ಶಾಸಕ ಜಿ.ಟಿ.ದೇವೆಗೌಡ ಪಕ್ಷ ತೊರೆಯುವ ಬಗ್ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಏನಂದ್ರು..?

ಮೈಸೂರು,ಸೆಪ್ಟಂಬರ್,1,2021(www.justkannada.in): ಶಾಸಕ ಜಿ.ಟಿ.ದೇವೆಗೌಡ ಪಕ್ಷ ತೊರೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಜೆಡಿಎಸ್ ಬಾಗಿಲು ದೊಡ್ಡದಾಗಿ ತೆರೆದಿದೆ. ಬರುವವರು ಬರಬಹುದು, ಹೋಗೋರು ಹೋಗಬಹುದು ಎಂದಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಎರಡು ವರ್ಷದ ಹಿಂದೇನೆ ಪಕ್ಷದಿಂದ ದೂರ ಸರಿದಿದ್ದೇನೆ ಎಂದು ಅವರೇ ಹೇಳಿದ್ದಾರೆ. ಈಗ ಒಂದು ನೆಪ ಹೇಳಿ ಹೋಗೋಕೆ ಮುಂದಾಗಿದ್ದಾರೆ. ದ್ರಾಕ್ಷಿ ಕೈಗೆಟುಕದಿದ್ದಾಗ ನರಿ ಹೇಳುವ ಕಥೆಯಂತಾಗಿದೆ. ಈಗ ನನ್ನಿಂದ ಹೊರಹೋಗುವುದಾದರೆ 2008 ರಲ್ಲಿ ಯಾವ ಕಾರಣಕ್ಕಾಗಿ ಬಿಜೆಪಿಗೆ ಹೋದರು…? ಎಂದು ಶಾಸಕ ಜಿಟಿ ದೇವೇಗೌಡರಿಗೆ  ಟಾಂಗ್‌ ನೀಡಿದರು.

ಹೆಚ್.ಡಿ ದೇವೇಗೌಡರು ಸಿಎಂಗೆ ಮಾರ್ಗದರ್ಶನ ಮಾಡಿತ್ತಿದ್ದಾರೆಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ಬೊಮ್ಮಾಯಿ ಅಧಿಕಾರ ತೆಗೆದುಕೊಂಡ ನಂತರ ದೇವೇಗೌಡರ ಭೇಟಿಯಾಗಿದ್ದರು. ನಂತರ ಯಾವುದೇ ಭೇಟಿ ಮಾಡಿಲ್ಲ.ದೂರವಾಣಿಯಲ್ಲೂ ಸಿಎಂರನ್ನ ದೇವೇಗೌಡರು ಸಂಪರ್ಕಿಸಿದ ಯಾವುದೇ ಮಾಹಿತಿ ಇಲ್ಲ. ಸಂಪರ್ಕವೇ ಇಲ್ಲದಿದ್ದಾಗ ಸಲಹೆ ಮಾರ್ಗದರ್ಶನ ವಿಚಾರ ಬರುವುದೇ ಇಲ್ಲ. ಬೊಮ್ಮಾಯಿ‌ ಅಧಿಕಾರ ಸ್ವೀಕರಿಸಿ‌ ಒಂದು ತಿಂಗಳಾಗಿದೆ. ಈಗಾಗಲೇ ಸರ್ಕಾರ ನಡೆಯುತ್ತಿದೆ ಎಂಬುದು ಹೇಳೋದು ಕಷ್ಟ. ಹಳೆ‌ ಇಂಜಿನ್ ಕೆಟ್ಟು ಹೋಗಿದೆ ಎಂದು ಹೊಸ ಇಂಜಿನ್ ಹಾಕಲಾಗಿದೆ. ಆದರೆ ಬೋಗಿಯ ಇಂಜಿನ್‌ಗಳೆಲ್ಲವು ಕೊಳೆತು ಹೋಗಿವೆ. ಪರಿಸ್ಥಿತಿ ಈಗಿದ್ದಾಗ ಭ್ರಷ್ಟಾಚಾರ ಮುಕ್ತ ಆಡಳಿತ ಸಾಧ್ಯವೇ.? ಎಂದು ಪ್ರಶ್ನಿಸಿದರು.

ಹಬ್ಬಕ್ಕೆ ಯಾವುದೇ ನಿರ್ಬಂಧ ಹಾಕಬೇಡಿ.

ಗಣೇಶ ಹಬ್ಬ ಆಚರಣೆಗೆ ಅನುಮತಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ಹಬ್ಬಕ್ಕೆ ಯಾವುದೇ ನಿರ್ಬಂಧ ಹಾಕಬೇಡಿ. ರಾಜಕಾರಣಿಗಳು ಸಮಾವೇಶ ಯಾತ್ರೆಗಳನ್ನ ಮಾಡುತ್ತಿಲ್ಲವಾ.? ಹಿಂದೂಪರ ಎಂದು ಹೇಳುವ ಸರ್ಕಾರ ಗಣೇಶ ಹಬ್ಬಕ್ಕೆ ನಿರ್ಬಂಧ ಹಾಕಿದರೆ ಹೇಗೆ.? ಇದು ಇವರ ಮನಸ್ಥಿತಿ ತೋರಿಸುತ್ತದೆ. ಮುಕ್ತವಾಗಿ ಗಣೇಶ ಹಬ್ಬ ಆಚರಿಸಲು ಅವಕಾಶ ಕೊಡಿ ಎಂದು ಆಗ್ರಹಿಸಿದರು.

ಮಂಡ್ಯದಲ್ಲಿ ಸಂಸದೆ ಸುಮಲತಾ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ವಿಚಾರ ಕುರಿತು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಮನೆ ಮಾಡುವುದೇ ಮುಖ್ಯವಲ್ಲ. ಜನರನ್ನು ಭೇಟಿ ಮಾಡಿ ಸಮಸ್ಯೆ ಕೇಳೋದು ಮುಖ್ಯ. ಸುಮಲತಾ ಅವರು ಮನೆ ಮಾಡಿದರೆ ಸಂತೋಷ. ಇದರಿಂದ ನಮ್ಮ ಮೇಲಿನ ಒತ್ತಡ ಕಡಿಮೆ ಆಗುತ್ತೆ.ಜನರ ಸಮಸ್ಯೆ ಕೇಳಿ ಬಗೆಹರಿಸಲಿ. ಮನೆ ಮಾಡುವುದರಿಂದಲೇ ಎಲ್ಲ ಸಮಸ್ಯೆ ಬಗೆಹರಿಯಲ್ಲ. ಮನೆ ಮಾಡಿದ ಬಳಿಕ ಮನೆಯೊಳಗೆ ಕುಳಿತರೆ ಪ್ರಯೋಜನ ಆಗಲ್ಲ. ನಾನು ರಾಮನಗರ, ಚನ್ನಪಟ್ಟಣದಲ್ಲಿ ಮನೆ ಮಾಡಿದ್ದೀನಾ.?  ಸಾ.ರಾ.ಮಹೇಶ್ ಕೂಡ ಕೆ‌.ಆರ್.ನಗರದಲ್ಲಿ ಮನೆ ಮಾಡಿಲ್ಲ.  ಜನರೊಂದಿಗೆ ಹೇಗೆ ಸಂಪರ್ಕದಲ್ಲಿ ಇರಬೇಕು ಅನ್ನೋದು ನಮ್ಮ ಮೇಲೆಯೇ ಇದೆ ಎಂದರು.

ಜೆಡಿಎಸ್‌ನ ಫ್ಯೂಸ್ ಕೀಳಲು ಯಾರಿಂದಲೂ ಸಾಧ್ಯವಿಲ್ಲ

ಜೆಡಿಎಸ್‌ನ ಫ್ಯೂಸ್ ಕೀಳಲು ಯಾರಿಂದಲೂ ಸಾಧ್ಯವಿಲ್ಲ. ಜೆಡಿಎಸ್‌ ಗ್ರೌಂಡಿಂಗ್ ಬಹಳ ಭದ್ರವಾಗಿದೆ. ಕಾರ್ಯಕರ್ತರೇ ನಮಗೆ ಗ್ರೌಂಡಿಗ್. ಈ ರೀತಿಯ ಹೇಳಿಕೆಗಳಿಂದ ಜೆಡಿಎಸ್ ಕುಂದಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

ಅತೀ ಶೀಘ್ರದಲ್ಲೇ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ.

ಅತೀ ಶೀಘ್ರದಲ್ಲೇ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ. ಮೊದಲ ಹಂತದಲ್ಲಿ 100ಕ್ಕೂ ಹೆಚ್ಚು ಅಭ್ಯರ್ಥಿಗಳ ಹೆಸರು ಫೈನಲ್ ಮಾಡಿದ್ದೇನೆ. ಇನ್ನೂ 10-15 ಅಭ್ಯರ್ಥಿಗಳ ಹೆಸರು ಪಟ್ಟಿಗೆ ಸೇರಿಕೊಳ್ಳುತ್ತೇವೆ.ಸಿದ್ದತೆಯ ದೃಷ್ಟಿಯಿಂದ ಎಲ್ಲರಿಗೂ ಬಿಡದಿಯ ನನ್ನ ತೋಟದ ಮನೆಯಲ್ಲಿ ಎರಡು ದಿನಗಳ ಕಾರ್ಯಗಾರವನ್ನೂ ಆಯೋಜನೆ ಮಾಡಿದ್ದೇನೆ. ಮಿಷನ್ 123 ಅನ್ನೋದು ನನ್ನ ಸ್ಪಷ್ಟ ಧ್ಯೇಯ. ಮುಂದಿನ ಬಾರಿ ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ. ಕಲಬುರುಗಿ ಸ್ಥಳೀಯ ಸಂಸ್ಥೆ ಚುನಾವಣೆಯಿಂದಲೇ ಕಾರ್ಯಕರ್ತರ ಹುಮ್ಮಸ್ಸು ಎಲ್ಲರಿಗೂ ಗೊತ್ತಾಗಲಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

Key words: Former CM -HD Kumaraswamy- talks -about -leaving -MLA GT Deve Gowda- party.