ಮೈಸೂರು, ಜುಲೈ,18,2025 (www.justkannada.in): ಶೋಷಿತ ಸಮುದಾಯಗಳಿಗೆ ಧ್ವನಿಯಾಗಿ ಕೆಲಸ ನಿರ್ವಹಿಸಿದವರು ಮಹಾನ್ ಚೇತನ ಡಾ. ಬಾಬು ಜಗಜೀವನ್ ರಾಮ್. ಇವರ ಚಿಂತನೆಗಳು ನಮ್ಮ ಸಮಾಜದ ಯುವಜನತೆಗೆ ಪ್ರೇರಣೆಯಾಗಿವೆ ಎಂದು ಆಹಾರ ಸಚಿವ ಕೆಹೆಚ್. ಮುನಿಯಪ್ಪ ಬಣ್ಣಿಸಿದರು.
ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಡಾ.ಬಾಬು ಜಗಜೀವನ ರಾಮ್ ರವರ ಅಧ್ಯಯನ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ವತಿಯಿಂದ ‘ಡಾ.ಬಾಬು ಜಗಜೀವನ್ ರಾಮ್ ರವರ ಕೊಡುಗೆಗಳು’ ಎಂಬ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಸಚಿವ ಕೆಹೆಚ್. ಮುನಿಯಪ್ಪ ಉದ್ಘಾಟಿಸಿ ಮಾತನಾಡಿದರು.
ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರ ವಿಚಾರ ಸಂಕಿರಣ ಆಯೋಜಿಸಿರುವುದು ಅತ್ಯಂತ ಒಳ್ಳೆಯ ಕೆಲಸವಾಗಿದೆ. ಡಾ. ಬಾಬು ಜೀವನರಾಮ್ ಅವರು ಈ ರಾಷ್ಟ್ರ ಕಂಡ ಶ್ರೇಷ್ಠ ರಾಜಕೀಯ ಮುತ್ಸದಿ ದಲಿತರ, ತುಳಿತಕ್ಕೊಳದವರ, ಶ್ರಮಿಕರ ಹಾಗೂ ಎಲ್ಲಾ ವರ್ಗದ ಅಭಿವೃದ್ಧಿಯ ಪೂರಕವಾಗಿ ಅವರ ಜೀವನವನ್ನು ಮುಡಾಪಾಗಿಟ್ಟ ಮಹಾನ್ ಚೇತನ. ಅವರ ಚಿಂತನೆಗಳು ನಮ್ಮ ಸಮಾಜದ ಯುವಜನತೆಗೆ ಪ್ರೇರಣೆಯಾಗಿವೆ. ಕರ್ನಾಟಕ ರಾಜ್ಯ ಸರ್ಕಾರ ರಾಜ್ಯದ 9 ವಿಶ್ವವಿದ್ಯಾಲಯಗಳಲ್ಲಿ (ಮೈಸೂರು, ಮೈಸೂರು ಮುಕ್ತ ವಿಶ್ವವಿದ್ಯಾಲಯ, ಬೆಂಗಳೂರು, ಧಾರವಾಡ, ಶಿವಮೊಗ್ಗ, ತುಮಕೂರು, ಬಳ್ಳಾರಿ, ದಾವಣಗೆರೆ, ಕಲಬುರಗಿ) ಡಾ. ಬಾಬು ಜಗಜೀವನರಾಮ್ ಅಧ್ಯಯನ ಕೇಂದ್ರಗಳನ್ನು ತೆರೆದು, ಈ ಕೇಂದ್ರಗಳ ಮೂಲಕ ತಳ ಸಮುದಾಯಗಳಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಜಾಗೃತಿ ಮೂಡಿಸಲು ವಿಚಾರ ಸಂಕಿರಣ, ಸಮ್ಮೇಳನ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ಬಾಬು ಜಗಜೀವನರಾಮ್ ರವರ ಕೊಡುಗೆಗಳನ್ನು ನಾವು ತಿಳಿದುಕೊಳ್ಳಬೇಕಾಗಿದೆ. ವಿಶ್ವ ವಿದ್ಯಾಲಯಗಳಲ್ಲಿ ವ್ಯಾಸಂಗಕ್ಕೆ ಬರುವ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ತಿಳಿಸುವಂತಹ ಕೆಲಸವನ್ನು ಮುಂದುವರೆಸಬೇಕಾಗಿದೆ. ಬಾಬೂಜಿ ಸಾಮಾಜಿಕ ಸಮಾನತೆ ಮತ್ತು ಶೋಷಿತ ವರ್ಗಗಳಿಗೆ ಸಮಾನ ಹಕ್ಕುಗಳ ಪ್ರತಿಪಾದಕರಾಗಿದ್ದರು. ಅವರು ವಿದ್ಯಾರ್ಥಿಯಾಗಿದ್ದಾಗಲೇ ತಮ್ಮನ್ನು ಹಲವಾರು ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಅವರು ರಾಜಕೀಯ ರಂಗ ಪ್ರವೇಶಿಸಿದ ಮೇಲೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸುವುದರ ಜೊತೆಗೆ ಹರಿಜನ ಸೇವ ಸಂಘ, ರವಿದಾಸ್ ಮಹಾಸಭಾ, ಡಿಪ್ರೆಸ್ಡ್ ಕ್ಲಾಸ್ ಲೀಗ್ ಮುಂತಾದ ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದರು ಹಾಗೂ ಭಾರತದಾದ್ಯಂತ ಸಂಚಾರ ಮಾಡಿ ಹರಿಜನರ ಸಂಘಟನೆ ಮಾಡಿದರು. “ಕೃಷಿ ಕಾರ್ಮಿಕರ ಕನಿಷ್ಟ ವೇತನ, ಉಳುವವನಿಗೆ ಭೂಮಿ, ಮದ್ಯಪಾನ ನಿಷೇಧ ಮತ್ತು ಅಸ್ಪೃಶ್ಯತಾ ನಿವಾರಣೆ” ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಹೋರಾಟ ಮಾಡಿದರು.
ಜಗಜೀವನರಾಮ್ ರವರು ರೈಲ್ವೆ, ಆಹಾರ ಮತ್ತು ಕೃಷಿ, ಸಾರಿಗೆ ಮತ್ತು ಸಂವಹನ, ನೀರಾವರಿ ಮತ್ತು ರಕ್ಷಣೆ ಸೇರಿದಂತೆ ವಿವಿಧ ಖಾತೆಗಳನ್ನು ಸಹ ಹೊಂದಿದ್ದರು. ಅವರು ರಕ್ಷಣಾ ಸಚಿವರಾಗಿದ್ದಾಗ 1971ರ ಭಾರತ-ಪಾಕಿಸ್ತಾನ ಯುದ್ಧ ನಡೆಯಿತು. ತುರ್ತು ಪರಿಸ್ಥಿತಿಯ ನಂತರ ಮೊರಾರ್ಜಿ ದೇಸಾಯಿ ಪ್ರಧಾನಿಯಾದಾಗ ಅವರು ಭಾರತದ ಉಪ ಪ್ರಧಾನಿಯೂ ಆದರು.
ಜಗಜೀವನ್ ರಾಮ್ 1936 ರಿಂದ 1986 ರವರೆಗೆ ನಿರಂತರವಾಗಿ ಸಂಸತ್ತಿನ ಸದಸ್ಯರಾಗಿದ್ದರು ಮತ್ತು ಇದು ವಿಶ್ವ ದಾಖಲೆಯಾಗಿದೆ. ಭಾರತದಲ್ಲಿ ಅತಿ ಹೆಚ್ಚು ಕಾಲ (30 ವರ್ಷಗಳು) ಕ್ಯಾಬಿನೆಟ್ ಮಂತ್ರಿಯಾಗಿ ಸೇವೆ ಸಲ್ಲಿಸಿದ ಮತ್ತೊಂದು ದಾಖಲೆಯನ್ನೂ ಅವರು ಹೊಂದಿದ್ದಾರೆ. ಜಗಜೀವನರಾಮ್ ರವರು ಜುಲೈ 6, 1986 ರಂದು ನಿಧನರಾದರು. ಅವರ ಸಮಾಧಿ ಸ್ಥಳದಲ್ಲಿ ಅವರ ಸ್ಮಾರಕಕ್ಕೆ ‘ಸಮತಾ ಸ್ಥಳ’ ಎಂದು ಹೆಸರಿಸಲಾಗಿದೆ. ಡಾ. ಬಾಬು ಜಗಜೀವನರಾಮ್ ದೇಶಕ್ಕೆ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ ಎಂದು ಸಚಿವ ಹೆಚ್ ಸಿ ಮಹದೇವಪ್ಪ ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆಎಸ್ ಒಯು ಕುಲಪತಿ ಶರಣಪ್ಪ, ಕುಲಸಚಿವ ನವೀನ್ ಕುಮಾರ್, ಡಾ.ಬಾ.ಜ.ರಾಮ್ ಸಂಶೋಧನಾ ವಿಸ್ತರಣಾ ಕೇಂದ್ರದ ನಿರ್ದೇಶಕರಾದ ಶರಣಮ್ಮ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
Key words: KSOU, Dr. Babu Jagjivan Ram, Minister, KH Muniyappa