ದೇಶಾದ್ಯಂತ ಕುಂದದ ಮೋದಿ ಅಲೆ: ಎನ್​ಡಿಎಗೆ ಸ್ಪಷ್ಟ ಬಹುಮತ, ಮತದಾನೋತ್ತರ ಸಮೀಕ್ಷೆಯಲ್ಲಿ ಜನರ ಅಭಿಮತ

ನವದೆಹಲಿ:ಮೇ-20: 2014ರಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಕಾರಣವಾಗಿದ್ದ ‘ಮೋದಿ ಅಲೆ’ 2019ರಲ್ಲೂ ದೇಶಾದ್ಯಂತ ಪ್ರಬಲವಾಗಿ ಮುಂದುವರಿದಿದೆ ಎಂಬುದನ್ನು ಮತದಾನೋತ್ತರ ಸಮೀಕ್ಷೆಗಳು ಸ್ಪಷ್ಟಪಡಿಸಿವೆ. ಭಾನುವಾರ ಪ್ರಕಟಗೊಂಡ ಎಲ್ಲ ಸಮೀಕ್ಷೆಗಳು ಎನ್​ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿವೆ.

2014ರ ಫಲಿತಾಂಶಕ್ಕಿಂತ ಬಿಜೆಪಿ ಕೆಲ ಸ್ಥಾನ ಕಳೆದುಕೊಂಡರೂ, ಸ್ವತಂತ್ರವಾಗಿ ಅಧಿಕಾರಕ್ಕೆ ಬರುವ ಸಾಧ್ಯತೆಯನ್ನು ಸಮೀಕ್ಷೆಗಳು ಹೇಳಿವೆ. ಉತ್ತರ ಪ್ರದೇಶದಲ್ಲಿ ಪಕ್ಷ ಕೆಲ ಸ್ಥಾನಗಳನ್ನು ಕಳೆದುಕೊಂಡರೂ, ಪಶ್ಚಿಮ ಬಂಗಾಳ, ಒಡಿಶಾ, ಬಿಹಾರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಲಿದೆ ಎಂದು ಹೇಳಲಾಗಿದೆ. ಕಳೆದ ಬಾರಿ 44 ಕ್ಷೇತ್ರಗಳಿಗೆ ಸೀಮಿತವಾಗಿದ್ದ ಕಾಂಗ್ರೆಸ್ ಈ ಬಾರಿ ತನ್ನ ಸಂಖ್ಯಾಬಲ ಹೆಚ್ಚಿಸಿಕೊಳ್ಳಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ. ನೋಟು ಅಮಾನ್ಯೀಕರಣ, ಸರಕು ಮತ್ತು ಸೇವಾ ತೆರಿಗೆ, ಮಧ್ಯಪ್ರದೇಶ, ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿನ ಸೋಲಿನ ಹೊರತಾಗಿಯೂ ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿನ ನಾಗಾಲೋಟ ಮುಂದುವರಿಯುವ ಸೂಚನೆ ಸಿಕ್ಕಿದೆ.

ನಾಯ್ಡು ಕಿಂಗ್ ಮೇಕರ್ ಆಸೆ ಭಗ್ನ

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದ ಕಾರಣಕ್ಕೆ ಎನ್​ಡಿಎ ತೊರೆದು, ಬಿಜೆಪಿ ವಿರುದ್ಧ ಮೈತ್ರಿಕೂಟ ರಚನೆಗೆ ಕಸರತ್ತು ನಡೆಸಿರುವ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡುಗೆ ಭಾರಿ ನಿರಾಸೆ ಕಾದಿದೆ. ನಾಯ್ಡು ನೇತೃತ್ವದ ಟಿಡಿಪಿ 8-12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಆದರೆ ಜಗನ್​ವೋಹನ್ ನೇತೃತ್ವದ ವೈಎಸ್​ಆರ್ ಕಾಂಗ್ರೆಸ್ 13-17 ಕ್ಷೇತ್ರಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ಸಮೀಕ್ಷೆಗಳು ತಿಳಿಸಿವೆ. ಎನ್​ಡಿಎನಿಂದ ಹೊರ ಬಂದ ಬಳಿಕ ಮೊದಲ ಲೋಕಸಭಾ ಚುನಾವಣೆ ಇದಾಗಿರುವ ಕಾರಣ ಫಲಿತಾಂಶ ಮಹತ್ವ ಪಡೆದುಕೊಂಡಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಮಹಾಮೈತ್ರಿ ರಚನೆಗೆ ಯತ್ನಿಸುತ್ತಿರುವ ಚಂದ್ರಬಾಬು ನಾಯ್ಡುಗೆ ಇದು ಭಾರಿ ಹಿನ್ನಡೆ ಉಂಟುಮಾಡಿದೆ.

ಬಿಹಾರದಲ್ಲಿ ಮೈತ್ರಿ ಧೂಳೀಪಟ

ದೇಶದ ರಾಜಕಾರಣದಲ್ಲೇ ಭಾರಿ ಸದ್ದು ಮಾಡಿದ್ದ ಬಿಹಾರದ ಕಾಂಗ್ರೆಸ್, ಆರ್​ಜೆಡಿ ಮಹಾಮೈತ್ರಿ ನೆಲಕಚ್ಚಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ. ಎಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಪ್ರಕಾರ, 40 ಕ್ಷೇತ್ರಗಳ ಪೈಕಿ ಬಿಜೆಪಿ- ಜೆಡಿಯು ಮೈತ್ರಿ 38-40 ಕ್ಷೇತ್ರಗಳನ್ನು ಗೆಲ್ಲಲಿದೆ. ಯುಪಿಎ, ಮಹಾಮೈತ್ರಿ 0-2 ಕ್ಷೇತ್ರಗಳಲ್ಲಿ ಜಯಗಳಿಸುವ ಸಾಧ್ಯತೆ ಇದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಯು ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದ್ದವು. ಬಿಜೆಪಿ 22ರಲ್ಲಿ ಗೆಲುವು ಸಾಧಿಸಿತ್ತು. ಮೈತ್ರಿ ಹಿನ್ನೆಲೆಯಲ್ಲಿ ಬಿಜೆಪಿ ಬಲ ಈಗ ಮತ್ತಷ್ಟು ಹೆಚ್ಚಲಿದೆ ಎಂದು ಹೇಳಲಾಗಿದೆ.

ಈಶಾನ್ಯದಲ್ಲಿ ಕಮಲ ಕಲರವ

ಕೆಲ ವರ್ಷಗಳ ಹಿಂದೆ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಮೇಲುಗೈ ಸಾಧಿಸಲಿದೆ. ಈ ರಾಜ್ಯಗಳಲ್ಲಿ 8-12 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆ ಇದೆ. ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಷಗಳು ತಲಾ 2-4 ಸ್ಥಾನ ಗಳಿಸುವ ಸಾಧ್ಯತೆ ಇದೆ.

ಗುಜರಾತ್ ಮೇಲೆ ತಪ್ಪದ ಹಿಡಿತ

ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ ಗುಜರಾತ್​ನಲ್ಲಿ ಬಿಜೆಪಿ ಹಿಡಿತ ಉಳಿಸಿಕೊಂಡಿದೆ. 26ರಲ್ಲಿ 23 ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಕೆಲ ಸಮೀಕ್ಷೆಗಳು ಹೇಳಿವೆ. ಯುಪಿಎ 3 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ. 2014ರ ಚುನಾವಣೆಯಲ್ಲಿ ಬಿಜೆಪಿ ಎಲ್ಲ 26 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಇತ್ತೀಚೆಗೆ ನಡೆದ ವಿಧಾನನಭೆ ಚುನಾವಣೆಯಲ್ಲಿ ಕಾಂಗ್ರೆಸ್ ತೀವ್ರ ಪೈಪೋಟಿ ನೀಡಿತ್ತು. ಪ್ರಧಾನಿ ಮೋದಿ ಚುರುಕಿನ ಪ್ರಚಾರ ನಡೆಸಿ, ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು. ಪ್ರಸ್ತುತ 3 ಕ್ಷೇತ್ರಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಬಂಗಾಳದಲ್ಲಿ ದೀದಿಗೆ ಶಾಕ್

ವ್ಯಾಪಕ ಹಿಂಸಾಚಾರ, ರಾಜಕೀಯ ಹೈಡ್ರಾಮಾಕ್ಕೆ ಸಾಕ್ಷಿಯಾಗಿದ್ದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಭರ್ಜರಿ ಮುನ್ನಡೆ ಸಿಗಲಿದೆ ಎಂದು ಬಹುತೇಕ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಈ ಮೂಲಕ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಕಮಲ ಪಾಳಯ ಭರ್ಜರಿ ಶಾಕ್ ನೀಡಲಿದೆ ಎಂದು ಹೇಳಲಾಗಿದೆ. 42 ಕ್ಷೇತ್ರಗಳನ್ನು ಹೊಂದಿರುವ ಪ. ಬಂಗಾಳದಲ್ಲಿ ಬಿಜೆಪಿ 8-15 ಸ್ಥಾನ ಗೆಲ್ಲಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ. ಬಿಜೆಪಿ 26 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಜನ್ ಕೀ ಬಾತ್ ಸಮೀಕ್ಷೆ ಹೇಳಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿಗೆ ಇದು ಅತಿದೊಡ್ಡ ಮುನ್ನಡೆಯಾಗಿದೆ. ಟಿಎಂಸಿ 25-28ಕ್ಕೆ ಕುಸಿಯಲಿದೆ ಎಂದು ಹೇಳಲಾಗಿದೆ. ಎಡಪಕ್ಷಗಳು ಪ್ರಭಾವ ಕಳೆದುಕೊಂಡಿರುವುದು ಸ್ಪಷ್ಟವಾಗಿದೆ. ರಾಜ್ಯಕ್ಕೆ ಬಿಜೆಪಿ ಪ್ರವೇಶವನ್ನು ತಡೆಯಲು ಮಮತಾ ಬ್ಯಾನರ್ಜಿ ನಡೆಸಿದ ಬಹುತೇಕ ಯತ್ನ ವಿಫಲಗೊಂಡಿದೆ ಎಂದೇ ಹೇಳಬಹುದು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಸಹಿತ ಬಿಜೆಪಿಯ ಹಲವು ನಾಯಕರ ಹೆಲಿಕಾಪ್ಟರ್​ಗೆ ಅನುಮತಿ ನಿರಾಕರಿಸಿ ಅವರ ಪ್ರಚಾರವನ್ನು ತಡೆಯಲು ಮಮತಾ ಸರ್ಕಾರ ಯತ್ನಿಸಿದೆ ಎಂಬ ದೂರು ಹೇಳಿಬಂದಿತ್ತು. ಬಿಜೆಪಿ ನಾಯಕರು, ಕಚೇರಿಗಳ ಮೇಲೆ ದಾಳಿಯೂ ನಡೆದಿತ್ತು. ಪ್ರಚಾರದ ಕೊನೆಯ ಹಂತದಲ್ಲಿ ಅಮಿತ್ ಷಾ ರ‍್ಯಾಲಿ ವೇಳೆ ಹಿಂಸಾಚಾರವೂ ನಡೆದಿತ್ತು.

ಎಸ್​ಪಿ-ಬಿಎಸ್​ಪಿ ಮೈತ್ರಿ ಪರಿಣಾಮ

ಸಮಾಜವಾದಿ ಹಾಗೂ ಬಹುಜನ ಸಮಾಜವಾದಿ ಪಕ್ಷ ಈ ಬಾರಿ ಮೈತ್ರಿ ಮೂಲಕ ಸ್ಪರ್ಧೆ ಮಾಡಿರುವುದು ಬಿಜೆಪಿಗೆ ಸ್ವಲ್ಪಮಟ್ಟಿನ ಹಿನ್ನಡೆ ಉಂಟುಮಾಡಿದೆ. ಎಸ್​ಪಿ-ಬಿಎಸ್​ಪಿ ಮೈತ್ರಿ ಅಂದಾಜು 40 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ. ಆದರೆ 80 ಕ್ಷೇತ್ರಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಹೆಚ್ಚಿನ ಸಮೀಕ್ಷೆ ಗಳು ಭವಿಷ್ಯ ನುಡಿದಿವೆ.

ಉತ್ತರ ಪ್ರದೇಶ ಕುತೂಹಲ

ದೇಶದಲ್ಲಿ ಅತಿ ಹೆಚ್ಚು ಕ್ಷೇತ್ರಗಳನ್ನು ಹೊಂದಿರುವ, ಲೋಕಸಭಾ ಚುನಾವಣೆಯ ಭವಿಷ್ಯ ನಿರ್ಧರಿಸಲಿರುವ ಉತ್ತರ ಪ್ರದೇಶದ ಕುರಿತು ಸಮೀಕ್ಷೆಗಳು ಭಿನ್ನ ಅಭಿಪ್ರಾಯಗಳನ್ನು ನೀಡಿವೆ. 80 ಕ್ಷೇತ್ರಗಳನ್ನು ಹೊಂದಿರುವ ರಾಜ್ಯದಲ್ಲಿ ಎನ್​ಡಿಎ ಕೇವಲ 22 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಎಬಿಪಿ ಸಮೀಕ್ಷೆ ತಿಳಿಸಿದೆ. ಆದರೆ ನ್ಯೂಸ್-18 ಸಮೀಕ್ಷೆ ಪ್ರಕಾರ ಬಿಜೆಪಿ 60-62 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಉತ್ತರ ಪ್ರದೇಶವನ್ನು ಬಹುತೇಕ ಕ್ಲೀನ್​ಸ್ವೀಪ್ ಮಾಡಿತ್ತು. ಹೀಗಾಗಿ ಕೇಂದ್ರದಲ್ಲಿ ಅಧಿಕಾರ ಹಿಡಿಯುವುದು ಸುಲಭವಾಗಿತ್ತು. ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲೂ ಸ್ಪಷ್ಟ ಬಹುಮತ ಪಡೆದಿತ್ತು. ಆದರೆ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ.

ದೆಹಲಿ ಕ್ಲೀನ್​ಸ್ವೀಪ್

ಆಡಳಿತಾರೂಢ ಎಎಪಿ ದೆಹಲಿಯಲ್ಲಿ ಶೂನ್ಯ ಸಂಪಾದನೆ ಮಾಡಲಿದೆ ಎಂಬ ಅಭಿಮತ ವ್ಯಕ್ತವಾಗಿದೆ. ಎಲ್ಲ ಏಳೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಇಂಡಿಯಾ ಟುಡೆ ಸಮೀಕ್ಷೆ ಹೇಳಿದ್ದರೆ, ಇನ್ನಿತರ ಸಮೀಕ್ಷೆಗಳು ಕಾಂಗ್ರೆಸ್, ಎಎಪಿ ತಲಾ 1-2 ಕ್ಷೇತ್ರದಲ್ಲಿ ಗೆಲ್ಲುವ ಸೂಚನೆ ಕೊಟ್ಟಿವೆ.

ಕೇರಳದಲ್ಲಿ ಕಾಂಗ್ರೆಸ್ ಮೇಲುಗೈ

ಕಳೆದ ಲೋಕಸಭಾ ಚುನಾವಣೆಯಲ್ಲಿ 8 ಕ್ಷೇತ್ರಗಳನ್ನು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 13 ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ ಎಂದು ಹೇಳಲಾಗಿದೆ. ಎಡಪಕ್ಷಗಳಿಗೆ 5 ಹಾಗೂ ಬಿಜೆಪಿ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಅವಕಾಶ ಇದೆ.

ಹಿಂದಿ ಹೃದಯ ಭಾಗದಲ್ಲಿ ತಗ್ಗದ ಪ್ರಭಾವ

ಅತ್ಯಂತ ಮಹತ್ವದ್ದಾಗಿದ್ದ ಹಿಂದಿ ಹೃದಯ ಭಾಗದಲ್ಲಿ ಬಿಜೆಪಿ ತನ್ನ ಪ್ರಭಾವವನ್ನು ಉಳಿಸಿಕೊಂಡಿದೆ. ರಾಜಸ್ಥಾನ, ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಸೋತಿದ್ದರೂ, ಹೆಚ್ಚಿನ ಲೋಕಸಭಾ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಯಶಸ್ವಿಯಾಗಲಿದೆ ಎಂದು ಸಮೀಕ್ಷೆ ತಿಳಿಸಿವೆ. ರಾಜಸ್ಥಾನದಲ್ಲಿ 25 ಕ್ಷೇತ್ರಗಳ ಪೈಕಿ 20ನ್ನು ಬಿಜೆಪಿ ಉಳಿಸಿಕೊಳ್ಳಲಿದೆ ಎಂದು ವಿಎಂಆರ್ ಸರ್ವೆ ಹೇಳಿದೆ. ಆದರೆ ಎಲ್ಲ ಸಮೀಕ್ಷೆಗಳ ಸರಾಸರಿ ತೆಗೆದರೆ ಬಿಜೆಪಿ 16 ಕ್ಷೇತ್ರಕ್ಕೆ ತೃಪ್ತಿಪಟ್ಟುಕೊಳ್ಳಲಿದೆ. ಸುಮಾರು 9 ಕ್ಷೇತ್ರಗಳನ್ನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿದೆ. ಕಳೆದ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. 29 ಕ್ಷೇತ್ರಗಳನ್ನು ಹೊಂದಿರುವ ಮಧ್ಯಪ್ರದೇಶದಲ್ಲಿ ಬಿಜೆಪಿ 24-27 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಅಂದಾಜು 5 ಸ್ಥಾನಗಳನ್ನು ಪಡೆಯಲಿದೆ. ಪಂಜಾಬ್​ನಲ್ಲಿ 10ರಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್ ಮುನ್ನಡೆ ಸಾಧಿಸಲಿದೆ ಹಾಗೂ ಹರಿಯಾಣದಲ್ಲಿ 8 ಕ್ಷೇತ್ರ ಪಡೆಯುವ ಮೂಲಕ ಬಿಜೆಪಿ ಮೇಲುಗೈ ಸಾಧಿಸುವ ಸಾಧ್ಯತೆ ಇದೆ. ಬಿಹಾರದಲ್ಲಿ ಬಿಜೆಪಿ-ಜೆಡಿಯು ಮೈತ್ರಿ ಬಲಿಷ್ಠವಾಗಿದೆ. ಹೀಗಾಗಿ ಹಿಂದಿ ಹೃದಯ ಭಾಗದಲ್ಲಿ ಬಿಜೆಪಿ ಪ್ರಭಾವ ಮುಂದುವರಿದಿದೆ. ಆದರೆ ಉತ್ತರ ಪ್ರದೇಶ ಕಣದ ಕುರಿತು ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಇಲ್ಲಿನ ಫಲಿತಾಂಶ ನಿರ್ಣಾಯಕವಾಗಿದೆ.

ಮೋಡಿ ಮಾಡದ ರಾಹುಲ್, ಪ್ರಿಯಾಂಕಾ ಪ್ರಚಾರ

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಚುರುಕಿನ ಪ್ರಚಾರ ನಡೆಸಿದ್ದರು. ಪ್ರಿಯಾಂಕಾ ಗಾಂಧಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿ ಪ್ರಚಾರದ ಜವಾಬ್ದಾರಿ ನೀಡಲಾಗಿತ್ತು. ಉತ್ತರ ಪ್ರದೇಶ, ವಯನಾಡಲ್ಲಿ ಅವರು ಅಬ್ಬರದ ಪ್ರಚಾರ ನಡೆಸಿದ್ದರು. ಗಂಗಾನದಿ ತೀರದಲ್ಲಿ ಪ್ರಚಾರ ನಡೆಸುವ ಮೂಲಕ ದಲಿತರು, ಹಿಂದುಳಿದವರ ಮತ ಸೆಳೆಯಲು ಕಸರತ್ತು ನಡೆಸಿದ್ದರು. ಆದರೆ ಇವರ ಪ್ರಚಾರ ಮತ ಸೆಳೆಯುವಲ್ಲಿ ವಿಫಲವಾಗಿದೆ ಎಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ. ಬಿಜೆಪಿ ಸ್ಟಾರ್ ಪ್ರಚಾರಕರಾದ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ, ಯೋಗಿ ಆದಿತ್ಯನಾಥ ಅಬ್ಬರ ಎದುರು ರಾಹುಲ್ ಪ್ರಚಾರ ಹೆಚ್ಚು ಮತ ಸೆಳೆಯುವಲ್ಲಿ ವಿಫಲವಾಗಿದೆ. ಪ್ರಿಯಾಂಕಾ ಗಾಂಧಿ ಪ್ರಚಾರ ಕೂಡ ಉತ್ತರ ಪ್ರದೇಶದಲ್ಲಿ ಹೆಚ್ಚು ಕೆಲಸ ಮಾಡಿಲ್ಲ. ಅಖಿಲೇಶ್ ಯಾದವ್ ಹಾಗೂ ಮಾಯಾವತಿ ಮೈತ್ರಿಕೂಟ ಹಾಗೂ ಬಿಜೆಪಿ ಎದುರು ಕಾಂಗ್ರೆಸ್ ಭಾರಿ ಹಿನ್ನಡೆ ಅನುಭವಿಸುವುದು ಬಹುತೇಕ ಖಚಿತವಾಗಿದೆ.
ಕೃಪೆ: ವಿಜಯವಾಣಿ

ದೇಶಾದ್ಯಂತ ಕುಂದದ ಮೋದಿ ಅಲೆ: ಎನ್​ಡಿಎಗೆ ಸ್ಪಷ್ಟ ಬಹುಮತ, ಮತದಾನೋತ್ತರ ಸಮೀಕ್ಷೆಯಲ್ಲಿ ಜನರ ಅಭಿಮತ
encore-for-bjp-crisis-for-congress-dislike-for-dynasty-breaking-down-the-exit-poll-results