ಮೈಸೂರು,ಜುಲೈ,11,2025 (www.justkannada.in): ಮದುವೆಯಾದ ಎರಡೇ ತಿಂಗಳಿಗೆ ವೈದ್ಯೆಗೆ ಕಿರುಕುಳ ನೀಡಿ ಗರ್ಭಪಾತ ಮಾಡಿಸಿರುವ ಆರೋಪದ ಮೇಲೆ ಆಕೆಯ ಪತಿ, ಅತ್ತೆ ಹಾಗೂ ಮಾವ ಸೇರಿ ಐವರ ವಿರುದ್ದ ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆ.ಆರ್.ಪೇಟೆಯ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯೆಯಾಗಿರುವ ನವ್ಯಾ ಮತ್ತು ತಂದೆ ಮಹದೇವ ಎಂಬುವವರು ದೂರು ನೀಡಿದ್ದು ನವ್ಯ ಪತಿ ಅಭಿಷೇಕ್, ಮಾವ ಗೋವಿಂದರಾಜ್, ಅತ್ತೆ ಲತಾ, ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಜ್ಞಾನಶೇಖರ್, ವೈದ್ಯೆ ಲತಾ ಸೇರಿ ಐವರ ಮೇಲೆ ಎಫ್. ಐ.ಆರ್ ದಾಖಲಾಗಿದೆ.
ಬಿಎಎಂಎಸ್ ವ್ಯಾಸಂಗ ಮಾಡಿ ವೈದ್ಯೆ ಆಗಿರುವ ನವ್ಯಾರನ್ನ ಮೈಸೂರಿನ ಬಿಳಿಕೆರೆಯ ನಿವಾಸಿ ಚಿನ್ನದ ವ್ಯಾಪಾರಿ ಗೋವಿಂದರಾಜು ಪುತ್ರ ಅಭಿಷೇಕ್ ಜೊತೆ ವಿವಾಹ ಮಾಡಿಕೊಡಲಾಗಿತ್ತು. ಮಹದೇವ್ ಸುಮಾರು 80 ಲಕ್ಷ ಖರ್ಚು ಮಾಡಿ ಮಗಳನ್ನು ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಇದೀಗ ನನ್ನ ಮಗಳಿಗೆ ವರದಕ್ಷಿಣೆ ಕಿರುಕುಳ ನೀಡಿ ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾರೆ ಎಂದು ಮಹದೇವ್ ದೂರು ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಸಂತ್ರಸ್ತೆ ನವ್ಯ, ಮದುವೆಯಾದ ಎರಡು ತಿಂಗಳ ಒಳಗೆ ಗಂಡ ಹಾಗೂ ಅವರ ಮನೆಯವರ ಕರಾಳ ಮುಖ ನೋಡಿಬಿಟ್ಟೆ. ಹಣದ ಆಸೆಗೆ ನನಗೆ ಕೊಡಬಾರದ ಚಿತ್ರಹಿಂಸೆ ನೀಡಿದರು. ತಿರುಪತಿಗೆ ಹೋಗಬೇಕು ಅಂತ ಸುಳ್ಳು ಹೇಳಿ ಗರ್ಭಪಾತ ಮಾಡಿಸಿದ್ದಾರೆ. ತಾಳಿ, ಕಾಲುಂಗುರ ಎಲ್ಲವನ್ನೂ ಬಿಚ್ಚಿಸಿಕೊಂಡು ನಡು ರೋಡಿನಲ್ಲಿ ಬಿಟ್ಟು ಹೋದರು. ಐದು ಲಕ್ಷ ವರದಕ್ಷಿಣೆ ತರಲಿಲ್ಲ, ನಿನಗೆ ಮಗು ಯಾಕೆ ಬೇಕು ಅಂತ ಗರ್ಭಪಾತ ಮಾಡಿಸಿದ್ದಾರೆ. ಮದುವೆಯಾದ ಎರಡೇ ತಿಂಗಳಿಗೆ ಸ್ಟೇಟಸ್ ಅಂತ ನನಗೆ ಚಿತ್ರ ಹಿಂಸೆ ನೀಡಿದ್ದಾರೆ. ನನ್ನ ಅಪ್ಪ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟರು. ನಾನು ಒಬ್ಬಳು ವೈದ್ಯೆ ಮದುವೆಗೆ ಮುಂಚೆ ಕೆಲಸಕ್ಕೆ ಹೋಗುತ್ತಿದ್ದೆ. ಮದುವೆ ಸಮಯದಲ್ಲಿ ಕೆಲಸ ಬೇಡ ಎಂದು ಬಿಡಿಸಿದರು. ಮದುವೆಯಾಗಿ ಒಂದು ವಾರ ಚೆನ್ನಾಗಿ ನೋಡಿಕೊಂಡರು. ಬಳಿಕ ದಿನ ಒಂದೊಂದು ರೀತಿಯಲ್ಲಿ ಹಿಂಸೆ ಕೊಟ್ಟಿದ್ದಾರೆ. ನಾನು ಗರ್ಭಿಣಿ ಅಂತ ಗೊತ್ತದ ಮೇಲೆ ಮಗು ತೆಗೆಸುವಂತೆ ಬಲವಂತ ಮಾಡಿದ್ದು ನಾನು ಎಷ್ಟೇ ಬೇಡ ಅಂದ್ರೂ ನನಗೆ ಗರ್ಭಪಾತ ಮಾಡಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಆಸ್ಪತ್ರೆಯ ವೈದ್ಯರಾದ ಶಶಿಕಲಾ ಕೂಡ ನನ್ನ ಗಂಡನಾಗಿ ಕೇಳಿ ಗರ್ಭಪಾತ ಮಾಡಿದ್ದಾರೆ. ನೀವು ಬೇರೆ ಮದುವೆ ಆಗಿ ನಾನು ನಿಮ್ಮ ತಂಟೆಗೆ ಬರಲ್ಲ ಡಿವೋರ್ಸ್ ಕೊಡುತ್ತೇನೆ ಅಂತ ಹೇಳಿದ್ದೆ. ನನ್ನ ಮಗೂಗೆ ಏನು ಮಾಡಬೇಡಿ ಎಂದಿದ್ದೆ. ನನ್ನ ಖಾಸಗಿ ವಿಡಿಯೋ ಇಟ್ಟುಕೊಂಡು ನನ್ನ ಗಂಡ ಬೆದರಿಸಿ ನನ್ನ ಕುಟುಂಬದವರನ್ನು ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿದರು. ನನಗೆ ನ್ಯಾಯ ಬೇಕು ನನ್ನ ಗಂಡನ ಕುಟುಂಬಕ್ಕೆ ಶಿಕ್ಷೆ ಆಗಬೇಕು ಎಂದು ಸಂತ್ರಸ್ತೆ ನವ್ಯ ಆಗ್ರಹಿಸಿದ್ದಾರೆ.
Key words: Dowry harassment, FIR, Mysore