ಬೆಂಗಳೂರು,ಫೆಬ್ರವರಿ,16,2026 (www.justkannada.in): ರಾಜ್ಯಕ್ಕೆ ಪ್ರತ್ಯೇಕ ಎಂಎಸ್ ಎಂಇ ನೀತಿ ಮತ್ತು ವಿಶೇಷ ಉತ್ತೇಜಕ ಕ್ರಮಗಳ ಮೂಲಕ ಸಣ್ಣ, ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಗೆ ಬಜೆಟ್ ನಲ್ಲಿ ಆದ್ಯತೆ ನೀಡಿ ಎಂದು ಎಫ್ ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ ಮನವಿ ಮಾಡಿದ್ದಾರೆ.
ಮಾರ್ಚ್ 6 ರಂದು ರಾಜ್ಯ ಬಜೆಟ್ ಹಿನ್ನೆಲೆಯಲ್ಲಿ ಎಫ್ ಕೆಸಿಸಿಐ ವತಿಯಿಂದ ತಮ್ಮ ಬೇಡಿಕೆಗಳನ್ನ ಮಂಡಿಸಿರುವ ಅಧ್ಯಕ್ಷೆ ಉಮಾ ರೆಡ್ಡಿ ಅವರು, ನಮ್ಮ ವ್ಯಾಪಾರೋದ್ಯಮಿಗಳು ಮತ್ತು ಕೈಗಾರಿಕಾ ಸಂಘಗಳ ಸದಸ್ಯರು, ವಿವಿಧ ಸಂಘಗಳು ಮತ್ತು ಜಿಲ್ಲಾ ವಾಣಿಜ್ಯ ಮಂಡಳಿಗಳು ಸಲ್ಲಿಸಿರುವ ಮನವಿಗಳ ಆಧಾರದ ಮೇಲೆ ರಾಜ್ಯ ಸರ್ಕಾರ ಪರಿಗಣಿಸಬೇಕಾದ ಪ್ರಮುಖ ವಿಷಯಗಳನ್ನು ಇಲ್ಲಿ ಮಂಡಿಸಲಾಗಿದೆ.
ಎಫ್ ಕೆಸಿಸಿಐ ವತಿಯಿಂದ 2026-27ನೇ ಸಾಲಿನ ಅಯವ್ಯಯದ ನಿರೀಕ್ಷೆಗಳು ಹೀಗಿವೆ…
- ಆರ್ಥಿಕ ಚೇತರಿಕೆ, ಹೂಡಿಕೆ ಪುನಶ್ಚೇತನ, ಕೈಗಾರಿಕಾ ಬೆಳವಣಿಗೆ ಮತ್ತು ಬೆಂಗಳೂರಿನ ಆಚೆಗೂ (Beyond Bengaluru) ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಮೂಲಸೌಕರ್ಯ ಅಭಿವೃದ್ಧಿ, ಕೈಗಾರಿಕಾ ಎಸ್ಟೇಟ್‌ಗಳನ್ನು ಮೇಲ್ದರ್ಜೆಗೆ ಏರಿಸುವುದು ಮತ್ತು ಕೈಗಾರಿಕಾ ಟೌನ್ ಶಿಪ್ ಗಳ ಸ್ಥಾಪನೆ, ರಾಜ್ಯಕ್ಕೆ ಪ್ರತ್ಯೇಕ ಎಂಎಸ್‌ಎಂಇ ನೀತಿ ಮತ್ತು ವಿಶೇಷ ಉತ್ತೇಜಕ ಕ್ರಮಗಳ ಮೂಲಕ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಗೆ ಆದ್ಯತೆ ನೀಡುವುದು.
- ಎಲ್ಲಾ ಕೈಗಾರಿಕಾ ಎಸ್ಟೇಟ್‌ಗಳು, ಕೈಗಾರಿಕಾ ಪಾರ್ಕ್‌ಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುವುದು.
- ಕೈಗಾರಿಕೆ ಮತ್ತು ಸೇವಾ ವಲಯದ ಉದ್ಯಮಗಳ ಆಸ್ತಿ ತೆರಿಗೆಯನ್ನು ತರ್ಕಬದ್ಧಗೊಳಿಸಬೇಕು.
- ಕೌಶಲ್ಯಾಭಿವೃದ್ಧಿ ಚಟುವಟಿಕೆಗಳಿಗೆ ಉತ್ತೇಜನ.
- ರಾಜ್ಯದಲ್ಲಿ ಪ್ರವಾಸೋದ್ಯಮ ವಲಯದ ಬೆಳವಣಿಗೆಗೆ ಉತ್ತೇಜನ.
- ಇಂಧನ ವಲಯ ಮತ್ತು ಹಸಿರು ಇಂಧನಕ್ಕೆ ನೆರವು.
- ಉದ್ಯಮಿಗಳು ‘ವ್ಯವಹಾರ ನಡೆಸುವ ಪ್ರಕ್ರಿಯೆ ಸರಳೀಕರಣ.
- ಕೃಷಿ ಕ್ಷೇತ್ರದ ಅಭಿವೃದ್ಧಿಗೆ ವೇಗ ನೀಡುವುದು.
- ಉತ್ಪಾದನಾ ವಲಯದಲ್ಲಿ ಉತ್ತಮ ಬೆಳವಣಿಗೆಗೆ ಸಾಧಿಸಲು ಪ್ರೋತ್ಸಾಹ.
- ಕೈಗಾರಿಕಾ ವಲಯಕ್ಕೆ ಸಾಲದ ಹರಿವನ್ನು ಹೆಚ್ಚಿಸುವುದು.
- ಹಳೇ, ಅಪ್ರಸ್ತುತ ಕಾನೂನುಗಳ ರದ್ದತಿ.
- ಸಂಪನ್ಮೂಲಗಳ ಸಮರ್ಪಕ ಹಂಚಿಕೆ.
ಕೈಗಾರಿಕೆ, ವ್ಯಾಪಾರ ಮತ್ತು ಇತರ ಸೇವೆಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಸರ್ಕಾರಕ್ಕೆ ಎಫ್‌ಕೆಸಿಸಿಐ ಸಲ್ಲಿಸುತ್ತಿರುವ ಪ್ರಮುಖ ಶಿಫಾರಸುಗಳು
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಬೆಂಬಲ: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ವಲಯವು ಭಾರತದ ಆರ್ಥಿಕತೆಯ ಅತ್ಯಂತ ವೈವಿಧ್ಯಮಯ, ದೃಢವಾದ ಮತ್ತು ಪ್ರಬಲವಾದ ಆಧಾರ ಸ್ತಂಭಗಳಲ್ಲಿ ಒಂದಾಗಿದೆ. ಬೃಹತ್ ಕೈಗಾರಿಕೆಗಳಿಗೆ ಹೋಲಿಸಿದರೆ ಈ ವಲಯದ ಉದ್ಯಮಗಳು ಕಡಿಮೆ ಬಂಡವಾಳದೊಂದಿಗೆ ದೊಡ್ಡ ಪ್ರಮಾಣದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದರ ಜೊತೆಗೆ, ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳ ಕೈಗಾರಿಕೀಕರಣಕ್ಕೆ ಈ ವಲಯವು ಒಂದು ಶಕ್ತಿಯುತ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಮೂಲಕ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಿ, ರಾಷ್ಟ್ರೀಯ ಆದಾಯ ಮತ್ತು ಸಂಪತ್ತಿನ ಸಮಾನ ಹಂಚಿಕೆಯನ್ನು ಉತ್ತೇಜಿಸುತ್ತದೆ. ಎಂಎಸ್ಎಂಇಗಳು ದೇಶದ ಎರಡನೇ ಅತಿದೊಡ್ಡ ಉದ್ಯೋಗ ಸೃಷ್ಟಿ ವಲಯವಾಗಿದೆ. ಆಗಾಧ ಗಾತ್ರ, ವಿಶಾಲ ವ್ಯಾಪ್ತಿ, ವೈವಿಧ್ಯತೆ ಮತ್ತು ಉದ್ಯಮಶೀಲತೆಯ ಆಳವಾದ ಅನುಭವದಿಂದಾಗಿ ಭಾರತದ ಕೈಗಾರಿಕಾ ಪರಿಸರ ವ್ಯವಸ್ಥೆಯ ಬೆನ್ನೆಲುಬಾಗಿ ನಿಂತಿವೆ.
ಎಂಎಸ್ಎಂಇಗಳ ಬೆಳವಣಿಗೆಯನ್ನು ಉತ್ತೇಜಿಸಲು ‘ಗ್ಲೋಬಲ್ ಎಂಎಸ್ಎಂಇ ಕಾನ್ಕ್ಲೇವ್ 2026’ ಅನ್ನು ಆಯೋಜಿಸಲಾಗುತ್ತಿದೆ. ಇದು ಎಂಎಸ್ಎಂಇಗಳು, ಸಾರ್ವಜನಿಕ ವಲಯದ ಉದ್ಯಮಗಳು (ಪಿ ಎಸ್ ಯು) ನೀತಿ ನಿರೂಪಕರು, ಉದ್ಯಮದ ಮುಖಂಡರು, ನಾವೀನ್ಯಕಾರರು ಮತ್ತು ಉದ್ಯಮಿಗಳನ್ನು ಒಂದೇ ವೇದಿಕೆಗೆ ತರುವ ಕಾರ್ಯಕ್ರಮವಾಗಿದೆ.
ಈ ಸಮ್ಮೇಳನವು ಎಂಎಸ್ಎಂಇಗಳು ಉದ್ಯಮದ ಇತ್ತೀಚಿನ ಬೆಳವಣಿಗೆಗಳಿಗೆ ಅನುಗುಣವಾಗಿ ಸನ್ನದ್ಧರಾಗಲು ಸಹಾಯ ಮಾಡುತ್ತದೆ. ಭವಿಷ್ಯದ ತಂತ್ರಜ್ಞಾನ ಬದಲಾವಣೆಗಳಿಗೆ ಹೊಂದಿಕೊಳ್ಳುವಂತೆ ಮತ್ತು ಮುಂದಿನ ಹಂತದ ಯೋಜನೆಗಳನ್ನು ಒಳಗೊಳ್ಳುವ ಸುಸ್ಥಿರ ಬೆಳವಣಿಗೆಯನ್ನು ಮುನ್ನಡೆಸಲು, ಸಬಲೀಕರಣ ಮಾಡುವ ಗುರಿಯನ್ನು ಹೊಂದಿದೆ.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು ಪೀಣ್ಯ ಕೈಗಾರಿಕಾ ಸಂಘ ಮತ್ತು ಇತರ ಪ್ರಮುಖ ಕೈಗಾರಿಕಾ ಸಂಘಗಳ ಸಹಯೋಗದೊಂದಿಗೆ 2026ರ ಮೇ 29 ರಿಂದ 31 ರವರೆಗೆ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ‘ಗ್ಲೋಬಲ್ ಎಂಎಸ್ಎಂಇ ಕಾನ್ಕ್ಲೇವ್ – 2026’ ಅನ್ನು ಆಯೋಜಿಸಲು ಉದ್ದೇಶಿಸಿದೆ.
2024 ಮತ್ತು 2025ರಲ್ಲಿ ನಡೆದ ‘ಇಂಡಿಯಾ ಎಂಎಸ್ಎಂಇ ಕಾನ್ಕ್ಲೇವ್’ನ ಅಭೂತಪೂರ್ವ ಯಶಸ್ಸಿನ ನಂತರ, 2026ರ ಈ ಆವೃತ್ತಿಯನ್ನು ಜಾಗತಿಕ ಮಟ್ಟದಲ್ಲಿ ಆಯೋಜಿಸಲಾಗುತ್ತಿದೆ. ಇದು ವಿವಿಧ ದೇಶಗಳ ಉದ್ಯಮಿಗಳು, ನೀತಿ ನಿರೂಪಕರು, ಸಾರ್ವಜನಿಕ ವಲಯದ ಉದ್ಯಮಗಳು, ಹೂಡಿಕೆದಾರರು, ವ್ಯಾಪಾರ ಸಂಸ್ಥೆಗಳು ಮತ್ತು ಸರ್ಕಾರಿ ಏಜೆನ್ಸಿಗಳನ್ನು ಒಂದೆಡೆ ಸೇರಿಸಲಿದೆ. ಎಂಎಸ್ಇ ಕ್ಷೇತ್ರದಲ್ಲಿ ಕರ್ನಾಟಕವನ್ನು ನಾವೀನ್ಯತೆ, ಉತ್ಪಾದನೆ ಮತ್ತು ರಫ್ತಿನ ಜಾಗತಿಕ ಕೇಂದ್ರವನ್ನಾಗಿ ರೂಪಿಸುವ ಗುರಿಯನ್ನು ಹೊಂದಲಾಗಿದೆ.
ಗ್ಲೋಬಲ್ ಎಂಎಸ್ಎಂಇ ಕಾನ್ಕ್ಲೇವ್ – 2026 ರ ಪ್ರಮುಖ ಅಂಶಗಳು:
- ಅಂತಾರಾಷ್ಟ್ರೀಯ ಪ್ರದರ್ಶನ: ಎಂಜಿನಿಯರಿಂಗ್, ಕೃತಕ ಬುದ್ಧಿಮತ್ತೆ (ಎಐ), ಆಟೊಮೇಷನ್, ಸುಧಾರಿತ ಉತ್ಪಾದನಾ ತಂತ್ರಜ್ಞಾನ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿನ ನಾವೀನ್ಯತೆಗಳ ಪ್ರದರ್ಶನ.
- ಖರೀದಿದಾರರು-ಮಾರಾಟಗಾರರ ಸಮಾವೇಶ: ಭಾರತೀಯ ರಫ್ತುದಾರರನ್ನು ಜಾಗತಿಕ ಖರೀದಿದಾರರೊಂದಿಗೆ ಸಂಪರ್ಕಿಸುವ ವೇದಿಕೆ.
- ತಜ್ಞರ ನೇತೃತ್ವದ ಚರ್ಚೆಗಳು: ಕೈಗಾರಿಕಾ ವಲಯದ ಮುಖಂಡರು ಮತ್ತು ಸರ್ಕಾರದ ವಿವಿಧ ಇಲಾಖೆಗಳ ಮುಖ್ಯಸ್ಥರೊಂದಿಗೆ ನೀತಿ-ನಿರೂಪಣೆ ಸಂಬಂಧಿಸಿದ ಸಂವಾದ ಮತ್ತು ಚರ್ಚೆಗಳು.
- ಜಾಗತಿಕ ಬಿ2ಬಿ ಮತ್ತು ಬಿ2ಜಿ ಸಭೆಗಳು: ರಫ್ತು ಉತ್ತೇಜನ, ತಂತ್ರಜ್ಞಾನ ವರ್ಗಾವಣೆ ಮತ್ತು ಹೊಸ ಮಾರುಕಟ್ಟೆ ಪ್ರವೇಶಕ್ಕಾಗಿ ಜಾಗತಿಕ ಬಿ2ಬಿ ಮತ್ತು ಬಿ2ಜಿ ಸಭೆಗಳು.
- ದೇಶಿಯ ಪೆವಿಲಿಯನ್‌ಗಳು: ಭಾರತೀಯ ಉದ್ಯಮಗಳ ವಿಶೇಷ ಮಳಿಗೆಗಳ ಸ್ಥಾಪನೆ.
- ವೆಂಡರ್ ಮೀಟ್ಸ್: ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಪ್ರಮುಖ ಖಾಸಗಿ ಸಂಸ್ಥೆಗಳೊಂದಿಗೆ ನೇರ ಸಂವಾದ.
- ಸುಸ್ಥಿರ ಬೆಳವಣಿಗೆಯ ಅಧಿವೇಶನಗಳು: ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಅನುಗುಣವಾಗಿ ಸುಸ್ಥಿರ ಬೆಳವಣಿಗೆಯ ಕುರಿತಾದ ಚರ್ಚೆಗಳು.
ಈ ಮೇಲ್ಕಂಡ ಸಮ್ಮೇಳನಗಳ ಆಯೋಜನೆಗೆ ರಾಜ್ಯ ಸರ್ಕಾರದ ಸಹಕಾರ, ಬೆಂಬಲಕ್ಕೆ ಕೋರಿಕೆ.
1.ಎಫ್‌ಕೆಸಿಸಿಐನ ‘ಗ್ಲೋಬಲ್ ಎಂಎಸ್ಎಂಇ ಕಾನ್ಕ್ಲೇವ್–2026’ಕ್ಕೆ ಅನುದಾನಕ್ಕೆ ಕೋರಿಕೆ.
ರಾಜ್ಯದಲ್ಲಿ ಎಂಎಸ್ಎಂಇಗಳ ಬೆಳವಣಿಗೆಗೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು ನಿರಂತರವಾಗಿ ಉತ್ತೇಜಿಸುತ್ತಾ ಬಂದಿದೆ. ಈ ನಿಟ್ಟಿನಲ್ಲಿ, ‘ಗ್ಲೋಬಲ್ ಎಂಎಸ್ಎಂಇ ಕಾನ್ಕ್ಲೇವ್-2026’ಕ್ಕೆ ಕರ್ನಾಟಕ ಸರ್ಕಾರವು ‘ಕಾರ್ಯಕ್ರಮದ ಪಾಲುದಾರ’ ಆಗಿ ಭಾಗವಹಿಸಬೇಕೆಂದು ಎಫ್‌ಕೆಸಿಸಿಐ ಗೌರವಪೂರ್ವಕವಾಗಿ ಆಹ್ವಾನಿಸುತ್ತದೆ. ವಿಶೇಷವಾಗಿ ಎಂಎಸ್ಎಂಇಗಳಿಗೆ ನೆರವಾಗುವಂತೆ ಈ ಸಮ್ಮೇಳನದಲ್ಲಿ ಪ್ರದರ್ಶನ ಮಳಿಗೆಗಳನ್ನು ಸ್ಥಾಪಿಸುವ ಮೂಲಕ ಅರ್ಥಪೂರ್ಣವಾಗಿ ಪಾಲ್ಗೊಳ್ಳುವ ಮೂಲಕ ಸರ್ಕಾರದಿಂದ ಅಗತ್ಯ ಬೆಂಬಲವನ್ನು ನೀಡಬೇಕೆಂದು ಕೋರುತ್ತೇವೆ.
ಈ ಕಾನ್ಕ್ಲೇವ್ ಆಯೋಜನೆಯ ಒಟ್ಟು ವೆಚ್ಚವು ರೂ. 4.24 ಕೋಟಿ ಆಗಿದ್ದು, ಈ ಪೈಕಿ ರೂ. 2 ಕೋಟಿ ಹಣವನ್ನು ಆಂತರಿಕ ಮತ್ತು ಬಾಹ್ಯ ಸಂಪನ್ಮೂಲಗಳ ಮೂಲಕ ಕ್ರೋಢೀಕರಿಸಲು ಉದ್ದೇಶಿಸಲಾಗಿದೆ. ಉಳಿದ ರೂ. 2.24 ಕೋಟಿ ಹಣಕಾಸಿನ ಕೊರತೆಯನ್ನು ನೀಗಿಸಲು, ಕರ್ನಾಟಕ ಸರ್ಕಾರದ ಎಂಎಂಎಸ್ಇ ಇಲಾಖೆ ಮತ್ತು ಕೈಗಾರಿಕೆ ಹಾಗೂ ವಾಣಿಜ್ಯ ಇಲಾಖೆಯ ಮೂಲಕ ಆರ್ಥಿಕ ನೆರವು ನೀಡಬೇಕು.
ಇದರಿಂದ ಸಮ್ಮೇಳನದಲ್ಲಿ ಮಳಿಗೆಗಳನ್ನು ಸ್ಥಾಪಿಸುವ ಎಂಎಸ್ಎಂಇಗಳು ಸಹಾಯಧನವನ್ನು ಪಡೆಯಲು ಸಹಕಾರಿಯಾಗಲಿದೆ.
ಈ ಸಮ್ಮೇಳನವು ಎಂಎಸ್ಎಂಇಗಳಿಗೆ ಒಂದು ಪ್ರಬಲ ವೇದಿಕೆಯಾಗಲಿದೆ
- ತಮ್ಮ ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ಜಾಗತಿಕ ಮಟ್ಟದ ವೇದಿಕೆಯಲ್ಲಿ ಪ್ರದರ್ಶನ.
- ಹೆಚ್ಚಿನ ಜನರನ್ನು ತಲುಪಲು ಮತ್ತು ಬ್ರಾಂಡ್ ಗುರುತಿಸುವಿಕೆಯನ್ನು ಪಡೆಯಲು.
- ಹೊಸ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳನ್ನು ಪ್ರವೇಶಿಸಲು.
- ಅರ್ಥಪೂರ್ಣವಾದ ವ್ಯಾಪಾರ ನಂಟು ಬೆಳೆಸಲು ಸಾಧ್ಯ.
- ಅರ್ಹವಾದ ವ್ಯವಹಾರ ಅವಕಾಶಗಳನ್ನು ಮತ್ತು ಪಾಲುದಾರಿಕೆಗಳನ್ನು ಸೃಷ್ಟಿಸಲು ಸಾಧ್ಯ.
ಈ ಉಪಕ್ರಮವು ಸುಸ್ಥಿರ ಬೆಳವಣಿಗೆಯ ಅವಕಾಶಗಳ ಬಾಗಿಲನ್ನು ತೆರೆದಿಡುತ್ತದೆ. ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಮತ್ತು ಕರ್ನಾಟಕದ ಎಂಎಸ್ಎಂಇ ಪರಿಸರ ವ್ಯವಸ್ಥೆಯನ್ನು ಜಾಗತೀಕರಣಗೊಳಿಸಲು ಇರುವ ಒಂದು ಕಾರ್ಯತಂತ್ರದ ಅವಕಾಶವಾಗಿದೆ.
‘ಗ್ಲೋಬಲ್ ಎಂಎಸ್ಎಂಇ ಕಾನ್ಕ್ಲೇವ್ – 2026’ ಅರ್ಥಪೂರ್ಣ ಆಯೋಜನೆಗಾಗಿ ರೂ. 2.24 ಕೋಟಿ ಅನುದಾನವನ್ನು ಮಂಜೂರು ಮಾಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳಲ್ಲಿ ಎಫ್‌ಕೆಸಿಸಿಐ ಗೌರವಪೂರ್ವಕವಾಗಿ ವಿನಂತಿಸಿಕೊಳ್ಳುತ್ತದೆ.
- ಎಂಎಸ್ಎಂಇ ವಲಯದ ಬೆಳವಣಿಗೆಗಾಗಿ ವ್ಯವಹಾರ ಪ್ರಕ್ರಿಯೆ ಸರಳೀಕರಣಕ್ಕೆ ಪ್ರಮುಖ ನೀತಿ ಶಿಫಾರಸುಗಳು:
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ
ಅ) ಸೂಕ್ಷ್ಮ, ಅತಿ ಸಣ್ಣ ಮತ್ತು ಸಣ್ಣ ಉದ್ದಿಮೆಗಳಿಗಾಗಿ ಪ್ರತ್ಯೇಕ ಮತ್ತು ಮೀಸಲಾದ ನೀತಿ.
ಕರ್ನಾಟಕದ ಕೈಗಾರಿಕಾ ಘಟಕಗಳಲ್ಲಿ ಸೂಕ್ಷ್ಮ, ಅತಿ ಸಣ್ಣ ಮತ್ತು ಸಣ್ಣ ಉದ್ದಿಮೆಗಳು ಸುಮಾರು ಶೇ.97ರಷ್ಟಿವೆ. ಆದರೆ, ಇವುಗಳ ಅಗತ್ಯತೆಗಳು ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳಿಗಿಂತ ಬಹಳಷ್ಟು ಭಿನ್ನವಾಗಿವೆ. ಆದ್ದರಿಂದ, ಈ ಉದ್ದಿಮೆಗಳಿಗಾಗಿಯೇ ಪ್ರತ್ಯೇಕವಾದ ಮತ್ತು ವಿಶೇಷವಾದ ನೀತಿಯನ್ನು ರೂಪಿಸಬೇಕು. ಈ ನೂತನ ನೀತಿಯು ಹಣಕಾಸಿನ ನೆರವು, ತಂತ್ರಜ್ಞಾನದ ಉನ್ನತೀಕರಣ, ಮಾರುಕಟ್ಟೆ ಲಭ್ಯತೆ, ನಿಯಮಗಳ ಸರಳೀಕರಣ ಮತ್ತು ಕೌಶಲ್ಯಾಭಿವೃದ್ಧಿಯಂತಹ ಸವಾಲುಗಳನ್ನು ಪರಿಹರಿಸುವತ್ತ ಗಮನಹರಿಸಬೇಕು.
ಇಂತಹ ಪ್ರತ್ಯೇಕ ನೀತಿಯನ್ನು ಪರಿಚಯಿಸುವ ಮೂಲಕ, ಅತಿ ಸಣ್ಣ ಮತ್ತು ಸಣ್ಣ ಉದ್ದಿಮೆಗಳಿಗಾಗಿ ಮೀಸಲಾದ ನೀತಿಯನ್ನು ರೂಪಿಸಿದ ಭಾರತದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗುತ್ತದೆ. ಇದು ಎಂಎಸ್ಎಂಇ ಕೇಂದ್ರಿತ ಆಡಳಿತಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಒಂದು ಹೊಸ ಅಧ್ಯಾಯ ಬರೆದಂತಾಗಲಿದೆ.
ಬಿ) ಎಂಎಸ್ಎಂಇಗಳಿಗಾಗಿ ಪ್ರತ್ಯೇಕ ರಾಜ್ಯ ಸಂಗ್ರಹಣೆ ನೀತಿ.
ಹಾಲಿ ಕರ್ನಾಟಕದಲ್ಲಿರುವ ಎಂಎಸ್ಎಂಇಗಳಿಂದಲೇ ಕಡ್ಡಾಯವಾಗಿ ಸರಕು ಅಥವಾ ಸೇವೆಗಳನ್ನು ಖರೀದಿಸಲು ರಾಜ್ಯ ಸರ್ಕಾರಕ್ಕೆ ನಿರ್ದಿಷ್ಟ ಸಂಗ್ರಹಣೆ ನೀತಿಯನ್ನು ಹೊಂದಿಲ್ಲ.
ಮತ್ತೊಂದೆಡೆ, ಭಾರತ ಸರ್ಕಾರದ ಸಾರ್ವಜನಿಕ ಸಂಗ್ರಹಣೆ ನೀತಿಯು ಈ ಕೆಳಗಿನವುಗಳನ್ನು ಕಡ್ಡಾಯಗೊಳಿಸಿದೆ:
- ವಾರ್ಷಿಕ ಸಂಗ್ರಹಣೆಯಲ್ಲಿ ಶೇ.25ರಷ್ಟನ್ನು ಅತಿ ಸಣ್ಣ ಮತ್ತು ಸಣ್ಣ ಉದ್ದಿಮೆಗಳಿಂದಲೇ ಖರೀದಿಸಬೇಕು.
- ಮೊತ್ತದಲ್ಲಿ ಶೇ.15ರಷ್ಟು ಆದ್ಯತೆ.
- ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರ ಮಾಲೀಕತ್ವದ ಎಂಎಸ್ಎಂಇಗಳಿಂದ ಶೇ.4ರಷ್ಟು ಖರೀದಿಸಬೇಕು ಎನ್ನುವ ಉಪ ಷರತ್ತು.
- ಮಹಿಳೆಯರ ಮಾಲೀಕತ್ವದ ಎಂಎಸ್ಎಂಇಗಳಿಂದ ಶೇ.3ರಷ್ಟು ಖರೀದಿಸಬೇಕು ಎನ್ನುವ ಉಪ ಷರತ್ತು.
ಮೇಲ್ಕಂಡಂತೆ ಕೇಂದ್ರ ಸರ್ಕಾರದ ಮಾದರಿಯಲ್ಲಿ ಕರ್ನಾಟಕ ಸರ್ಕಾರವು ಸಹ ತನ್ನ ಎಲ್ಲಾ ರಾಜ್ಯ ಸರ್ಕಾರಿ ಇಲಾಖೆಗಳು ಮತ್ತು ರಾಜ್ಯ ಸಾರ್ವಜನಿಕ ವಲಯದ ಉದ್ಯಮಗಳಿಗೆ ಅನ್ವಯವಾಗುವಂತೆ ‘ರಾಜ್ಯ ಸಂಗ್ರಹಣೆ ನೀತಿ’ಯನ್ನು ಜಾರಿಗೆ ತರಬೇಕು. ಇದರಿಂದ
- ಸ್ಥಳೀಯ ಎಂಎಸ್ಎಂಇಗಳಿಗೆ ಮಾರುಕಟ್ಟೆಯ ಲಭ್ಯತೆ ಖಾತರಿ ಇರುತ್ತದೆ.
- ರಾಜ್ಯದ ಆಂತರಿಕ ಪೂರೈಕೆ ಸರಪಳಿಗಳು ಬಲಗೊಳ್ಳುತ್ತವೆ.
- ಎಲ್ಲರನ್ನು ಒಳಗೊಳ್ಳುವ ಉದ್ಯಮಶೀಲತೆಗೆ ಪ್ರೋತ್ಸಾಹ ಸಿಗುವ ಜೊತೆಗೆ ಪ್ರಾದೇಶಿಕ ಅಭಿವೃದ್ಧಿಗೆ ಉತ್ತೇಜನ ಸಿಗುತ್ತದೆ.
- ಎಂಎಂಸ್ಎಂಇಗಳ ಡಿಜಿಟಲ್ ರೂಪಾಂತರ:
ಕರ್ನಾಟಕದ ಎಂಎಸ್ಎಂಇಗಳು ಜಾಗತಿಕ ಮಾರುಕಟ್ಟೆಯಲ್ಲಿ ಪರಿಣಾಮಕಾರಿಯಾಗಿ ಸ್ಪರ್ಧಿಸಲು ಅನುವು ಮಾಡಿಕೊಡಲು, ಅವುಗಳ ಡಿಜಿಟಲ್ ರೂಪಾಂತರವನ್ನು ವೇಗಗೊಳಿಸಲು ಹೆಚ್ಚಿನ ಬಜೆಟ್ ಹಂಚಿಕೆ ಜೊತೆಗೆ ಹೆಚ್ಚಿನ ಸಹಕಾರದ ನಿರೀಕ್ಷೆ ಇದೆ.
ಪ್ರಮುಖ ಆದ್ಯತೆಯ ಕ್ಷೇತ್ರಗಳು:
- ಸಹಾಯಧನ ಮತ್ತು ಅನುದಾನ: ಡಿಜಿಟಲ್ ಸಾಧನಗಳು, ಇಆರ್ ಪಿ ವ್ಯವಸ್ಥೆ, ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಮತ್ತು ‘ಇಂಡಸ್ಟ್ರಿ 4.0’ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಅನುದಾನ ಮತ್ತು ಸಹಾಯಧನ ನೀಡುವುದು.
- ಕೌಶಲ್ಯಾಭಿವೃದ್ಧಿ ಮತ್ತು ಸಾಮರ್ಥ್ಯ ವೃದ್ಧಿ: ಎಂಎಸ್ಎಂಇ ಉದ್ದಿಮೆದಾರರು ಮತ್ತು ಉದ್ಯೋಗಿಗಳಲ್ಲಿ ಡಿಜಿಟಲ್ ಸಾಕ್ಷರತೆ ಹಾಗೂ ತಂತ್ರಜ್ಞಾನ ಅಳವಡಿಕೆಗೆ ತರಬೇತಿ ನೀಡುವುದು.
- ಡಿಜಿಟಲ್ ಮೂಲಸೌಕರ್ಯ: ಉದ್ಯಮಿಗಳೆಲ್ಲರೂ ಬಳಕೆ ಮಾಡಲು ಅನುಕೂಲವಾಗುವಂತಹ ಡಿಜಿಟಲ್ ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಾಮಾನ್ಯ ತಂತ್ರಜ್ಞಾನ ಕೇಂದ್ರಗಳನ್ನು ಸ್ಥಾಪಿಸುವುದು.
- ತಂತ್ರಜ್ಞಾನ ಅಳವಡಿಕೆಗೆ ಪ್ರೋತ್ಸಾಹ: ಕೃತಕ ಬುದ್ಧಿಮತ್ತೆ, ಆಟೊಮೇಷನ್, ಕ್ಲೌಡ್ ಕಂಪ್ಯೂಟಿಂಗ್, ಸೈಬರ್ ಸೆಕ್ಯೂರಿಟಿ ಮತ್ತು ಡೇಟಾ ಅನಾಲಿಟಿಕ್ಸ್ ಅಳವಡಿಕೆಗೆ ಪ್ರೋತ್ಸಾಹಕಗಳನ್ನು ನೀಡುವುದು.
- ಇ-ಗವರ್ನೆನ್ಸ್ ಸಂಯೋಜನೆ: ಆನ್ಲೈನ್ ಮತ್ತು ಡಿಜಿಟಲ್ ಮಾರ್ಗದಲ್ಲಿ ಕಾನೂನಾತ್ಮಕ ನಿಯಮಗಳ ಅನುಸರಣೆ, ಪರವಾನಗಿ, ಅನುಮೋದನೆಗಳು ಮತ್ತು ಸರ್ಕಾರಿ ಯೋಜನೆಗಳ ಲಭ್ಯತೆಯನ್ನು ಸರಳಗೊಳಿಸುವುದು.
ಅಮೂಲಾಗ್ರವಾಗಿ ಡಿಜಿಟಲೀಕರಣ ಮಾಡುವುದರಿಂದ ಕರ್ನಾಟಕದ ಎಂಎಸ್ಎಂಇಗಳ ಉತ್ಪಾದಕತೆ, ಸ್ಪರ್ಧಾತ್ಮಕತೆ, ಪಾರದರ್ಶಕತೆ ಮತ್ತು ಸುಲಭವಾಗಿ ವ್ಯವಹಾರ ನಡೆಸುವಿಕೆಯನ್ನು ಗಮನಾರ್ಹವಾಗಿ ಸುಧಾರಿಸಬಹುದು.
- ಪ್ಲಾಸ್ಟಿಕ್ ಪಾರ್ಕ್‌ಗಳಿಗಾಗಿ ಭೂಮಿ ಹಂಚಿಕೆ: ಪ್ಲಾಸ್ಟಿಕ್ ಮತ್ತು ಪಾಲಿಮರ್ ಉದ್ಯಮಕ್ಕೆ ಉತ್ತೇಜನ ನೀಡಲು ಕರ್ನಾಟಕ ಸರ್ಕಾರವು ಸಮಗ್ರ ಪ್ಲಾಸ್ಟಿಕ್ ಮರುಬಳಕೆ ಘಟಕಗಳನ್ನು ಹೊಂದಿರುವ ಪ್ರತ್ಯೇಕ ಪ್ಲಾಸ್ಟಿಕ್ ಪಾರ್ಕ್‌ಗಳನ್ನು ಸಕ್ರಿಯವಾಗಿ ಅಭಿವೃದ್ಧಿಪಡಿಸುತ್ತಿದೆ. ಮಂಗಳೂರು ಮತ್ತು ವಿಜಯಪುರದಲ್ಲಿ ಮಹತ್ವದ ಯೋಜನೆಗಳು ಪ್ರಗತಿಯಲ್ಲಿವೆ. ಸುಸ್ಥಿರ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಗೆ ಸೂಕ್ತವಾಗಿರುವ ಈ ಪ್ಲಾಸ್ಟಿಕ್ ದೊಡ್ಡ ಉದ್ಯಮ ಎಂದು ಪರಿಗಣಿಸಿ ಅಗತ್ಯ ಬೆಂಬಲ, ನೆರವು ನೀಡಬೇಕು.
- ಮರುಬಳಕೆ ಉದ್ಯಮಗಳಿಗೆ ಪ್ರೋತ್ಸಾಹಕಗಳು: ಭಾರತದ ಸುಸ್ಥಿರತೆಯ ಪ್ರಯತ್ನಗಳನ್ನು ಬಲಪಡಿಸಲು ಮತ್ತು ವೃತ್ತಾಕಾರದ ಆರ್ಥಿಕತೆಯನ್ನು ಉತ್ತೇಜಿಸಲು, ಪ್ಲಾಸ್ಟಿಕ್ ಮರುಬಳಕೆ ಉದ್ಯಮಗಳಿಗಾಗಿ ಪ್ರೋತ್ಸಾಹಕಗಳನ್ನು ಘೋಷಿಸುವ ಜೊತೆಗೆ ಪ್ರತ್ಯೇಕ ಕ್ಲಸ್ಟರ್ ಗಳನ್ನು ಗುರುತಿಸಬೇಕು. ಅಲ್ಲದೇ, ರಿಯಾಯಿತಿ ದರದಲ್ಲಿ ಭೂಮಿ ಹಂಚಿಕೆ ಮಾಡುವುದರಿಂದ ಮರುಬಳಕೆ ಉದ್ಯಮದ ಬೆಳವಣಿಗೆಯನ್ನು ಗಣನೀಯವಾಗಿ ಉತ್ತೇಜಿಸಬಹುದು. ಹೆಚ್ಚುವರಿ ತೆರಿಗೆ ಪ್ರಯೋಜನಗಳನ್ನು ನೀಡುವ ಮೂಲಕ, ಸರ್ಕಾರವು ಈ ವಲಯದಲ್ಲಿ ಹೂಡಿಕೆ, ನಾವೀನ್ಯತೆ ಮತ್ತು ಸುಸ್ಥಿರ ಪದ್ಧತಿಗಳ ಅಳವಡಿಕೆಗೆ ಪ್ರೋತ್ಸಾಹಿಸಬೇಕು.
- ಕೈಗಾರಿಕೆಗಳ ಮೂಲಸೌಕರ್ಯಕ್ಕೆ ಬಜೆಟ್: ಎಲ್ಲಾ ಕೈಗಾರಿಕಾ ಪ್ರದೇಶಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಆದ್ಯತೆ ನೀಡಬೇಕು. ಕೈಗಾರಿಕಾ ಮೂಲಸೌಕರ್ಯಕ್ಕೆ ಪ್ರತ್ಯೇಕ ಬಜೆಟ್ ಅನ್ನು ತಕ್ಷಣವೇ ಹಂಚಿಕೆ ಮಾಡುವ ಅಗತ್ಯವಿದೆ:
ಗರಿಷ್ಠ ಆದ್ಯತೆಯ ಸಾಮಾನ್ಯ ಮೂಲಸೌಕರ್ಯಗಳು
- ಕೈಗಾರಿಕಾ ಪ್ರದೇಶದಲ್ಲಿ ಸಮರ್ಪಕವಾದ ಬೀದಿ ದೀಪದ ವ್ಯವಸ್ಥೆಯೊಂದಿಗೆ ಉತ್ತಮ ರಸ್ತೆಗಳ ನಿರ್ಮಾಣ.
- ಬ್ಯಾಕಪ್ ವ್ಯವಸ್ಥೆಗಳೊಂದಿಗೆ ನಿರಂತರ ಮತ್ತು ಸಮರ್ಪಕ ವಿದ್ಯುತ್ ಪೂರೈಕೆ.
- ಕೈಗಾರಿಕಾ ಉದ್ದೇಶಕ್ಕೆ ಮತ್ತು ಕುಡಿಯಲು ಸಮರ್ಪಕ ನೀರು ಸರಬರಾಜು.
- ಸೂಕ್ತ ಒಳಚರಂಡಿ ವ್ಯವಸ್ಥೆ ಮತ್ತು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಸ್ಥಾಪನೆ.
- ಕೆಐಎಡಿಬಿ ಮತ್ತು ಕೆಎಸ್ಎಸ್ಐಡಿಸಿಯಲ್ಲಿ ಸುಧಾರಣೆಗಳು:
- ಕೆಐಎಡಿಬಿ ಕೈಗಾರಿಕಾ ಪ್ರದೇಶಗಳಲ್ಲಿನ ಭೂಮಿಯ ಬೆಲೆಯು ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆದಾರರು ಖರೀದಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ. ಬ್ಯಾಂಕುಗಳಿಂದ ಸಾಲ ಪಡೆಯುವುದು ಕಷ್ಟಕರವಾಗಿದೆ. ‘ಬಿಯಾಂಡ್ ಬೆಂಗಳೂರು’ ಅಭಿಯಾನದಡಿ ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಕೈಗಾರಿಕಾ ಬೆಳವಣಿಗೆ ಮತ್ತು ಅಭಿವೃದ್ಧಿಯಾಗಬೇಕು ಎಂದರೆ ಭೂಮಿಯ ಬೆಲೆಯನ್ನು ಕೈಗೆಟುಕುವ ದರಕ್ಕೆ ಮಿತಿಗೊಳಿಸಬೇಕು. ಇದರಿಂದ 2ನೇ ಮತ್ತು 3ನೇ ಹಂತದ ನಗರದಲ್ಲಿ ಕೈಗಾರಿಕೆಗಳ ಸ್ಥಾಪನೆಯ ಆಕಾಂಕ್ಷೆ ಈಡೇರುತ್ತದೆ. ಬೆಂಗಳೂರಿನ ಆಚೆಗೂ ಉದ್ಯಮಗಳು ಬೆಳೆಯುತ್ತವೆ.
- ಅತಿ ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳನ್ನು ಉತ್ತೇಜಿಸಲು ಕೆಐಎಡಿಬಿ ಕೈಗಾರಿಕಾ ಪ್ರದೇಶಗಳ ಹಂಚಿಕೆಯಲ್ಲಿ ಶೇ.20ರಷ್ಟು ಭೂಮಿಯನ್ನು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಹಾಗೂ ಶೇ.80ರಷ್ಟು ಭೂಮಿಯನ್ನು ಬೃಹತ್ ಕೈಗಾರಿಕಾ ಘಟಕಗಳಿಗೆ ಮೀಸಲಿಡಬೇಕು.
- ಕೈಗಾರಿಕಾ ನಿವೇಶನಗಳನ್ನು ಹಂಚಿಕೆ ಮಾಡುವ ಮೊದಲು, ಕೆಐಎಡಿಬಿಯು ಕೈಗಾರಿಕಾ ಪ್ರದೇಶದಲ್ಲಿ ಸರಿಯಾದ ರಸ್ತೆಗಳು, ಬೀದಿ ದೀಪಗಳು ಮತ್ತು ವಿದ್ಯುತ್ ಸಂಪರ್ಕಗಳು, ನೀರಿನ ಸಂಪರ್ಕ, ಎಸ್‌ಟಿಪಿ, ಇಟಿಪಿ, ವಿದ್ಯುತ್ ಸಬ್‌ಸ್ಟೇಷನ್ ಸ್ಥಾಪಿಸಬೇಕು. ಪೊಲೀಸ್ ಠಾಣೆ, ಇಎಸ್‌ಐ ಆಸ್ಪತ್ರೆ, ಶಾಲೆಗಳು, ಹೋಟೆಲ್‌ಗಳು ಇತ್ಯಾದಿಗಳಿಗೆ ಅವಕಾಶವಿರುವ ಎಲ್ಲಾ ಮೂಲ ಸೌಕರ್ಯಗಳನ್ನು ಪೂರ್ಣಗೊಳಿಸಬೇಕು.
- ಕೆಐಎಡಿಬಿ ಮತ್ತು ಕೆಎಸ್ಎಸ್ಐಡಿಸಿ ಸೇವೆಗಳಾಗಿರುವ ಪ್ಲಾನ್ ಅನುಮೋದನೆ, ಕೊಳವೆಬಾವಿ ಕೊರೆಯುವುದು, ನೀರು ಸರಬರಾಜು, ವಿದ್ಯುತ್ ಸರಬರಾಜು ಇತ್ಯಾದಿಗಳನ್ನು ‘ಸಕಾಲ’ ವ್ಯಾಪ್ತಿಗೆ ತರಬೇಕು. ಇವುಗಳನ್ನು ಆನ್‌ಲೈನ್ ಮೂಲಕವೇ ನೀಡುವ ವ್ಯವಸ್ಥೆ ಆಗಬೇಕು.
- ಕೆಐಎಡಿಬಿ ಮತ್ತು ಕೆಎಸ್ಎಸ್ಐಡಿಸಿ ಹಂಚಿಕೆ ಮಾಡುವ ನಿವೇಶನಗಳು ಮತ್ತು ಶೆಡ್‌ಗಳ ತಾತ್ಕಾಲಿಕ ಬೆಲೆ ಹಾಗೂ ಅಂತಿಮ ಬೆಲೆಯ ನಡುವೆ ಭಾರಿ ವ್ಯತ್ಯಾಸವಿದೆ. ಕೆಐಎಡಿಬಿ ಬೆಲೆ ಏರಿಕೆಯ ಮೇಲೆ ಶೇ.20ರಷ್ಟು ಮಿತಿಯನ್ನು ನಿಗದಿಪಡಿಸಿದ್ದರೂ, ಇದು ಕೇವಲ ಹೊಸ ಕೈಗಾರಿಕಾ ಪ್ರದೇಶಗಳಿಗೆ ಮಾತ್ರ ಅನ್ವಯಿಸುತ್ತದೆ. ಇದೇ ರೀತಿಯ ನಿಯಮಗಳನ್ನು ಕೆಐಎಡಿಬಿ ಮತ್ತು ಕೆಎಸ್ಎಸ್ಐಡಿಸಿ ಸ್ಥಾಪಿಸಿದ ಹಳೆಯ ಕೈಗಾರಿಕಾ ಪ್ರದೇಶಗಳಿಗೂ ಅನ್ವಯಿಸಬೇಕು.
- ಎನ್ ಪಿಎ, ಸಿಬಿಲ್ ರೇಟಿಂಗ್, ಪ್ರೊಸೆಸಿಂಗ್ ಶುಲ್ಕದಿಂದ ವಿನಾಯಿತಿ:
ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಕಠಿಣವಾದ ಸಿಬಿಲ್ ರೇಟಿಂಗ್, ಎನ್‌ಪಿಎ ನಿಯಮಗಳು, ದುಬಾರಿ ಪ್ರೊಸೆಸಿಂಗ್ ಶುಲ್ಕಗಳು ಮತ್ತು ಭಾರೀ ಮೌಲ್ಯದ ಆಸ್ತಿಗಳನ್ನು ಅಡಮಾನ ಇಡುವ ಪರಿಸ್ಥಿತಿ ಇದೆ. ಹೀಗಾಗಿ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಾಲ ಮಂಜೂರಾತಿ ಮತ್ತು ವಿತರಣೆಗಾಗಿ ಪ್ರತ್ಯೇಕ ನಿಯಮಾವಳಿಗಳನ್ನು ರೂಪಿಸಬೇಕು.
- ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಬಡ್ಡಿ ಸಹಾಯಧನ ಯೋಜನೆ:
ಅ. ಬ್ಯಾಂಕುಗಳು ಮತ್ತು ಸಾಲ ನೀಡುವ ಸಂಸ್ಥೆಗಳ ‘ಅವಧಿ ಸಾಲ’ ಮತ್ತು ‘ದುಡಿಯುವ ಬಂಡವಾಳ ಸಾಲ’ಕ್ಕೆ ವಿಧಿಸುವ ಬಡ್ಡಿ ದರಗಳು ದುಬಾರಿಯಾಗಿದೆ. ಎಂಎಸ್‌ಎಂಇ ವಿಭಾಗದ ಶೇ.90 ರಷ್ಟಿರುವ ಸಣ್ಣ ಮತ್ತು ಮಧ್ಯಮ ಉದ್ಯಮಗಳ ವಲಯಕ್ಕೆ ಶೇ.4 ರಷ್ಟು ಬಡ್ಡಿ ಸಹಾಯಧನವನ್ನು ಒದಗಿಸಬೇಕು.
ಆ. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದವರಿಗೆ ಬಡ್ಡಿ ಸಹಾಯಧನದ ಬೆಂಬಲ:
ಸೇವಾ ವಲಯದಲ್ಲಿರುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಹೊಸ ಮತ್ತು ಚಾಲ್ತಿಯಲ್ಲಿರುವ ಅತಿ ಸಣ್ಣ ಮತ್ತು ಸಣ್ಣ ಉದ್ಯಮಗಳಿಗೆ ಬಡ್ಡಿ ಸಹಾಯಧನ ನೀಡುವ ಅಗತ್ಯವಿದೆ. ಪ್ರಸ್ತುತ, ಬಡ್ಡಿ ಸಹಾಯಧನವನ್ನು ಕೇವಲ ಎಸ್‌ಸಿ/ಎಸ್‌ಟಿ ಮಹಿಳೆಯರಿಗೆ ಮಾತ್ರ ನೀಡಲಾಗುತ್ತಿದೆ. ಎಸ್‌ಸಿ/ಎಸ್‌ಟಿ ಸಮುದಾಯದವರ ಅಭಿವೃದ್ಧಿಯಲ್ಲಿ ಏಕರೂಪತೆಯನ್ನು ತರಲು, ಬಡ್ಡಿ ಸಹಾಯಧನವನ್ನು ಪುರುಷರು ಮತ್ತು ಮಹಿಳೆಯರಿಬ್ಬರಿಗೂ ನೀಡಬೇಕು.
- ಕೌಶಲ್ಯಾಭಿವೃದ್ಧಿ ಕೇಂದ್ರಗಳ ಸ್ಥಾಪನೆಗೆ ಅನುದಾನ ಬಿಡುಗಡೆ:
ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಅದಕ್ಕಾಗಿ ಪ್ರತ್ಯೇಕ ಇಲಾಖೆ ಹಾಗೂ ಸಚಿವಾಲಯಗಳನ್ನು ಸ್ಥಾಪಿಸಿವೆ. ಕೌಶಲ್ಯ ಆಯೋಗ ಮತ್ತು ನಿಗಮವನ್ನು ಸ್ಥಾಪಿಸುವ ಮೂಲಕ ಕರ್ನಾಟಕವು ಒಂದು ಹೆಜ್ಜೆ ಮುಂದೆ ಇದೆ.
ಶಾಲೆಗಳು, ಕಾಲೇಜುಗಳು, ಐಟಿಐ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳಿಂದ ಹೊರಬರುವ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿಯನ್ನು ನೀಡುವ ಮೂಲಕ ಅವರ ಉದ್ಯೋಗಾರ್ಹತೆಯನ್ನು ಸುಧಾರಿಸುವ ಅಗತ್ಯವಿದೆ.
ಈ ಯೋಜನೆಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಲು ದಾಬಸ್‌ಪೇಟೆಯಲ್ಲಿ 1.62 ಎಕರೆ ಜಾಗದಲ್ಲಿ ಹಂತ ಹಂತವಾಗಿ 46 ಕೋಟಿ ರೂ. ವೆಚ್ಚದಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಮೊದಲ ಹಂತದಲ್ಲಿ ಈ ವರ್ಷ ಸುಮಾರು 7.77 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಕುರಿತಾದ ವಿವರವಾದ ಯೋಜನಾ ವರದಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಲ್ಲಿಸಲಾಗುತ್ತದೆ. ಕೈಗಾರಿಕೆ, ಸೇವಾ ವಲಯ ಮತ್ತು ವ್ಯವಹಾರ ಕ್ಷೇತ್ರಗಳಲ್ಲಿ ಪ್ರತಿ ವರ್ಷ 4,000 ಯುವ ಜನರಿಗೆ ತರಬೇತಿ ನೀಡುವ ಗುರಿಯನ್ನು ನಾವು ಹೊಂದಿದ್ದೇವೆ. ಗ್ರಾಮಾಂತರ ಭಾಗದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡುವ ಗುರಿ ಇದೆ. ಈ ದೂರದೃಷ್ಟಿಯನ್ನು ನನಸಾಗಿಸಲು, 2026-27ರ ಬಜೆಟ್‌ನಲ್ಲಿ ಮೊದಲ ಹಂತದಲ್ಲಿ 10 ಕೋಟಿ ರೂ. ಹಂಚಿಕೆ ಮಾಡಬೇಕು.
ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಬೆಂಗಳೂರು ಸಿಟಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪಠ್ಯಕ್ರಮದ ಭಾಗವಾಗಿ ಕೌಶಲ್ಯ ಆಧಾರಿತ ತರಬೇತಿಯನ್ನು ನೀಡಲಾಗುತ್ತಿದೆ. ಉದ್ಯಮದ ಪರಿಣಿತರು ವಿವಿಧ ವಿಭಾಗಗಳಲ್ಲಿ ಪ್ರಾಯೋಗಿಕ ತರಬೇತಿಯನ್ನು ನೀಡುತ್ತಿದ್ದು, ಇದು ವಿದ್ಯಾರ್ಥಿಗಳು ವೃತ್ತಿಜೀವನದಲ್ಲಿ ಬೆಳೆಯಲು ಮಾತ್ರವಲ್ಲದೆ ಉದ್ಯಮಿಗಳಾಗಲು ಪ್ರೇರೇಪಿಸುತ್ತದೆ. ಇಲ್ಲಿಯವರೆಗೆ 1,000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದ್ದು, ಎಫ್‌ಕೆಸಿಸಿಐ ಈ ತರಬೇತಿ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸುತ್ತಿದೆ.
- ವಾಣಿಜ್ಯ ತೆರಿಗೆ ಸಮಸ್ಯೆಗಳು: ರಾಜ್ಯ ತೆರಿಗೆ ಹಾಗೂ ಜಿಎಸ್‌ಟಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಪರಿಹರಿಸಿ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುವಲ್ಲಿ ಸರ್ಕಾರದ ಸಹಕಾರ, ಬೆಂಬಲವನ್ನು ಎಫ್‌ಕೆಸಿಸಿಐ ಸ್ವಾಗತಿಸುತ್ತದೆ.
ವ್ಯಾಪಾರ ಮತ್ತು ಕೈಗಾರಿಕಾ ವಲಯದ ಎಫ್‌ಕೆಸಿಸಿಐ ಸದಸ್ಯರಿಂದ ಸಲಹೆಗಳು:
ಅ. ಜಿಎಸ್‌ಟಿ ವಾರ್ಷಿಕ ರಿಟರ್ನ್ ಸಲ್ಲಿಕೆ: ಜಿಎಸ್‌ಟಿ ಆಡಿಟ್ ಮತ್ತು ಪ್ರಮಾಣೀಕರಣವನ್ನು ತೆಗೆದು ಹಾಕಲಾಗಿದೆಯಾದರೂ, ವಾರ್ಷಿಕ ರಿಟರ್ನ್ ಸಲ್ಲಿಸುವ ಪ್ರಕ್ರಿಯೆ ಇನ್ನೂ ಸಂಕೀರ್ಣವಾಗಿಯೇ ಇದೆ. ಹೆಚ್ಚಿನ ವರ್ತಕರು ಈ ಪ್ರಕ್ರಿಯೆಯನ್ನು ಸ್ವತಂತ್ರವಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ವೃತ್ತಿಪರರಿಂದ ಸೇವೆ ಪಡೆಯುವ ವೆಚ್ಚಗಳು ಹೆಚ್ಚಾಗುತ್ತಿವೆ. ಉದ್ದೇಶಪೂರ್ವಕವಲ್ಲದ ತಪ್ಪುಗಳಿಗೆ ವಿಧಿಸುವ ದಂಡವನ್ನು ಕಡಿತಗೊಳಿಸುವ ಮೂಲಕ ಎಂಎಸ್‌ಎಂಇಗಳಿಗೆ ಬೆಂಬಲ ನೀಡಬೇಕೆಂದು ಮತ್ತು ಸಣ್ಣ ವರ್ತಕರಿಗೆ ವಾರ್ಷಿಕ ರಿಟರ್ನ್ ಸಲ್ಲಿಕೆಯಿಂದ ವಿನಾಯಿತಿ ನೀಡಬೇಕು.
ಆ. ಜವಳಿ ಮತ್ತು ಸಿದ್ಧ ಉಡುಪುಗಳ ಮೇಲಿನ ಜಿಎಸ್‌ಟಿ ದರ:
2,500 ರೂ.ಗಿಂತ ಹೆಚ್ಚಿನ ಬೆಲೆಯ ಉಡುಪುಗಳ ಮೇಲಿನ ಜಿಎಸ್‌ಟಿ ದರ ಏರಿಕೆಯು ಈ ವಲಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಎಲ್ಲಾ ಉಡುಪುಗಳ ಮೇಲೆ ಶೇ. 5ರಷ್ಟು ಏಕರೂಪದ ಜಿಎಸ್‌ಟಿ ದರವನ್ನು ಶಿಫಾರಸು ಮಾಡಬೇಕು ಅಥವಾ ಜವಳಿ ಮತ್ತು ಸಿದ್ಧ ಉಡುಪುಗಳನ್ನು ಶೇ. 5ರೊಳಗಿನ ಒಂದೇ ಜಿಎಸ್‌ಟಿ ಸ್ಲ್ಯಾಬ್ ಅಡಿಯಲ್ಲಿ ತರುವ ಮೂಲಕ ಪ್ರಸ್ತುತ ಇರುವ ಅಸಮಾನತೆಯನ್ನು ಹೋಗಲಾಡಿಸಬೇಕು. ಇದರಿಂದ ಉದ್ಯಮ ಬೆಳವಣಿಗೆಯಾಗಿ ವ್ಯಾಪಾರ ಮಾಡಲು ಅನುಕೂಲವಾಗುತ್ತದೆ. ಮೇಕ್ ಇನ್ ಇಂಡಿಯಾ ಉಪಕ್ರಮವನ್ನು ಬಲಪಡಿಸುತ್ತದೆ ಮತ್ತು ಬೃಹತ್ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸುತ್ತದೆ.
ಇ. ಇ-ವೇ ಬಿಲ್ ಮಿತಿಯ ಹೆಚ್ಚಳ:
ಸಣ್ಣ ವರ್ತಕರ ಮೇಲಿನ ಅನುಸರಣಾ ಹೊರೆಯನ್ನು ಕಡಿಮೆ ಮಾಡಲು, ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಈಗಾಗಲೇ ಜಾರಿಯಲ್ಲಿರುವಂತೆ, ರಾಜ್ಯದೊಳಗಿನ ಸರಕು ಸಾಗಣೆಗೆ ಇ-ವೇ ಬಿಲ್ ಮಿತಿಯನ್ನು 50,000 ರೂ.ಗಳಿಂದ ಒಂದು ಲಕ್ಷ ರೂ.ಗೆ ಹೆಚ್ಚಿಸಬೇಕು.
ಈ. ಇನ್ವರ್ಟೆಡ್ ಜಿಎಸ್‌ಟಿ ಮರುಪಾವತಿಯ ಸ್ವಯಂಚಾಲಿತ ಪ್ರಕ್ರಿಯೆ:
- ಆದಾಯ ತೆರಿಗೆ ಮರುಪಾವತಿ ವ್ಯವಸ್ಥೆಯಂತೆಯೇ ಇನ್ವರ್ಟೆಡ್ ಜಿಎಸ್‌ಟಿ ಮರುಪಾವತಿಯನ್ನು ಸಂಪೂರ್ಣವಾಗಿ ಸ್ವಯಂಚಾಲಿತಗೊಳಿಸಬೇಕು.
- ಪ್ರತ್ಯೇಕ ಅರ್ಜಿಯ ಅಗತ್ಯವಿಲ್ಲದೆ, ಮಾಸಿಕ ಅಥವಾ ತ್ರೈಮಾಸಿಕ ಜಿಎಸ್‌ಟಿ ರಿಟರ್ನ್ಸ್‌ಗಳ ಆಧಾರದ ಮೇಲೆ ನೇರವಾಗಿ ಮರುಪಾವತಿ ಮಾಡಬೇಕು.
- ನಿಯಮಗಳಲ್ಲಿ ಸ್ಪಷ್ಟತೆ ಇಲ್ಲದಿರುವುದು ಮತ್ತು 2 ವರ್ಷಗಳ ಮಿತಿಯ ಕಾರಣದಿಂದಾಗಿ ಈ ಹಿಂದೆ ಮರುಪಾವತಿ ಪಡೆಯಲು ಸಾಧ್ಯವಾಗದ ಎಂಎಸ್‌ಎಂಇಗಳಿಗೆ 2017ರ ಜುಲೈ ತಿಂಗಳಿಂದ ಬಾಕಿ ಇರುವ ಮರುಪಾವತಿಯನ್ನು ಪಡೆಯಲು ಒಂದು ಬಾರಿಯ ಅವಕಾಶವನ್ನು ನೀಡಬೇಕು.
ಉ. ತೆರಿಗೆದಾರರು ಮತ್ತು ಅಧಿಕಾರಿಗಳಿಗೆ ಜಾರಿ ಪ್ರಕ್ರಿಯೆಗಳ ಬಗ್ಗೆ ಮಾರ್ಗಸೂಚಿ ಪ್ರಕಟಿಸುವುದು:
- ಮೇಲ್ಮನವಿ ಸಲ್ಲಿಸಲು ಅವಕಾಶ ನೀಡದೆ ನೇರವಾಗಿ ಬ್ಯಾಂಕ್ ಖಾತೆಗಳನ್ನು ಅಟ್ಯಾಚ್ ಮಾಡುವುದನ್ನು ತಪ್ಪಿಸಬೇಕು.
- ಒಂದೇ ತೆರಿಗೆ ಅವಧಿಗೆ ಸಂಬಂಧಿಸಿದಂತೆ ರಾಜ್ಯ ಅಧಿಕಾರಿಗಳಿಂದ ಬೇರೆ ಬೇರೆ ವಿಚಾರಣೆ ನಡೆಸುವುದನ್ನು ತಡೆಗಟ್ಟಬೇಕು.
- ಜಾಗೃತಿಯ ಕೊರತೆಯಿಂದ ತೆರಿಗೆ, ಜಿಎಸ್ಟಿ ಸಂಬಂಧಿಸಿದ ಫೈಲಿಂಗ್ ಮಾಡಲಾಗದೆ ಸಮಯದ ಮಿತಿ ಮೀರಿದ ಹಳೆಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೇಲ್ಮನವಿ ಸಲ್ಲಿಸಲು ಒಂದು ಬಾರಿಯ ವಿಶೇಷ ಅವಕಾಶ ನೀಡಬೇಕು.
- ಮೇಲ್ಮನವಿ ಪ್ರಾಧಿಕಾರಿಗಳಿಂದ ಆದಾಯ ಆಧಾರಿತ ತಾರತಮ್ಯದ ಆದೇಶಗಳನ್ನು ಮಾಡುವ ಬದಲು ನ್ಯಾಯಾಂಗದ ಆಶಯಗಳಿಗೆ ಅನುಗುಣವಾಗಿ ಆದೇಶಗಳನ್ನು ಹೊರಡಿಸಬೇಕು.
- ತೆರಿಗೆ ವಂಚನೆಯ ಪ್ರಕರಣಗಳನ್ನು ಮಾತ್ರ ಚೆಕ್ ಪೋಸ್ಟ್ ಗಳಲ್ಲಿ ಹಿಡಿಯಬೇಕು. ಸಣ್ಣ ಪುಟ್ಟ ಲೋಪಗಳು, ತಪ್ಪುಗಳಿಗೆ ವಾಹನಗಳನ್ನು ತಡೆಯುವುದನ್ನು ತಪ್ಪಿಸುವಂತೆ ಅಧಿಕಾರಿಗಳಿಗೆ ಸೂಕ್ತ ಮಾರ್ಗಸೂಚಿಗಳನ್ನು ನೀಡಬೇಕು.
ಎ) ವೃತ್ತಿ ತೆರಿಗೆ: ವರ್ತಕರು ಈಗಾಗಲೇ ಜಿ.ಎಸ್.ಟಿ, ವ್ಯಾಪಾರ ಪರವಾನಗಿ ಮತ್ತು ಇತರ ಸ್ಥಳೀಯ ಉದ್ಯಮ ಪರವಾನಗಿಗಳ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಅದರ ಜೊತೆಗೆ ವೃತ್ತಿ ತೆರಿಗೆ ವಿಧಿಸುವುದು ಹೆಚ್ಚುವರಿ ಹೊರೆಯಾಗುತ್ತದೆ. ಆದ್ದರಿಂದ, ಹೊಸ ವ್ಯಾಪಾರಿಗಳಿಗೆ ವೃತ್ತಿ ತೆರಿಗೆಯಿಂದ 2 ವರ್ಷಗಳ ಕಾಲ ವಿನಾಯಿತಿ ನೀಡಬೇಕು.
ಏ) ಜಿಬಿಎ ವ್ಯಾಪಾರ ಪರವಾನಗಿ ಶುಲ್ಕದ ರದ್ದತಿ: ಜಿಬಿಎ ವ್ಯಾಪಾರ ಪರವಾನಗಿ ಶುಲ್ಕವನ್ನು ರದ್ದುಗೊಳಿಸುವುದರಿಂದ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯಾಪಾರಿಗಳಿಗೆ ನಿಯಮಗಳ ಪಾಲನೆಯ ಹೊರೆಯು ಬಹುವಾಗಿ ಕಡಿಮೆ ಆಗುತ್ತದೆ. ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಹೆಚ್ಚು ಸಹಕಾರಿಯಾಗಲಿದೆ.
ಐ) ಸರ್ಕಾರದ ಬೆಂಬಲ: ರಾಜ್ಯ ಮಟ್ಟದ ಜಿ.ಎಸ್.ಟಿ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಮಾರ್ಗದರ್ಶನ ನೀಡಲು ‘ರಾಜ್ಯ ಜಿ.ಎಸ್.ಟಿ ಸಮಾಲೋಚನಾ ಸಮಿತಿ’ಯನ್ನು ಕಾರ್ಯಪ್ರವೃತ್ತಗೊಳಿಸಬೇಕು.
- ವಿದ್ಯುತ್ ಸಂಬಂಧಿತ ಸಮಸ್ಯೆಗಳು:
ಎ. ಕೈಗಾರಿಕಾ ಗ್ರಾಹಕರಿಗೆ, ವಿಶೇಷವಾಗಿ ಎಂಎಸ್ಎಂಇಗಳಿಗೆ ಶೇ.9 ರಷ್ಟು ವಿದ್ಯುತ್ ತೆರಿಗೆಯಿಂದ ವಿನಾಯಿತಿ:
ಈ ಕೆಳಗಿನ ಅಂಶಗಳನ್ನು ಪರಿಗಣಿಸಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಶೇ.9ರಷ್ಟು ವಿದ್ಯುತ್ ತೆರಿಗೆಯಿಂದ ವಿನಾಯಿತಿ ನೀಡಲು ಸರ್ಕಾರ ಕ್ರಮ ಕೈಗೊಳ್ಳುವ ಅಗತ್ಯವಿದೆ.
ಬಿ. ಪದೇ ಪದೇ ಹೆಚ್ಚುತ್ತಿರುವ ವಿದ್ಯುತ್ ದರ:
- ವಾರ್ಷಿಕ ವಿದ್ಯುತ್ ದರ ಪರಿಷ್ಕರಣೆಯು ಕೈಗಾರಿಕಾ ಗ್ರಾಹಕರಿಗೆ, ಅದರಲ್ಲೂ ವಿಶೇಷವಾಗಿ ಎಂಎಸ್ಎಂಇಗಳಿಗೆ ಗಮನಾರ್ಹ ಆರ್ಥಿಕ ಹೊರೆಯಾಗಿದೆ.
- ಈ ಹೊರೆಯ ಜೊತೆಗೆ ವಿದ್ಯುತ್ ಸರಬರಾಜು ಮತ್ತು ಪ್ರಸರಣ ಕಂಪನಿಗಳ ನೌಕರರ ಪಿಂಚಣಿ ಸೌಲಭ್ಯಗಳನ್ನು ಭರಿಸಲು ಪ್ರತಿ ಯೂನಿಟ್‌ಗೆ ಹೆಚ್ಚುವರಿಯಾಗಿ 36 ಪೈಸೆ ಶುಲ್ಕವನ್ನು ವಿಧಿಸಲಾಗುತ್ತಿದೆ.
ಸಿ. ಎಂಎಸ್ಎಂಇಗಳ ಇಂಧನ ಬಳಕೆಯ ವಿವರ:
- ಕರ್ನಾಟಕದಲ್ಲಿ ಸುಮಾರು 5,39,100 ಎಂಎಸ್ಎಂಇ (LT-5 ಗ್ರಾಹಕರು) ಘಟಕಗಳಿವೆ. ಇವು ವಾರ್ಷಿಕವಾಗಿ ಒಟ್ಟಾರೆಯಾಗಿ 2,447.55 ಮಿಲಿಯನ್ ಯೂನಿಟ್ (MU) ವಿದ್ಯುತ್ ಬಳಸುತ್ತವೆ.
- ವಿದ್ಯುತ್ ಸರಬರಾಜು ಕಂಪನಿಗಳು ಮಾರಾಟ ಮಾಡುವ ಒಟ್ಟು ಇಂಧನದ (71,807 ಮಿಲಿಯನ್ ಯೂನಿಟ್) ಕೇವಲ ಶೇ.3.4 ರಷ್ಟು ಮಾತ್ರ ಎಂಎಸ್ಎಂಇ ಬಳಸುತ್ತಿವೆ.
iii. ಒಟ್ಟಾರೆ ವಿದ್ಯುತ್ ಬಳಕೆಗೆ ಹೋಲಿಸಿದರೆ ಎಂಎಸ್ಎಂಇಗಳ ವಿದ್ಯುತ್ ಬಳಕೆಯು ಬಹಳ ಮಿತವಾಗಿದೆ. ವಿದ್ಯುತ್ ಆದಾಯದಲ್ಲಿ ಇವುಗಳ ಪ್ರಭಾವ ಅತ್ಯಲ್ಪ.
ಡಿ. ಎಂಎಸ್ಎಂಇಗಳಿಂದ ಆರ್ಥಿಕತೆ ಮತ್ತು ಉದ್ಯೋಗದ ಪ್ರಭಾವ:
- ಪ್ರತಿ ಎಂಎಸ್ಎಂಇ ಘಟಕ ಸರಾಸರಿ 8 ಜನರಿಗೆ ನೇರ ಉದ್ಯೋಗವನ್ನು ಒದಗಿಸುತ್ತದೆ.
- ಕರ್ನಾಟಕದ ಎಂಎಸ್ಎಂಇ ವಲಯವು ಒಟ್ಟಾರೆ 42 ಲಕ್ಷ ಜನರಿಗೆ ಉದ್ಯೋಗ ನೀಡುವ ಮೂಲಕ ರಾಜ್ಯದ ಆರ್ಥಿಕ ಮತ್ತು ಸಾಮಾಜಿಕ ಸ್ಥಿರತೆಗೆ ಗಣನೀಯ ಕೊಡುಗೆ ನೀಡುತ್ತಿದೆ.
ಇ. ವಿದ್ಯುತ್ ತೆರಿಗೆಯಿಂದ ಬರುವ ಆದಾಯ:
- ವಿದ್ಯುತ್ ಬಳಕೆಯ ಮೇಲೆ ಶೇ.9 ರಷ್ಟು ತೆರಿಗೆ ವಿಧಿಸುವ ಮೂಲಕ ಸರ್ಕಾರವು 2023-24ರ ಹಣಕಾಸು ವರ್ಷದಲ್ಲಿ ಸರಿಸುಮಾರು 2,780 ಕೋಟಿ ರೂ. ವಿದ್ಯುತ್ ತೆರಿಗೆಯನ್ನು ಸಂಗ್ರಹಿಸಿದೆ.
- ಎಂಎಸ್ಎಂಇಗಳಿಗೆ ಈ ತೆರಿಗೆ ವಿನಾಯಿತಿ ನೀಡುವುದರಿಂದ ಸರ್ಕಾರದ ಒಟ್ಟು ಆದಾಯದ ಮೇಲೆ ಹೆಚ್ಚಿನ ಪರಿಣಾಮ ಬೀರದು. ಆದರೆ, ಇದು ಈ ಪ್ರಮುಖ ಉದ್ಯೋಗ ಸೃಷ್ಟಿ ವಲಯಕ್ಕೆ ದೊಡ್ಡ ಮಟ್ಟದ ಸಮಾಧಾನ ತರಲಿದೆ.
ಮನವಿ: ಆರ್ಥಿಕ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಸಾಮಾಜಿಕ ಸಮಾನತೆಯಲ್ಲಿ ಎಂಎಸ್ಎಂಇಗಳು ಮಹತ್ವದ ಪಾತ್ರವನ್ನು ವಹಿಸುತ್ತಿವೆ. ಶೇ.9 ರಷ್ಟು ವಿದ್ಯುತ್ ತೆರಿಗೆ ವಿನಾಯಿತಿ ನೀಡಬೇಕು. ಇದರಿಂದ ಎಂಎಸ್ಎಂಇಗಳ ಸ್ಪರ್ಧಾತ್ಮಕತೆ ಹೆಚ್ಚಳ, ಸುಸ್ಥಿರ ಕಾರ್ಯಾಚರಣೆ ಮತ್ತು ಕರ್ನಾಟಕದ ಬೆಳವಣಿಗೆಗೆ ಮತ್ತಷ್ಟು ಹೆಚ್ಚಿನ ಕೊಡುಗೆ ನೀಡಲು ಸಹಾಯವಾಗುತ್ತದೆ. ಮುಂಬರುವ ಬಜೆಟ್ ನಲ್ಲಿ ಎಂಎಸ್ಎಂಇ ಪರ ಮತ್ತು ಅಭಿವೃದ್ಧಿ ಪರ ಉಪಕ್ರಮಗಳ ಭಾಗವಾಗಿ ತೆರಿಗೆ ವಿನಾಯಿತಿ ಬೇಡಿಕೆ ಈಡೇರಿಸಲು ಆದ್ಯತೆ ನೀಡಬೇಕು.
ಉ. ಸೋಲಾರ್ ಟಿ.ಓ.ಡಿ:
ಭಾರತ ಸರ್ಕಾರವು 2023ರ 14ರಂದು ಹೊರಡಿಸಿದ ‘ವಿದ್ಯುತ್ (ಗ್ರಾಹಕರ ಹಕ್ಕುಗಳು) ತಿದ್ದುಪಡಿ ನಿಯಮಗಳು, 2023’ ರ ಪ್ರಕಾರ, 10 ಕಿಲೋವ್ಯಾಟ್‌ಗಿಂತ ಹೆಚ್ಚಿನ ಬೇಡಿಕೆ ಹೊಂದಿರುವ ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ‘ಸೋಲಾರ್ ಟೈಮ್-ಆಫ್-ಡೇ’ ಸುಂಕವನ್ನು 2024ರ ಏ.1ರೊಳಗೆ ಜಾರಿಗೆ ತರುವುದು ಕಡ್ಡಾಯವಾಗಿದೆ.
ಈ ನಿಟ್ಟಿನಲ್ಲಿ, ರಾಜ್ಯದಲ್ಲಿ ಸೋಲಾರ್ ಅವಧಿಯನ್ನು ಸ್ಪಷ್ಟವಾಗಿ ಗುರುತಿಸಿ, ಪ್ರತ್ಯೇಕ ಸುಂಕಗಳನ್ನು ನಿಗದಿಪಡಿಸುವ ಮೂಲಕ ‘ಸೋಲಾರ್ ಟಿ.ಓ.ಡಿ’ ಸುಂಕವನ್ನು ಜಾರಿಗೊಳಿಸಲು ಸಂಬಂಧಪಟ್ಟ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಸೂಕ್ತ ನಿರ್ದೇಶನ ನೀಡಬೇಕು.
ಊ. ವಿಶೇಷ ಪ್ರೋತ್ಸಾಹಕ ಯೋಜನೆ:
ಈ ಹಿಂದೆ ಕೈಗಾರಿಕಾ ಗ್ರಾಹಕರಿಗಾಗಿ ಪರಿಚಯಿಸಿದ್ದ ವಿಶೇಷ ಪ್ರೋತ್ಸಾಹಕ ಯೋಜನೆಗಳನ್ನು ಎಲ್ಲಾ ಎಸ್ಕಾಂಗಳು ಹಿಂಪಡೆದಿವೆ. ಹಿಂದೆ ಜಾರಿಯಲ್ಲಿದ್ದ ಪ್ರೋತ್ಸಾಹಕ ಯೋಜನೆಗಳು ಕೈಗಾರಿಕಾ ವಲಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದ್ದವು. ಈ ಹಿನ್ನೆಲೆಯಲ್ಲಿ, ವಿಶೇಷ ಪ್ರೋತ್ಸಾಹಕ ಯೋಜನೆಗಳನ್ನು ಮರುಜಾರಿಗೊಳಿಸಲು ಸೂಕ್ತ ನಿರ್ದೇಶನಗಳನ್ನು ನೀಡಬೇಕು.
ಋ. ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ನೆರವು:
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ವಿದ್ಯುತ್ ದರವನ್ನು ಪ್ರತಿ ಯೂನಿಟ್‌ಗೆ 50 ಪೈಸೆ ಕಡಿತಗೊಳಿಸಬೇಕು. ಅಲ್ಲದೇ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಕೈಗಾರಿಕೀಕರಣ ಮತ್ತು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸಲು ಎಂಎಸ್ಎಂಇಗಳಿಗಾಗಿ ಪ್ರತ್ಯೇಕ ನೀತಿಯ ಅಗತ್ಯವಿದೆ.
- ಪ್ರವಾಸೋದ್ಯಮ ವಲಯಕ್ಕೆ ಸಲಹೆಗಳು:
ಎ. 2026-27ರ ರಾಜ್ಯ ಬಜೆಟ್‌ನಿಂದ ಪ್ರಮುಖ ನಿರೀಕ್ಷೆಗಳು:
ಇಂದಿನ ಕಾಲದಲ್ಲಿ ಪ್ರವಾಸೋದ್ಯಮವು ಕೇವಲ ಒಂದು ಸೇವಾ ಉದ್ದಿಮೆಯಾಗಿ ಉಳಿದಿಲ್ಲ. ಬದಲಿಗೆ ಉದ್ಯೋಗ ಸೃಷ್ಟಿ, ಎಂಎಸ್ಎಂಇಗಳ ಬೆಳವಣಿಗೆ, ಪ್ರಾದೇಶಿಕ ಅಭಿವೃದ್ಧಿ, ಸಾಂಸ್ಕೃತಿಕವಾಗಿ ಒಂದುಗೂಡಿಸುವಿಕೆ ಮತ್ತು ಆರ್ಥಿಕ ವಿಸ್ತರಣೆಯ ಪ್ರಬಲ ಎಂಜಿನ್ ಆಗಿದೆ. ಆದ್ದರಿಂದ, 2026-27ರ ರಾಜ್ಯ ಬಜೆಟ್ ಕೇವಲ ಆರ್ಥಿಕ ದಾಖಲೆಯಾಗಿರದೆ, ಪ್ರವಾಸೋದ್ಯಮ ಮತ್ತು ಸಂಬಂಧಿತ ಸೇವೆಗಳು ಭಾರತದ ಆರ್ಥಿಕ ಬೆಳವಣಿಗೆ ಸುಧಾರಿಸುವ ಜೊತೆಗೆ ಜಾಗತಿಕವಾಗಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯುವಂತಹ ನೀತಿಗಳನ್ನು ಒಳಗೊಂಡಿರಬೇಕು.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ 2024ರ ಜೂನ್ ತಿಂಗಳಲ್ಲಿ ದಕ್ಷಿಣ ಭಾರತ್ ಉತ್ಸವ-2024 ಅನ್ನು ಯಶಸ್ವಿಯಾಗಿ ನಡೆಸುವ ಮೂಲಕ ಪ್ರವಾಸೋದ್ಯಮ ವಲಯದ ಬೆಳವಣಿಗೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಪಾಂಡಿಚೇರಿ ಮತ್ತು ಲಕ್ಷದ್ವೀಪ ರಾಜ್ಯಗಳು ಭಾಗವಹಿಸಿದ್ದ ಈ ಕಾರ್ಯಕ್ರಮದ ಫಲವಾಗಿ ಪ್ರವಾಸೋದ್ಯಮ ವಲಯದಲ್ಲಿ 5,073 ಕೋಟಿ ರೂ. ಹೂಡಿಕೆ ಸಂಬಂಧಿಸಿದಂತೆ 50 ಆಸಕ್ತಿ ಪತ್ರಗಳಿಗೆ ಸಹಿ ಹಾಕಲಾಗಿದೆ.
ಪ್ರಸಕ್ತ ಸಾಲಿನಲ್ಲಿ ಜಾಗತಿಕ ಮತ್ತು ಅಂತರಾಷ್ಟ್ರೀಯ ಪ್ರವಾಸೋದ್ಯಮ ಸಂಸ್ಥೆಗಳ ಜೊತೆಗೆ ‘ಗ್ಲೋಬಲ್ ಟೂರಿಸಂ ಕಾನ್ಕ್ಲೇವ್–2026’ ಅನ್ನು ನಡೆಸಲು ಉದ್ದೇಶಿಸಲಾಗಿದೆ. ಈ ಸಮಾವೇಶಕ್ಕೆ ಕರ್ನಾಟಕ ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆ ಕೈಜೋಡಿಸಬೇಕು ಮತ್ತು ಕರ್ನಾಟಕದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉಪಕ್ರಮಗಳನ್ನು ಸಕ್ರಿಯವಾಗಿ ಬೆಂಬಲಿಸಬೇಕು.
ಕರ್ನಾಟಕದ ಇತಿಹಾಸ, ಪರಂಪರೆ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮ, ಪರಿಸರ ಪ್ರವಾಸೋದ್ಯಮ, ಕರಾವಳಿ ಪ್ರವಾಸೋದ್ಯಮದ ಅಭಿವೃದ್ಧಿ, ಆರೋಗ್ಯ ಮತ್ತು ಯೋಗಕ್ಷೇಮ ಪ್ರವಾಸೋದ್ಯಮಗಳ ಬೆಳವಣಿಗೆಗೆ ಸಾರ್ವಜನಿಕ-ಖಾಸಗಿ ಹೂಡಿಕೆಯನ್ನು ಉತ್ತೇಜಿಸಲು ಸರ್ಕಾರ ನೆರವಾಗಬೇಕು.
ಪ್ರವಾಸೋದ್ಯಮ ವಲಯವನ್ನು ಅಭಿವೃದ್ಧಿಪಡಿಸಲು ಈ ಕೆಳಗಿನ ಅಂಶಗಳನ್ನು ಪರಿಗಣಿಸುವ ಅಗತ್ಯವಿದೆ.
- ಪ್ರವಾಸೋದ್ಯಮ ವಲಯಕ್ಕೆ ಬಜೆಟ್ ಹಂಚಿಕೆ:
ದೇಶದಾದ್ಯಂತ ಪ್ರವಾಸೋದ್ಯಮವನ್ನು ಉತ್ತೇಜಿಸುವ ಭಾರತ ಸರ್ಕಾರದ ಉಪಕ್ರಮವನ್ನು ಗಮನದಲ್ಲಿಟ್ಟುಕೊಂಡು, ಕರ್ನಾಟಕದಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿಗಾಗಿ 2026-27ರ ರಾಜ್ಯ ಬಜೆಟ್‌ನಲ್ಲಿ ಸಾಕಷ್ಟು ಅನುದಾನವನ್ನು ಮೀಸಲಿಡುವುದು ಅವಶ್ಯಕ.
- ಪ್ರವಾಸೋದ್ಯಮ ಚಟುವಟಿಕೆಗಳನ್ನು ಉತ್ತೇಜಿಸುವ ಪ್ರವಾಸೋದ್ಯಮ ಸ್ಟಾರ್ಟ್‌ಅಪ್‌ಗಳು ಮತ್ತು ಉದ್ಯಮಗಳ ತೆರಿಗೆ ಸೌಲಭ್ಯಗಳಿಗಾಗಿ ಆರ್ಥಿಕ ಬೆಂಬಲದ ಅಗತ್ಯವಿದೆ. ಪರವಾನಗಿ ಪ್ರಕ್ರಿಯೆಗಳನ್ನು ಸರಳಗೊಳಿಸುವ ಮೂಲಕ ಸಂಘಟಿತ ಪ್ರವಾಸೋದ್ಯಮ ಆಪರೇಟರ್ ಗಳನ್ನು ಬಲಪಡಿಸಬೇಕು. ಹಾಗೆಯೇ ಎಲೆಕ್ಟ್ರಿಕ್ ಮತ್ತು ಕಡಿಮೆ ಮಾಲಿನ್ಯಕಾರಕ ವಾಹನಗಳನ್ನು ಒಳಗೊಂಡಂತೆ ವಾಹನಗಳ ಆಧುನೀಕರಣಕ್ಕೆ ಪ್ರೋತ್ಸಾಹ ನೀಡಬೇಕು. ಇದರಿಂದ ಸುಸ್ಥಿರ ಮತ್ತು ಹಸಿರು ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುತ್ತದೆ.
- ಎಪಿಎಂಸಿ ಸಮಸ್ಯೆಗಳು ಮತ್ತು ಸಲಹೆಗಳು:
ಎ) ಎಪಿಎಂಸಿ ಕಾರ್ಯಾಚರಣೆಗಳ ನಗದು ರಹಿತ ವ್ಯವಹಾರ ಅಥವಾ ಡಿಜಿಟಲೀಕರಣ:
- ಎಪಿಎಂಸಿ ಆನ್‌ಲೈನ್ ಪೋರ್ಟಲ್ ಅಭಿವೃದ್ಧಿಗಾಗಿ 2024ನೇ ಸಾಲಿನಲ್ಲಿ 10 ಕೋಟಿ ರೂಪಾಯಿಗಳನ್ನು ರಾಜ್ಯ ಸರ್ಕಾರ ಮಂಜೂರು ಮಾಡಿತ್ತು. ಜಿಎಸ್ಟಿ ಪೋರ್ಟಲ್ ಮಾದರಿಯಲ್ಲಿ ಎಲ್ಲಾ ಖರೀದಿ ಮತ್ತು ಮಾರಾಟ ಪ್ರಕ್ರಿಯೆಗಳನ್ನು ಪ್ರತಿ ತಿಂಗಳು ಆನ್‌ಲೈನ್ ಮೂಲಕವೇ ನಡೆಸುವ ಯೋಚನೆ ಇತ್ತು. ಆದರೆ, ಇದುವರೆಗೆ ಜಾರಿಗೊಂಡಿಲ್ಲ. ಹೀಗಾಗಿ, ಪೋರ್ಟಲ್ ಅಭಿವೃದ್ಧಿಗೆ ಆದ್ಯತೆ ನೀಡಬೇಕು.
- ಎಪಿಎಂಸಿ ಯಾರ್ಡ್‌ಗಳ ಆಧುನೀಕರಣ: ವರ್ತಕರು ಮತ್ತು ರೈತ ಸಮುದಾಯಕ್ಕೆ ಅನುಕೂಲವಾಗುವಂತೆ, ಹಾಲಿ ಇರುವ ಎಪಿಎಂಸಿ ಮಾರುಕಟ್ಟೆಗಳನ್ನು ಅಭಿವೃದ್ಧಿಪಡಿಸಬೇಕು. ಸುಧಾರಿತ ಮೂಲಸೌಕರ್ಯ ಮತ್ತು ಗೋದಾಮು ಸೌಲಭ್ಯಗಳೊಂದಿಗೆ ಎಪಿಎಂಸಿ ಯಾರ್ಡ್‌ಗಳನ್ನು ಆಧುನೀಕರಿಸಲು ಪ್ರತ್ಯೇಕ ಬಜೆಟ್ ಹಂಚಿಕೆ ಮಾಡಬೇಕು.
- ಷರತ್ತುಬದ್ಧ ಮಾರಾಟ ಪತ್ರವನ್ನು ಪೂರ್ಣ ಪ್ರಮಾಣದ ಮಾರಾಟ ಪತ್ರವಾಗಿ ಪರಿಗಣಿಸುವುದು: ಕೆಐಎಡಿಬಿ ಭೂಮಿ ಹಂಚಿಕೆ ನೀತಿಯಲ್ಲಿ ತಂದಿರುವ ತಿದ್ದುಪಡಿ ಮಾದರಿಯಲ್ಲೇ, ವರ್ತಕರಿಗೆ ಬ್ಯಾಂಕ್ ಸಾಲ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುವಂತೆ ‘ಷರತ್ತುಬದ್ಧ ಮಾರಾಟ ಪತ್ರ’ವನ್ನು ನೀಡುವ ಬದಲು ‘ಪೂರ್ಣ ಪ್ರಮಾಣದ ಮಾರಾಟ ಪತ್ರ’ ನೀಡಬೇಕು.
- ಬೆಂಗಳೂರು ಎಪಿಎಂಸಿಯ ಕಾರು ಪಾರ್ಕಿಂಗ್ ಪ್ರದೇಶದ ಬಳಕೆ: ಬೆಂಗಳೂರು ಎಪಿಎಂಸಿಯಲ್ಲಿ ಸುಮಾರು 100 ಕೋಟಿ ರೂ. ಹೂಡಿಕೆ ಮಾಡಿ ಕಟ್ಟಡ ನಿರ್ಮಿಸಿದ್ದರೂ, ಪ್ರಸ್ತುತ ಅದು ಬಳಕೆಯಾಗದೆ ಖಾಲಿ ಬಿದ್ದಿದೆ. ಇದನ್ನು ಎಪಿಎಂಸಿಯ ಪಾಲುದಾರರ ಪ್ರಯೋಜನಕ್ಕೆ ಬಳಸಿಕೊಳ್ಳಲು ಅವಕಾಶ ನೀಡಬಹುದು.
- ಶ್ರೀಗಂಧ ಕಾವಲು ಪ್ರದೇಶವನ್ನು ಎಪಿಎಂಸಿ ಸುಪರ್ದಿಗೆ ಶ್ಲಾಘನೆ: ಸರ್ಕಾರದ ಪ್ರಯತ್ನದಿಂದಾಗಿ ಮಾಗಡಿ ರಸ್ತೆಯ ಶ್ರೀಗಂಧ ಕಾವಲ್ ಪ್ರದೇಶದಲ್ಲಿರುವ 170 ಎಕರೆಗೂ ಹೆಚ್ಚು ಬೆಲೆಬಾಳುವ ಭೂಮಿ ಎಪಿಎಂಸಿ ಬಳಕೆಗೆ ಲಭ್ಯವಾಗುವಂತಾಗಿದೆ. ಇದು ಸ್ವಾಗತಾರ್ಹ ಬೆಳವಣಿಗೆ.
- ಬೆಂಗಳೂರು ನಗರದ ಜಿಬಿಎ ಮತ್ತು ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳು ಎಪಿಎಂಸಿ ಯಾರ್ಡ್‌ಗಳಿಗೆ ವಿಧಿಸುವ ತೆರಿಗೆಯನ್ನು ರದ್ದುಗೊಳಿಸಬೇಕು: ಎಪಿಎಂಸಿ ಯಾರ್ಡ್‌ಗಳಲ್ಲಿನ ಎಲ್ಲಾ ಅಭಿವೃದ್ಧಿ ಮತ್ತು ನಿರ್ವಹಣಾ ಕಾರ್ಯಗಳನ್ನು ಆಯಾ ಎಪಿಎಂಸಿ ಸಮಿತಿಗಳೇ ನಿರ್ವಹಿಸುತ್ತಿವೆ. ಕಟ್ಟಡ ನಕ್ಷೆ ಅನುಮೋದನೆ, ಸ್ವಚ್ಛತೆ, ರಸ್ತೆ ದುರಸ್ತಿ ಮತ್ತು ನಿರ್ವಹಣೆ, ನೀರು ಸರಬರಾಜು ಮತ್ತು ಒಳಚರಂಡಿ ವಿಲೇವಾರಿ ಸೇರಿದಂತೆ ಎಲ್ಲಾ ಕೆಲಸಗಳನ್ನು ವರ್ತಕರಿಂದ ಸಂಗ್ರಹಿಸುವ ನಿರ್ವಹಣಾ ಶುಲ್ಕದಿಂದ ಎಪಿಎಂಸಿ ಸಮಿತಿಯೇ ಕೈಗೊಳ್ಳುತ್ತದೆ. ಆದರೆ, ಜಿಬಿಎ ಮತ್ತು ಸ್ಥಳೀಯ ಸಂಸ್ಥೆಗಳು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡದೆ ತೆರಿಗೆ ಪಾವತಿಸುವಂತೆ ಒತ್ತಾಯಿಸುತ್ತಿವೆ. ಹೀಗಾಗಿ, ಜಿಬಿಎ ಮತ್ತು ಇತರ ಭಾಗದ ಪುರಸಭೆಗಳು ವಿಧಿಸುವ ತೆರಿಗೆಯನ್ನು ರದ್ದುಗೊಳಿಸಬೇಕು.
- ನಗರಾಭಿವೃದ್ಧಿ, ಪೌರಾಡಳಿತ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ:
ಅ) ಕೈಗಾರಿಕಾ ಮತ್ತು ಸೇವಾ ಚಟುವಟಿಕೆಗಳಿಗೆ ಪ್ರತ್ಯೇಕ ತೆರಿಗೆ ಸ್ಲ್ಯಾಬ್:
ಕೈಗಾರಿಕಾ ನೀತಿ-2020-25ರಲ್ಲಿ ಕೈಗಾರಿಕಾ ಘಟಕಗಳ ಆಸ್ತಿ ತೆರಿಗೆಯನ್ನು ನಿರ್ಧರಿಸಲು ಪ್ರತ್ಯೇಕ ಸ್ಲ್ಯಾಬ್ ರಚಿಸುವುದನ್ನು ಪ್ರಸ್ತಾಪಿಸಿತ್ತು. ಈ ಕೈಗಾರಿಕಾ ಘಟಕಗಳು ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುತ್ತವೆ. ರಾಜ್ಯ ಮತ್ತು ಕೇಂದ್ರದ ಆದಾಯಕ್ಕೆ ಕೊಡುಗೆ ನೀಡುತ್ತವೆ. ಒಟ್ಟಾರೆ ತಲಾದಾಯ ಹೆಚ್ಚಿಸುವ ಜೊತೆಗೆ ಲಕ್ಷಾಂತರ ಜನರಿಗೆ ಉದ್ಯೋಗ ನೀಡುತ್ತವೆ. ಆದ್ದರಿಂದ, ಕೈಗಾರಿಕಾ ಪ್ರದೇಶಗಳು ಮತ್ತು ಎಸ್ಟೇಟ್‌ಗಳಲ್ಲಿರುವ ಉದ್ಯಮಗಳು ಹಾಗೂ ಈ ಪ್ರದೇಶದ ಹೊರಗೆ ಸ್ಥಾಪಿಸಲಾದ ಕೈಗಾರಿಕೆ ಹಾಗೂ ಸೇವಾ ಘಟಕಗಳಿಗಾಗಿ ಪ್ರತ್ಯೇಕ ತೆರಿಗೆ ಸ್ಲ್ಯಾಬ್ ಪರಿಚಯಿಸಬೇಕು.
ಆ) ಕೈಗಾರಿಕಾ ಟೌನ್‌ಶಿಪ್‌ಗಳ ಸ್ಥಾಪನೆ:
ಕರ್ನಾಟಕದಲ್ಲಿ ಕೈಗಾರಿಕಾ ಪ್ರದೇಶಗಳು ಮತ್ತು ಎಸ್ಟೇಟ್‌ಗಳ ಸಮೀಪದಲ್ಲಿ ಕಾರ್ಮಿಕರು, ಉದ್ಯೋಗಿಗಳ ಅನುಕೂಲಕ್ಕಾಗಿ ಸುಸಜ್ಜಿತ ‘ಕೈಗಾರಿಕಾ ಟೌನ್‌ಶಿಪ್’ಗಳನ್ನು ಸ್ಥಾಪಿಸುವ ವಿಚಾರ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಈವರೆಗೆ ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ‘ಎಲ್ಸಿಯಾ’ ಎಂಬ ಒಂದೇ ಒಂದು ಟೌನ್‌ಶಿಪ್ ಮಾತ್ರ ಘೋಷಣೆಯಾಗಿದ್ದು, ಅದೊಂದೇ ಕಾರ್ಯನಿರ್ವಹಿಸುತ್ತಿದೆ. ಕೈಗಾರಿಕಾ ಉದ್ದಿಮೆಗಳು ಬೆಂಗಳೂರು ನಗರ, ಕಾರ್ಪೊರೇಷನ್ ವ್ಯಾಪ್ತಿ, ಪಟ್ಟಣ ಮತ್ತು ಹಳ್ಳಿಗಳಲ್ಲಿ ಹರಡಿಕೊಂಡಿವೆ. ಹೀಗಾಗಿ, ಈ ಉದ್ಯಮಗಳಿಗೆ ಅನುಕೂಲವಾಗುವಂತೆ ಒಂದು ಬಾರಿ ಮೂಲಸೌಕರ್ಯ ಅಭಿವೃದ್ಧಿಪಡಿಸಬೇಕು ಮತ್ತು ಕೈಗಾರಿಕಾ ಟೌನ್ ಶಿಪ್ ಘೋಷಿಸಬೇಕು.
ಇ) ಪಂಚಾಯತಿ ಅಧಿಕಾರ: ಪಂಚಾಯಿತಿಗಳು ತಮ್ಮ ವ್ಯಾಪ್ತಿಯ ಕೈಗಾರಿಕೆಗಳಿಗೆ ಶುಲ್ಕ ನಿಗದಿಪಡಿಸುವುದು ಮತ್ತು ಪರಿಷ್ಕರಿಸುವ ಅಧಿಕಾರವನ್ನು ಹಿಂತೆಗೆದುಕೊಳ್ಳಬೇಕು. ಪ್ರಸ್ತುತ, ಪಂಚಾಯತಿಗಳು ತಮ್ಮ ವ್ಯಾಪ್ತಿಯ ಕೈಗಾರಿಕೆಗಳಿಗೆ ಅನ್ವಯವಾಗುವ ಶುಲ್ಕವನ್ನು ನಿಗದಿಪಡಿಸಲು, ತಿದ್ದುಪಡಿ ಮಾಡುವ ಅಧಿಕಾರ ಹೊಂದಿವೆ. ಪಂಚಾಯತ್ ಕಾಯ್ದೆಯ ಮೂಲ ಉದ್ದೇಶಕ್ಕೆ ವಿರುದ್ಧವಾಗಿ ಪಂಚಾಯತಿಗಳು ತಮ್ಮ ಅಧಿಕಾರವನ್ನು ಮನಬಂದಂತೆ ಬಳಸುತ್ತಿರುವುದು ಕಂಡುಬಂದಿದೆ. ಆದ್ದರಿಂದ, ಶುಲ್ಕ ನಿಗದಿ/ಪರಿಷ್ಕರಣೆ ಮಾಡುವ ಪಂಚಾಯತಿಗಳ ಈ ಅಧಿಕಾರವನ್ನು ಹಿಂತೆಗೆದುಕೊಳ್ಳಬೇಕು.
ಎಫ್) ವ್ಯವಹಾರ ಸರಳೀಕರಣ:
ವ್ಯವಹಾರ ಮಾಡುವುದನ್ನು ಸರಳೀಕರಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಕರ್ನಾಟಕ ಮುಂದಿರಬೇಕು ಎನ್ನುವುದು ನಮ್ಮ ಆಶಯವಾಗಿದೆ. ಈ ನಿಟ್ಟಿನಲ್ಲಿ ‘ಏಕಗವಾಕ್ಷಿ ವ್ಯವಸ್ಥೆ’ ಜಾರಿಗೊಳಿಸಲು ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಬೇಕು.
1.ಈಗ ಇರುವ ಇಲಾಖೆಗಳ ಜೊತೆಗೆ ಉಳಿದ ಎಲ್ಲಾ ಇಲಾಖೆಗಳು/ಏಜೆನ್ಸಿಗಳನ್ನು ಏಕಗವಾಕ್ಷಿ ವ್ಯವಸ್ಥೆಯಲ್ಲಿ ತರಬೇಕು.
2.ಎಲ್ಲಾ ಇಲಾಖೆಗಳನ್ನು ಒಳಗೊಳ್ಳುವ ‘ಸಂಯೋಜಿತ ಅರ್ಜಿ ನಮೂನೆ’ಯನ್ನು (ಸಿಎಎಫ್) ಜಾರಿಗೆ ತರಬೇಕು.
3.ವಿವಿಧ ರೀತಿಯ ಪರವಾನಗಿಗಳು ಮತ್ತು ಅನುಮೋದನೆ ಪಡೆಯುವುದಕ್ಕೆ ಪಾವತಿಸಬೇಕಾದ ಬೇರೆ ಬೇರೆ ಶುಲ್ಕಗಳನ್ನು ‘ಸಂಯೋಜಿತ ಶುಲ್ಕ ರಚನೆ’ (ಸಿಎಫ್ಎಸ್) ವ್ಯವಸ್ಥೆ ಜಾರಿಗೊಳಿಸುವ ಮೂಲಕ ಶುಲ್ಕ ಪಾವತಿಯನ್ನು ಸರಳೀಕರಿಸಬೇಕು.
4.ಹಾಲಿ ಆನ್ಲೈನ್ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸಬೇಕು. ಅದರಲ್ಲಿ ಯಾವ ಮಾದರಿಯ ಕೈಗಾರಿಕೆಗಳಿಗೆ ಯಾವ ರೀತಿಯ ಪರವಾನಗಿ ಮತ್ತು ಅನುಮೋದನೆ ಪಡೆಯಬೇಕು ಮತ್ತು ದಾಖಲೆಗಳನ್ನು ಸಲ್ಲಿಸುವುದು ಸೇರಿದಂತೆ ಎಲ್ಲಾ ರೀತಿಯ ವಿವರಗಳನ್ನು ಒದಗಿಸಬೇಕು.
ಇ. ಕಾನೂನುಗಳ ಸರಳೀಕರಣ:
ಕೈಗಾರಿಕೆಗಳಿಗೆ ಸಂಬಂಧಿಸಿದ ಹಲವಾರು ಹಳೇ ನಿಯಮಗಳು, ಮಾರ್ಗಸೂಚಿಗಳು ಈಗಿನ ಕಾಲಕ್ಕೆ ಅಪ್ರಸ್ತುತ ಎನಿಸಿವೆ. ಅನಗತ್ಯ ಎನಿಸಿರುವ ನಿಯಮಗಳ ಪಾಲನೆಯು ಕೈಗಾರಿಕೋದ್ಯಮಗಳಿಗೆ ಹೊರೆಯಾಗಿ ಪರಿಣಮಿಸಿವೆ. ಇಂತಹ ಅಪ್ರಸ್ತುತ ಕಾನೂನುಗಳನ್ನು ತೆಗೆದು ಹಾಕಬೇಕು. ಇಂದಿನ ಕಾಲಕ್ಕೆ ತಕ್ಕಂತೆ ಉದ್ಯಮ ನಿಯಮಗಳು ಉದ್ಯಮಸ್ನೇಹಿಯಾಗಿ ಸರಳೀಕರಿಸಬೇಕು.
- ಆಸ್ತಿ ತೆರಿಗೆ:
ಅ) ಪೌರಾಡಳಿತ ಆಸ್ತಿ ತೆರಿಗೆ:
ನಗರ ಪ್ರದೇಶದ ಆಸ್ತಿ ತೆರಿಗೆಯನ್ನು ವೈಜ್ಞಾನಿಕವಾಗಿ ತರ್ಕಬದ್ಧಗೊಳಿಸಲಾಗಿದೆ. ಈ ಕುರಿತು ಗ್ರಾಮೀಣಾಭಿವೃದ್ಧಿ ಇಲಾಖೆ ಹೊರಡಿಸಿರುವ ಆದೇಶವನ್ನು ಗ್ರಾಮ ಪಂಚಾಯಿತಿಗಳು ಅಥವಾ ಪಾಲಿಕೆಗಳು ಅನುಷ್ಠಾನಗೊಳಿಸುತ್ತಿಲ್ಲ. ಈ ಆದೇಶವನ್ನು ಸರಿಯಾಗಿ ಜಾರಿಗೆ ತರಲು ಒಂದು ಬಲವಾದ ವ್ಯವಸ್ಥೆಯನ್ನು ರೂಪಿಸುವ ಅಗತ್ಯವಿದೆ.
ಪಂಚಾಯತಿ ತೆರಿಗೆಯನ್ನು ನಿರ್ಮಿತ ಪ್ರದೇಶದ ಆಧಾರದ ಮೇಲೆ ನಿಗದಿಪಡಿಸಬೇಕು. ಮಾರ್ಗಸೂಚಿ ದರ ಆಧಾರದ ಮೇಲೆ ತೆರಿಗೆ ವಸೂಲಿ ಮಾಡಬಾರದು.
ಆ. ಆಸ್ತಿ ತೆರಿಗೆ ಬಾಕಿ ಪಾವತಿಗಾಗಿ ‘ಒಂದು ಬಾರಿ ಇತ್ಯರ್ಥ’ ಯೋಜನೆ:
ಕೆಲವು ಅಸ್ಪಷ್ಟತೆಗಳಿಂದಾಗಿ ರಾಜ್ಯದ ಕೈಗಾರಿಕೆಗಳಿಂದ ದೊಡ್ಡ ಮೊತ್ತದ ಆಸ್ತಿ ತೆರಿಗೆ ಬಾಕಿ ಉಳಿದಿದೆ. ಇಂತಹ ಬಾಕಿ ಮೊತ್ತ ಸಂಗ್ರಹಕ್ಕೆ ಸರ್ಕಾರವು ‘ಒಂದು ಬಾರಿ ಇತ್ಯರ್ಥ ಯೋಜನೆ’ಯನ್ನು (ಒಟಿಎಸ್ ಸ್ಕೀಮ್) ಘೋಷಿಸಬೇಕು.
- ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ:
ಎಂಎಸ್ಎಂಇಗಳ ಮೇಲಿನ ನಿಯಮ ಪಾಲನೆಯ ಹೊರೆಯನ್ನು ಕಡಿಮೆ ಮಾಡಲು ಪ್ರಕ್ರಿಯೆಗಳ ಸರಳೀಕರಣ: ಸೂಕ್ಷ್ಮ, ಅತಿಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಮೇಲಿನ ನಿಯಮ ಪಾಲನೆಯ ಹೊರೆಯನ್ನು ಗಣನೀಯವಾಗಿ ಕಡಿಮೆ ಮಾಡುವ ಉದ್ದೇಶದಿಂದ ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಹೊರಡಿಸಿರುವ ‘ಜಲ (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆ 1974’ ಮತ್ತು ‘ವಾಯು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆ 1981’ಕ್ಕೆ ಇತ್ತೀಚೆಗೆ ತಿದ್ದುಪಡಿಗಳನ್ನು ತರಲಾಗಿದೆ.
ಈ ತಿದ್ದುಪಡಿಗಳನ್ನು ಕಾಯ್ದೆಯ ನಿಬಂಧನೆಗಳ ಪ್ರಕಾರ ರಾಜ್ಯ ಸರ್ಕಾರಗಳು ಜಾರಿಗೆ ತರಬೇಕಿದೆ. ತಿದ್ದುಪಡಿ ಕಾಯ್ದೆ ಅನುಸಾರ ಪರಿಷ್ಕೃತ ಮಾರ್ಗಸೂಚಿಗಳನ್ನು ಪರಿಣಾಮಕಾರಿಯಾಗಿ ಮತ್ತು ಕಾಲಮಿತಿಯೊಳಗೆ ಅನುಷ್ಠಾನಗೊಳಿಸಲು ಸಂಬಂಧಪಟ್ಟ ಇಲಾಖೆಗಳು ಹಾಗೂ ನಿಯಂತ್ರಣ ಪ್ರಾಧಿಕಾರಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಬೇಕು. ಈ ಕ್ರಮವು ರಾಜ್ಯದಲ್ಲಿ ಸುಸ್ಥಿರ ಕೈಗಾರಿಕಾ ಬೆಳವಣಿಗೆಗೆ ಬೆಂಬಲ ನೀಡುವ ಜೊತೆಗೆ ಪಾರದರ್ಶಕ ಮತ್ತು ಉದ್ಯಮಸ್ನೇಹಿ ವಾತಾವರಣವನ್ನು ನಿರ್ಮಿಸಲು ಹಾಗೂ ವ್ಯಾಪಾರೋದ್ಯಮ ನಡೆಸುವ ಪ್ರಕ್ರಿಯೆಯನ್ನು ಸರಳೀಕರಿಸಲು ಸಹಕಾರಿಯಾಗಲಿದೆ.
ಅ) ಕೈಗಾರಿಕಾ ಘಟಕಗಳು ನಡೆಸುವ ಚಟುವಟಿಕೆಗಳ ಆಧಾರದ ಮೇಲೆ ಸಮ್ಮತಿ ಶುಲ್ಕ ನಿಗದಿಪಡಿಸಬೇಕು:
ಕರ್ನಾಟಕ ಸರ್ಕಾರದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯು ಕೈಗಾರಿಕಾ ಉದ್ಯಮಗಳು ಮತ್ತು ಸಂಸ್ಥೆಗಳಿಗೆ ಹೊಸ ‘ಸಮ್ಮತಿ ಶುಲ್ಕ’ ವ್ಯವಸ್ಥೆಯನ್ನು ಘೋಷಿಸಿದೆ. ಇದು ಉದ್ಯಮಗಳು ನಡೆಸುವ ಚಟುವಟಿಕೆಗಳನ್ನು ಪರಿಗಣಿಸದೆ ಕೇವಲ ಬಂಡವಾಳ ಹೂಡಿಕೆಯನ್ನು ಆಧರಿಸಿದೆ.
ಆ) ಇಲಾಖೆಯ ಕ್ರಮದ ಕುರಿತು ನಮ್ಮ ವ್ಯಾಪ್ತಿಯ ಸಂಘ-ಸಂಸ್ಥೆಗಳಿಂದ ಹಲವಾರು ಅಹವಾಲುಗಳು ಸಲ್ಲಿಕೆಯಾಗಿದ್ದು, ಅವುಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಲಾಗಿದೆ:
- ಸೂಕ್ತ ಕಾರಣಗಳನ್ನು ನೀಡದೆ ಸಮ್ಮತಿ ಶುಲ್ಕವನ್ನು ವಿಪರೀತವಾಗಿ ಹೆಚ್ಚಿಸಲಾಗಿದೆ. ಆದರೆ, ಸಮ್ಮತಿ ಶುಲ್ಕವು ಬಂಡವಾಳ ಹೂಡಿಕೆಯ ಮೇಲೆ ನಿರ್ಧಾರಿತವಾಗಬಾರದು.
- ಸಮ್ಮತಿ ಶುಲ್ಕವು ಕೈಗಾರಿಕೆಗಳು ನಡೆಸುವ ಚಟುವಟಿಕೆಗಳು, ಅಂತಿಮ ಉತ್ಪನ್ನ ಮತ್ತು ಕೈಗಾರಿಕಾ ಘಟಕದಿಂದ ಉತ್ಪತ್ತಿಯಾಗುವ ತ್ಯಾಜ್ಯದ ಸ್ವರೂಪದ ಮೇಲೆ ನಿಗದಿಯಾಗಬೇಕು. ಕೈಗಾರಿಕೆಗಳನ್ನು ಹಸಿರು, ಕಿತ್ತಳೆ, ಕೆಂಪು ಮತ್ತು ಬಿಳಿ ಎಂದು ವರ್ಗೀಕರಿಸಲಾಗಿದೆ. ಯಾವುದೇ ಮಾಲಿನ್ಯವನ್ನು ಉಂಟು ಮಾಡದ ಘಟಕಗಳು ಕೂಡ ಸಮ್ಮತಿ ಪತ್ರ ಪಡೆಯುವಂತೆ ಒತ್ತಾಯಿಸಬಾರದು.
- ಕೆಐಎಡಿಬಿ ಅಥವಾ ಕೆಎಸ್‌ಎಸ್‌ಐಡಿಸಿ ಅಥವಾ ಯಾವುದೇ ಸರ್ಕಾರಿ ಏಜೆನ್ಸಿಗಳು ಸ್ಥಾಪಿಸಿದ ಕೈಗಾರಿಕಾ ಪ್ರದೇಶಗಳಲ್ಲಿ ‘ಸಾಮಾನ್ಯ ತ್ಯಾಜ್ಯ ನೀರು ಸಂಸ್ಕರಣಾ ಘಟಕ’ಗಳನ್ನು ಸ್ಥಾಪಿಸಿಲ್ಲ. ಕೈಗಾರಿಕಾ ಘಟಕಗಳು ತಮ್ಮ ತ್ಯಾಜ್ಯವನ್ನು ಅನುಮತಿಸಲಾದ ಮಿತಿಯವರೆಗೆ ಸಂಸ್ಕರಿಸಿ ವಿಲೇವಾರಿ ಮಾಡಬೇಕಿದೆ.
- ಕೈಗಾರಿಕಾ ಸಂಸ್ಥೆಗಳ ನೀರು, ತ್ಯಾಜ್ಯ ನೀರು ಮತ್ತು ಅನಿಲ ಹೊರಸೂಸುವಿಕೆ ಪರಿಶೀಲನೆ, ವಿಶ್ಲೇಷಣೆಗಾಗಿ ಸಂಗ್ರಹಣಾ ಶುಲ್ಕವನ್ನು ಮಾಲಿನ್ಯ ನಿಯಂತ್ರಣ ಮಂಡಳಿ ವಿಧಿಸುತ್ತಿದ್ದು, ಇದು ಕೈಗಾರಿಕೆಗಳಿಗೆ ಹೆಚ್ಚುವರಿ ಹೊರೆಯಾಗಿ ಪರಿಣಮಿಸಿದೆ. ಅದರ ಜೊತೆಗೆ ಥರ್ಡ್ ಪಾರ್ಟಿ ಏಜೆನ್ಸಿಗಳು, ಪ್ರಯೋಗಾಲಯದಿಂದಲೂ ವಿಶ್ಲೇಷಣೆ ನಡೆಸಲು ಒತ್ತಾಯಿಸುತ್ತಿದೆ. ಇದು ಕೈಗಾರಿಕಾ ಘಟಕಗಳ ವೆಚ್ಚವನ್ನು ಮತ್ತಷ್ಟು ಹೆಚ್ಚಿಸುತ್ತದೆ.
- ಭಾರತ ಸರ್ಕಾರದ ಎಂಎಸ್ಎಂಇ ಸಚಿವಾಲಯವು ಬಂಡಾವಳ ಹೂಡಿಕೆಯ ಮಿತಿಯನ್ನು ಸೂಕ್ಷ್ಮ ಕೈಗಾರಿಕೆಗಳಿಗೆ 1 ಕೋಟಿ ರೂ., ಸಣ್ಣ ಕೈಗಾರಿಕೆಗಳಿಗೆ 10 ಕೋಟಿ ರೂ. ಮತ್ತು ಮಧ್ಯಮ ಕೈಗಾರಿಕೆಗಳಿಗೆ 50 ಕೋಟಿ ರೂ.ಗೆ ನಿಗದಿಪಡಿಸಿದೆ. ಆದರೆ, ಇದನ್ನು ನಮ್ಮ ರಾಜ್ಯದಲ್ಲಿ ಪರಿಗಣಿಸಿದಂತೆ ಕಾಣುತ್ತಿಲ್ಲ.
ಮಾಲಿನ್ಯ ನಿಯಂತ್ರಣ ಮಂಡಳಿಯು ವಿಪತ್ತು ನಿರ್ವಹಣಾ ಕಾಯ್ದೆಯ ಅಡಿಯಲ್ಲಿ ವಿಶೇಷ ಸಂದರ್ಭದ Force Majeure Clause ಬಳಸಿಕೊಂಡು ಎಂಎಸ್ಎಂಇಗಳಿಗೆ ಶೇ.50ರಷ್ಟು ವಿನಾಯಿತಿ, ಮರುಪಾವತಿಯನ್ನು ಘೋಷಿಸಬೇಕು ಎಂದು ಎಫ್ ಕೆಸಿಸಿಐ ಅಧ್ಯಕ್ಷೆ ಉಮಾರೆಡ್ಡಿ ಮನವಿ ಮಾಡಿದ್ದಾರೆ.
Key words: State budget, development, industries, FKCCI President, Uma Reddy







