ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ: ನೆರವಿಗೆ ಬರುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ ಸಂಸದ ಡಾ.ಎಲ್.ಹನುಮಂತಯ್ಯ..

ನವದೆಹಲಿ,ಆ,6,2019(www.justkannada.in): ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು  ನೆರವಿಗೆ ಬರುವಂತೆ ಕೇಂದ್ರ ಸರ್ಕಾರಕ್ಕೆ ಸಂಸದ ಡಾ.ಎಲ್.ಹನುಮಂತಯ್ಯ ಅವರು ಆಗ್ರಹಿಸಿದ್ದಾರೆ.

ಇಂದು ರಾಜ್ಯಸಭೆಯ “ಶೂನ್ಯ ವೇಳೆಯಲ್ಲಿ” ಕರ್ನಾಟಕದ ಮಾನ್ಯ ಸಂಸದರಾದ ಡಾ.ಎಲ್.ಹನುಮಂತಯ್ಯ ಅವರು ಮಾತನಾಡಿ – ಕರ್ನಾಟಕದಲ್ಲಿ, ಹಲವಾರು ಜಿಲ್ಲೆಗಳು ಭಾರಿ ಮಳೆಯಿಂದ ಪ್ರಭಾವಿತವಾಗಿವೆ ಹಾಗೂ ಮಹಾರಾಷ್ಟ್ರದಲ್ಲಿನ ಭಾರಿ ಮಳೆಯಿಂದಾಗಿ ಅಲ್ಲಿಯ ಅಣೆಕಟ್ಟುಗಳಿಂದ ರಾಜ್ಯಕ್ಕೆ ಹರಿಯುವ ನದಿಗಳಿಗೆ ನೀರು ಬಿಡುತ್ತಿರುವುದರಿಂದ ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಮತ್ತು ಯಾದಗಿರಿ ಈ ಐದು ಜಿಲ್ಲೆಗಳು ಪ್ರವಾಹಕ್ಕೆ ಸಿಲುಕಿದೆ.  ಮಹಾರಾಷ್ಟ್ರವು ಕೊಯ್ನಾ, ವಾರಣಾ ಮತ್ತು ಇತರ ಜಲಾಶಯಗಳಿಂದ ಕೃಷ್ಣ ನದಿಗೆ ಹೆಚ್ಚಿನ ನೀರನ್ನು ಬಿಡುಗಡೆ ಮಾಡಿರುವುದರಿಂದ ಎರಡು ದಿನಗಳಲ್ಲಿ ಪರಿಸ್ಥಿತಿ ಹದಗೆಟ್ಟಿದ್ದು, ಇದರಿಂದಾಗಿ ಆಲ್ಮಟ್ಟಿ ಮತ್ತು ನಾರಾಯಣಪುರ ಅಣೆಕಟ್ಟುಗಳಿಗೆ ಹೆಚ್ಚಿನ ಒಳಹರಿವು ಉಂಟಾಗಿದೆ.

ಭಾನುವಾರ,  ಕೃಷ್ಣ ಜಲಾನಯನ ಪ್ರದೇಶದಿಂದ ಕೆಳಗಿರುವ ಬೆಳಗಾವಿ, ಬಾಗಲಕೋಟ್ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಹೆಚ್ಚಿನ ಗ್ರಾಮಗಳು ಮುಳುಗಿದ್ದು ಆಸ್ತಿ ಮತ್ತು ಬೆಳೆಗಳಿಗೆ ಭಾರಿ ಹಾನಿಯಾಗಿದೆ. ರಸ್ತೆ ಸೇತುವೆಗಳು ನೀರಿನಲ್ಲಿ ಮುಳುಗಿ ಹಲವಾರು ಹಳ್ಳಿಗಳು ದ್ವೀಪಗಳಾಗಿಬಿಟ್ಟಿವೆ. ಆಲ್ಮಟ್ಟಿ ಅಣೆಕಟ್ಟಿನಿಂದ ಭಾರಿ ಪ್ರಮಾಣದ ನೀರು ಬಿಡುಗಡೆಯಾಗುತ್ತಿದ್ದು, ಜಲಾಶಯದಿಂದ ಕೆಳಗಿರುವ ಪ್ರದೇಶಗಳಲ್ಲಿನ ಬೆಳೆಗಳು ಮತ್ತು ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ. ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ನೂರಾರು ಎಕ್ಕರೆ ಬೆಳೆಗಳು ಪ್ರವಾಹದ ನೀರಿನಲ್ಲಿ ಮುಳುಗಿ ಹೋಗಿವೆ. ಜೂನ್ 1 ರಿಂದ ಇದುವರೆಗೆ ರಾಜ್ಯದಲ್ಲಿ 14% ಹೆಚ್ಚುವರಿ ಮಳೆಯಾಗಿದ್ದು, ಬಾಗಲಕೋಟೆ ಮತ್ತು ಬೆಳಗಾವಿಯಲ್ಲಿ ಗರಿಷ್ಟ ಮಳೆಯಾಗಿದೆ. ಇದರಿಂದ ಚಿಕ್ಕೋಡಿಯಲ್ಲಿ 35ಕ್ಕೂ ಹೆಚ್ಚು ಹಳ್ಳಿಗಳು ಭಾಗಶಃ ಮುಳುಗಿದ್ದು, ನೂರಾರು ಜನರು ನಿರಾಶ್ರಿತರಾಗಿದ್ದಾರೆ.  ಕರ್ನಾಟಕದ ಪ್ರವಾಹದ ಪರಿಸ್ಥಿತಿ ವರದಿಯ ಪ್ರಕಾರ, ರಾಜ್ಯದ 12 ಜಿಲ್ಲೆಗಳು  ಮತ್ತು 68 ಹಳ್ಳಿಗಳು ಜೂನ್ 1 ರಿಂದ ಕೊನೆಯ 24 ಗಂಟೆಗಳ ಅವಧಿಯಲ್ಲಿ ಸುರಿದಿರುವ ಭಾರಿ ಮಳೆಯಿಂದ ಪ್ರಭಾವಿತಗೊಂಡಿವೆ. ಈ ಪ್ರವಾಹದಿಂದ ಸಾವಿರಾರು ಜನರು ಬಾಧಿತರಾಗಿದ್ದಾರೆ ಮತ್ತು ನೂರಾರು ಮನೆಗಳು ಮುಳುಗಿಹೋಗಿವೆ ಮತ್ತು ನೂರಾರು ಪ್ರಾಣಿಗಳು ಮತ್ತು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ರಾಜ್ಯಸಭೆಯಲ್ಲಿ ಮಾಹಿತಿ ನೀಡಿದರು.

ಈ ಪರಿಸ್ಥಿತಿಯ ಬಗ್ಗೆ ತಕ್ಷಣ ಗಮನ ಹರಿಸಬೇಕು ಮತ್ತು ಪ್ರಭಾವಿತಗೊಂಡಿರುವ ಜನರು, ಪ್ರಾಣಿಗಳ ರಕ್ಷಿಸಲು ಮತ್ತು ಪೀಡಿತ ಗ್ರಾಮಗಳನ್ನು ಪುನರ್ವಸತಿಗೊಳಿಸಲು ಕರ್ನಾಟಕ ರಾಜ್ಯಕ್ಕೆ ಹಣವನ್ನು ಬಿಡುಗಡೆ ಮಾಡಬೇಕೆಂದು ಹಾಗೂ ಅಂತಿಮ ಮೊತ್ತವನ್ನು ರಾಜ್ಯಕ್ಕೆ ಬಿಡುಗಡೆ ಮಾಡಲು ಮೌಲ್ಯಮಾಪನ ಮಾಡಲು ತಂಡವನ್ನು ಕಳುಹಿಸುವುದು ಅವಶ್ಯಕ ಎಂದು ಸರ್ಕಾರವನ್ನು ಒತ್ತಾಯಿಸಿ ಈ ವಿಷಯವನ್ನು ತುರ್ತು ಪರಿಸ್ಥಿತಿ ಎಂದು ಪರಿಗಣಿಸಿ ಮತ್ತು ಹಣವನ್ನು ತಕ್ಷಣ ಬಿಡುಗಡೆ ಮಾಡುವಂತೆ ಹನುಮಂತಯ್ಯ ಕೋರಿದರು.

Key words: Flooding- situation -North Karnataka-Dr H Hanumanthaiah- urged – central government