ಕಾಡಾನೆ ದಾಳಿಗೆ ಇಬ್ಬರು ರೈತರು ಬಲಿ: 20 ಲಕ್ಷ ರೂ. ಪರಿಹಾರದ ಭರವಸೆ ನೀಡಿದ ಶಾಸಕ

ಚಿಕ್ಕಮಗಳೂರು,ಅಕ್ಟೋಬರ್,31,2025 (www.justkannada.in): ಕಾಡಾನೆ ದಾಳಿಗೆ ಇಬ್ಬರು ರೈತರು ಬಲಿಯಾದ ಘಟನೆ ಚಿಕ್ಕಮಗಳೂರು ಜಿಲ್ಲೆ  ಶೃಂಗೇರಿ ತಾಲೂಕಿನ ಕೆರೆಕಟ್ಟೆ ಗ್ರಾಮದಲ್ಲಿ ನಡೆದಿದೆ.

ಹರೀಶ್ (44) ಮತ್ತು ಉಮೇಶ್ (40)  ಕಾಡಾನೆ ದಾಳಿಗೆ ಬಲಿಯಾದವರು. ಇಬ್ಬರು ಸಹ ದೊಡ್ಡಪ್ಪ ಚಿಕ್ಕಪ್ಪನ ಮಕ್ಕಳಾಗಿದ್ದು ಸಹೋದರರಾಗಿದ್ದಾರೆ. ಇಬ್ಬರು ಕೊಟ್ಟಿಗೆಗೆ ಸೊಪ್ಪು ತರಲು ಹೋಗಿದ್ದರು. ಈ ವೇಳೆ ಆನೆ ದಾಳಿ ನಡೆಸಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಶೃಂಗೇರಿ ಪೊಲೀಸರು, ಅರಣ್ಯ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮಸ್ಥರು, ಕಾಡಾನೆ ಹಾವಳಿಯಿಂದ ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

 ಸ್ಥಳಕ್ಕೆ ಶಾಸಕ ರಾಜೇಗೌಡ ಭೇಟಿ, ಪರಿಹಾರದ ಭರವಸೆ

ಘಟನೆ ಕುರಿತು ಮಾಹಿತಿ ಪಡೆದ ಶಾಸಕ ರಾಜೇಗೌಡ ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಮೃತರ ಕುಟುಂಬಸ್ಥರಿಗೆ ಸರ್ಕಾರದಿಂದ 20 ಲಕ್ಷ ರೂ. ಪರಿಹಾರ ಕೊಡಿಸುವ ಭರವಸೆ ನೀಡಿದರು. ಹಾಗೆಯೇ ವೈಯಕ್ತಿಕ 2 ಲಕ್ಷ ಪರಿಹಾರ ಕೊಡುವುದಾಗಿ ಘೋಷಿಸಿದರು ಎನ್ನಲಾಗಿದೆ. ಇನ್ನು ಆನೆಯನ್ನ ಸೆರೆ ಹಿಡಿಯುವುದಾಗಿ ಭರವಸೆ ನೀಡಿದರು.

Key words: Two farmers, death, elephant, attack