ಮೈಸೂರು, ಸೆಪ್ಟಂಬರ್,24,2026 (): ಗ್ರಾಮೀಣ ಭಾಗದ ಮತ್ತು ವಿವಿಧ ತಾಲೂಕುಗಳಿಂದ ಆಗಮಿಸಿರುವ ಕ್ರೀಡಾಪಟುಗಳಿಗೆ, ವಿಶೇಷವಾಗಿ ಹೆಣ್ಣುಮಕ್ಕಳಿಗೆ ದಸರಾ ಕ್ರೀಡಾಕೂಟವು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ದೊಡ್ಡ ವೇದಿಕೆಯಾಗಿದೆ ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷರಾದ ಡಾ. ಪುಷ್ಪ ಅಮರನಾಥ್ ಅವರು ತಿಳಿಸಿದರು.
ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈಸೂರು ಹಾಗೂ ಕರ್ನಾಟಕ ಕ್ರೀಡಾ ಪ್ರಾಧಿಕಾರ ಹಾಗೂ 2026-27 ನೇ ಮೈಸೂರು ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ ವನ್ನು ಮೈಸೂರು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಡಾ.ಪುಷ್ಪಾ ಅಮರನಾಥ್ ಅವರು ಮಾತನಾಡಿದರು.
ಜಿಲ್ಲೆಯ ವಿವಿಧ ತಾಲೂಕುಗಳಿಂದ ಹಾಗೂ ಗ್ರಾಮೀಣ ಪ್ರದೇಶಗಳಿಂದ ಆಗಮಿಸಿರುವ ಕ್ರೀಡಾಪಟುಗಳು, ವಿದ್ಯಾರ್ಥಿಗಳು ಮತ್ತು ಕ್ರೀಡಾಸಕ್ತರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಪ್ರತಿ ತಾಲೂಕಿನಿಂದಲೂ 150ಕ್ಕೂ ಹೆಚ್ಚು ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವುದು ಪ್ರಶಂಸನೀಯ. ಕ್ರೀಡೆಯಲ್ಲಿ ಕೇವಲ ಗೆಲುವು-ಸೋಲು ಮುಖ್ಯವಲ್ಲ ಕ್ರೀಡಾಪಟುಗಳಿಗೆ ದೈಹಿಕ ಸಮತೋಲನದ ಜೊತೆಗೆ ಮಾನಸಿಕ ಸದೃಢತೆ ಅಗತ್ಯ ಎಂದರು .
ಬಿಸಿಲಿನ ವಾತಾವರಣವಿರುವುದರಿಂದ ಕ್ರೀಡಾಪಟುಗಳು ನಿರ್ಜಲೀಕರಣಕ್ಕೆ ಒಳಗಾಗದಂತೆ ಅಧಿಕಾರಿಗಳು ಅವರ ಆರೋಗ್ಯ ಮತ್ತು ಆರೈಕೆಗೆ ಅಗತ್ಯ ಮುನ್ನೆಚ್ಚರಿಕೆ ವಹಿಸಿದ್ದಾರೆ ಎಂದು ಅವರು ತಿಳಿಸಿದರು .
ಯುವಜನರ ಪ್ರತಿಭೆಯನ್ನು ಉತ್ತೇಜಿಸಲು ಹಾಗೂ ಕ್ರೀಡೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸಲು ಸರ್ಕಾರವು ಪಂಚಾಯಿತಿ ಮಟ್ಟದಲ್ಲಿ ಯುವಕರ ತಂಡಗಳನ್ನು ರಚಿಸುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 440ಕ್ಕೂ ಹೆಚ್ಚು ‘ಭಾರತ್ ಜೋಡೋ ಯುವಕರ ಸಂಘ’ಗಳನ್ನು ರಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಗ್ಯಾರಂಟಿ ಪಂಚಾಯಿತಿ ಸಮಿತಿಗಳ ಮೂಲಕ ಯುವಕರು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.
ಎಲ್ಲರಿಗೂ ಗೆಲ್ಲಲು ಅಥವಾ ಸೋಲಲು ಸಾಧ್ಯವಿಲ್ಲ. ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಿ. ಸೋಲನ್ನು ಗೆಲುವಿನ ಮೆಟ್ಟಿಲಾಗಿ ಮಾಡಿಕೊಂಡು ಮುಂದೆ ಸಾಗಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಭಾಸ್ಕರ್ ನಾಯಕ್, ಮೂಡಾ ಕಾರ್ಯದರ್ಶಿ ಜಾನ್ಸ್.ಕೆ, ಮುಖಂಡರಾದ ಗಣೇಶ್ ಮೂರ್ತಿ ಹಾಗೂ ಇಲಾಖೆಯ ಅಧಿಕಾರಿಗಳು ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು.






