Friday, September 25, 2026

BDA Apartments

Home Front Page ಟಿಕೆಟ್ ಕೊಡಿಸಿದ್ದು ನಾನು, ಕುತ್ತಿಗೆ ಕೊಯ್ದು ಹೋದ ನಿನ್ನಿಂದ ನಾನು ಪಾಠ ಕಲಿಯಬೇಕಿಲ್ಲ- ಸಚಿವ ನಾರಾಯಣಗೌಡಗೆ...

ಟಿಕೆಟ್ ಕೊಡಿಸಿದ್ದು ನಾನು, ಕುತ್ತಿಗೆ ಕೊಯ್ದು ಹೋದ ನಿನ್ನಿಂದ ನಾನು ಪಾಠ ಕಲಿಯಬೇಕಿಲ್ಲ- ಸಚಿವ ನಾರಾಯಣಗೌಡಗೆ ಹೆಚ್.ಡಿಕೆ ತಿರುಗೇಟು.

ಬೆಂಗಳೂರು,ಏಪ್ರಿಲ್,1,2023(www.justkannada.in):   ಹೆಚ್.ಡಿ ದೇವೇಗೌಡರ ಕುಟುಂಬ ಯಾರನ್ನೂ ಬೆಳೆಯಲು ಬಿಟ್ಟಿಲ್ಲ. ಜೆಡಿಎಸ್ ನಲ್ಲಿ ಒಬ್ಬರನ್ನ ಬೆಳೆಸಲು ಇನ್ನೊಬ್ಬರನ್ನು ತುಳಿಯುತ್ತಾರೆ  ಎಂದು ಟೀಕಿಸಿದ್ದ ಸಚಿವ ನಾರಾಯಣಗೌಡರಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

 ಟಿಕೆಟ್​​ ಕೊಡಿಸಿದ್ದು ನಾನು, ಕುತ್ತಿಗೆ ಕೊಯ್ದು ಹೋದವನು ನೀನು. ನಿನ್ನಿಂದ ಪಾಠ ಕಲಿಯುವ ಅಗತ್ಯ ನನಗಿಲ್ಲ ಎಂದು ಸಚಿವ ಕೆಸಿ ನಾರಾಯಣಗೌಡ ವಿರುದ್ಧ ಹೆಚ್.ಡಿ ಕುಮಾರಸ್ವಾಮಿ  ಕಿಡಿಕಾರಿದರು.

ಇಂದು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಇವರನ್ನು ಬೆಳೆಸುವುದಕ್ಕೆ ನಾನು ಪಕ್ಷ ಹಾಳುಮಾಡಿಕೊಳ್ಳಬೇಕಾ? ಇವರೇನು ಮಹಾನ್​​ ಕೆಲಸ ಮಾಡಿದ್ದಾರಾ..? ಅಂದು ಕೃಷ್ಣ ವಿರುದ್ಧ ಅಭ್ಯರ್ಥಿ ಆಗಬೇಕು ಅಂತಾ ಬಂದಾಗ ಪರಿಜ್ಞಾನ ಇರಲಿಲ್ವಾ ಎಂದು ಪ್ರಶ್ನಿಸಿದರು.

ನಿನ್ನ ನಡವಳಿಕೆ ನೋಡಿ ಟಿಕೆಟ್ ನೀಡಲಿಲ್ಲ. ಎರಡನೇ ಬಾರಿಗೆ ಟಿಕೆಟ್ ಕೊಡಬಾರದು ಅಂತ ಇದ್ದಿದ್ದು. ನಿನ್ನ ನಡವಳಿಕೆ ನೋಡಿ ಟಿಕೆಟ್ ಬೇಡ ಅಂತ ಇದ್ದೆವು. ಆದರೆ ಟಿಕೆಟ್ ಕೊಟ್ಟವರು ಯಾರು? ಟಿಕೆಟ್ ಕೊಡಿಸಿದವನು ನಾನು, ಕುತ್ತಿಗೆ ಕುಯ್ದು ಹೋದವನು ನೀನು. ನಿನ್ನಿಂದ ಪಾಠ‌ ಕಲಿಬೇಕಿಲ್ಲ ನಿನ್ನ ಕಾಲ ಮುಗಿದಿದೆ. ಈ ಬಾರಿಯ ಚುನಾವಣೆಯಲ್ಲಿ ಕೆ ಆರ್ ಪೇಟೆ ಜನ ಪಾಠ ಕಲಿಸುತ್ತಾರೆ  ಎಂದು ವಾಗ್ದಾಳಿ ನಡೆಸಿದರು.

ಜೆಡಿಎಸ್ ಕಾರ್ಯಕರ್ತರಿಗೆ ಅಧಿಕಾರಿಗಳಿಂದ ಕಿರುಕುಳ ಆರೋಪ  ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ನಮ್ಮ ಕಾರ್ಯಕರ್ತರಿಗೆ ಧಮ್ಕಿ, ಕಿರುಕುಳ ನೀಡುವುದು ನಡೆಯುತ್ತಿದೆ. ಬೇರೆ ಪಕ್ಷದಿಂದ ಬೇಸತ್ತು ಜೆಡಿಎಸ್ ಪಕ್ಷಕ್ಕೆ ಬರುವವರಿಗೆ ಬೆದರಿಕೆ ಹಾಕಲಾಗುತ್ತಿದೆ. ಕೆಲವೊಂದು ಕಡೆ ಪೊಲೀಸರ ಮಧ್ಯಸ್ಥಿಕೆಯಲ್ಲಿ ಹೆದರಿಸುತ್ತಿದ್ದಾರೆ. ಪೊಲೀಸರಿಗೆ ಎಚ್ಚರಿಕೆ ನೀಡುತ್ತಿದ್ದೇನೆ, 1 ತಿಂಗಳಷ್ಟೇ ನಿಮ್ಮ ಸಮಯ. ಸರ್ಕಾರಿ ಅಧಿಕಾರಿಗಳು ಕಾನೂನಿನ ಅಡಿಯಲ್ಲಿ ಕೆಲಸ ಮಾಡಬೇಕು. ಶಾಸಕರಿಗೆ ಅಡಿಯಾಳಾಗಿ ಕೆಲಸ ಮಾಡಿದರೆ ಪ್ರಾಯಶ್ಚಿತ್ತವಾಗುತ್ತದೆ. ಜೂನ್ ಬಳಿಕ ಅಧಿಕಾರಿಗಳಿಗೆ ಪ್ರಾಯಶ್ಚಿತ್ತವಾಗಲಿದೆ ಎಂದು ಎಚ್ಚರಿಕೆ ನೀಡಿದರು.

Key words:  Former CM-HD kumaraswamy- outrage-Minister- Narayanagowda.