ಕೊವಿಡ್ 3ನೇ ಅಲೆ ಎದುರಿಸಲು ಸಕಲ ಸಿದ್ಧತೆ; ಬೆಂಗಳೂರಿನಲ್ಲಿ ಪ್ರತ್ಯೇಕ ಮಕ್ಕಳ ಕೊವಿಡ್ ಆಸ್ಪತ್ರೆಗೆ ಚಿಂತನೆ- ಸಚಿವೆ ಶಶಿಕಲಾ ಜೊಲ್ಲೆ.

ಬೆಂಗಳೂರು,ಜೂನ್,21,2021(www.justkannada.in):  ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಎದುರಿಸಲು ಪ್ರತಿ ತಾಲೂಕಿನಲ್ಲಿಯೂ ಮಕ್ಕಳಿಗಾಗಿ ಪ್ರತ್ಯೇಕ ಕೊವಿಡ್ ಕೇರ್ ಸೆಂಟರ್ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.jk

ಸೋಮವಾರ ವಿಕಾಸಸೌಧದಲ್ಲಿ ಕೊವಿಡ್  3ನೇ ಅಲೆ ನಿಯಂತ್ರಣ ಕುರಿತು ಬೆಂಗಳೂರು ನಗರ ಜಿಲ್ಲೆ ಹಾಗೂ ಬಿಬಿಎಂಪಿ ವ್ಯಾಪ್ತಿಯ ಜನ ಪ್ರತಿನಿಧಿಗಳು ಅಧಿಕಾರಿಗಳ ಸಭೆ ನಡೆಸಿ  ನಂತರ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಎರಡನೇ ಅಲೆಯಲ್ಲಿ ಸುಮಾರು 50 ಮಕ್ಕಳು ತಂದೆ ತಾಯಿಯನ್ನು ಕಳೆದುಕೊಂಡಿದ್ದಾರೆ. ಅವರಿಗೆ  ಬಾಲ ಸೇವಾ ಯೋಜನೆಯ ಮೂಲಕ ಪ್ರತಿ ತಿಂಗಳು ಮಗುವಿಗೆ 3500 ರೂ. ನೀಡುವುದು, ಅಲ್ಲದೆ ಉಚಿತ ಶಿಕ್ಷಣ ನೀಡುವುದು, 21 ವರ್ಷ ತುಂಬಿದ ಹೆಣ್ಣು ಮಕ್ಕಳಿಗೆ 1 ಲಕ್ಷ ರೂ. ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ತಂದೆ ತಾಯಿಗಳನ್ನು ಮಕ್ಕಳನ್ನು ನೋಡಿಕೊಳ್ಳಲು ಸಂಬಂಧಿಗಳು ಶಕ್ತರಿಲ್ಲದಿದ್ದರೆ ಇಲಾಖೆ ಮೂಲಕ ದತ್ತು ಸ್ವೀಕಾರ ಕ್ರಮ ಕೈಗೊಳ್ಳಲಾಗುವುದು. ಯಾರಾದರೂ ದಾನಿಗಳು ಅವರ ಜೀವನಕ್ಕೆ ಉಜ್ವಲ ಭವಿಷ್ಯ ರೂಪಿಸಲು ಮುಂದೆ ಬಂದರೆ ಅಂತ ಮಕ್ಕಳ ಭವಿಷ್ಯ ರೂಪಿಸಲು ಇಲಾಖೆ ಕೊಂಡಿಯಾಗಿ ಕೆಲಸ ಮಾಡಲಿದೆ.

ಮೂರನೆ ಅಲೆ ನಿಯಂತ್ರಿಸಲು ಮಹಿಳಾ ಮತ್ತು ಮಕ್ಕಳ ಇಲಾಖೆ, ಆರೋಗ್ಯ, ಶಿಕ್ಷಣ, ಗ್ರಾಮೀಣಾಭಿವೃದ್ದಿ ಮತ್ತು ಪೊಲೀಸ್ ಇಲಾಖೆ ಮಕ್ಕಳನ್ನು ಗುರುತಿಸುವ ಕೆಲಸವನ್ನು ಮಾಡಲಾಗುತ್ತಿದೆ. ಮಕ್ಕಳಿಗೆ ಸೋಂಕು ದೃಢ ಪಟ್ಟರೆ ಕೊವಿಡ್ ಕೇರ್ ಸೆಂಟರ್ ಗೆ ಮಗುವಿನೊಂದಿಗೆ  ತಾಯಿಯೂ ಇರಲು ಅವಕಾಶ ಮಾಡಲಾಗಿದೆ. ಯುವತಿಯರಿಗೆ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗುವುದು. ಅಂಗವಿಕಲರಿಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಬೆಂಗಳೂರಲ್ಲಿ ಪ್ರತ್ಯೇಕ ಮಕ್ಕಳ ಕೊವಿಡ್ ಆಸ್ಪತ್ರೆಗೆ ಚಿಂತನೆ

ಬೆಂಗಳೂರು ನಗರ ಜಿಲ್ಲೆಯಲ್ಲಿ ಸಾಕಷ್ಟು ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಅದರ ಹೊರತಾಗಿ ಮಕ್ಕಳಿಗಾಗಿಯೇ ಪ್ರತ್ಯೇಕ ಕೊವಿಡ್ ಆಸ್ಪತ್ರೆ ತೆರೆಯಲು ಸಲಹೆ ಬಂದಿದೆ.  ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಈಗಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ 1419 ಬೆಡ್ ಗಳನ್ನು ಗುರುತಿಸಲಾಗಿದೆ. 141 ವೆಂಟಿಲೇಟರ್ ಉಳ್ಳ ಐಸಿಯು ಬೆಡ್ ಗಳು, 116 ಐಸಿಯು ರಹಿತ ಬೆಡ್ ಗಳು, 430 ಹೆಚ್ ಡಿಯು  ಬೆಡ್ ಗಳು, 712 ಸಾಮಾನ್ಯ ಬೆಡ್ ಗಳನ್ನು ವ್ಯವಸ್ಥೆ ಮಾಡಲಾಗಿದೆ. ಇನ್ನೂ ಹೆಚ್ಚಿನ ಬೆಡ್ ಬೇಡಿಕೆ ಇದೆ. ಮಕ್ಕಳಿಗೆ ಪ್ರತ್ಯೇಕವಾದ ಮಾಸ್ಕ್, ವೆಂಟಿಲೇಟರ್,  ಬೆಡ್, ಔಷಧ, ಮಾತ್ರೆ ಬೇಕಾಗುತ್ತದೆ ಅದರ ಸಿದ್ದತೆಯೂ ನಡೆಯುತ್ತಿದೆ ಎಂದರು.

ಜಿಲ್ಲೆಯಲ್ಲಿ ಪ್ರತಿ ತಾಲೂಕು ಹಾಗೂ ಜಿಲ್ಲಾ ಕೇಂದ್ರದಲ್ಲಿ ಮಕ್ಕಳ ತಜ್ಞರನ್ನು ಗುರುತಿಲಾಗಿದೆ. ಕಳೆದ ಒಂದು ವರ್ಷದಲ್ಲಿ ಕೊರೊನಾ ಸೋಂಕಿನಿಂದ ಜಿಲ್ಲೆಯಲ್ಲಿ 51 ಮಕ್ಕಳು ನಿಧನ ಹೊಂದಿದ್ದಾರೆ. ರಾಜ್ಯದಲ್ಲಿ ಇದುವರೆಗೂ 0-9 ವಯಸ್ಸಿನ 67687 ಮತ್ತು 09-18 ವಯಸ್ಸಿನ 17,0565 ಮಕ್ಕಳು ಒಟ್ಟು 0-18 ವಯಸ್ಸಿನ 2,38,252 ಮಕ್ಕಳು ಸೋಂಕಿಗೆ ತುತ್ತಾಗಿವೆ.  ಜಿಲ್ಲೆಯಲ್ಲಿ ಒಂದು ವರ್ಷದಲ್ಲಿ 2 ಮಕ್ಕಳು ತಂದೆ ತಾಯಿ ಕಳೆದುಕೊಂಡು ಅನಾಥರಾಗಿದ್ದಾರೆ. ಅವರಿಗೆ ಮುಖ್ಯಮಂತ್ರಿ ಬಾಲ ಸೇವಾ ಯೋಜನೆ ಮೂಲಕ ಸಹಾಯಧನ ನೀಡಲಾಗುವುದು ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ರಾಜ್ಯಾದ್ಯಂತ ಅಂಗನವಾಡಿ ಕಾರ್ಯಕರ್ತೆಯರು ಮುಂಚೂಣಿ ಕಾರ್ಯಕರ್ತೆಯರಾಗಿ ಕೆಲಸ ಮಾಡುತ್ತಿದ್ದಾರೆ. ಕೊವಿಡ್ ನಿಂದ ನಿಧನ ಹೊಂದಿದರೆ ಅವರಿಗೆ  30 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಬೆಂಗಳೂರು ನಗರದಲ್ಲಿ 3. ಅಂಗನವಾಡಿ ಕಾರ್ಯಕರ್ತೆಯರು ನಿಧನ ಹೊಂದಿದ್ದಾರೆ.  ಅವರಲ್ಲಿ ಇಬ್ಬರಿಗೆ ಪರಿಹಾರ ನೀಡಲಾಗುತ್ತಿದೆ.

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ 2587 ಅಂಗನವಾಡಿ ಕೇಂದ್ರಗಳಿವೆ. 4564 ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿದ್ದಾರೆ. ಅವರಲ್ಲಿ ಶೇ 90 ರಷ್ಟು ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕೊವಿಡ್ ಮೊದಲ ಲಸಿಕೆ ಪಡೆದಿದ್ದಾರೆ. ಶೇ 49 ರಷ್ಟು ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಎಡರನೇ ಡೋಸ್ ಲಸಿಕೆ ಪಡೆದಿದ್ದಾರೆ.

ಅಂಗನವಾಡಿ ಬಂದ್ ಇರುವುದರಿಂದ ಪ್ರತಿ 15 ದಿನಕ್ಕೊಮ್ಮೆ ಮಕ್ಕಳಿಗೆ ಆಹಾರ ಒದಗಿಸುವ ಕೆಲಸ ಮಾಡಲಾಗುತ್ತಿದೆ. ಜೊತೆಗೆ ಅವರ ಆರೋಗ್ಯದ ಮಾಹಿತಿ ಪಡೆದು ಸೂಕ್ತ ಚಿಕಿತ್ಸೆ ಒದಗಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ 22871 ಗರ್ಭಿಣಿಯರು, 19131 ಬಾಣಂತಿಯರು, 97 ಕಿಶೋರಿಯರು ಇದ್ದಾರೆ. ಜಿಲ್ಲೆಯಲ್ಲಿ  124 ಮಕ್ಕಳು ತೀವ್ರ ಅಪೌಷ್ಡಿಕತೆಯಿಂದ ಬಳಲುತ್ತಿದ್ದಾರೆ. 9761 ಮಕ್ಕಳು ಸಾಧಾರಣ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.  ಜಿಲ್ಲೆಯಲ್ಲಿ 39 ಪೋಕ್ಸೊ ಪ್ರಕರಣಗಳು ನಡೆದಿದ್ದು, 37 ಪ್ರಕರಣಗಳಲ್ಲಿ ಪರಿಹಾರ ಒದಗಿಸಲಾಗಿದೆ. 168 ಬಾಲ್ಯ ವಿವಾಹಗಳಾಗಿದ್ದು, 122 ಬಾಲ್ಯ ವಿವಾಹ ತಡೆಯಲಾಗಿದೆ.28 ಬಾಲ್ಯ ವಿವಾಹ ಪ್ರಕರಣಗಳಲ್ಲಿ ಎಫ್ ಐ ಆರ್ ದಾಖಲಿಸಲಾಗಿದೆ.  ಈ ಬಾರಿಯ ಲಾಕ್ ಡೌನ್ ಅವಧಿ ಏಪ್ರಿಲ್ ನಿಂದ ಇಲ್ಲಿಯವರೆಗೆ 3 ಬಾಲ್ಯ ವಿವಾಹ ಪ್ರಕರಣಗಳು ಬೆಳಕಿಗೆ ಬಂದಿದ್ದು, 2 ಬಾಲ್ಯ ವಿವಾಹ ತಡೆ ಹಿಡಿಯಲಾಗಿದೆ. ಒಂದು ಪ್ರಕರಣದಲ್ಲಿ ಎಫ್ ಐ ಆರ್ ದಾಖಲಿಸಲಾಗಿದೆ. ಇನ್ನು ಹೊರಗಡೆಯಿಂದ ಬೆಂಗಳೂರಿಗೆ ವಲಸೆ ಬಂದಿರುವ 513 ಮಕ್ಕಳಿಗೆ ಆಹಾರ ವಿತರಣೆ ಮಾಡಲಾಗಿದೆ ಎಂದು  ಸಚಿವ ಶಶಿಕಲಾ ಜೊಲ್ಲೆ ವಿವರಣೆ ನೀಡಿದರು.

ಇದೇ ವೇಳೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವೆ ಶಶಿಕಲಾ ಜೊಲ್ಲೆ, ರಾಜ್ಯದಲ್ಲಿ 30 ಮಕ್ಕಳ ಮೇಲೆ ಲಸಿಕೆ ಪ್ರಯೋಗ ಮಾಡಲಾಗಿದೆ. ಅದು ಯಶಸ್ವಿಯಾದರೆ ಮುಂದಿನ ತೀರ್ಮಾನ ಸಿಎಂ, ಪಿಎಂ ತೆಗೆದುಕೊಳ್ಳುತ್ತಾರೆ. ಶಾಲೆ ತೆರೆಯುವ ಬಗ್ಗೆ ಶಿಕ್ಷಣ ಸಚಿವರ ಜೊತೆ ಚರ್ಚಿಸಲಾಗುವುದು. ತಜ್ಞರ ವರದಿಯಲ್ಲಿ ಅಧಿಕೃತವಾಗಿ ಏನು ವರದಿ ನೀಡಿದ್ದಾರೆ ಎನ್ನುವುದು ನಮ್ಮ ಇಲಾಖೆಗೆ ಇನ್ನೂ ಮಾಹಿತಿ ಬಂದಿಲ್ಲ. ಸಿಎಂ ನೋಡಿ ನಮ್ಮ ಇಲಾಖೆಗೆ ಕಳುಹಿಸಿಕೊಡುತ್ತಾರೆ ಎಂದರು.

ಇನ್ನು ಮಕ್ಕಳಿಗೆ ಮೊಟ್ಟೆ ಕೊರತೆಯಾಗುತ್ತಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವೆ ಶಶಿಕಲಾ ಜೊಲ್ಲೆ, ಮಾರುಕಟ್ಟೆಯಲ್ಲಿ ಮೊಟ್ಟೆ ದರ ಹೆಚ್ಚಳವಾಗಿದ್ದು ಸಮಸ್ಯೆಯಾಗಿತ್ತು. ಅದನ್ನು ಗ್ರಾಮ ಪಂಚಾಯತಿಯಿಂದ ಮೊಟ್ಟೆ ವಿತರಣೆಗೆ ಸೂಚನೆ ನೀಡಲಾಗಿದೆ. ಪಂಚಾಯತಿಯಲ್ಲಿ ಹಣದ ಕೊರತೆಯ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂದು ಹೇಳಿದರು.

Key words: face –covid -3rd wave-Separate -Children’s- covid Hospital- Bangalore-Minister- Shashikala Jolle.