ಕುಡಿಯುವ ನೀರಿನ ಸಮಸ್ಯೆ ಮತ್ತು ಇಂದಿರಾ ಕ್ಯಾಂಟಿನ್ ನಿರ್ವಹಣೆ: ಅಧಿಕಾರಿಗಳಿಗೆ ಹಲವು ಸೂಚನೆಗಳನ್ನ ನೀಡಿದ ಸಿಎಂ ಸಿದ‍್ಧರಾಮಯ್ಯ.

ಬೆಂಗಳೂರು,ಜೂನ್,12,2023(www.justkannada.in): ರಾಜ್ಯದ  8 ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಜಲಜೀವನ್‌ ಮಿಷನ್ ಯೋಜನೆಯ ಪ್ರಗತಿ  ಮತ್ತು ಇಂದಿರಾ ಕ್ಯಾಂಟೀನ್‌ ನಿರ್ವಹಣೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ  ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ರಾಜ್ಯದ ಬೀದರ್‌, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜಿಲ್ಲಾಡಳಿತಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌  ಮೂಲಕ ಸಿಎಂ ಸಿದ್ಧರಾಮಯ್ಯ ಸಭೆ ನಡೆಸಿದರು.

ರಾಜ್ಯದಲ್ಲಿ ಮುಂಗಾರು ಜೂನ್‌ 10 ರಂದು ಪ್ರಾರಂಭವಾಗಿದೆ. ಜೂನ್‌ 1 ರಿಂದ 11  ರ ವರೆಗಿನ ಮಾಹಿತಿ ಪ್ರಕಾರ ರಾಜ್ಯದ ವಾಡಿಕೆ ಮಳೆಗಿಂತ ಶೇ. 67 ರಷ್ಟು ಕೊರತೆ ಇದೆ. ಮುಂದಿನ ದಿನಗಳಲ್ಲಿ ಇದು ವಾಡಿಕೆಯಷ್ಟು ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದರೆ ಕಳೆದ ಕೆಲವು ದಿನಗಳಲ್ಲಿ ಮಳೆಯ ಕೊರತೆಯಿಂದಾಗಿ ಕೆಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ.  ರಾಜ್ಯದ 15 ಜಿಲ್ಲೆಗಳಲ್ಲಿ 322 ಗ್ರಾಮಗಳಲ್ಲಿ ಟ್ಯಾಂಕರ್‌ ಮೂಲಕ ಹಾಗೂ 148 ಗ್ರಾಮಗಳಲ್ಲಿ ಖಾಸಗಿ ಬೋರ್‌ ವೆಲ್‌ಗಳನ್ನು ಬಾಡಿಗೆಗೆ ಪಡೆದು ಕುಡಿಯುವ ನೀರು ಒದಗಿಸಲಾಗುತ್ತಿದೆ. ಪೂರ್ವ ಮುಂಗಾರು ಕೊರತೆಯ ಕಾರಣ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿತ್ತು. ಮುಂಗಾರು ಪ್ರಾರಂಭವಾಗಿರುವುದರಿಂದ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಬಗೆಹರಿಯುವ ನಿರೀಕ್ಷೆ ಇದೆ.

ಅಲ್ಲದೆ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಕೊರತೆ ಇರದಿದ್ದರೂ ಕಲುಷಿತ ನೀರಿನ ಸಮಸ್ಯೆ ಉಂಟಾಗಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಗ್ರಾಮೀಣಾಭಿವೃದ್ಧೀ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಇದರ ವರದಿಯನ್ನಾಧರಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ.

ಜಿ.ಪಂ. ಸಿ.ಇ.ಓ. ಗಳು ತಾಲ್ಲೂಕಿಗೆ ಭೇಟಿ ನೀಡಬೇಕು. ಪಿ.ಡಿ.ಓ ಗಳ ಕಾರ್ಯನಿರ್ವಹಣೆ ಬಗ್ಗಗೆ ನಿಗಾ ವಹಿಸಬೇಕು. ಜಲಜೀವನ್‌ ಮಿಷನ್‌ ಯೋಜನೆಯಡಿ ನೀರಿನ ಪೈಪ್‌ ಲೈನ್‌ ಅಳವಡಿಸಿರುವುದರ ಗುಣಮಟ್ಟ ಪರಿಶೀಲಿಸಿ. ಕೊಳವೆ ಒಡೆದುಹೋಗುವುದು ಮತ್ತಿತರ ಸಮಸ್ಯೆ ಉಂಟಾದರೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಿಎಂ ಸಿದ್ಧರಾಮಯ್ಯ ಸೂಚನೆ ನೀಡಿದರು.

ಕುಡಿಯುವ ನೀರಿನ ಸಮಸ್ಯೆ ಕುರಿತು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ನೀರಿನ ಸಮಸ್ಯೆ ಉದ್ಘವಿಸಿದ 24 ಗಂಟೆಯೊಳಗೆ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳೂ ಸಹ ಈ ಕುರಿತು ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಯಿತು. ಯಾವುದೇ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವ ಆಗಿದ್ದರೆ, ಕೂಡಲೇ ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ಆಡಳಿತಾತ್ಮಕ ವಿಚಾರಗಳಿಗೆ ವಿಳಂಬ ಧೋರಣೆ ಸರಿಯಲ್ಲ. ಈ ಕುರಿತು ಅಧಿಕಾರ ಪ್ರತ್ಯಾಯೋಜನೆ ಮಾಡುವ ಕುರಿತೂ ಚಿಂತನೆ ನಡೆಸುವಂತೆ ಸಿಎಂ ಸಿದ್ಧರಾಮಯ್ಯ ಸೂಚಿಸಿದರು.

ಜಲಜೀವನ್‌ ಮಿಷನ್‌ ಮೂಲಕ ನೀರು ಒದಗಿಸಿದ ಗ್ರಾಮಗಳಲ್ಲಿ ಇಓ, ಎಂಜಿನಿಯರುಗಳು ತಪಾಸಣೆ ನಡೆಸಿ, ಪೈಪ್‌ ಲೈನ್‌ ಗಳನ್ನು ಪರಿಶೀಲಿಸಿ, ಸಮಸ್ಯೆಗಳಿದ್ದಲ್ಲಿ ಸರಿ ಪಡಿಸಬೇಕು. ಕಲುಷಿತ ನೀರು ಸೇವನೆ ಪ್ರಕರಣಗಳು ಮರುಕಳಿಸಬಾರದು ಎಂದು ಎಚ್ಚರಿಕೆ ನೀಡಿದರು.

ಎಲ್ಲ ಜನರಿಗೂ ಶುದ್ಧ ಕುಡಿಯುವ ನೀರು ಒದಗಿಸುವುದು ನಿಮ್ಮ ಜವಾಬ್ದಾರಿ. ಅನುದಾನದ ಅಗತ್ಯವಿದ್ದರೆ ಒದಗಿಸಲಾಗುವುದು. ನೆಪ ಹೇಳಿ, ಜವಾಬ್ದಾರಿಯನ್ನು ಇನ್ನೊಬ್ಬರಿಗೆ ವಹಿಸಬೇಡಿ. ಕುಡಿಯುವ ನೀರಿನ ಸಮಸ್ಯೆ ಅತ್ಯಂತ ಸೂಕ್ಷ್ಮ ವಿಷಯ. ಮಳೆ ಬಂದು ಕುಡಿಯುವ ನೀರಿನ ಸಮಸ್ಯೆ ಬಗೆಹರಿದರೆ ಒಳ್ಳೆಯದು. ಇಲ್ಲವಾದರೆ, ಅಧಿಕಾರಿಗಳು ದಿನದ 24 ಗಂಟೆಯೂ ಜಾಗೃತರಾಗಿದ್ದು ನೀರಿನ ಸಮಸ್ಯೆ ಬಗೆಹರಿಸಬೇಕು. ಇದಕ್ಕಾಗಿ ನಿಮಗೆ ಒದಗಿಸಿದ ಸವಲತ್ತುಗಳನ್ನು ಬಳಸಿಕೊಂಡು ಕ್ರಮ ಕೈಗೊಳ್ಳಲಿ. ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಂಪರ್ಕದಲ್ಲಿದ್ದು ನೀರಿನ ಸಮಸ್ಯೆ ಕುರಿತು ಸರಿಯಾದ ಮಾಹಿತಿ ಒದಗಿಸಬೇಕು. ಜಾನುವಾರುಗಳಿಗೂ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಎಚ್ಚರ ವಹಿಸಬೇಕು. ಮುನ್ನೆಚ್ಚರಿಕೆ ಕ್ರಮಗಳಿಗೆ ಆದ್ಯತೆ. ಸಮಸ್ಯೆ ಬಗೆಹರಿಸಲು ಎಲ್ಲ ಬೆಂಬಲ ನೀಡಲಾಗುವುಉದ. ತಪ್ಪು ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ವಾರ್ನಿಂಗ್ ನೀಡಿದರು.

ಹಾಗೆಯೇ ಸಭೆಯಲ್ಲಿ ರಾಜ್ಯದಲ್ಲಿ ಜಲ ಜೀವನ್‌ ಮಿಷನ್‌ ಯೋಜನೆಯ ಅನುಷ್ಠಾನ ಕುರಿತಂತೆ ಪರಿಶೀಲನೆ ನಡೆಸಲಾಯಿತು. ಈ ಯೋಜನೆಯಡಿ ಸುಸ್ಥಿರ ನೀರಿನ ಮೂಲ ಇರುವ ಯೋಜನೆಗಳನ್ನು ಗುರುತಿಸಿ, ಅವುಗಳನ್ನು ಆದ್ಯತೆಯ ಮೇರೆಗೆ ಅನುಷ್ಠಾನಗೊಳಿಸಲು ನಿರ್ಧರಿಸಲಾಯಿತು. ಈ ಯೋಜನೆ ಕಾಮಗಾರಿ ಹಾಗೂ ರಾಜ್ಯದಲ್ಲಿ ಅಳವಡಿಸಿರುವ ಆರ್. ಓ. ಪ್ಲಾಂಟ್‌ ಗಳ ಕುರಿತು ಕುರಿತು ಥರ್ಡ್‌ ಪಾರ್ಟಿ ಆಡಿಟ್‌ ನಡೆಸಲು ತೀರ್ಮಾನಿಸಲಾಯಿತು.

ಮತ್ತೆ ಇಂದಿರಾ ಕ್ಯಾಂಟೀನ್ ತೆರೆಯಲು ನಿರ್ಧಾರ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೆ ಇಂದಿರಾ ಕ್ಯಾಂಟೀನ್ ತೆರೆಯಲು ನಿರ್ಧರಿಸಿದೆ.  ಇಂದಿರಾ ಕ್ಯಾಂಟೀನ್‌ ಗಳಿಗೆ ಭೇಟಿ ನೀಡಿ, ಸುಸ್ಥಿತಿ ಮತ್ತು ಕಾರ್ಯನಿರ್ವಹಣೆ ಕುರಿತು ವರದಿ ಸಲ್ಲಿಸಲು ಸೂಚಿಸಲಾಯಿತು.

ದುರಸ್ತಿ ಅಗತ್ಯ ಇರುವಲ್ಲಿ ಕೂಡಲೇ ಕ್ರಮ ಕೈಗೊಂಡು, ಸುಸ್ಥಿತಿಯಲ್ಲಿರಬೇಕು. ಆಹಾರದ ಗುಣಮಟ್ಟ ಕಾಯ್ದುಕೊಳ್ಳಬೇಕು. ನಿಗದಿ ಪಡಿಸಿದ ಮೆನು ವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಹೊಸದಾಗಿ ಟೆಂಡರ್‌ ಪ್ರಕ್ರಿಯೆಯನ್ನು ವಿಕೇಂದ್ರೀಕರಣಗೊಳಿಸಿ 8 ವಲಯಗಳಲ್ಲಿ ಟೆಂಡರ್‌ ಕರೆಯಲು ಸೂಚಿಸಲಾಯಿತು. ಪಾರದರ್ಶಕತೆ ಕಾಯ್ದುಕೊಳ್ಳಲು ಸೂಚಿಸಲಾಯಿತು. ಸ್ವಚ್ಛತೆ, ಗುಣಮಟ್ಟ ಹಾಗೂ ಪ್ರಮಾಣದಲ್ಲಿ ಯಾವುದೇ ರಾಜಿ ಮಾಡಬಾರದು. ಉತ್ತರ ಕರ್ನಾಟಕದಲ್ಲಿ ಸ್ಥಳೀಯ ಆಹಾರ ಒದಗಿಸಲು ಸೂಚನೆ ನೀಡಲಾಯಿತು.

ಸಚಿವರು, ಶಾಸಕರನ್ನು ಉಪಾಹಾರ ಸ್ವೀಕರಿಸಲು ಆಹ್ವಾನಿಸಿ. ಗುಣಮಟ್ಟ ಕಾಪಾಡಲು ಅನುಕೂಲ. ಕಾಲೇಜು, ಆಸ್ಪತ್ರೆ, ಬಸ್‌ ನಿಲ್ದಾಣ, ತಾಲ್ಲೂಕು ಕಚೇರಿಗಳಂತಹ ಜನ ಸೇರುವ ಸ್ಥಳಗಳಲ್ಲಿ ಹೊಸ ಇಂದಿರಾ ಕ್ಯಾಂಟೀನ್‌ ಸ್ಥಾಪಿಸುವ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಸಿಎಂ ಸಿದ್ಧರಾಮಯ್ಯ ಸೂಚಿಸಿದರು.

7.ಬಿಬಿಎಂಪಿಗೆ ಸರ್ಕಾರದಿಂದ ಶೇ. 50 ಹಾಗೂ ಬಿಬಿಎಂಪಿ ಯಿಂದ ಶೇ. 50 ಅನುದಾನ ಭರಿಸಲು ತೀರ್ಮಾನಿಸಲಾಯಿತು. ಇತರ ನಗರ ಸ್ಥಳೀಯ ಸಂಸ್ಥೆಗಳಿಗೆ ಶೇ. 70 ಅನುದಾನ ಸರ್ಕಾರದಿಂದ ಹಾಗೂ ನಗರ ಸ್ಥಳೀಯ ಸಂಸ್ಥೇಯಿಂದ ಶೇ. 30 ರಷ್ಟು ಭರಿಸಲು ತೀರ್ಮಾನಿಸಲಾಯಿತು.

Key words: Drinking -water -problem -management – Indira canteen-CM Sidderamaiah