ಧಾರವಾಡ ಜಿಲ್ಲೆ ನೀರು ಪೂರೈಕೆ ಕಾಮಗಾರಿ ವಿಳಂಬ : L & T ಸಂಸ್ಥೆ ವಿರುದ್ಧ ವ್ಯಾಪಕ ಟೀಕೆ.

Dharwad water supply work delay, Officials blamed on L&T compony

 

ಬೆಂಗಳೂರು, ಜುಲೈ 03,2024: (www.justkannada.in news) ಧಾರವಾಡ ಜಿಲ್ಲೆಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಗ್ರಾಮೀಣ ನೀರು ಸರಬರಾಜು ಹಾಗೂ ನಗರ ನೀರು ಸರಬರಾಜು ಇಲಾಖೆಯ ಕಾಮಗಾರಿ ಕಾರ್ಯಗತ ಮಾಡುವಲ್ಲಿ ಗುತ್ತಿದಾರ ಸಂಸ್ಥೆ ಎಲ್‌ ಅಂಡ್‌ ಟಿ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂಬ ಕಾರಣಕ್ಕೆ ಸಚಿವರು ಹಾಗೂ ಶಾಸಕರಿಂದ ವ್ಯಾಪಕ ಟೀಕೆಗೆ ಗುರಿಯಾಯಿತು.

ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕಾರ್ಮಿಕ ಸಚಿವ  ಸಂತೋಷ್‌ ಎಸ್‌ ಲಾಡ್‌ ಅಧ್ಯಕ್ಷತೆಯಲ್ಲಿ ವಿಕಾಸಸೌಧದಲ್ಲಿ ಇಂದು ನಡೆದ ಸಭೆಯಲ್ಲಿ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌  ಖರ್ಗೆ, ಶಾಸಕರಾದ ಎನ್.ಹೆಚ್.ಕೋನರೆಡ್ಡಿ, ಪ್ರಸಾದ್‌ ಅಬ್ಬಯ್ಯ, ಎಂ.ಆರ್‌.ಪಾಟೀಲ್‌ ಹಾಗೂ ಹಿರಿಯ ಅಧಿಕಾರಿಗಳು ಪಾಲ್ಗೊಂಡು ಜಲಜೀವನ್‌ ಮಿಷನ್‌ ಯೋಜನೆಯಡಿ ಧಾರವಾಡ ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ನೀರು ಸರಬರಾಜು ಮಾಡುವ ಯೋಜನೆಗಳನ್ನು ಶೀಘ್ರದಲ್ಲಿ ಕಾರ್ಯಗತಗೊಳಿಸುವ ಬಗ್ಗೆ ಚರ್ಚೆ ನಡೆಸಿದರು.

ಕೆ.ಯು.ಐ.ಡಿ.ಎಫ್‌.ಸಿ ಮೂಲಕ ಕೈಗೆತ್ತಿಕೊಳ್ಳಲಾಗಿರುವ ನಗರ ನೀರು ಸರಬರಾಜು ಯೋಜನೆಗಳ ಬಗ್ಗೆಯೂ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆಯಿತು.

ಜಿಲ್ಲೆಯಲ್ಲಿ ನಡೆಯುತ್ತಿರುವ ನೀರು ಸರಬರಾಜು ಕಾಮಗಾರಿಗಳನ್ನು ಎಲ್‌ ಅಂಡ್‌ ಟಿ ಸಂಸ್ಥೆ ಗುತ್ತಿಗೆ ಪಡೆದಿದ್ದು ಕಾರ್ಮಿಕರ ಕೊರತೆಯಿಂದ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲವೆಂದು ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದರು.

ಇದನ್ನು ಒಪ್ಪದ ಸಚಿವದ್ವಯರು ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದರಲ್ಲದೆ ಕಾಮಗಾರಿಗಳನ್ನು ಚುರುಕುಗೊಳಿಸಿ ಆದಷ್ಟು ಶೀಘ್ರದಲ್ಲಿ ಶುದ್ಧ ನೀರು ಸರಬರಾಜು ಮಾಡಲು ಅನುವು ಮಾಡಿಕೊಡಬೇಕೆಂದು ನಿರ್ದೇಶನ ನೀಡಿದರು.

ಗ್ರಾಮೀಣ ನೀರು ಸರಬರಾಜು ಇಲಾಖೆಯ ಮೂಲಕ ಧಾರವಾಡ ಜಿಲ್ಲೆಯ 388 ವಸತಿ ಪ್ರದೇಶಗಳಿಗೆ 832.57 ಕೋಟಿ ರೂ. ವೆಚ್ಚದಲ್ಲಿ ಶುದ್ಧ ನೀರು ಸರಬರಾಜು ಮಾಡುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಪ್ರದೇಶಗಳಿಗೆ ರೇಣುಸಾಗರ ಜಲಾಶಯದ ನವಿಲುತೀರ್ಥದಿಂದ ನೀರು ಸರಬರಾಜು ಮಾಡಲಾಗುವ ಯೋಜನೆಯನ್ನು ಹೊಂದಲಾಗಿದೆ.

ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ದೀಪಾ, ಗ್ರಾಮೀಣ ನೀರು ಸರಬರಾಜು ಇಲಾಖೆಯ ನಿರ್ದೇಶಕ ಕೆ.ನಾಗೇಂದ್ರಪ್ರಸಾದ್‌, ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿ ದಿವ್ಯಾಪ್ರಭು ಹಾಗೂ ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

key words: Dharwad, water supply work, delay, Officials blamed on, L&T compony