ನಾಳೆಯಿಂದ ಲಾಲ್ ​​ಬಾಗ್​ ನಲ್ಲಿ ಫ್ಲವರ್ ಶೋ

ಬೆಂಗಳೂರು, ಜನವರಿ, 13,2026 (www.justkannada.in): ಗಣರಾಜ್ಯೋತ್ಸವದ ಅಂಗವಾಗಿ ನಾಳೆಯಿಂದ(ಜನವರಿ 14) ಸಸ್ಯಕಾಶಿ ಲಾಲ್ ​ಬಾಗ್ ​ನಲ್ಲಿ ಫಲಪುಷ್ಪ ಪ್ರದರ್ಶನವನ್ನ ಏರ್ಪಡಿಸಲಾಗಿದೆ.

ತೋಟಗಾರಿಕಾ ಇಲಾಖೆ ವತಿಯಿಂದ ಜನವರಿ 14ರಿಂದ  ಜನವರಿ 26ರವರೆಗೆ  ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡಿದೆ. ಜ.14ರ ಸಂಜೆ 4 ಗಂಟೆಗೆ ಸಿಎಂ, ಡಿಸಿಎಂ ಮತ್ತು ಸಂಸದ ತೇಜಸ್ವಿ ಸೂರ್ಯ ಕುಟುಂಬ ಸದಸ್ಯರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.

ಈ ಬಾರಿ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಜೀವನಕ್ಕೆ ಸಂಬಂಧಿಸಿದಂತೆ ಫ್ಲವರ್ ಶೋ ಆಯೋಜಿಸಲಾಗಿದೆ. ಈ ಕುರಿತು ಮಾಹಿತಿ ನೀಡಿರುವ  ತೋಟಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಆರ್.ಗಿರೀಶ್, ಜನವರಿ 14ರಂದು ಉದ್ಘಾಟನೆ ಬಳಿಕ ಸಂಜೆ 5 ಗಂಟೆ ನಂತರ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶವಿದೆ. ಪರಿಸರ, ಪ್ರಾಣಿ-ಪಕ್ಷಿಗಳ ಪ್ರೇಮಿ, ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಜೀವನ ಕುರಿತು ಈ ಭಾರಿಯ ಪ್ಲವರ್ ಶೋ ಇರಲಿದೆ.

​ ಫ್ಲವರ್ ಶೋ ವೀಕ್ಷಿಸಲು ವಯಸ್ಕರಿಗೆ ಸಾಮಾನ್ಯ ದಿನಗಳಲ್ಲಿ 80 ರೂ ಹಾಗೂ ರಜೆ ದಿನಗಳಲ್ಲಿ 100 ರೂ ಟಿಕೆಟ್ ದರ ಇರಲಿದ್ದು, ಮಕ್ಕಳಿಗೆ 30 ರೂ, 6 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶ ಇರಲಿದೆ. ಫಲಫುಷ್ಪ ಪ್ರದರ್ಶನಕ್ಕೆ ಆಗಮಿಸುವವರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Key words: Flower show, Lalbagh, tomorrow