ಬೆಂಗಳೂರು, ಡಿಸೆಂಬರ್, 2,2025 (www.justkannada.in): ನಾನು ಮತ್ತು ಡಿಕೆ ಶಿವಕುಮಾರ್ ಸಹೋದರರಿದ್ದಂತೆ. ನಮ್ಮದ ಒಂದೇ ಪಕ್ಷ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಶನಿವಾರ ಸಿಎಂ ಸಿದ್ದರಾಮಯ್ಯ ಅವರ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಜತೆಗೆ ‘ಬ್ರೇಕ್ಫಾಸ್ಟ್ ಮೀಟಿಂಗ್’ ನಡೆದಿತ್ತು. ಇಂದು ಡಿಸಿಎಂ ಡಿಕೆ ಶಿವಕುಮಾರ್ ನಿವಾಸದಲ್ಲಿ ನಡೆದ ಸಿಎಂ ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್ ನಲ್ಲಿ ಪಾಲ್ಗೊಂಡಿದ್ದರು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಮ್ಮ ಮನೆಗೆ ಶನಿವಾರ ಉಪಾಹಾರಕ್ಕೆ ಬಂದಿದ್ದಾಗ ಡಿಕೆ ಶಿವಕುಮಾರ್ ಮಂಗಳವಾರ ಉಪಾಹಾರಕ್ಕೆ ಬನ್ನಿ ಎಂದು ಆಹ್ವಾನ ನೀಡಿದ್ದರು. ಅದರಂತೆ ಬಂದಿದ್ದೇನೆ. ಡಿಸೆಂಬರ್ 8ರಿಂದ ಬೆಳಗಾವಿ ಅಧಿವೇಶನ ಆರಂಭ ಆಗುತ್ತದೆ. ಅಧಿವೇಶನ ಹಿನ್ನೆಲೆ ನಾವು ಚರ್ಚೆ ಮಾಡಿದ್ದೇವೆ. ವಿಪಕ್ಷಗಳು ಯಾವುದೇ ವಿಚಾರ ಪ್ರಸ್ತಾಪಿಸಿದರೂ ಎದುರಿಸುತ್ತೇವೆ ಎಂದರು.
ಹೈಕಮಾಂಡ್ ಹೇಳಿದಂತೆ ನಾನು, ಡಿಸಿಎಂ ನಡೆದುಕೊಳ್ಳುತ್ತೇವೆ. ಹೈಕಮಾಂಡ್ ಹೇಳಿದಂತೆ ಕೇಳಬೇಕೆಂದು ಮೊನ್ನೆಯೂ ಚರ್ಚೆ ಆಗಿತ್ತು. ಇಂದು ಕೂಡ ಚರ್ಚೆ ಮಾಡಿದ್ದೇವೆ. ನಾನು, ಡಿ.ಕೆ.ಶಿವಕುಮಾರ್ ಸಹೋದರರೇ. ಯಾವುದೇ ಗೊಂದಲ ಇಲ್ಲ. ಹೈಕಮಾಂಡ್ ನಾಯಕರು ಕರೆದರೆ ದೆಹಲಿಗೆ ಹೋಗುತ್ತೇವೆ. ಬುಧವಾರ ಮಂಗಳೂರಿನಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದೇನೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಸಹ ಅಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ನಮ್ಮ ಸರ್ಕಾರ ಯಾವಾಗಲೂ ರೈತರ ಪರ ಇರುತ್ತದೆ. ರಾಜ್ಯದ ಸಮಸ್ಯೆ ಬಗ್ಗೆಯೂ ನಾನು, ಡಿಸಿಎಂ ಚರ್ಚೆ ಮಾಡಿದ್ದೇವೆ. ಕಬ್ಬಿಗೆ ಬೆಲೆ ನಿಗದಿ ವಿಚಾರವಾಗಿ ಕಾರ್ಖಾನೆ ಮಾಲೀಕರ ಜತೆ, ಬೆಳೆಗಾರರ ಜತೆಗೂ ಚರ್ಚೆ ಮಾಡಿದ್ದೆ. ಮೆಕ್ಕೆಜೋಳ ರೈತರ ಸಮಸ್ಯೆ ಬಗ್ಗೆಯೂ ‘ಬ್ರೇಕ್ ಫಾಸ್ಟ್ ಮೀಟಿಂಗ್’ನಲ್ಲಿ ಚರ್ಚಿಸಿದ್ದೇವೆ. ಮೆಕ್ಕೆಜೋಳಕ್ಕೆ ಎಂಎಸ್ಪಿ ದರ 2,400 ರೂಪಾಯಿ ಇದೆ. ಮಾರುಕಟ್ಟೆಯಲ್ಲಿ ಬೇರೆ ಬೇರೆ ಬೆಲೆ ಇದೆ. ರೈತರಿಗೆ ಎಂಎಸ್ಪಿ ದರ ಕೊಡುವುದಕ್ಕೆ ಒಪ್ಪಿಸಿದ್ದೇವೆ. ರೈತರಿಗೆ ಸಹಾಯ ಮಾಡಲು ತೀರ್ಮಾನಿಸಿದ್ದೇವೆ ಸಿಎಂ ಸಿದ್ದರಾಮಯ್ಯ ತಿಳಿಸಿದರು.
Key words: DK Shivakumar, Brothers, one party, united, CM Siddaramaiah







