ಮೈಸೂರು,ಏಪ್ರಿಲ್,11,2026 (www.justkannada.in): ಸಿಎಂ ಸಿದ್ದರಾಮಯ್ಯ ಅವರ ಪುತ್ರ ಹಾಗೂ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಕುರಿತು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆ ಖಂಡನೀಯ ಎಂದು ಕೆಪಿಸಿಸಿ ವಕ್ತಾರ ಎಚ್ಎ ವೆಂಕಟೇಶ್ ವಾಗ್ದಾಳಿ ನಡೆಸಿದ್ದಾರೆ.
ಪ್ರಕಟಣೆ ಮೂಲಕ ಹೆಚ್ ಡಿಕೆ ವಿರುದ್ದ ಹರಿಹಾಯ್ದಿರುವ ಹೆಚ್ ಎ ವೆಂಕಟೇಶ್, ಹಲವು ಬಾರಿ ಚುನಾವಣೆಗೆ ನಿಂತು ಜನರಿಂದ ಹೀನಾಯವಾಗಿ ತಿರಸ್ಕರಿಸಲ್ಪಟ್ಟಿರುವ ನಿಖಿಲ್ ಕುಮಾರಸ್ವಾಮಿ ಅವರನ್ನು ಓರ್ವ ತಂದೆಯಾಗಿ ಎಚ್ ಡಿ ಕೆ ಸಮರ್ಥಿಸಿಕೊಳ್ಳಬಹುದು. ಆದರೆ ತನ್ನ ಪುತ್ರನಲ್ಲಿ ಇಲ್ಲದ ಜನಾನುರಾಗಿ ಮನೋಭಾವ, ಉತ್ತಮ ಆಡಳಿತ ಕುಶಲತೆ; ಜನರೊಟ್ಟಿಗೆ ಬೆರೆತು ಅವರ ಕಷ್ಟ ಸುಖಗಳಿಗೆ ಸ್ಪಂದಿಸಿ ಸರ್ಕಾರದ ಯೋಜನೆಗಳ ಮೂಲಕ ನೆರವಿಗೆ ನಿಲ್ಲುವ ಉದಾತ್ತ ಮನೋಭಾವ; ಯತೀಂದ್ರ ಅವರಲ್ಲಿರುವುದನ್ನು ಕಂಡು ಹೆಚ್ ಡಿ ಕೆ ಅಸೂಯೆ ಪಡುವ ಅಗತ್ಯವಿಲ್ಲ. ಇದರ ಬದಲು ಮತದಾರರ ಮನಗೆಲ್ಲುವ ಒಳಗುಟ್ಟುಗಳನ್ನು ಅವರು ತಮ್ಮ ಪುತ್ರ ನಿಖಿಲ್ ಗೆ ಹೇಳಿಕೊಡಬಹುದಾಗಿತ್ತು ಎಂದು ಕುಟುಕಿದ್ದಾರೆ.
ಇಷ್ಟಕ್ಕೂ ತಾನೆಂದು ಬಹುಮತದಿಂದ ಆಯ್ಕೆಯಾದ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿಲ್ಲ ನಾನೊಬ್ಬ ಪರಿಸ್ಥಿತಿಯ ಶಿಶು ಎಂದು ಹಲವು ಬಾರಿ ಎಚ್ಡಿಕೆ ತಮ್ಮನ್ನು ಬಿಂಬಿಸಿ ಕೊಂಡಿದ್ದಾರೆ. ಇದರ ಒಳಾರ್ಥ- ತಾನೊಬ್ಬ ಅವಕಾಶವಾದಿ; ಗಾಳಿ ಬಂದಾಗ ತೂರಿಕೊಳ್ಳುವ ಮನಸ್ಥಿತಿಯವನು ಎನ್ನುವುದೇ ಆಗಿದೆ. ಇದಕ್ಕೆ ತಕ್ಕಂತೆ ಅವರು ತಮ್ಮ ರಾಜಕೀಯ ಜೀವನದಲ್ಲಿ ನಡೆದುಕೊಂಡಿದ್ದಾರೆ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ.
ರಾಜಕಾರಣದಲ್ಲಿ ತತ್ವ ಸಿದ್ಧಾಂತಗಳಿಗೆ ಬೆಂಕಿ ಇಟ್ಟು ವೈಯಕ್ತಿಕ ಆಸೆ ಆಕಾಂಕ್ಷೆಗಳಿಗೆ ಬೆಲೆ ಕೊಟ್ಟು ಎಚ್ ಡಿ ಕುಮಾರಸ್ವಾಮಿ ನಡೆದುಕೊಂಡಿದ್ದಾರೆ ಎನ್ನುವುದು ರಾಜಕೀಯ ಇತಿಹಾಸದಲ್ಲಿ ದಾಖಲಾಗಿದೆ. ತನ್ನ ವೈಯಕ್ತಿಕ ದೌರ್ಬಲ್ಯಗಳ ಕಾರಣಕ್ಕಾಗಿ ನೈತಿಕತೆ ಬದಿಗಿಟ್ಟು ಇವರು ನಡೆದುಕೊಂಡ ರೀತಿಯನ್ನು ಸಮಾಜ ಗಮನಿಸಿದೆ. ಅಧಿಕಾರದಲ್ಲಿದ್ದಾಗ ವಿಧಾನಸೌಧದ ಕೊಠಡಿ ಬಿಟ್ಟು ತಾರಾ ಹೋಟೆಲ್ ನಲ್ಲಿ ಕಾಲ ಕಳೆದಿದ್ದನ್ನು ರಾಜ್ಯದ ಜನ ಮರೆತಿಲ್ಲ ಎಂದು ಹೆಚ್ ಎ ವೆಂಕಟೇಶ್ ಟೀಕಿಸಿದ್ದಾರೆ.
ತನ್ನ ವೈಯಕ್ತಿಕ ದೌರ್ಬಲ್ಯಗಳ ಕಾರಣಕ್ಕೆ ಜನರಿಂದ ತಿರಸ್ಕರಿಸಲ್ಪಟ್ಟಿರುವ ಎಚ್ ಡಿ ಕೆ ಅಪವಿತ್ರ ರಾಜಕೀಯ ಮೈತ್ರಿಯಿಂದಾಗಿ ಮತ್ತೆ ಅಧಿಕಾರದ ಅವಕಾಶ ಪಡೆದು ಮುಂದಕ್ಕೆ ಬರುತ್ತಾರೆ. ಇಂತಹ ಸನ್ನಿವೇಶದ ಅನಿವಾರ್ಯತೆಯನ್ನೇ ತನ್ನ ಸಾಧನೆ ಎಂದು ಬಿಂಬಿಸಿ ಇಲ್ಲದ್ದನ್ನು ತೋರ್ಪಡಿಸಿಕೊಳ್ಳುವ ಹಾಗೂ ಉತ್ತಮರ ಮೇಲೆ ಕೆಸರು ಎರಚುವ ಕ್ಷುಲ್ಲಕ ಕೆಲಸ ಮಾಡುತ್ತಾರೆ.
ಈಗಂತೂ ಸಿಎಂ ಪುತ್ರ ಡಾ.ಯತೀಂದ್ರ ಅವರೊಟ್ಟಿಗೆ ತಮ್ಮ ಪುತ್ರ ನಿಖಿಲ್ ನನ್ನು ಹೋಲಿಸಿಕೊಂಡು ಆಡಿಕೊಳ್ಳುವವರ ಬಾಯಿಗೆ ಎಚ್ ಡಿ ಕೆ ಎಲೆಅಡಿಕೆಯಂತಾಗಿದ್ದಾರೆ. ಇಷ್ಟಕ್ಕೂ ಭೂ ಕಬಳಿಕೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿಂದ ಜಾಮೀನು ಪಡೆದು ಅಧಿಕಾರದಲ್ಲಿ ಮುಂದುವರೆದಿರುವ ಕುಮಾರಸ್ವಾಮಿಯವರಿಗೆ ಮತ್ತೊಬ್ಬರಿಗೆ ತಿಳಿ ಹೇಳುವ ಮತ್ತು ಸಲಹೆ ನೀಡುವ ಯಾವುದೇ ನೈತಿಕ ಅಧಿಕಾರವಿಲ್ಲ. ನನ್ನ ಮಗ ಸಂಪನ್ನ, ಸಮಾಜ ಸೇವಕ, ಎಲ್ಲರ ನೋವಿನ ಬಗ್ಗೆ ಅವನಿಗೆ ಅರಿವಿದೆ ಎಂದು ಎಚ್ಡಿಕೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಗಾಜಿನ ಮನೆಯಲ್ಲಿ ಕುಳಿತವರು ಇನ್ನೊಬ್ಬರ ಮೇಲೆ ಕಲ್ಲೆಸುವುದಕ್ಕೂ ಮೊದಲು ಪರಿಣಾಮಗಳ ಬಗ್ಗೆ ಮುಂದಾಲೋಚಿಸುವುದು ಒಳಿತು ಎಂದು ಕಿಡಿಕಾರಿದ್ದಾರೆ.
Key words: HA Venkatesh, HD Kumaraswamy, Dr. Yathindra Siddaramaiah,







