ಮೈಸೂರು,ಜುಲೈ,1,2025 (www.justkannada.in): ತಾರಕ ಜಲಾಶಯದ ಹಿನ್ನೀರಿನ ವ್ಯಾಪ್ತಿಯಲ್ಲಿ ಒತ್ತುವರಿ ಮತ್ತು ಅನುಪಯುಕ್ತ ವಸ್ತುಗಳನ್ನ ಸುರಿದು ಅಕ್ರಮವೆಸಗಿರುವ ಆರೋಪದ ಮೇಲೆ ಸರ್ದಾರ್ ಸರ್ಫೋಜ್ ಖಾನ್ ಅಲಿಯಾಸ್ ಎಸ್.ಆರ್.ಖಾನ್ ಎಂಬುವವರಿಗೆ ಕಾವೇರಿ ನೀರಾವರಿ ನಿಗಮ ನಿಯಮಿತದಿಂದ ನೋಟಿಸ್ ನೀಡಲಾಗಿದೆ.
ಕಾವೇರಿ ನೀರಾವರಿ ನಿಗಮ ಸಹಾಯಕ ಕಾರ್ಯಪಾಲಕ ಅಭಿಯಂತರು ನೋಟಿಸ್ ಜಾರಿ ಮಾಡಿದ್ದಾರೆ. ಹೆಚ್.ಡಿ.ಕೋಟೆ ತಾಲ್ಲೂಕು, ಕಸಬಾ ಹೋಬಳಿಯ, ಪೆಂಜಹಳ್ಳಿ ಗ್ರಾಮದ ತಾರಕ ಜಲಾಶಯದ ಹಿನ್ನೀರಿನಲ್ಲಿ ಪರಿಶೀಲನೆ ನಡೆಸಿದಾಗ ಸರ್ವೆ ನಂಬರ್, 23. ಖಾತಾ ನಂ. 212 ರ ತಮ್ಮ ಜಮೀನಿನ ಪಕ್ಕದಲ್ಲಿ ತಾರಕ ಜಲಾಶಯದ ಹಿನ್ನೀರಿನ ಬಫರ್ ವಲಯದಲ್ಲಿ ಒತ್ತುವರಿ ಮಾಡಿಕೊಂಡು ನೀರು ನಿಲುಗಡೆ ಅಂಚಿನವರೆಗೂ ಕಾಂಪೌಂಡ್ ನಿರ್ಮಿಸಿರುವುದನ್ನು ಗಮನಿಸಲಾಗಿದೆ. ಜಲಾಶಯದ ಬಫರ್ ವಲಯದಲ್ಲಿ ಖಾಯಂ ನಿರ್ಮಾಣ ಚಟುವಟಿಕೆ ನಿಷಿದ್ದವಾಗಿದೆ.
ಆದುದರಿಂದ ಸಂಬಂಧಿಸಿದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೊಡನೆ ಜಂಟಿ ಸಮೀಕ್ಷೆ ನಡೆಸಲು ಅನುಕೂಲವಾಗುವಂತೆ ಸರ್ವೆ ನಂ.23 ರ ಖಾತಾ ನಂ. 212 ರ ತಮ್ಮ ಜಮೀನಿನ ದಾಖಲೆಗಳ ಪ್ರಕಾರ ಜಂಟಿ ಸರ್ವೆ ನಡೆಸಿ ಗಡಿಗಳನ್ನು ಗುರುತಿಸಿಕೊಳ್ಳುವಂತೆ ಹಾಗೂ ತಮ್ಮ ಜಮೀನಿನ ಆಸುಪಾಸು, ನಿರ್ಮಾಣ ತ್ಯಾಜ್ಯಗಳನ್ನು ಜಲಾಶಯದ ಹಿನ್ನೀರಿನಲ್ಲಿ ಸುರಿದಿರುವುದನ್ನು ಗಮನಿಸಿ ಕೂಡಲೇ ತೆರವುಗೊಳಿಸಲು ಉಲ್ಲೇಖ ಪತ್ರ (1)ರಲ್ಲಿ ತಮಗೆ ತಿಳಿಸಲಾಗಿತ್ತು.
ಸರ್ವೆ ನಂ.23 ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿರುವ ಎಲ್ಲಾ ಜಮೀನುಗಳಲ್ಲಿ ಇದುವರೆವಿಗೂ ಸರ್ವೆ ಕಾರ್ಯವನ್ನು ಕೈಗೊಳ್ಳಲಾಗಿರುವುದಿಲ್ಲ. ಸದರಿ ಜಮೀನಿನ ದಾಖಲೆಗಳನ್ವಯ ಜಂಟಿ ಸರ್ವೆ ಕೈಗೊಂಡು ಗಡಿ ಗುರುತಿಸಲು ಕ್ರಮಕೈಗೊಳ್ಳುವಂತೆ ಈಗಾಗಲೇ ಎರಡು ಸಲ ಪತ್ರಮುಖೇನ ಪ್ರಾಧಿಕಾರಕ್ಕೆ ಕೋರಲಾಗಿದ್ದು, ಇದುವರೆವಿಗೂ ಯಾವುದೇ ಪ್ರತಿಕ್ರಿಯೆ ಬಂದಿರುವುದಿಲ್ಲ. ಒತ್ತುವರಿ ಕಂಡುಬಂದಲ್ಲಿ ಸಂಬಂಧಿಸಿದ ಇಲಾಖೆಗೆ ಒತ್ತುವರಿ ತೆರವಿಗೆ ನನ್ನ ಕಡೆಯಿಂದ ಸಂಪೂರ್ಣ ಸಹಕಾರ ಒದಗಿಸಲಾಗುವುದೆಂದು ಉಲ್ಲೇಖ ಪತ್ರ (2)ರಲ್ಲಿ ಈ ಕಛೇರಿಗೆ ಪತ್ರ ನೀಡಿರುತ್ತೀರಿ.
ಜಮೀನಿನ ದಾಖಲೆಗಳ ಪ್ರಕಾರ ಜಂಟಿ ಸರ್ವೆ ಕಾರ್ಯ ಕೈಗೊಂಡು ಗಡಿ ಗುರುತಿಸಲು ನಮ್ಮ ಪ್ರಾಧಿಕಾರಕ್ಕೆ ತಾವು ಕೋರಿರುವ ಬಗ್ಗೆ ಯಾವ ಪತ್ರಗಳು ಈ ಕಛೇರಿಯಲ್ಲಿ ಸ್ವೀಕೃತವಾಗಿರುವುದಿಲ್ಲ. ಆದುದರಿಂದ ತಾವು ನೀಡಿರುವ ಪತ್ರಗಳನ್ನು ಈ ಕಛೇರಿಗೂ ಕಳುಹಿಸಿಕೊಡಬೇಕು.
ಹಾಗೆಯೇ ಸರ್ವೆ ನಂ.23 ರ ಆಸುಪಾಸು ಜಮೀನಿನ ಪೈಕಿ ತಾವು ಮಾತ್ರ ಕಾಂಪೌಂಡ್ ನಂತಹ ಖಾಯಂ ಕಟ್ಟಡವನ್ನು ಬಫರ್ ವಲಯದಲ್ಲಿ ನಿರ್ಮಿಸಿರುವುದರಿಂದ ತಾವು ನೀಡಿರುವ ಭರವಸೆಯಂತೆ ಜಮೀನಿನ ಸರ್ವೆ ಕಾರ್ಯವನ್ನು ತಹಶೀಲ್ದಾರ್ ಅವರೊಂದಿಗೆ ಹಾಗೂ ಭೂದಾಖಲೆಗಳ ಅಧಿಕಾರಿಗಳೊಂದಿಗೆ ಜಂಟಿ ಸಮೀಕ್ಷೆ ನಡೆಸಿ ಒತ್ತುವರಿ ಗುರುತಿಸಲು ತಮ್ಮ ಜಮೀನಿನ ಸ್ಕೆಚ್ ಪ್ರತಿ ಮತ್ತು ದಾಖಲೆಗಳನ್ನು ಈ ಕಛೇರಿಗೆ ಒದಗಿಸಿಬೇಕು ಎಂದು ನೋಟಿಸ್ ನಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರು ಉಲ್ಲೇಖಿಸಿದ್ದಾರೆ.
Key words: Encroachment, backwater, Taraka Reservoir, Notice