ಸುಸಜ್ಜಿತ ಆಹಾರ ಸಂಸ್ಕರಣ ಘಟಕ: ಲುಲು ಗ್ರೂಪ್ ಅಧಿಕಾರಿಗಳ ಜೊತೆ ಸಚಿವ ಎಂ.ಬಿ.ಪಾಟೀಲ್ ಮಾತುಕತೆ.

ಬೆಂಗಳೂರು,ಮಾರ್ಚ್,2,2024(www.justkannada.in):  ಬಹುರಾಷ್ಟ್ರೀಯ ಕಂಪನಿಯಾದ ಲುಲು ಗ್ರೂಪ್, ರಫ್ತು ಆಧಾರಿತ ಸುಸಜ್ಜಿತ ಆಹಾರ ಸಂಸ್ಕರಣ ಘಟಕವನ್ನು ವಿಜಯಪುರದಲ್ಲಿ ಸ್ಥಾಪಿಸುತ್ತಿದ್ದು ಪೂರ್ವಭಾವಿಯಾಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರ ಜತೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಮಾತುಕತೆ ನಡೆಸಿದರು.

ಖನಿಜ ಭವನದಲ್ಲಿ ನಡೆದ ಸಭೆಯಲ್ಲಿ ಲುಲು ಗ್ರೂಪ್ ನ ರಫ್ತು ವಿಭಾಗದ ಸಿಇಒ ನಜ್ಬುದ್ಧೀನ್, ನಿರ್ದೇಶಕ ಅನಂತ ಸೇರಿದಂತೆ ಅವರ ತಂಡ‌ ಭಾಗವಹಿಸಿತ್ತು.

ಲುಲು ಗ್ರೂಪ್‌ ನ‌ ತಂಡ ಸದ್ಯದಲ್ಲೇ ವಿಜಯಪುರಕ್ಕೆ ಭೇಟಿ ನೀಡಲಿದ್ದು, ಆಹಾರ ಸಂಸ್ಕರಣಾ ಘಟಕವನ್ನು ಎಲ್ಲಿ ಸ್ಥಾಪಿಸಿದರೆ ಸೂಕ್ತ ಎಂಬುದನ್ನು ಖುದ್ದು ಸ್ಥಳ ಪರಿಶೀಲಿಸಲಿದೆ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.

ಸ್ವಿಟ್ಜರ್ಲೆಂಡ್‌‌ ನ ದಾವೋಸ್ ನಲ್ಲಿ‌ ಇತ್ತೀಚೆಗೆ ನಡೆದ‌ ವಿಶ್ವ ಆರ್ಥಿಕ ಸಮಾವೇಶದಲ್ಲಿ ವಿಜಯಪುರದಲ್ಲಿ 300 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಆಹಾರ ಸಂಸ್ಕರಣಾ ಘಟಕ ಸ್ಥಾಪನೆಗೆ ಲುಲು ಗ್ರೂಪ್ ಆಸಕ್ತಿ ತೋರಿ, ಒಪ್ಪಂದಕ್ಕೂ ಸಹಿ ಹಾಕಿತ್ತು. ಅದರ ಮುಂದುವರಿದ ಭಾಗವಾಗಿ ಇವತ್ತಿನ ಈ ಸಭೆ ನಡೆದಿದ್ದು, ಸರ್ಕಾರದ ಕಡೆಯಿಂದ ಪೂರ್ಣ ಸಹಕಾರ ನೀಡಲಾಗುವುದು ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

ದೇಶಿ  ಮತ್ತು ರಫ್ತು ಮಾರುಕಟ್ಟೆಗಳಿಗೆ ಪೂರೈಸಲು ಸ್ಥಳೀಯ ಆಹಾರ ಉತ್ಪನ್ನಗಳನ್ನು  ಖರೀದಿಸಿ ಅವುಗಳ ಶ್ರೇಣೀಕರಣ, ವಿಂಗಡಣೆ ಮತ್ತು ಪ್ಯಾಕೇಜಿಂಗ್‌ ಉದ್ದೇಶಕ್ಕೂ ಈ ಘಟಕ ನೆರವಾಗಲಿದೆ ಎಂದು ಅವರು ವಿವರಿಸಿದರು. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್ ಸೆಲ್ವಕುಮಾರ್ ಸೇರಿದಂತೆ ಇತರರು ಸಭೆಯಲ್ಲಿ ಇದ್ದರು.

Key words: food processing plant – Vijayapura- Minister -MB Patil – Lulu Group -officials.