ಬಿಯಾಂಡ್‌ ಬೆಂಗಳೂರು ಮೂಲಕ ಹುಬ್ಬಳ್ಳಿಯಲ್ಲಿ ಹೆಚ್ಚು ಕೈಗಾರಿಕೆಗಳ ಸ್ಥಾಪನೆ- ಡಿಸಿಎಂ ಅಶ್ವಥ್ ನಾರಾಯಣ್.

ಹುಬ್ಬಳ್ಳಿ,ಜುಲೈ12,2021(www.justkannada.in):  ಆವಿಷ್ಕಾರ ಮತ್ತು ತಂತ್ರಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಈಗಾಗಲೇ ಹುಬ್ಬಳ್ಳಿಯಲ್ಲಿ ಕೈಗಾರಿಕಾಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ ಹಾಗೂ ಬಿಯಾಂಡ್‌ ಬೆಂಗಳೂರು ಕಾರ್ಯಕ್ರಮದ ಮೂಲಕ ಇನ್ನಷ್ಟು ಕೈಗಾರಿಕೆಗಳ ಸ್ಥಾಪನೆಗೆ ಪೂರಕವಾಗಿ ಅವಕಾಶ ನೀಡಲಾಗಿದೆ ಎಂದು ವಿಜ್ಞಾನ-ತಂತ್ರಜ್ಞಾನ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.jk

ಹುಬ್ಬಳ್ಳಿಯಲ್ಲಿ ಸೋಮವಾರ ಬೆಳಗ್ಗೆ ಮಾಧ್ಯಮಗಳ ಜತೆ ಮಾತನಾಡಿದ  ಡಿಸಿಎಂ ಅಶ್ವಥ್ ನಾರಾಯಣ್, ಈಗಾಗಲೇ ಸರಕಾರ ಎಲೆಕ್ಟ್ರಾನಿಕ್ಸ್ ಸಿಸ್ಟಮ್ ವಿನ್ಯಾಸ ಮತ್ತು ಉತ್ಪಾದನೆ (esdm) ನೀತಿಯನ್ನು ಜಾರಿಗೆ ತಂದಿದ್ದು ಅದರ ಮೂಲಕ ಹಲವಾರು ಕಂಪನಿಗಳು ಹುಬ್ಬಳ್ಳಿಗೆ ಬಂದಿವೆ ಎಂದರು.

ಈ ಭಾಗದಲ್ಲಿ ತಂತ್ರಜ್ಞಾನ ಮತ್ತು ಆವಿಷ್ಕಾರ ದಿಕ್ಕಿನಲ್ಲಿ ಬಹಳಷ್ಟು ಪ್ರಗತಿ ಆಗುತ್ತಿದೆ. ಮುಖ್ಯವಾಗಿ ಇಎಸ್‌ಡಿಎಂ ಕ್ಷೇತ್ರದಲ್ಲಿ ಮಹತ್ವದ ಅಭಿವೃದ್ಧಿ ಕಾಣುತ್ತಿದೆ. ಇನ್ನಷ್ಟು ಪ್ರೋತ್ಸಾಹ ನೀಡಿ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗುವುದು ಎಂದು ಡಿಸಿಎಂ  ಅಶ್ವಥ್ ನಾರಾಯಣ್ ಅವರು ಹೇಳಿದರು.

ʼಬಿಯಾಂಡ್‌ ಬೆಂಗಳೂರುʼ ಮೂಲಕ ಬೆಂಗಳೂರು ಹೊರಗಿನ ನಗರಗಳ ಅಭಿವೃದ್ಧಿಗೆ ಪ್ರಾಮುಖ್ಯತೆ ಕೊಡಲಾಗಿದೆ. ಅದರ ಮೂಲಕವೇ ಮತ್ತಷ್ಟು ಕಂಪನಿಗಳು ಹುಬ್ಬಳ್ಳಿಗೆ ಬರಲಿವೆ. ಕರ್ನಾಟಕ ಡಿಜಿಟಲ್‌ ಎಕಾನಮಿ ಮಿಷನ್‌ನಿಂದ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಹಾಗೂ ಕೈಗಾರಿಕೆಗಳು ಬೆಳೆಯಲು ಬಹಳಷ್ಟು ಸಹಕಾರಿ ಆಗುತ್ತಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ದೊಡ್ಡ ಪ್ರಮಾಣದಲ್ಲಿ ಬಳಕೆ ಮಾಡಲಾಗುತ್ತಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಹಿನ್ನಡೆ ಆಗಿಲ್ಲ:

ಹುಬ್ಬಳ್ಳಿ ಭಾಗದಲ್ಲಿ ಕೈಗಾರಿಕೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಹಿನ್ನಡೆಯಾಗಿಲ್ಲ. ಮಾರುಕಟ್ಟೆಗೆ ತಕ್ಕಂತೆ ಕೆಲ ವ್ಯತ್ಯಾಸಗಳಾಗುತ್ತವೆಯೇ ವಿನಾ, ಅದನ್ನು ಹಿನ್ನಡೆ ಎನ್ನಲಾಗದು. ಇನ್ಫೋಸಿಸ್‌, ದೇಶಪಾಂಡೆ ಫೌಂಡೇಶ್‌ ವತಿಯಿಂದ ಈ ಭಾಗದಲ್ಲಿ ಇನ್ನೂ ದೊಡ್ಡ ಪ್ರಮಾಣದ ಬದಲಾವಣೆ ಆಗಲಿದೆ. ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಈ ಭಾಗದ ಬೆಳವಣಿಗೆಗೆ ಭಾರೀ ಕೊಡುಗೆ ನೀಡಲಿದೆ ಎಂದು ಡಿಸಿಎಂ ಅಶ್ವತ್ ನಾರಾಯಣ್ ಹೇಳಿದರು.

Key words: Establishment – Industries – Hubli – Beyond- Bangalore-DCM- Ashwath Narayan