ದಲಿತರ ಹಣವನ್ನು ಬೇರೆಡೆ ಬಳಸಿ ಸರ್ಕಾರದಿಂದಲೇ ಆರ್ಥಿಕ ಅಸಮಾನತೆ- ಆರ್.ಅಶೋಕ್ ವಾಗ್ದಾಳಿ

0
3

ಬೆಂಗಳೂರು, ಫೆಬ್ರವರಿ 12, 2024(www.justkannada.in): ರಾಜ್ಯ ಕಾಂಗ್ರೆಸ್ ಸರ್ಕಾರ ದಲಿತರ ಹಣವನ್ನು ಗ್ಯಾರಂಟಿಗಾಗಿ ಬಳಕೆ ಮಾಡಿದೆ.  ದಲಿತರ ಹಣವನ್ನು ಬೇರೆಡೆ ಬಳಸಿ ಸರ್ಕಾರವೇ ಆರ್ಥಿಕ ಅಸಮಾನತೆಗೆ ಕಾರಣವಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಆರ್.ಅಶೋಕ್, ದೇಶದಲ್ಲಿ ಆರ್ಥಿಕ ಅಸಮಾನತೆ ಹೆಚ್ಚಿದೆ ಎನ್ನುತ್ತಾರೆ. ಆದರೆ ಗ್ಯಾರಂಟಿಗಾಗಿ ಖಜಾನೆ ಖಾಲಿ ಮಾಡಿಕೊಂಡ ಸರ್ಕಾರ, ಶಾಸಕರಿಗೆ ಅನುದಾನ ನೀಡದೆ ಸತಾಯಿಸುತ್ತಿದೆ. ಯಾವ ಯೋಜನೆಗೂ ಹಣ ನೀಡದೆ ಗ್ಯಾರಂಟಿಗೆ ಮಾತ್ರ ಹಣ ಕೊಟ್ಟಿರುವುದೇ ಆರ್ಥಿಕ ಅಸಮಾನತೆ. ದಲಿತರ ಹಣವನ್ನು ಗ್ಯಾರಂಟಿಗಾಗಿ ಬಳಕೆ ಮಾಡಿರುವುದೇ ಆರ್ಥಿಕ ಅಸಮಾನತೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದಿಂದ ಕಳೆದ ಐದು ವರ್ಷಗಳಲ್ಲಿ 13.5 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಇಂತಹ ಒಂದೂ ಕೆಲಸವನ್ನು ಕಾಂಗ್ರೆಸ್ ಮಾಡಿಲ್ಲ ಎಂದರು.

ಕಾಂಗ್ರೆಸ್ ಸರ್ಕಾರ ಗೌರವಾನ್ವಿತ ರಾಜ್ಯಪಾಲರ ಬಾಯಲ್ಲಿ ಸುಳ್ಳುಗಳನ್ನು ಹೇಳಿಸಿದೆ. ಹಿಂದಿನ ಬಿಜೆಪಿ ಸರ್ಕಾರ ತಂದ ಯೋಜನೆಗಳನ್ನು, ಕೇಂದ್ರ ಸರ್ಕಾರದ ಯೋಜನೆಗಳನ್ನು ತಮ್ಮದೇ ಯೋಜನೆ ಎಂದು ಕಾಂಗ್ರೆಸ್ ಬಿಂಬಿಸಿಕೊಂಡಿದೆ. ಐದು ಗ್ಯಾರಂಟಿ ತಂದಿದ್ದೇವೆ ಎಂದು ಹೇಳಿದ್ದರೂ ಯುವನಿಧಿ ಇನ್ನೂ ನಿರುದ್ಯೋಗಿಗಳ ಕೈ ಸೇರಿಲ್ಲ. ಬರ ಪರಿಹಾರ ಕೊಟ್ಟಿದ್ದೇವೆ ಎನ್ನುತ್ತಾರೆ. ಆದರೆ ಪರಿಹಾರವನ್ನು ಕಂತಾಗಿ ನೀಡಬಾರದು. ಹಿಂದಿನ ಬಿಜೆಪಿ ಸರ್ಕಾರ ಪರಿಹಾರವನ್ನು ಒಂದೇ ಸಲಕ್ಕೆ ರೈತರ ಖಾತೆಗೆ ಹಾಕಿತ್ತು. ಈ ಸರ್ಕಾರ ಕಂತು ಕಂತಾಗಿ ನೀಡುವುದು ತಪ್ಪು. ನಾವು 25 ಸಾವಿರ ರೂ. ಪರಿಹಾರ ಕೇಳಿದ್ದರೆ, ಆ ವಿಷಯವನ್ನು ಪ್ರಸ್ತಾಪಿಸಿಲ್ಲ. ಕೇವಲ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಲಾಗಿದೆ ಎಂದು ದೂರಿದರು.

ಮಕ್ಕಳಿಗೆ ಚಿಕ್ಕಿ ಮಿಠಾಯಿ ಕೊಟ್ಟು ಅವರ ಕೈಯಲ್ಲೇ ಶೌಚಾಲಯ ತೊಳೆಸಲಾಗುತ್ತಿದೆ. ಶಿವಮೊಗ್ಗ ವಿಮಾನ ನಿಲ್ದಾಣ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಆಗಿತ್ತು. ಮೆಟ್ರೊ ರೈಲು ಯೋಜನೆ ಕೇಂದ್ರ ಸರ್ಕಾರದಿಂದ ಆಗಿದೆ. ಜಲಜೀವನ್ ಮಿಷನ್ ಕೂಡ ಕೇಂದ್ರದ ಕೊಡುಗೆ. ಆದರೂ ಅವೆಲ್ಲ ತಮ್ಮದೇ ಎಂದು ಹೇಳಿಕೊಂಡಿದ್ದಾರೆ. ಹಿಂದೂ ದ್ವೇಷ ಹೆಚ್ಚಿದ್ದು, ಭಯೋತ್ಪಾದನಾ ಚಟುವಟಿಕೆ ಅತಿಯಾಗಿದೆ. ಆದರೂ ಸರ್ವ ಜನಾಂಗದ ಶಾಂತಿಯ ತೋಟ ಎಂದಿದ್ದಾರೆ. ಸರ್ಕಾರ ಕಾನೂನು ಸುವ್ಯವಸ್ಥೆಯನ್ನೇ ಕಾಪಾಡಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಕನ್ನಡ ಉಳಿವು ಎಂದು ಹೋರಾಟಗಾರರನ್ನು ಜೈಲಿಗೆ ಹಾಕಿದ್ದಾರೆ. ಎಸ್ ಸಿಎಸ್ಪಿ, ಟಿಎಸ್ಪಿ ಹಣವನ್ನು ದಲಿತರಿಗೆ ಬಳಸದೆ ಬೇರೆ ಯೋಜನೆಗಳಿಗೆ ಬಳಸಿದ್ದಾರೆ. ಕಾಂಗ್ರೆಸ್ ಸರ್ಕಾರದಿಂದ ಒಂದೇ ಒಂದು ಕಾಮಗಾರಿ ನಡೆದಿಲ್ಲ ಎಂದು ಶಾಸಕರು ಹೇಳಿದ್ದಾರೆ. 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಗುತ್ತಿಗೆದಾರರು ಹೇಳಿದ್ದಾರೆ ಎಂದು ಹೇಳಿದರು.

ರೈತ ಆತ್ಮಹತ್ಯೆ ಹೆಚ್ಚಳ

ಬರಗಾಲವಿದ್ದರೂ ಕಳೆದ ವರ್ಷಕ್ಕಿಂತ ಆತ್ಮಹತ್ಯೆ ಕಡಿಮೆಯಾಗಿದೆ ಎಂದು ಹೋಲಿಸಿಕೊಂಡಿದ್ದಾರೆ. ಇವರದ್ದೇ ಸರ್ಕಾರದ ಸಚಿವ ಶಿವಾನಂದ ಪಾಟೀಲ್‌ ಅವರು ಪರಿಹಾರ ಪಡೆಯಲೆಂದೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಕೀಳಾಗಿ ಮಾತಾಡಿದ್ದರು. ಆತ್ಮಹತ್ಯೆ ಹೆಚ್ಚಿದ್ದರೂ ಅದನ್ನು ಮುಚ್ಚಿಟ್ಟು ಸುಳ್ಳು ಹೇಳಿದ್ದಾರೆ. 2 ಸಾವಿರ ರೂ. ಪರಿಹಾರ ಎಂದು ಕಾಟಾಚಾರಕ್ಕೆ ಘೋಷಣೆ ಮಾಡಿ, ನಂತರ ಎಲ್ಲರಿಗೂ ಪರಿಹಾರ ನೀಡುವ ಕೆಲಸ ಮಾಡಿಲ್ಲ. ಫ್ರೂಟ್ಸ್ ತಂತ್ರಾಂಶದಲ್ಲಿ ಇನ್ನೂ ನೋಂದಣಿ ಸಮಸ್ಯೆ ಇದೆ. ಇಷ್ಟಿದ್ದರೂ ರೈತರಿಗೆ ಪರಿಹಾರ ನೀಡಿದ್ದೇವೆ ಎಂದೇ ನಾಚಿಕೆ ಇಲ್ಲದೆ ಹೇಳಿಕೊಂಡಿದ್ದಾರೆ ಎಂದು ದೂರಿದರು.

ಹಿಂದೂ-ಮುಸ್ಲಿಮರ ನಡುವೆ ದ್ವೇಷ ಬಿತ್ತುವ ಕೆಲಸವನ್ನು ಸರ್ಕಾರ ಮಾಡಿದೆ. ಮುಸ್ಲಿಮರಿಗೆ 1 ಸಾವಿರ ಕೋಟಿ ರೂ. ನೀಡುವ ಸರ್ಕಾರ, ಪರಿಹಾರ ಕೇಳಿದರೆ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತದೆ ಎಂದರು.

Key words: Economic- inequality – government – R.Ashok