ಡಿಆರ್‌ ಡಿಒದ ಚೊಚ್ಚಲ ಸ್ವಯಂಚಾಲಿತ ವಿಮಾನ ಹಾರಾಟ ಯಶಸ್ವಿ.

ಚಿತ್ರದುರ್ಗ, ಜುಲೈ 2, 2022 (www.justkannada.in): ಡಿಫೆನ್ಸ್ ರೀಸರ್ಚ್ ಅಂಡ್ ಡೆವೆಲಪ್‌ ಮೆಂಟ್ ಆರ್ಗನೈಜೇಷನ್ (ಡಿಆರ್‌ಡಿಒ), ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿರುವಂತಹ ಮಾನವರಹಿತ ವಿಮಾನದ ಪ್ರಾಯೋಗಿಕ ಹಾರಾಟವನ್ನು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ನಡೆಸಿತು.

ಸಂಪೂರ್ಣ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸಿದ ವಿಮಾನವು ಅತ್ಯಂತ ನಿಖರವಾದ ಹಾರಾಟವನ್ನು ನಡೆಸಿ, ಸರಾಗವಾಗಿ ಭೂಸ್ಪರ್ಶ ಮಾಡಿತು ಎಂದು ಡಿಆರ್‌ ಡಿಒ ಮೂಲಗಳು ತಿಳಿಸಿವೆ.

ಈ ವಿಮಾನ ಹಾರಾಟ ಭವಿಷ್ಯದ ಮಾನವರಹಿತ ವಿಮಾನಗಳ ಅಭಿವೃದ್ಧಿಯೆಡೆಗೆ ನಿರ್ಣಾಯಕ ತಂತ್ರಜ್ಞಾನಗಳಾಗಿದ್ದು ಪ್ರಮುಖ ಮೈಲಿಗಲ್ಲನ್ನು ಸ್ಥಾಪಿಸಿದೆ ಹಾಗೂ ಇಂತಹ ಕಾರ್ಯತಾಂತ್ರಿಕ ರಕ್ಷಣಾ ತಂತ್ರಜ್ಞಾನಗಳಲ್ಲಿ ಸ್ವಾವಲಂಬನೆ ಸಾಧನೆಯಡೆಗೆ ಮಹತ್ತರವಾದ ಹೆಜ್ಜೆಯಾಗಿದೆ.

ಬೆಂಗಳೂರು-ಮೂಲದ ವಿಮಾನಗಳ ಅಭಿವೃದ್ಧಿ ಸಂಸ್ಥೆ ಡಿಆರ್‌ ಡಿಒ ಈ ವಿಮಾನವನ್ನು ವಿನ್ಯಾಸಪಡಿಸಿ ಅಭಿವೃದ್ಧಿಪಡಿಸಿದೆ. ಈ ವಿಮಾನ ಚಿಕ್ಕ ಟರ್ಬೊಫ್ಯಾನ್ ಇಂಜಿನ್ ಅನ್ನು ಒಳಗೊಂಡಿದೆ. ಏರ್‌ ಫ್ರೇಂ, ಅಂಡರ್ ಕ್ಯಾರಿಯೇಜ್ ಮತ್ತು ಇಡೀ ಹಾರಾಟ ನಿಯಂತ್ರಣ ಹಾಗೂ ವಿಮಾನದಲ್ಲಿ ಬಳಸಿರುವ ಏವಿಯಾನಿಕ್ಸ್ ವ್ಯವಸ್ಥೆಗಳನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಡಿಆರ್‌ ಡಿಒದ ಈ ಸಾಧನೆಯನ್ನು ಶ್ಲಾಘಿಸಿದ್ದು, ತಮ್ಮ ಒಂದು ಟ್ವೀಟ್‌ ನಲ್ಲಿ ಸ್ವಯಂಚಾಲಿತ ವಿಮಾನಗಳ ನಿರ್ಮಾಣ ಕ್ಷೇತ್ರದಲ್ಲಿ ಇದೊಂದು ಪ್ರಮುಖ ಸಾಧನೆಯಾಗಿದೆ, ಮತ್ತು ನಿರ್ಣಾಯಕ ಮಿಲಿಟರಿ ವ್ಯವಸ್ಥೆಗಳಿಗೆ ಸಂಬಂಧಪಟ್ಟಂತೆ ‘ಆತ್ಮನಿರ್ಭರ ಭಾರತ’ಕ್ಕೆ ಸೂಕ್ತ ದಾರಿಯನ್ನು ಹಾಕಿಕೊಟ್ಟಂತಾಗಿದೆ ಎಂದಿದ್ದಾರೆ. ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಿಲು ಹಾಗೂ ಗಣಿಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಸಹ ತಮ್ಮ ಫೇಸ್‌ ಬುಕ್ ಪುಟದಲ್ಲಿ ಈ ಯಶಸ್ವಿ ವಿಮಾನ ಹಾರಾಟದ ಹಿಂದಿರುವ ಸಿಬ್ಬಂದಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: DRDO- first- automated -flight – success.