ಜುಲೈ 29 ರಿಂದ ಮೈಸೂರು ನಾಗರೀಕ ಸಮಿತಿಯಿಂದ ಧ್ವಜ ಸತ್ಯಾಗ್ರಹ.

ಮೈಸೂರು,ಜುಲೈ,27,2022(www.justkannada.in): ಖಾದಿ ವಸ್ತ್ರದ ಜಾಗದಲ್ಲಿ ವಿದೇಶಿ ವಸ್ತ್ರಗಳ ಅಳವಡಿಕೆ ಹೆಚ್ಚುತ್ತಿದ್ದು ವಿದೇಶಿ ವಸ್ತ್ರದಿಂದ ರಾಷ್ಟ್ರಧ್ವಜವನ್ನೂ ತಯಾರಿಸಲಾಗುತ್ತಿದೆ.  ಹೀಗೆ ಮಾಡಿ ಈಗಾಗಲೇ ವಿದೇಶಿ ಆರ್ಥಿಕತೆ ಹಾಗೂ ವಿದೇಶಿ ಸಂಸ್ಕೃತಿಗಳ ದಾಸ್ಯಕ್ಕೆ ತಳ್ಳುವ ಕೆಲಸವಾಗುತ್ತಿದ್ದು ಈ ಹಿನ್ನೆಲೆಯಲ್ಲಿ ವಿದೇಶಿ ವಸ್ತ್ರ ತಿರಸ್ಕರಿಸುವ ನಿಟ್ಟಿನಲ್ಲಿ  ಮೈಸೂರು ನಾಗರೀಕ ಸಮಿತಿಯು ಧ್ವಜ ಸತ್ಯಾಗ್ರಹವನ್ನ ಹಮ್ಮಿಕೊಂಡಿದೆ.

ಜುಲೈ 29 ರಿಂದ ಮೈಸೂರು ನಾಗರೀಕ ಸಮಿತಿಯಿಂದ ಧ್ವಜ ಸತ್ಯಾಗ್ರಹ ಕಾರ್ಯಕ್ರಮ ಆರಂಭವಾಗಲಿದೆ. ಜುಲೈ 29ರ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ 403, ಶ್ಯಾಗಲೆ ಭವನ, ಮೂರನೆಯ ಹಂತ, ಕಾಂಟೂರ್‌ ರಸ್ತೆ, ಗೋಕುಲಂ, ಮೈಸೂರು ಇಲ್ಲಿ  ಕಲಾವಿದ ದ್ವಾರಕಿ ಅವರ ನೇತೃತ್ವದಲ್ಲಿ ಕಲಾಶಿಬಿರ ಆಯೋಜಿಸಲಾಗಿದೆ.  ಕೆನ್ ಕಲಾ ಶಾಲೆಯ ವಿದ್ಯಾರ್ಥಿಗಳು ಕಲಾಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಜುಲೈ 30ರಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ಸತ್ಯಾಗ್ರಹ ಸಮಿತಿಯ ಪ್ರತಿನಿಧಿ ಸಭೆ ನಡೆಯಲಿದೆ. ಜುಲೈ 31ರಂದು 10.30ಕ್ಕೆ ಗಾಂಧಿಚೌಕ, ಟೌನ್‌ ಹಾಲ್‌ ನಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಪಾದಯಾತ್ರೆ ನಡೆಯಲಿದ್ದು, ಸಂಜೆ 5ರವರೆಗೆ ಸತ್ಯಾಗ್ರಹ ನಡೆಯಲಿದೆ.

ಆಗಸ್ಟ್ 1 ರಿಂದ ಕರ್ನಾಟಕದ ವಿವಿಧ ಭಾಗಗಳಲ್ಲಿ ಸತ್ಯಾಗ್ರಹದ ಆರಂಭವಾಗಲಿದೆ.  ಬೆಂಗಳೂರು, ತುಮಕೂರು, ಚಾಮರಾಜನಗರ, ಸಾಗರ, ಇತ್ಯಾದಿ ಕಡೆಗಳಲ್ಲಿ ರಾಷ್ಟ್ರಧ್ವಜ ಸತ್ಯಾಗ್ರಹ ನಡೆಯಲಿದೆ. ಆಗಸ್ಟ್ 8 ರಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ಸರ್ವ ಸೇವಾಸಂಘದ ಸಭೆ ಆಯೋಜಿಸಲಾಗಿದೆ. ಇನ್ನು ಆಗಸ್ಟ್ 10 ಮತ್ತು 11ರ ಸಂಜೆ 7 ಗಂಟೆಯಿಂದ 9 ಗಂಟೆವರೆಗೆ ಕಲಾಮಂದಿರ, ಕಿರುರಂಗಮಂದಿರದಲ್ಲಿ  ಧ್ವಜ ಸತ್ಯಾಗ್ರಹವನ್ನು ಕುರಿತಂತಹ ‘ಒಣಶುಂಠಿ’, ನಗೆನಾಟಕ  ವನ್ನ ನವೋದಯ ತಂಡ ಪ್ರದರ್ಶಿಸಲಿದೆ.

ಆಗಸ್ಟ್ 14 ಭಾನುವಾರ, ಬೆಂಗಳೂರು ನಗರ ರಾಗಿಕಣದಲ್ಲಿ ಧ್ವಜ ಸತ್ಯಾಗ್ರಹ ನಡೆಯಲಿದ್ದು, ಮುಂದಿನ ಕಾರ್ಯಕ್ರಮಗಳ ಮಾಹಿತಿಯನ್ನು ಕಾಲಕಾಲಕ್ಕೆ ಬಿಡುಗಡೆಗೊಳಿಸಲಾಗುವುದು ಎಂದು ಮೈಸೂರು ನಾಗರೀಕ ಸಮಿತಿ ಸಂಚಾಲಕ ಕಾಳಚನ್ನೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Key words: Flag Satyagraha -Mysore Civic Committee – 29th July.