ಮೈಸೂರು, ಅಕ್ಟೋಬರ್,7,2025 (www.justkannada.in): ಚಿಕಿತ್ಸೆಗೆ ದಾಖಲಾದರೂ ಸಹ ಸಾರ್ವಜನಿಕ ಆಸ್ಪತ್ರೆಯಲ್ಲೇ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆಯಲ್ಲಿ ನಡೆದಿದೆ.
ಹೆಚ್.ಡಿ ಕೋಟೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು ಭೂವ್ಯಾಜ್ಯಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಆಸ್ಪತ್ರೆಗೆ ದಾಖಲಾದ ಗಾಯಾಳುಗಳಿಗೆ, ಆಸ್ಪತ್ರೆಯಲ್ಲೇ ರೋಗಿಗಳ ಹಾಗೂ ಕರ್ತವ್ಯದಲ್ಲಿದ್ದ ಆರೋಗ್ಯ ಸಿಬ್ಬಂದಿಗಳ ಸಮ್ಮುಖದಲ್ಲೇ ಗುಂಪು ಹಲ್ಲೆ ನಡೆಸಿದ್ದು ಅಲ್ಲಿದ್ದ ಆಸ್ಪತ್ರೆ ಸಿಬ್ಬಂದಿ ಗಲಾಟೆ ನಿಯಂತ್ರಿಸಲು ಹರಸಾಹಸ ಪಟ್ಟರು.
ನಂತರ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಇನ್ಸ್ ಪೆಕ್ಟರ್ ಗಂಗಾಧರ್ ಮತ್ತು ಪೊಲೀಸ್ ಸಿಬ್ಬಂದಿಗಳು ಪರಿಸ್ಥಿತಿಯನ್ನ ನಿಯಂತ್ರಣಕ್ಕೆ ತಂದರು. ಎಚ್.ಡಿ.ಕೋಟೆ ತಾಲೂಕಿನ ಶರೀಫ್ ಕಾಲೋನಿಯ ಸರ್ವೆನಂ 1/687ರ ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ಈ ಘಟನೆ ನಡೆದಿದೆ.
ನಾಗಮೂರ್ತಿ, ರವಿ ಮತ್ತು ಶರೀಫ್ ಕಾಲೋನಿ ನಯಾಜ್, ಅಪ್ಸರ್ ನಡುವೆ ಈ ಗಲಾಟೆ ನಡೆದಿದೆ. ಜಮೀನಿನಲ್ಲೇ ಹಲ್ಲೆ – ಪ್ರತಿಹಲ್ಲೆ ನಡೆದಿದ್ದು ಬಳಿಕ ನಾಗಮೂರ್ತಿ ಮತ್ತು ರವಿ ಎಚ್.ಡಿ.ಕೋಟೆ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಆಸ್ಪತ್ರೆಗೆ ಬಂದ ನಯಾಜ್, ಅಪ್ಸರ್ ಇತರರು ನಾಗಮೂರ್ತಿ, ರವಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸರ್ಕಾರಿ ಆಸ್ಪತ್ರೆ ಕರ್ತವ್ಯದ ಸಮಯದಲ್ಲೆ ತುರ್ತು ಚಿಕಿತ್ಸೆಗೆ ದಾಖಲಾಗಿದ್ದ ಕೊಠಡಿಯಲ್ಲೆ ಹಲ್ಲೆ ಪ್ರತಿ ಹಲ್ಲೆ ನಡೆದಿದ್ದು ಘಟನೆಯಿಂದ ಭಯಭೀತರಾಗಿ ರೋಗಿಗಳು ಸ್ಥಳದಿಂದ ಓಡಿಹೋದರು. ಘಟನೆ ಸಂಬಂಧ ನಯಾಜ್ ಅಪ್ಸರ್ ಸೇರಿದಂತೆ ಒಂದೇ ಗುಂಪಿನ 13ಮಂದಿ ವಿರುದ್ದ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪ್ಸರ್ ಇತರರ ಹೇಳಿಕೆಯಂತೆ ನಾಗಮೂರ್ತಿ, ರವಿ ಮತ್ತು ಪ್ರವೀಣ್ ಸೇರಿ ಮತ್ತೊಂದು ಗುಂಪಿನ 3 ಮಂದಿ ವಿರುದ್ದ ಪ್ರತಿ ದೂರು ದಾಖಲಾಗಿದೆ.
Key words: Fight, two groups, hospital, Complaint, filed, HD Kote