ಮೈಸೂರು,ಜುಲೈ,21,2025 (www.justkannada.in): ಸಿಎಂ ಸಿದ್ದರಾಮಯ್ಯ ವಿರುದ್ದ ED ಸಂಸ್ಥೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದ್ದು ಬಿಜೆಪಿಗರು ರಾಜ್ಯದ ಜನರ ಕ್ಷಮೆಯಾಚಿಸಲಿ ಎಂದು ಸಚಿವ ಡಾ.ಹೆಚ್ ಸಿ ಮಹದೇವಪ್ಪ ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವ ಹೆಚ್ ಸಿ ಮಹದೇವಪ್ಪ, ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರ ವಿಷಯದಲ್ಲಿ ರಾಜಕೀಯ ಪ್ರೇರಿತವಾಗಿ ನಡೆದುಕೊಳ್ಳುತ್ತಿದ್ದ ED ತನಿಖಾ ಸಂಸ್ಥೆಗೆ ಸುಪ್ರೀಂ ಕೋರ್ಟ್ ಛಾಟಿ ಬೀಸಿದ್ದು, ಚುನಾವಣೆಗಳು ಚುನಾವಣಾ ಕಣದಲ್ಲಿ ನಡೆಯಲಿ, ನೀವು ರಾಜಕೀಯ ದಾಳವಾಗಿ ಬಳಕೆ ಆಗಬೇಡಿ. ನಾವು ಮಾತನಾಡಲು ಆರಂಭಿಸಿದರೆ ED ಸಂಸ್ಥೆಯ ವಿರುದ್ಧ ಬಹಳ ಕಟುವಾಗಿ ಮಾತನಾಡಬೇಕಾಗುತ್ತದೆ. ಮಹಾರಾಷ್ಟ್ರದಲ್ಲಿ ಇಂತಹ ಘಟನೆಗಳನ್ನು ನಾವು ಕಂಡಿದ್ದೇವೆ. ED ಸಂಸ್ಥೆಯು ದೇಶಾದ್ಯಂತ ಈ ರೀತಿಯ ಕೆಟ್ಟ ಪ್ರವೃತ್ತಿ ಹರಡುವುದನ್ನು ನಾವು ಸಹಿಸುವುದಿಲ್ಲ ಎಂದು ED ತನಿಖಾ ಸಂಸ್ಥೆಗೆ ಸುಪ್ರೀಂ ಕೋರ್ಟ್ ಎಚ್ಚರಿಸಿದೆ.
ಈ ಮೂಲಕ ಬಿಜೆಪಿಗರು ವಿಪಕ್ಷಗಳನ್ನು ತೇಜೋವಧೆ ಮಾಡಲು ED ಯಂತಹ ತನಿಖಾ ಸಂಸ್ಥೆಗಳನ್ನು ದಾಳವಾಗಿ ಬಳಸಿಕೊಳ್ಳುತ್ತಿರುವುದು ಸ್ಪಷ್ಟವಾಗಿದ್ದು ಇಂತಹ ಹೀನ ರಾಜಕೀಯ ಕೃತ್ಯ ಮಾಡಿದ್ದಕ್ಕಾಗಿ ಅವರು ರಾಜ್ಯದ ಜನರ ಮುಂದೆ ಬಹಿರಂಗವಾಗಿ ಕ್ಷಮೆಯಾಚಿಸಲಿ ಎಂದು ಸಚಿವ ಹೆಚ್ ಸಿ ಮಹದೇವಪ್ಪ ಒತ್ತಾಯಿಸಿದ್ದಾರೆ.
ಇನ್ನು ರಾಜಕೀಯದ ಹಿಡಿತಕ್ಕೆ ಒಳಗಾಗದೇ ಸ್ವತಂತ್ರ ತನಿಖಾ ಸಂಸ್ಥೆಗಳು ತಮ್ಮ ಜವಾಬ್ದಾರಿಯನ್ನು ಸೂಕ್ತವಾಗಿ ನಿರ್ವಹಿಸಿ ಸಂಸ್ಥೆಗಳ ಘನತೆಯನ್ನು ಮತ್ತು ಅದರ ಮಹತ್ವವನ್ನು ಉಳಿಸಿಕೊಳ್ಳುವ ಕೆಲಸ ಮಾಡಲಿ ಎಂದು ಈ ವೇಳೆ ಆಗ್ರಹಿಸುತ್ತೇನೆ. ದೇಶದ ಸರ್ವೋಚ್ಛ ಅಂಗವಾದ ನ್ಯಾಯಾಂಗವೇ ED ಸಂಸ್ಥೆಯ ಅಧಿಕಾರ ದುರ್ಬಳಕೆ ವಿಷಯದಲ್ಲಿ ದನಿ ಎತ್ತಿರುವುದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಉತ್ತಮ ಬೆಳವಣಿಗೆ ಆಗಿದ್ದು ಇದನ್ನು ನಾನು ಮನದುಂಬಿ ಸ್ವಾಗತಿಸುತ್ತೇನೆ ಎಂದು ಸಚಿವ ಮಹದೇವಪ್ಪ ತಿಳಿಸಿದ್ದಾರೆ.
Key words: ED, BJP, apologies, Minister, Dr HC Mahadevappa