ಮೈಸೂರು,ಆಗಸ್ಟ್,6,2025 (www.justkannada.in): ಗೃಹ ಸಚಿವ ಡಾ. ಜಿ. ಪರಮೇಶ್ವರ್ ಧೀಮಂತ ಆಡಳಿತಗಾರ, ಎಲ್ಲರೊಳಿತಿನ ರಾಜಕಾರಣಕ್ಕೆ ಹೆಸರಾದವರು ಎಂದು ಕೆಪಿಸಿಸಿ ವಕ್ತಾರ ಹೆಚ್.ಎ ವೆಂಕಟೇಶ್ ನುಡಿದರು.
ಗೃಹ ಸಚಿವ ಡಾ. ಜಿ ಪರಮೇಶ್ವರ ಅವರ ಹುಟ್ಟುಹಬ್ಬವನ್ನು ಅರಮನೆ ಆವರಣದಲ್ಲಿರುವ ಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಸಿಹಿ ಹಂಚುವುದರ ಮೂಲಕ ಮೈಸೂರು ಜಿಲ್ಲೆ ಡಾ. ಜಿ. ಪರಮೇಶ್ವರ್ ಅಭಿಮಾನಿಗಳ ಸಂಘದಿಂದ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಕೆಪಿಸಿಸಿ ವಕ್ತಾರ ಎಚ್. ಎ. ವೆಂಕಟೇಶ್ , ಕೆಲವು ವಿಶೇಷ ವ್ಯಕ್ತಿತ್ವಗಳು ತಮ್ಮ ದೂರದೃಷ್ಟಿ ನಾಯಕತ್ವ ನಡವಳಿಕೆ, ಸೌಜನ್ಯ, ಸಾಮರಸ್ಯ ಮತ್ತು ಸಾಮರ್ಥ್ಯದ ಕಾರಣಕ್ಕೆ ಗಮನಸೆಳೆಯುತ್ತವೆ. ಡಾ. ಪರಮೇಶ್ವರ್ ಸಹ ಇಂತಹ ಹಲವಾರು ವಿಶೇಷಣಗಳಿಂದ ಭೂಷಿತರಾದವರು. ರಾಜ್ಯ ರಾಜಕಾರಣದಲ್ಲಿ ಎದ್ದು ಕಾಣುವ ವ್ಯಕ್ತಿತ್ವವಾಗಿರುವ ಪರಮೇಶ್ವರ ಅವರು ತಮಗೆ ವಹಿಸಿದ ಎಲ್ಲಾ ಖಾತೆಗಳ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದವರು.
ಉನ್ನತ ಶಿಕ್ಷಣ ಸಚಿವರಾಗಿ ಇವರು ಕೈಗೊಂಡ ಕ್ರಾಂತಿಕಾರಿ ನಿಲುವುಗಳ ಕಾರಣಕ್ಕೆ ರಾಜ್ಯ ಶೈಕ್ಷಣಿಕವಾಗಿ ಬಹಳಷ್ಟು ಸಾಧನೆ ಮಾಡಲು ಅವಕಾಶ ಸಿಕ್ಕಿತ್ತು. ಬೌದ್ಧಿಕ ಸಾಮರ್ಥ್ಯದ ಬಳಕೆಗೆ ಡಾ. ಪರಮೇಶ್ವರ್ ವಿಶಾಲ ಅವಕಾಶ ಕಲ್ಪಿಸಿ ಹೊಸ ಮನ್ವಂತರದ ಸೃಷ್ಟಿಗೆ ಕಾರಣರಾದರು. ಇದರ ಪರಿಣಾಮವಾಗಿಯೇ ತಾಂತ್ರಿಕ, ಆರೋಗ್ಯ ಮತ್ತು ವ್ಯವಹಾರ ಅಧ್ಯಯನ ಕ್ಷೇತ್ರದಲ್ಲಿ ದೇಶದ ಬೇರೆಲ್ಲಾ ರಾಜ್ಯಗಳಿಗಿಂತ ನಾವು ಮುಂದಿದ್ದೇವೆ. ಮೂಲತಹ ಕೃಷಿ ತಜ್ಞರಾದರೂ ಆಡಳಿತದಲ್ಲಿ ಇವರು ಎತ್ತಿದ ಕೈ. ಗೃಹ ಸಚಿವರಾಗಿ ಸೂಕ್ಷ್ಮ ಪರಿಸ್ಥಿತಿಗಳನ್ನು ಸಮತೋಲಿತ ಮಾದರಿಯಲ್ಲಿ ನಿರ್ವಹಿಸಿ ಹೆಸರು ಪಡೆದಿದ್ದಾರೆ ಎಂದು ಹೆಚ್.ಎ ವೆಂಕಟೇಶ್ ಬಣ್ಣಿಸಿದರು.
ಧೀಮಂತ ಆಡಳಿತಗಾರರಾಗಿರುವ ಡಾ. ಪರಮೇಶ್ವರ್ ಸಂಪುಟದ ಹಲವು ಸಚಿವ ಸ್ಥಾನಗಳು, ಕೆಪಿಸಿಸಿ ಅಧ್ಯಕ್ಷರಾಗಿ, ಉಪಮುಖ್ಯಮಂತ್ರಿಯಂತಹ ಮಹತ್ವದ ಹುದ್ದೆಯನ್ನು ನಿಭಾಯಿಸಿದ್ದಾರೆ. ಮುಂದೆ ಅತ್ಯುನ್ನತ ರಾಜಕೀಯ ಸ್ಥಾನಮಾನ ಮತ್ತು ಆಡಳಿತದ ನಾಯಕತ್ವ ಇವರಿಗೆ ದಕ್ಕಲಿ ಎಂಬುದು ನಮ್ಮ ಆಶಯ.
ಸಮಾಜದ ತಳ ಸಮುದಾಯದಿಂದ ಬಂದು, ಹಲವಾರು ಅಡೆತಡೆಗಳನ್ನು ದಾಟಿ ಬಹು ಎತ್ತರಕ್ಕೆ ಬೆಳೆದಿರುವ ಡಾ. ಪರಮೇಶ್ವರ್ ಎಲ್ಲರೊಳಿತಿನ ರಾಜಕಾರಣಕ್ಕೆ ಹೆಸರಾದವರು. ಇವರ ಭವಿಷ್ಯದ ಬೆಳವಣಿಗೆ ಉತ್ತರೋತ್ತರವಾಗಿರಲಿ ಎಂದು ನುಡಿದರು.
ಮೈಸೂರು ಜಿಲ್ಲಾ ಡಾ ಜಿ ಪರಮೇಶ್ವರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಿ. ಮಂಜುನಾಥ ಮಾತನಾಡಿ ಪರಮೇಶ್ವರ ಅವರಿಗೆ ರಾಜಕೀಯವಾಗಿ ಇನ್ನು ಹೆಚ್ಚು ಉತ್ತಮ ಸ್ಥಾನ ಸಿಗಲಿ ಎಂದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಚಂದನ್ ಗೌಡ, ವೈ. ಎಸ್. ನಾಗರಾಜ್, ಡಾ.ಎಸ್ ಮರಿದೇವಯ್ಯ, ಮಣಿಕಂಠ, ಮಹೇಂದ್ರ ಕುಮಾರ್, ಕೋಟಿ ಮಂಜು, ಬಿ .ಎಲ್. ಪುಟ್ಟಸ್ವಾಮಿ( ವಿಕ್ರಾಂತ್), ಜೆ .ಪುನೀತ್ ಮತ್ತಿತರ ಮುಖಂಡರು ಹಾಜರಿದ್ದರು.
Key words: Dr.G. Parameshwar, Birthday, Mysore, H.A. Venkatesh