ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಿ – ಅಪರ ಮುಖ್ಯ ಚುನಾವಣಾಧಿಕಾರಿ ಕೂರ್ಮಾರಾವ್.

ಮೈಸೂರು,ಡಿಸೆಂಬರ್,8,2023(www.justkannada.in): ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರು ನೊಂದಾಯಿಸಿಕೊಳ್ಳುವಂತೆ ಹಾಗೂ ವಿಕಲಚೇತನರು,ಲಿಂಗ ಅಲ್ಪಸಂಖ್ಯಾತರು,ಹಿರಿಯ ನಾಗರೀಕರು ಒಳಗೊಳ್ಳುವಂತೆ ನೋಡಿಕೊಳ್ಳಿ ಎಂದು ಎಂದು ಅಪರ ಮುಖ್ಯ ಚುನಾವಣಾಧಿಕಾರಿ ಕೂರ್ಮಾರಾವ್ ಅವರು ತಿಳಿಸಿದರು.

ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಹಮ್ಮಿಕೊಂಡಿದ್ದ ವಿವಿಧ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ  ಮತದಾರರ ಪಟ್ಟಿಗೆ ಹೆಸರನ್ನು ಸೇರಿಸಲು ಸ್ವೀಪ್ ಚಟುವಟಿಕೆಗಳನ್ನು ಮಾಡಲಾಗುತ್ತದೆ. ಆದರೂ ಶೇಕಡಾ 100 ರಷ್ಟು ನೋಂದಣಿ ಆಗುತ್ತಿಲ್ಲ. ಮತ್ತಷ್ಟು ಜಾಗೃತಿ ಕಾರ್ಯಕ್ರಮಗಳು ಬೀದಿನಾಟಕಗಳನ್ನು ಏರ್ಪಡಿಸುವ ಮೂಲಕ ಜಾಗೃತಿ ಮೂಡಿಸಿ, ಮತದಾರರ ಪಟ್ಟಿಗೆ ಸೇರ್ಪಡೆ ಬಗ್ಗೆ ಮಾಹಿತಿಗೆ ವೋಟರ್ ಹೆಲ್ಪ್ ಲೈನ್ 1950 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ. ಫಾರ್ಮ್ 6 ರಲ್ಲಿ ಯಾವುದೇ ರಿಜಕ್ಷನ್ ಆಗಿದ್ದರೆ ಸೂಪರ್ ಚಕ್ಕಿಂಗ್ ನಲ್ಲಿ 2 ಬಾರಿ ಪರಿಶೀಲಿಸಿಕೊಳ್ಳಲು ತಿಳಿಸಿ ಎಂದು ಸೂಚಿಸಿದರು.

ವಿಳಾಸ ಬದಲಾವಣೆ ಆಗಿದ್ದರೆ ಫಾರಂ 08 ರಲ್ಲಿ ಅರ್ಜಿ ಸಲ್ಲಿಸಿ ಮತದಾರರ ಪಟ್ಟಿಯ ಹೆಸರನ್ನು ಬೇರೆಡೆಗೆ ವರ್ಗಾಯಿಸಬಹುದಾಗಿದೆ. ಬಿ ಎಲ್ ಓ ಗಳು ಹೆಚ್ಚಾಗಿ ಬೆಳಿಗ್ಗೆ ಮತ್ತು ಸಂಜೆ ವೇಳೆ ಮನೆ ಮನೆಗೆ ಭೇಟಿ ನೀಡಬೇಕು. ಕೆಲಸಕ್ಕೆ ಹೋಗುವವರು ಬೆಳಿಗ್ಗೆ ಮತ್ತು ಸಂಜೆ ಮನೆಯಲ್ಲಿ ಲಭ್ಯವಿರುತ್ತಾರೆ. ವಿ ವಿ ಪ್ಯಾಟ್ ಗಳ ಮೂಲಕ ಮತದಾರರಿಗೆ ಮತದಾನದ ಕುರಿತು ಅರಿವು ಜಾಗೃತಿ ಮೂಡಿಸಿ ಎಂದರು.

ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಅವರು ಮಾತನಾಡಿ ವಿಳಾಸ ಬದಲಾವಣೆ ಅಥವಾ ಮರಣ ಹೊಂದಿರುವವರ ಹೆಸರನ್ನು ತೆಗೆದು ಹಾಕುವಾಗ ಎಚ್ಚರಿಕೆಯಿಂದ ಪರಿಶೀಲನೆ ನಡೆಸಬೇಕು. ಮರಣ ಹೊಂದಿರುವವರ ಹೆಸರನ್ನು ತೆಗೆದು ಹಾಕುವಾಗ ಅವರ ಡೆತ್ ಸರ್ಟಿಫಿಕೇಟ್ ಅಥವಾ ಕುಟುಂಬ ಸದಸ್ಯರ ಸಹಿ ಪಡೆಯಬೇಕು ಎಂದರು.

ಮೈಸೂರು ಜಿಲ್ಲೆಯಲ್ಲಿ ಹಾಡಿಗಳು ಹೆಚ್ಚು ಇದ್ದು, ಜೇನು ಕುರುಬ,ಕಾಡು ಕುರುಬ, ಬೆಟ್ಟ ಕುರುಬ ಸೇರಿದಂತೆ ಹಲವು ಬುಡಕಟ್ಟು ಜನಾಂಗಗಳು, ಪರಿಶಿಷ್ಟ ಪಂಗಡಗಳ ಜನರು ಹೆಚ್ಚು ಇದ್ದಾರೆ ಅಂತಹವರು ಯಾರೊಬ್ಬರೂ ಮತದಾಯ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಿ.ಅಲೆಮಾರಿಗಳು, ಭಿಕ್ಷುಕರ ಕೇಂದ್ರಗಳು ಇರುವಲ್ಲಿಗೆ ತೆರಳಿ ಮತದಾನ ಜಾಗೃತಿ ಹಾಗೂ ನೋಂದಣಿಗೆ ಕ್ರಮವಹಿಸಿ,18 ವರ್ಷ ತುಂಬಿದ ಪ್ರತಿಯೊಬ್ಬರನ್ನು ನೋಂದಣಿ ಮಾಡಿಸಿ. ಜಿಲ್ಲೆಯ ಕಾಲೇಜುಗಳಿಗೆ ಭೇಟಿ ನೀಡಿ 18 ವರ್ಷ ಪೂರೈಸಿದವರನ್ನು ಮತದಾರರ ಪಟ್ಟಿಗೆ ಹೆಸರನ್ನು ನೋಂದಣಿ ಮಾಡಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಇರುವ 18 ವರ್ಷ ತುಂಬಿದ ಎಲ್ಲಾ ತೃತೀಯ ಲಿಂಗಿಗಳಿಗೆ ಎಪಿಕ್ ಕಾರ್ಡ್ ನೀಡಲು ಅಗತ್ಯ ಕ್ರಮ ಕೈಗೊಳ್ಳಿ. ಫೀ ಮೇಲ್ ಸೆಕ್ಸ್ ವರ್ಕರ್ಸ್ ಗಳಿಗೆ ಶೇಕಡಾ 100 ರಷ್ಟು ಎಪಿಕ್ ಕಾರ್ಡ್ ಇರುವ ಹಾಗೆ ನೋಡಿಕೊಳ್ಳಿ. ಅವರ ಬಗೆಗೆ ಎನ್ ಜಿಓಗಳ ಬಳಿ ಮಾಹಿತಿಯನ್ನು ಪಡೆದುಕೊಳ್ಳಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.

ಕಳೆದ ಚುನಾವಣೆಯಲ್ಲಿ ಯಾವ ವಾರ್ಡ್ ಗಳಲ್ಲಿ ಮತದಾನ ಕಡಿಮೆ ಆಗಿದೆ ಎಂಬುದನ್ನು  ಗುರುತಿಸಿಕೊಂಡು, ಕೆಲವರು ಬೇರೆ ಕಡೆ ಹೋಗಿರುತ್ತಾರೆ. ಅವರಿಗೆ ಫಾರಂ 08 ರಲ್ಲಿ ಅವರು ಇರುವೆಡೆ ಹೆಸರನ್ನು ಬದಲಾವಣೆ  ಮಾಡಿಸಿದರೆ ಅವರು ಅಲ್ಲಿಯೇ ಮತದಾನ ಮಾಡಲು ಸಾಧ್ಯವಾಗುತ್ತದೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಎಂ ಗಾಯತ್ರಿ ಅವರು ಸೇರದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Key words: eligible- voters – Additional -Chief Returning Officer –Coormarao-mysore