ಲಕ್ಷಾಂತರ ಗುತ್ತಿಗೆ ಹಣ ಬಾಕಿ ಇದ್ರೂ ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ವೆನ್ಷನ್ ಹಾಲ್ ಗುತ್ತಿಗೆ ಕರಾರು ವಿಸ್ತರಣೆ: ಪ್ರಭಾವಕ್ಕೆ ಮಣಿದರಾ ಅಧಿಕಾರಿಗಳು…?

ಮೈಸೂರು,ನವೆಂಬರ್,15,2023(www.justkannada.in): ನಗರದ ಹೆಬ್ಬಾಳ್ ಬಡಾವಣೆ ಮುಖ್ಯರಸ್ತೆಯಲ್ಲಿ ನಿರ್ಮಿಸಲಾದ ಸುಸಜ್ಜಿತ ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ವೆನ್ಷನ್ ಹಾಲ್ ನ ಗುತ್ತಿಗೆದಾರನಿಗೆ ಅನುಕೂಲವಾಗುವಂತೆ ಅಧಿಕಾರಿಗಳು ಶಾಮೀಲಾಗಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಗುತ್ತಿಗೆದಾರನಿಂದ ಲಕ್ಷಾಂತರ ಗುತ್ತಿಗೆ ಹಣ ಬಾಕಿ ಇದ್ದರೂ ವಸೂಲಿ ಮಾಡದೆ ಕರಾರನ್ನ ಮತ್ತೆರಡು ವರ್ಷಕ್ಕೆ ನವೀಕರಿಸುವ ಮೂಲಕ ಸಾರ್ವಜನಿಕರ ತೆರಿಗೆ ಹಣದಲ್ಲಿ ಅಧಿಕಾರಿಗಳು ಚೆಲ್ಲಾಟ ಆಡುತ್ತಿದ್ದಾರೆ. ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರ ರವರು ಮಾಹಿತಿ ಹಕ್ಕಿನ ಮೂಲಕ ಗುತ್ತಿಗೆದಾರ ಹಾಗೂ ಅಧಿಕಾರಿಗಳ ಬಣ್ಣ ಬಯಲು ಮಾಡಿದ್ದಾರೆ.

ಮೈಸೂರಿನ ಹೆಬ್ಬಾಳ್ ಬಡಾವಣೆಯ ಮುಖ್ಯರಸ್ತೆಯಲ್ಲಿ 2017 ರಲ್ಲಿ 5 ಕೋಟಿ ವೆಚ್ಚದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿನಲ್ಲಿ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ಭವ್ಯ ಕಲ್ಯಾಣ ಮಂಟಪ ನಿರ್ಮಿಸಿದೆ. 2019-20 ನೇ ಸಾಲಿನಿಂದ ವಾರ್ಷಿಕ 35 ಲಕ್ಷದಂತೆ ಬೆಂಗಳೂರಿನ ಸರ್ಕಾರ್ ಕನ್ಸ್ಟ್ರಕ್ಷನ್ ಮಾಲೀಕರಾದ ಸಿದ್ದರಾಜಪ್ಪ ಎಂಬುವರಿಗೆ 5 ವರ್ಷಕ್ಕೆ ಗುತ್ತಿಗೆ ನೀಡಿದೆ. 2020-21 ಹಾಗೂ 2021-22 ನೇ ಸಾಲಿನಲ್ಲಿ ಕೊರೊನಾ ಇದ್ದ ಕಾರಣ ಗುತ್ತಿಗೆ ಹಣವನ್ನ ಮನ್ನಾ ಮಾಡಲಾಗಿದೆ. ಇದರ ಹೊರತು ಪಡಿಸಿ ಉಳಿದ ಅವಧಿಯ ಗುತ್ತಿಗೆ ಹಣ ಪಾವತಿ ಇದುವರೆಗೆ ಆಗಿರುವುದಿಲ್ಲ. ಕರೊನಾದ ಎರಡು ವರ್ಷಗಳ ಗುತ್ತಿಗೆ ಹಣ ಪಾವತಿ ಹೊರತು ಪಡಿಸಿ ಉಳಿದ ಅವಧಿಗೆ ಬಡ್ಡಿ ಸೇರಿದಂತೆ 55 ಲಕ್ಷ ರೂ ಬಾಕಿ ಪಾವತಿಸಬೇಕಿದೆ. ಸದರಿ ಕನ್ವೆನ್ಷನ್ ಹಾಲ್ ನಲ್ಲಿ ಒಂದು ಮದುವೆಗೆ ಸುಮಾರು 1.5 ಲಕ್ಷ ವಸೂಲಿ ಮಾಡಲಾಗುತ್ತಿದೆ. ಮದುವೆ ಸಮಾರಂಭ ಇಲ್ಲದಿದ್ದಾಗ ಬಟ್ಟೆ ಹಾಗೂ ಪೀಠೋಪಕರಣಗಳ ವಸ್ತಪ್ರದರ್ಶನಕ್ಕೆ ಅನುಮತಿ ನೀಡಿ ಬಾಡಿಗೆ ಪಡೆಯಲಾಗುತ್ತಿದೆ. ಹೀಗಿದ್ದರೂ ಗುತ್ತಿಗೆದಾರ ಸಿದ್ದರಾಜಪ್ಪ 55 ಲಕ್ಷ ಗುತ್ತಿಗೆ ಹಣ ಬಾಕಿ ಉಳಿಸಿಕೊಂಡಿದ್ದಾರೆ. ಬಾಕಿ ಹಣ ಪಾವತಿಸುವಂತೆ ವಲಯ 4 ರ  AEE ಸಂಪತ್ ಕುಮಾರ್ ನೋಟೀಸ್ ಜಾರಿಗೊಳಿಸಿದ್ದಾರೆ.

55 ಲಕ್ಷ ಗುತ್ತಿಗೆ ಹಣ ಬಾಕಿ ಇದ್ದರೂ ಮತ್ತೆರಡು ವರ್ಷಕ್ಕೆ ಗುತ್ತಿಗೆ ಅವಧಿಯನ್ನ ವಿಸ್ತರಿಸಲಾಗಿದೆ. ಕನ್ವೆನ್ಷನ್ ಹಾಲ್ ನಲ್ಲಿ ನಿರಂತರವಾಗಿ ಸಮಾರಂಭಗಳು ನಡೆಯುತ್ತಿದ್ದರೂ ಗುತ್ತಿಗೆ ಹಣವನ್ನ ಪಾವತಿ ಮಾಡದ ಸಿದ್ದರಾಜಪ್ಪಗೆ ಮತ್ತೆರಡು ವರ್ಷ ನವೀಕರಿಸಲಾಗಿದೆ.

Key words: Extension -lease -contract -Nalvadi Krishnaraja Wodeyar -Convention Hall despite-money pending.