ELECTION SPECIAL : ತ್ರಿವೇಣಿ ಸಂಗಮದಲ್ಲಿ  ‘ತ್ರಿಕೋನ ‘ ಸ್ಪರ್ಧೆ..! 

MYSURU, MARCH27, 2023 : ಸಾಂಸ್ಕೃತಿಕ ರಾಜಧಾನಿ ಮೈಸೂರು ಜಿಲ್ಲೆ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಚುನಾವಣಾ ರಾಜಕೀಯ ಇತಿಹಾಸವನ್ನು ದಾಖಲಿಸುವ ನಿಟ್ಟಿನಲ್ಲಿ ಇಂದಿನಿಂದ ‘ ಜಸ್ಟ್ ಕನ್ನಡ ‘ ದಲ್ಲಿ ಮಾಲಿಕೆ ಆರಂಭ. ಮೊದಲನೆಯದಾಗಿ ‘ ದಕ್ಷಿಣ ಕಾಶಿ’  ಎಂದೇ ಹೆಸರಾದ ತಿರುಮಕೂಡಲು ನರಸೀಪುರ ವಿಧಾನಸಭಾ ಕ್ಷೇತ್ರ. ಈ ಕ್ಷೇತ್ರದಲ್ಲಿ  ಡಾ. ಎಚ್.ಸಿ.ಮಹದೇವಪ್ಪ ೫ ಬಾರಿ ಆಯ್ಕೆಗೊಂಡರೆ, ಸತತವಾಗಿ ನಾಲ್ಕು ಬಾರಿ ಎಂ. ರಾಜಶೇಖರಮೂರ್ತಿ ಅವರು ಗೆಲುವು ಸಾಧಿಸಿ ದಾಖಲೆ ನಿರ್ಮಿಸಿದ ನಿದರ್ಶನವಿದೆ.

ಕ್ಷೇತ್ರದ ಇತಿಹಾಸ :

೧೯೫೨ ರಲ್ಲಿ  ನಂಜನಗೂಡು ತಾಲ್ಲೂಕಿನ ಬಿಲಿಗೆರೆ ಹಾಗೂ ಛತ್ರ ಹೋಬಳಿ, ನಂತರ ೧೯೭೮ರಲ್ಲಿ ತಿ. ನರಸೀಪುರ ತಾಲ್ಲೂಕಿನ ಕಸಬ ಹಾಗೂ ಮೂಗೂರು ಹೋಬಳಿ  ಮತ್ತು ಪಟ್ಟಣ ಒಳಗೊಂಡಂತೆ ತಿ. ನರಸೀಪುರ ಮೀಸಲು ವಿಧಾನಸಭಾ ಕ್ಷೇತ್ರವಾಗಿ ಪರಿವರ್ತನೆಗೊಂಡಿತು.

ತಿ. ನರಸೀಪುರ ವಿಧಾನಸಭಾ ಕ್ಷೇತ್ರಕ್ಕೆ  ೨೦೦೮ ರಲ್ಲಿ ಬನ್ನೂರು ವಿಧಾನಸಭಾ ಕ್ಷೇತ್ರವನ್ನು ವಿಲೀನಗೊಳಿಸಿ, ಬಿಳಿಗೆರೆ, ಕಸಬಾ  ಹಾಗೂ ಛತ್ರ ಹೋಬಳಿಯನ್ನು ನೂತನ ‘ ವರುಣ ವಿಧಾನಸಭಾ’  ಕ್ಷೇತ್ರಕ್ಕೆ ಸೇರಿಸಿ, ತಿ. ನರಸೀಪುರ ವಿಧಾನಸಭಾ ಕ್ಷೇತ್ರಕ್ಕೆ ಬನ್ನೂರು, ತಲಕಾಡು, ಸೋಸಲೆ, ಮೂಗೂರು ಹೋಬಳಿ ಹಾಗೂ ಪಟ್ಟಣವನ್ನು ಸೇರಿಸಿ ಮೀಸಲು ವಿಧಾನಸಭಾ ಕ್ಷೇತ್ರವನ್ನು ಪುನರ್ ವಿಂಗಡಿಸಲಾಯಿತು.

ಈ ಕ್ಷೇತ್ರದಲ್ಲಿ ೮ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ೩ ಬಾರಿ ಜನತಾ ಪಕ್ಷದ ಅಭ್ಯರ್ಥಿಗಳು, ೧ ಬಾರಿ ಬಿಜೆಪಿ ಅಭ್ಯರ್ಥಿ ಹಾಗೂ ೨ ಬಾರಿ ಜಾ.ದಳ ಅಭ್ಯರ್ಥಿ ಆಯ್ಕೆಗೊಂಡಿದ್ದಾರೆ.

ಪ್ರಸ್ತುತ ಜಾ.ದಳದ ಎಂ.ಅಶ್ವಿನ್ ಕುವಾರ್ ಶಾಸಕರಾಗಿದ್ದಾರೆ. ಎಸ್. ಶ್ರೀನಿವಾಸ ಅಯ್ಯಂಗಾರ್, ಪಿ.ವೆಂಕಟರಮಣ, ವಿ. ವಾಸುದೇವ, ಹೆಜ್ಜಿಗೆ ಎಂ. ಶ್ರೀನಿವಾಸಯ್ಯ, ಡಾ. ಎನ್.ಎಲ್.ಭಾರತೀಶಂಕರ್ ಅವರು ಶಾಸಕರಾಗಿ ಈ ಕ್ಷೇತ್ರ ಪ್ರತಿನಿಧಿಸಿದ್ದಾರೆ.

ಪ್ರಸ್ತುತ :

ಕ್ಷೇತ್ರದಲ್ಲಿ ೨೦೨೩ರ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಜೋರಾಗಿದೆ. ಜಾ.ದಳದಲ್ಲಿ ಹಾಲಿ ಶಾಸಕ ಎಂ.ಅಶ್ವಿನ್  ಕುಮಾರ್ ,   ಕಾಂಗ್ರೆಸ್ ಪಕ್ಷದಿಂದ ಮಾಜಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಖಚಿತವಾಗಿದೆ.

ಬಿಜೆಪಿ ಟಿಕೆಟ್‌ಗೆ ಪೈಪೋಟಿ ಹೆಚ್ಚಾಗಿದ್ದು, ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಮಾಜಿ ಶಾಸಕ ಡಾ. ಎನ್.ಎಲ್.ಭಾರತಿ ಶಂಕರ್, ಗ್ರಾಮಾಂತರ ಜಿಲ್ಲಾ ಘಟಕದ ಉಪಾಧ್ಯಕ್ಷ ಹಾಗೂ ವಕೀಲ ಎಂ.ದಾಸಯ್ಯ, ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ. ಎಂ.ರೇವಣ್ಣ, ವಿಧಾನ ಪರಿಷತ್  ಮಾಜಿ ಸದಸ್ಯ ಸಿ.ರಮೇಶ್, ಕಳೆದ ಬಾರಿ ಸ್ಪರ್ಧಿಸಿದ್ದ ಎಸ್. ಶಂಕರ್, ಪುರಸಭಾ ಸದಸ್ಯ ಅರ್ಜುನ್ ರಮೇಶ್, ಮುಖಂಡರಾದ ಎಸ್.ಅರವಿಂದ್,  ಸಾಮ್ರಾಟ್ ಸುಂದರೇಶನ್  ಟಿಕೆಟ್‌ಗಾಗಿ ಕಸರತ್ತು  ನಡೆಸುತ್ತಿದ್ದಾರೆ.

ಗೆಲುವು ಸಾಧಿಸಿದ ಅಭ್ಯರ್ಥಿಗಳು

೧೯೫೨ ರಲ್ಲಿ ಎಸ್.ಶ್ರೀನಿವಾಸ ಅಯ್ಯಂಗಾರ್(ಕೆಎಂಪಿಪಿ)

೧೯೫೭ ರಲ್ಲಿ ಎಂ. ರಾಜಶೇಖರ್ ಮೂರ್ತಿ (ಕಾಂಗ್ರೆಸ್)

೧೯೬೨ ರಲ್ಲಿ ಎಂ ರಾಜಶೇಖರ್ ಮೂರ್ತಿ ( ಕಾಂಗ್ರೆಸ್)

೧೯೬೭ ರಲ್ಲಿ ಎಂ ರಾಜಶೇಖರ್ ಮೂರ್ತಿ (ಕಾಂಗ್ರೆಸ್ )

೧೯೭೨ ರಲ್ಲಿ ಎಂ ರಾಜಶೇಖರ್ ಮೂರ್ತಿ (ಕಾಂಗ್ರೆಸ್ )

೧೯೭೮ ರಲ್ಲಿ ಪಿ. ವೆಂಕಟರಮಣ( ಕಾಂಗ್ರೆಸ್ )

೧೯೮೩ರಲ್ಲಿ ವಿ.ವಾಸುದೇವ ( ಜನತಾ ಪಕ್ಷ )

೧೯೮೫ ರಲ್ಲಿ ಡಾಕ್ಟರ್ ಎಚ್ ಸಿ ಮಹದೇವಪ್ಪ( ಜನತಾ ಪಕ್ಷ )

೧೯೮೯ ರಲ್ಲಿ ಹೆಜ್ಜೆಗೆ ಶ್ರೀನಿವಾಸಯ್ಯ ( ಕಾಂಗ್ರೆಸ್)

೧೯೯೪ರಲ್ಲಿ ಡಾ. ಹೆಚ್.ಸಿ.ಮಹದೇವಪ್ಪ (ಜನತಾದಳ )

೧೯೯೯ ರಲ್ಲಿ ಡಾ. ಎನ್.ಎಲ್.ಭಾರತಿಶಂಕರ್ (ಬಿಜೆಪಿ )

೨೦೦೪ ರಲ್ಲಿ ಡಾ. ಎಚ್.ಸಿ.ಮಹದೇವಪ್ಪ (ಜಾ.ದಳ )

೨೦೦೮ ರಲ್ಲಿ ಡಾ. ಹೆಚ್.ಸಿ.ಮಹದೇವಪ್ಪ( ಕಾಂಗ್ರೆಸ್ )

೨೦೧೩ ರಲ್ಲಿ ಡಾ. ಎಚ್.ಸಿ.ಮಹದೇವಪ್ಪ( ಕಾಂಗ್ರೆಸ್ )

೨೦೧೮ ರಲ್ಲಿ ಎಂ.ಅಶ್ವಿನ್ ಕುಮಾರ್ (ಜಾ.ದಳ),

 

Key words : election-2023-mysore-t.narasipura-congress-jds-bjp