ಕಬ್ಬಿಗೆ ದರ ನಿಗದಿಗೆ ಆಗ್ರಹ: ಸರ್ಕಾರದ ವಿರುದ್ದ ಸಿಡಿದ ರೈತರು : ಹಲವೆಡೆ ಕಲ್ಲು ತೂರಾಟ, ಹೆದ್ದಾರಿ ಬಂದ್‌

ಬೆಂಗಳೂರು,ನವೆಂಬರ್,4,2025 (www.justkannada.in): ಕಬ್ಬಿಗೆ ದರ ನಿಗದಿಪಡಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ದ ರೈತರು ನಡೆಸುತ್ತಿರುವ ಹೋರಾಟ 5ನೇ ದಿನಕ್ಕೆ ಕಾಲಿಟ್ಟಿದ್ದು ಇಂದು ಹಲವೆಡೆ ಹೆದ್ದಾರಿಗಳನ್ನ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

ಕಳೆದ ಐದು ದಿನಗಳಿಂದ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ರೈತರು ನಡೆಸುತ್ತಿದ್ದ ಹೋರಾಟ ಇದೀಗ ತೀವ್ರ ಸ್ವರೂಪ ಪಡೆದಿದ್ದು, ಕೆಲವು ಕಡೆ ಕಲ್ಲು ತೂರಾಟ ಹಾಗೂ ಹೆದ್ದಾರಿ ಬಂದ್‌ ಮಾಡುವ ಮೂಲಕ ಸರ್ಕಾರದ ವಿರುದ್ಧ ರೈತರು ಸಿಡಿದೆದ್ದಿದ್ದಾರೆ. ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ಕಳೆದ 5 ದಿನಗಳಿಂದ ನಿರಂತರ ಅಹೋರಾತ್ರಿ ಧರಣಿ ನಡೆಸುತ್ತಿರುವ ಕಬ್ಬು ಬೆಳೆಗಾರರು, ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಕಿಡಿಕಾರಿದ್ದಾರೆ. ಕಳೆದ 5 ದಿನಗಳಿಂದ ರೈತರು ಬಿರುಸಿನ ಗಾಳಿಯಲ್ಲೂ, ಚಳಿಯಲ್ಲೂ ಅಹೋರಾತ್ರಿ ಕುಳಿತು ಹೋರಾಟ ನಡೆಸುತ್ತಿದ್ದಾರೆ. ಕೆಲವರು ಸ್ಥಳದಲ್ಲೇ ಊಟ, ನಿದ್ದೆ ಮಾಡುತ್ತಾ ಹೋರಾಟ ಮುಂದುವರೆಸಿದ್ದಾರೆ. ಟನ್‌ ಕಬ್ಬಿಗೆ ಕನಿಷ್ಠ 3500 ದರ ನಿಗದಿಪಡಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ

ಬಾಗಲಕೋಟೆ ಜಿಲ್ಲೆಯ ಮುದೋಳ ಮತ್ತು ಜಮಖಂಡಿ ತಾಲ್ಲೂಕಿನ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಮುಂದೆ ನಡೆಸುತ್ತಿದ್ದ ಪ್ರತಿಭಟನೆ ಏಕಾಏಕಿ ಹಿಂಸಾರೂಪಕ್ಕೆ ತಿರುಗಿದೆ.  ಸಾವಿರಾರು ರೈತರು ಇಂದು ಏಕಾಏಕಿ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಿಂತಿದ್ದ ವಾಹನಗಳು ಮತ್ತು ಕಚೇರಿಗಳ ಮೇಲೆ ಕಲ್ಲು ತೂರಾಟ ನಡೆಸಿ ಸರ್ಕಾರದ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಇತ್ತ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪೂರ ಕ್ರಾಸ್‌‍ ಬಳಿ ಸಾವಿರಾರು ರೈತರು ಕಳೆದ 5 ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹೋರಾಟ ಜಿಲ್ಲೆಯಾದ್ಯಂತ ವ್ಯಾಪಿಸಿದ್ದು, ರೈತರ ಹೋರಾಟಕ್ಕೆ ಸರಕಾರ ಸ್ಪಂದಿಸದ ಕಾರಣ ಚಿಕ್ಕೋಡಿ ಪಟ್ಟಣ ಸೇರಿ ವಿವಿಧೆಡೆ ಹೆದ್ದಾರಿ ಬಂದ್‌ ಮಾಡಿ ರೈತರು ಪ್ರತಿಭಟನೆ ನಡೆಸಿದ್ದಾರೆ . ಹುಕ್ಕೇರಿ ಜಿಲ್ಲೆಯ ಹಲವು ಕಡೆ ಬಂದ್‌ಗೆ ಕರೆ ಕೊಡಲಾಗಿತ್ತು. ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್‌‍ನಲ್ಲಿ ಕಳೆದ ಒಂದು ವಾರದಿಂದ ನಡೆದಿರುವ ಪ್ರತಿಭಟನೆ ಜಿಲ್ಲಾಧಿಕಾರಿ ಮೊಹಮದ್‌ ರೋಷನ್‌ ಮಧ್ಯಸ್ಥಿಕೆ ನಂತರವೂ ನಿಲ್ಲದೇ ಹೆದ್ದಾರಿ ಬಂದ್‌ ವರೆಗೂ ತಲುಪಿದೆ.

ರೈತರ ಹೋರಾಟಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬೆಂಬಲ ನೀಡಿದ್ದು ಇಂದು ಸಂಜೆ 5ಗಂಟೆಯೊಳಗೆ ಕಬ್ಬಿಗೆ ದರ ನಿಗದಿ ಪಡಿಸಲು ಸರ್ಕಾರಕ್ಕೆ ಡೆಡ್ ಲೈನ್ ಕೊಟ್ಟಿದ್ದರು.

Key words: fixing, sugarcane prices, Farmers, protest. Against, government