ನಿಮಗೆ?. ಮುಂದಿನ ಚುನಾವಣೆಯ ಹವಾಮಾನ ಹೇಗಿರುತ್ತದೆ ಎಂಬುದು ನಿಮಗೂ ಚೆನ್ನಾಗಿ ಗೊತ್ತು. ಎಷ್ಟು ಸಮೀಕ್ಷೆ ಮಾಡಿಸಿದ್ದೀರಿ ಅನ್ನುವುದು ನನಗೂ ಗೊತ್ತು. ಮೂರಂಕಿ ಮೀರದ ನೀವು ವಿಕೃತಿ ಮೆರೆದು ರಕ್ತಪಾತ ಸೃಷ್ಟಿಸುತ್ತಿದ್ದೀರಿ. ಪ್ರತಿಕೂಲಕರ ವಾತಾವರಣ ಯಾರಿಗೆ ಸೃಷ್ಟಿಯಾಗುತ್ತದೋ ಕಾದು ನೋಡುವಿರಂತೆ ಎಂದು  ಬಿಜೆಪಿಗೆ ಹೆಚ್ಡಿಕೆ ಕುಟುಕಿದ್ದಾರೆ.

Key words: Former CM -HDK -outraged -against -BJP