ಪೊಲೀಸರು ಕ್ರಮ ಕೈಗೊಂಡರೆ ನನ್ನನ್ನು ದೂರಬೇಡಿ ಎಂದ ಯಡಿಯೂರಪ್ಪ

ಬೆಂಗಳೂರು, ಮಾರ್ಚ್ 24, 2020 (www.justkannada.in): ಅಗತ್ಯ ತುರ್ತು ಕೆಲಸಗಳಿದ್ದರೆ ಮಾತ್ರ ಹೊರಹೋಗಿ ಎಂದು ಸಿಎಂ ಯಡಿಯೂರಪ್ಪ ಮತ್ತೊಮ್ಮೆ ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ.

ಮಾರ್ಚ್ 31ರವರೆಗೆ ಕರೆ ನೀಡಿರುವ ಸಂಪೂರ್ಣ ಲಾಕ್ ಡೌನ್ ಗೆ ಎಲ್ಲ ಜನರ ಸಹಕಾರ ಅತ್ಯಗತ್ಯ. ಪ್ರಧಾನ ಮಂತ್ರಿಯವರೇ ಜನರು ಮನೆಯಲ್ಲಿಯೇ ಇರುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

ನಿನ್ನೆ ರಾತ್ರಿಯಿಂದ ವಿಮಾನ ಹಾರಾಟಗಳನ್ನು ನಿಷೇಧಿಸಲಾಗಿದೆ ಎಂದ ಮೇಲೆ ಪರಿಸ್ಥಿತಿಯ ಗಂಭೀರತೆ ಬಗ್ಗೆ ಜನತೆ ಅರ್ಥ ಮಾಡಿಕೊಳ್ಳಬೇಕು ಎಂದು ಸಿಎಂ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಆದೇಶ ಉಲ್ಲಂಘಿಸಿ ಜನರು ಮನೆಬಿಟ್ಟು ಸುಖಾಸುಮ್ಮನೆ ಹೊರಗೆ ಬಂದರೆ ಪೊಲೀಸರು ಅನಿವಾರ್ಯವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಜಿಲ್ಲೆಗಳಲ್ಲಿ ಅದರಲ್ಲೂ ಬೆಂಗಳೂರು ಮಹಾನಗರ ಜನತೆಗೆ ಈ ಸಂದರ್ಭದಲ್ಲಿ ನಾನು ಅಂತಿಮ ಎಚ್ಚರಿಕೆ ಮತ್ತು ಮನವಿ ಮಾಡಿಕೊಳ್ಳುತ್ತಿದ್ದೇನೆ. ಪೊಲೀಸರು ಕ್ರಮ ಕೈಗೊಂಡರೆ ನನ್ನನ್ನು ಧೂಷಿಸಬೇಡಿ ಎಂದು ಸಿಎಂ ಹೇಳಿದ್ದಾರೆ.