ದಸರಾ ಜಂಬೂಸವಾರಿ ಎಲ್ಲಾ ಆನೆಗಳು, ಕಾವಾಡಿ, ಮಾವುತರಿಗೆ ವಿಮೆ- ಡಿಸಿಎಫ್ ಪ್ರಭುಗೌಡ

ಮೈಸೂರು,ಆಗಸ್ಟ್,8,2025 (www.justkannada.in): ಮೈಸೂರು ದಸರಾ ಜಂಬೂಸವಾರಿಯಲ್ಲಿ ಭಾಗವಹಿಸುವ ಗಜಪಡೆಯ ಎಲ್ಲಾ 14 ಆನೆಗಳಿಗೂ ವಿಮೆ ಮಾಡಿಸಲಾಗಿದೆ ಎಂದು ಡಿಸಿಎಫ್ ಪ್ರಭುಗೌಡ ತಿಳಿಸಿದರು.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಫ್ ಪ್ರಭುಗೌಡ, ಗಜಪಡೆಯ ಗಂಡಾನೆಗಳಿಗೆ ತಲಾ 5 ಲಕ್ಷ ರೂ., ಹೆಣ್ಣು ಆನೆಗಳಿಗೆ 2.5 ಲಕ್ಷ ರೂ., ಕಾವಾಡಿ ಮತ್ತು ಮಾವುತರಿಗೆ ತಲಾ 2 ಲಕ್ಷ ರೂ. ವಿಮೆ ಮಾಡಿಸಲಾಗಿದೆ. ವಿಮೆ ಅವಧಿ ಗಜಪಯಣ ಆದಾಗಿನಿಂದ ಹಿಡಿದು ಗಜಪಡೆ ವಾಪಸ್ ಕ್ಯಾಂಪ್ ಗೆ ಹೋಗುವವರೆಗೂ ವಿಮೆ ಮಾಡಿಸಲಾಗಿದೆ. ಆನೆಗಳಿಂದ ಸಾರ್ವಜನಿಕರಿಗೆ ಯಾವುದೇ ಅನಾಹುತ ಆದರೂ ಅಥವಾ ಸಾರ್ವಜನಿಕರಿಂದ ಆನೆಗಳಿಗೆ ಏನಾದರೂ ಆದರೂ ವಿಮೆ ಅನ್ವಯವಾಗಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಆನೆಗಳಿಗೂ ಇನ್ಸೂರೆನ್ಸ್ ಮಾಡಿಸಲಾಗಿದೆ ಎಂದು ತಿಳಿಸಿದರು.

ಸದ್ಯಕ್ಕೆ ಅರಣ್ಯ ಭವನದಲ್ಲಿ ಎಲ್ಲಾ ಆನೆಗಳು ಆರೋಗ್ಯವಾಗಿವೆ. ನಾಡಿನ ವಾತಾವರಣಕ್ಕೆ ಹೊಂದಿಕೊಂಡಿವೆ. ಎಂದಿನಂತೆ ಹುಲ್ಲು, ಭತ್ತ ಹಸಿ ಮೇವು,ಆಲದ ಸೊಪ್ಪು ಆಹಾರವಾಗಿ ಕೊಡುತ್ತಿದ್ದೇವೆ ಅರಮನೆಗೆ ಹೋದ ಮೇಲೆ ವಿಶೇಷವಾದ ಆಹಾರ ಕೊಡಲಾಗುತ್ತದೆ ಎಂದು ಡಿಸಿಎಫ್ ಪ್ರಭುಗೌಡ ಹೇಳಿದರು.

ಈ ಬಾರಿ ಜಂಬೂಸವಾರಿಯಲ್ಲಿ ಮೂರು ಹೊಸ ಆನೆಗಳು ಪಾಲ್ಗೊಳ್ಳಲಿವೆ. ಎರಡನೇ ಹಂತದಲ್ಲಿ ಕ್ಯಾಪ್ಟನ್ ಅಭಿಮನ್ಯು ತಂಡ ಸೇರಿಕೊಳ್ಳಲಿರುವ ಐದು ಆನೆಗಳಲ್ಲಿ ಶ್ರೀಕಂಠ, ರೂಪ ಮತ್ತು ಹೇಮಾವತಿ ಹೊಸ ಆನೆಗಳು ಇರಲಿವೆ.  ಹೇಮಾವತಿ ವೆರಿ ಎಂಗೆಸ್ಟ್ ಫೀ ಮೇಲ್ ಎಲಿಫೆಂಟ್. 10 ನೇ ತಾರೀಖು ಸಂಜೆ ಅರಮನೆಗೆ ಸಾಂಪ್ರದಾಯಿಕ ಪೂಜೆಯೊಂದಿಗೆ ಅರಣ್ಯ ಭವನದಿಂದ ಅರಮನೆಗೆ ಬೀಳ್ಕೊಡಲಾಗುತ್ತದೆ ಎಂದು ಡಿಸಿಎಫ್ ಪ್ರಭುಗೌಡ ಮಾಹಿತಿ ನೀಡಿದರು.

ವರಮಹಾಲಕ್ಷ್ಮಿ ಹಬ್ಬ: ದಸರಾ ಗಜಪಡೆ ನೋಡಲು ಬಂದ ಸಾರ್ವಜನಿಕರು

ದಸರಾ ಜಂಬೂಸವಾರಿಗೆಂದು ಕಾಡಿನಿಂದ ನಾಡಿಗೆ ಬಂದಿರುವ ಗಜಪಡೆ ಆನೆಗಳನ್ನ ನೋಡಲು ವರ ಮಹಾಲಕ್ಷ್ಮಿ ಹಬ್ಬದಂದೂ  ಆನೆಗಳ ನೋಡಲಿಕ್ಕೆ ನಗರದ ಅರಣ್ಯ ಭವನದ ಬಳಿ ಸಾರ್ವಜನಿಕರು ಆಗಮಿಸಿದ್ದರು.  ನಗರದ ಅರಣ್ಯ ಭವನದ ಆವರಣದಲ್ಲಿ ಗಜಪಡೆ ಬೀಡು ಬಿಟ್ಟಿದ್ದು, ವರಮಹಾಲಕ್ಷ್ಮಿ ಹಬ್ಬದಂದೂ  ಆನೆಗಳ ನೋಡಲು ಸಾರ್ವಜನಿಕರು ಲಗ್ಗೆ ಇಟ್ಟಿದ್ದಾರೆ. ಅಶೋಕ್‌ ಪುರಂ, ಕುವೆಂಪುನಗರ, ಕೆ.ಜಿ ಕೊಪ್ಪಲ್ ಸೇರಿದಂತೆ ಸುತ್ತಮುತ್ತಲ ಬಡಾವಣೆ ಜನರು ಬಂದು ಆನೆಗಳನ್ನ ವೀಕ್ಷಣೆ ಮಾಡುತ್ತಿದ್ದಾರೆ.

ಸಾರ್ವಜನಿಕರನ್ನ ಆನೆಗಳ ಸನಿಹಕ್ಕೆ ಬಿಡದೆ ದೂರಲ್ಲೇ ನಿಂತು ನೋಡುವಂತೆ ಅರಣ್ಯ ಇಲಾಖೆ ಸಿಬ್ಬಂದಿ ಬ್ಯಾರಿಕೇಡ್ ವ್ಯವಸ್ಥೆ ಮಾಡಿದ್ದಾರೆ.

Key words: Mysore dasara,  elephants, Insurance, DCF, Prabhugowda