ಕಾನೂನಿನ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಿ: ಕುಡಿಯುವ ನೀರಿನ ಬಗ್ಗೆ ನಿರಂತರ ನಿಗಾ ವಹಿಸಿ- ಸಿಎಂ ಸಿದ್ದರಾಮಯ್ಯ ಸೂಚನೆ

ಬೆಂಗಳೂರು,ಮೇ,2,2026 (www.justkannada.in): ತಮ್ಮ ವ್ಯಾಪ್ತಿಯ ಜಿಲ್ಲೆಯಲ್ಲಿನ ಕುಡಿಯುವ ನೀರಿನ ಪರಿಸ್ಥಿತಿ ಬಗ್ಗೆ ನಿರಂತರ ನಿಗಾ ವಹಿಸಿ. ಕಾನೂನಿನ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಿ ಎಂದು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.

ಸಿಎಂ ಸಿದ್ಧರಾಮಯ್ಯ ಅವರು ಇಂದು ವಿಧಾನಸೌಧದ ಸಭಾಂಗಣದಲ್ಲಿ ನಡೆಸಿದ ಎಲ್ಲಾ ಇಲಾಖೆಗಳ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು/ಕಾರ್ಯದರ್ಶಿಗಳ ಸಭೆಯಲ್ಲಿ ನೀಡಿದ ಸೂಚನೆಗಳು ಈ ಕೆಳಕಂಡಂತಿದೆ.

ರಾಜ್ಯದ ಆಡಳಿತ ಸಮರ್ಪಕವಾಗಿ ನಡೆಯಲು ಇಲಾಖಾ ಕಾರ್ಯದರ್ಶಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇದನ್ನು ಸಂವಿಧಾನದಲ್ಲಿಯೇ ಉಲ್ಲೇಖಿಸಲಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು, 1949 ನವೆಂಬರ್ 25 ರಂದು ಮಾಡಿದ ಭಾಷಣದಲ್ಲಿ ʻರಾಜಕೀಯ ಪ್ರಜಾಪ್ರಭುತ್ವವು ಸಾಮಾಜಿಕ ಹಾಗೂ ಆರ್ಥಿಕ ಸಮಾನತೆಯ ತಳಹದಿಯ ಮೇಲೆ ನಿಂತಿದೆʼ ಎಂದು ಹೇಳಿದ್ದರು. ಅಂದರೆ ದೇಶದ ಪ್ರತಿಯೊಬ್ಬರಿಗೂ ಆರ್ಥಿಕ ಹಾಗೂ ಸಾಮಾಜಿಕವಾಗಿ ಶಕ್ತಿ ತುಂಬುವ ಕಾರ್ಯ ಮಾಡಿದರೆ ಮಾತ್ರ ನಿಜವಾದ ರಾಜಕೀಯ ಸ್ವಾತಂತ್ರ್ಯ ಸಾಕಾರಗೊಳ್ಳಲು ಸಾಧ್ಯ. ಸಂವಿಧಾನದ ಆಶಯಗಳ ಪ್ರಕಾರ ಕಾರ್ಯ ನಿರ್ವಹಿಸಬೇಕಾದುದು ಎಲ್ಲಾ ಕಾರ್ಯದರ್ಶಿಗಳ ಕರ್ತವ್ಯವಾಗಿದೆ. ಸಂವಿಧಾನಕ್ಕೆ ವಿರುದ್ಧವಾದ ಯಾವುದೇ ಕಾರ್ಯವನ್ನು ಮಾಡಬಾರದು ಎಂದರು.

ಗೃಹ ಸಚಿವರಾಗಿದ್ದ ವಲ್ಲಭ ಬಾಯ್ ಪಟೇಲ್ ಅವರು, ʻಕಾರ್ಯದರ್ಶಿಗಳು ನಿರ್ಭಯವಾಗಿ ಸ್ವತಂತ್ರವಾಗಿ ತಮ್ಮ ಅಭಿಪ್ರಾಯಗಳನ್ನು ಮಂತ್ರಿಗಳಿಗೆ ತಿಳಿಸಬೇಕು. ಮಂತ್ರಿ ಅಸಮಾಧಾನಗೊಳ್ಳುತ್ತಾರೆ ಎಂದು ಸತ್ಯ ಹೇಳುವುದರಿಂದ ಹಿಂಜರಿಯಬಾರದುʼ ಎಂದು ಸಂವಿಧಾನ ಸಭೆಯಲ್ಲಿ ಹೇಳಿದ್ದರು. ಇದರಂತೆ ಹಿರಿಯ ಅಧಿಕಾರಿಗಳು ನಿಮ್ಮ ಅಭಿಪ್ರಾಯಗಳನ್ನು ನಿರ್ಭಯವಾಗಿ, ಸ್ವತಂತ್ರವಾಗಿ, ಸತ್ಯವಾಗಿ ಹೇಳಬೇಕು. ಅಧಿಕಾರಿಗಳು ಯಾವತ್ತೂ ಸರ್ಕಾರಕ್ಕೆ ತಪ್ಪು ಮಾಹಿತಿಯನ್ನು ನೀಡಬಾರದು ಹಾಗೂ ತಪ್ಪು ಹಾದಿಗೆ ಎಳೆಯಬಾರದು. ನಮ್ಮ ನಿಲುವುಗಳು, ತೀರ್ಮಾನಗಳು ಯಾವತ್ತೂ ಜನಪರವಾಗಿರಬೇಕು. ಅಧಿಕಾರಿಗಳು 30-35 ವರ್ಷಗಳ ಕಾಲ ಆಡಳಿತ ವ್ಯವಸ್ಥೆಯಲ್ಲಿದ್ದರೆ, ಜನಪ್ರತಿನಿಧಿಗಳು ಕೇವಲ 5 ವರ್ಷಗಳ ಕಾಲ ಮಾತ್ರ ಇರುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರಿಗಳ ಜವಾಬ್ದಾರಿ ಹೆಚ್ಚಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಕಿವಿಮಾತು ಹೇಳಿದರು.

ಬಜೆಟ್ ನಲ್ಲಿ ಮಾಡಿರುವ ಘೋಷಣೆಗಳನ್ನು ಜಾರಿಗೊಳಿಸುವ ಕಾರ್ಯ ಅಧಿಕಾರಿಗಳದ್ದು. ಕಳೆದ ವರ್ಷದ ಬಜೆಟ್ನ 15 ಘೋಷಣೆಗಳ ಜಾರಿ ಇನ್ನೂ ಆಗಿಲ್ಲ. ಇದಕ್ಕೆ ಯಾರು ಹೊಣೆ? ಈ ವರ್ಷದ ಬಜೆಟ್ನಲ್ಲಿ 218 ಹೊಸ ಘೋಷಣೆಗಳು ಸೇರಿದಂತೆ ಒಟ್ಟಾರೆ 565 ಘೋಷಣೆಗಳನ್ನು ಮಾಡಿದ್ದೇವೆ. ಬಜೆಟ್ನ ಎಲ್ಲಾ ಘೋಷಣೆಗಳನ್ನು ಅದೇ ವರ್ಷ ಜಾರಿಗೊಳಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಬಜೆಟ್ ಘೋಷಣೆಗಳು ಯಾವುದೇ ಕಾರಣಕ್ಕೂ ಅನುಷ್ಠಾನಗೊಳ್ಳದೆ ಇರಬಾರದು. ಅನುಷ್ಠಾನದಲ್ಲಿನ ಪ್ರಾಯೋಗಿಕ ತೊಡಕುಗಳನ್ನು ನೇರವಾಗಿ ನನ್ನ ಅಥವಾ ಮುಖ್ಯ ಕಾರ್ಯದರ್ಶಿಯವರ ಗಮನಕ್ಕೆ ತರಬೇಕು.

2026-27 ನೇ ಬಜೆಟ್ನಲ್ಲಿನ ಘೋಷಣೆಗಳ ಪೈಕಿ ಕೇವಲ 5 ಘೋಷಣೆಗಳ ಬಗ್ಗೆ ಮಾತ್ರ ಸರ್ಕಾರಿ ಆದೇಶ ಮಾಡಲಾಗಿದೆ. ಮೇ  ತಿಂಗಳ ಒಳಗಾಗಿ ಎಲ್ಲಾ ಸರ್ಕಾರಿ ಆದೇಶಗಳನ್ನು ಜಾರಿಗೊಳಿಸಿ, ಅನುಷ್ಠಾನ ಕಾರ್ಯ ಆರಂಭಿಸಬೇಕು ಇಲ್ಲದಿದ್ದರೆ ಆಯಾ ಕಾರ್ಯದರ್ಶಿಗಳನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು.

ಅಧಿಕಾರಕ್ಕೆ ಬಂದ ಬಳಿಕ ರಾಜ್ಯಮಟ್ಟದಲ್ಲಿ ಎರಡು ಜನಸ್ಪಂದನ ಸಭೆಯಲ್ಲಿ ಸ್ವೀಕರಿಸಲಾಗಿದ್ದ 15334 ಸ್ವೀಕೃತಿಗಳ ಪೈಕಿ 15295 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಬಾಕಿಯಿರುವ 45 ಅರ್ಜಿಗಳನ್ನು ವಿಲೇವಾರಿ ಮಾಡಬೇಕು.

ಸಾರ್ವಜನಿಕ ಕುಂದುಕೊರತೆ (IPGRS)ಯಡಿ 3,27,052 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 3,17,576 ವಿಲೇವಾರಿ ಮಾಡಲಾಗಿದೆ. 1828 ಅರ್ಜಿಗಳ ವಿಲೇವಾರಿ ನಿಗದಿತ ಕಾಲಾವಧಿ ಮುಗಿದಿದೆ. ಸಾರ್ವಜನಿಕರ ಕುಂದುಕೊರತೆಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡದಿದ್ದರೆ ಜನರಿಗೆ ಸರ್ಕಾರದ ಮೇಲಿನ ನಂಬಿಕೆಯೇ ಹೊರಟು ಹೋಗುತ್ತದೆ. ಇದಕ್ಕೆ ಅವಕಾಶ ಮಾಡಬಾರದು. ಇದೇ ರೀತಿ ಸಕಾಲ ಅಡಿ ಸ್ವೀಕರಿಸಲಾಗುವ ಅರ್ಜಿಗಳನ್ನು ಸಹ ಸಕಾಲದಲ್ಲಿಯೇ ವಿಲೇವಾರಿ ಮಾಡಬೇಕು.

ಮಂಜೂರಾತಿ ಆಗಿರುವ ಹುದ್ದೆಗಳ ಭರ್ತಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು

ಭರ್ತಿ ಮಾಡಿಕೊಳ್ಳಲು ಮಂಜೂರಾತಿ ನೀಡಲಾಗಿರುವ ಹುದ್ದೆಗಳ ಭರ್ತಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಆರ್ಥಿಕ ಇಲಾಖೆಯಿಂದ 24,300 ಹುದ್ದೆಗಳ ಭರ್ತಿಗೆ ಮಂಜೂರಾತಿ ನೀಡಲಾಗಿದೆ. ಕಲ್ಯಾಣ ಕರ್ನಾಟಕಕ್ಕೆ ಸಂಬಂಧಿಸಿದ ವೃಂದದಲ್ಲಿ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗದೇ ಬಾಕಿಯಿರುವ 32132 ಹುದ್ದೆಗಳಿವೆ.  ಕೆಲವು ಇಲಾಖೆಗಳಲ್ಲಿ ವೃಂದ ಮತ್ತು ನೇಮಕಾತಿ ನಿಯಮಾವಳಿ ಪರಿಷ್ಕರಣೆ ಬಾಕಿಯಿದ್ದು, ಇದನ್ನು ಆದಷ್ಟು ಬೇಗನೆ ಮುಗಿಸಬೇಕು.

ಅನುದಾನ ನಿಗದಿತ ಅವಧಿಯ ಒಳಗಾಗಿ ಖರ್ಚು ಮಾಡಲು ಕ್ರಮ ಕೈಗೊಳ್ಳಬೇಕು

ವಿವಿಧ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಡಿಯಲ್ಲಿ 2025-26 ನೇ ಸಾಲಿನಲ್ಲಿ ರಾಜ್ಯ ಸರ್ಕಾರ ತನ್ನ ಪಾಲಿನ ರೂ. 22,768 ಕೋಟಿ ಬಿಡುಗಡೆ ಮಾಡಿದ್ದು, ಕೇಂದ್ರ ಸರ್ಕಾರ ರೂ. 16,729 ಕೋಟಿ ಬಿಡುಗಡೆ ಮಾಡಿದೆ. ಕೇಂದ್ರದಿಂದ ರೂ.11,367 ಕೋಟಿ ಅನುದಾನ ಬಿಡುಗಡೆಗೆ ಬಾಕಿಯಿದೆ. ಈ ಅವಧಿಯಲ್ಲಿ ಒಟ್ಟಾರೆ ರೂ.42222 ಕೋಟಿ ಲಭ್ಯ ಅನುದಾನವಿದ್ದು, ರೂ.38,236 ಕೋಟಿ ವೆಚ್ಚ ಮಾಡಲಾಗಿದೆ. ಅನುದಾನವನ್ನು ನಿಗದಿತ ಅವಧಿಯ ಒಳಗಾಗಿ ಖರ್ಚು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚಿಸಿದರು.

ಗುತ್ತಿಗೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ರೂ.2 ಕೋಟಿವರೆಗೆ ಮೀಸಲಾತಿ ಕಲ್ಪಿಸಲಾಗಿದೆ. ವಿವಿಧ ಕಾಮಗಾರಿಗಳನ್ನು ಒಟ್ಟು ಸೇರಿಸಿ ಪ್ಯಾಕೇಜ್ ಮಾಡುವ ಮೂಲಕ ಮೀಸಲಾತಿ ತಪ್ಪಿಸಲು ಅವಕಾಶ ನೀಡಬಾರದು. ಎಲ್ಲಾ ಕಾಮಗಾರಿಗಳನ್ನು ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಬೇಕು. ಕಾಮಗಾರಿ ವಿಳಂಬದಿಂದ ನಿರ್ಮಾಣ ವೆಚ್ಚ ಹೆಚ್ಚಳಕ್ಕೆ ಅವಕಾಶ ಮಾಡಬಾರದು.

ಕುಡಿಯುವ ನೀರಿನ ಪರಿಸ್ಥಿತಿ ಬಗ್ಗೆ ನಿರಂತರ ನಿಗಾ ವಹಿಸಬೇಕು.

ಈ ವರ್ಷ ಮಳೆ ಶೇ.5ರಷ್ಟು ಮಳೆ ಕಡಿಮೆಯಾಗುವ ಸಾಧ್ಯತೆಯಿದ್ದು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಮ್ಮ ವ್ಯಾಪ್ತಿಯ ಜಿಲ್ಲೆಯಲ್ಲಿನ ಕುಡಿಯುವ ನೀರಿನ ಪರಿಸ್ಥಿತಿ ಬಗ್ಗೆ ನಿರಂತರ ನಿಗಾ ವಹಿಸಬೇಕು. ಈ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಜೊತೆ ಸಭೆ ನಡೆಸಬೇಕು. ತಮ್ಮ ಉಸ್ತುವಾರಿಯಲ್ಲಿನ ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸುವುದು ಆಯಾ ಕಾರ್ಯದರ್ಶಿಗಳ ಜವಾಬ್ದಾರಿಯಾಗಿದೆ. ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ತೊಂದರೆಯಾಗಬಾರದು.

ಅಧಿಕಾರಿಗಳು ರಾಜಕಾರಣಿಗಳ ಓಲೈಕೆ ಮಾಡಲು ಹೋಗಬಾರದು, ಇದು ಸರ್ವಾಧಿಕಾರಕ್ಕೆ ಹಾದಿ ಮಾಡುತ್ತದೆʼ ಎಂದು ಅಂಬೇಡ್ಕರ್ ಅವರು ಎಚ್ಚರಿಕೆ ನೀಡಿದ್ದರು.  ಅದರಂತೆ ನೀವು ಕಾನೂನಿನ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಿ. ಸಚಿವರಿಗೆ ಕಾನೂನಿನ ವ್ಯಾಪ್ತಿಯೊಳಗೆ ಸಲಹೆಗಳನ್ನು ನೀಡಿ. ಸರ್ಕಾರಕ್ಕೆ ಒಳ್ಳೆಯ ಹೆಸರು ತರುವುದು ಕಾರ್ಯದರ್ಶಿಗಳ ಕಾರ್ಯ ಚಟುವಟಿಕೆಗಳ ಮೇಲೆ ಅವಲಂಬಿತವಾಗಿದೆ. ಆಡಳಿತಕ್ಕೆ ಇನ್ನಷ್ಟು ಚುರುಕು ಮೂಡಿಸಬೇಕು ಎಂದು ಸೂಚನೆ ನೀಡಿದರು.

Key words: drinking water, CM Siddaramaiah, instructs, Meeting, Officer