ಬೆಂಗಳೂರು,ಜು,24,2020(www.justkannada.in): ಕೊರೋನಾ ಲಾಕ್ ಡೌನ್ ನಿಂದ ಎದುರಾದ ಆರ್ಥಿಕ ಸಂಕಷ್ಟವನ್ನು ಎದುರಿಸಲಾಗದ ನೇಕಾರನೊಬ್ಬ ಸೀರೆ ನೇಯುವ ವಿದ್ಯುತ್ ಮಗ್ಗಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಬೆಂಗಳೂರಿನಲ್ಲಿ ಇಂದು ನಡೆದಿದೆ.
55 ವರ್ಷದ ಲಕ್ಷ್ಮೀಪತಿ ಮೃತ ನೇಕಾರ ಎಂದು ಗುರುತಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯ ವಾರ್ಡ್ ನಂ 5ರ ಅಗ್ರಹಾರ ಬಡಾವಣೆಯಲ್ಲಿ ಪತ್ನಿಯೊಂದಿಗೆ ನೇಕಾರಿಕೆ ಮಾಡಿಕೊಂಡು ಕಳೆದ 25 ವರ್ಷಗಳಿಂದಲೂ ಜೀವನ ನಡೆಸುತ್ತಿದ್ದರು.
ಇದ್ದ ಮಕ್ಕಳು ಇವರನ್ನು ತೊರೆದು ದೂರ ಉಳಿದಿದ್ದರು. ಲಾಕ್ ಡೌನ್ ನಿಂದ ದಂಪತಿಗಳಿಗೆ ಜೀವನ ನಡೆಸುವುದೂ ಕೂಡಾ ದುಸ್ಥರವಾಗಿತ್ತು. ಇಂದು ಪತ್ನಿ ಸೊಪ್ಪು ತರಲು ಹೊರಗೆ ಹೋಗಿದ್ದಾಗ ಲಕ್ಷ್ಮೀಪತಿ ಬೆಳಿಗ್ಗೆ 7.30ರ ಸಂದರ್ಭದಲ್ಲಿ ಸೀರೆ ನೇಯುವ ಮಗ್ಗಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೊರೋನಾ ಪ್ರಕರಣ ನೇಕಾರಿಕೆ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರಿದೆ. ತತ್ಪರಿಣಾಮವಾಗಿ ಈ ಪ್ರಕರಣವೂ ಸೇರಿ ಒಟ್ಟು ಹನ್ನೊಂದು ಮಂದಿ ನೇಕಾರರು ನೇಣಿಗೆ ಶರಣಾಗಿದ್ದಾರೆ. ಸರ್ಕಾರಕ್ಕೆ ಆತ್ಮಹತ್ಯೆ ಪ್ರಕರಣಗಳು ಗಮನಕ್ಕೆ ಬಂದಿದ್ದರೂ ಈವರೆಗೂ ಪರಿಹಾರ ಘೋಷಿಸುವಲ್ಲಿ ನಿರಾಸಕ್ತಿ ತೋರಿರುವುದು ವಿಷಾದನೀಯ.
Key words: Financial hardship –lockdown- Weaver- surrender – suicide






