ವಿವಿಗಳ ಅಭಿವೃದ್ಧಿ : ಶಿಕ್ಷಣ ಮಂಡಲದ ‌ಪ್ರಾಧಿಕಾರಿಗಳ ಜತೆ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಚರ್ಚೆ

ಬೆಂಗಳೂರು,ಅಕ್ಟೋಬರ್,21,2020(www.justkannada.in) : ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ತರಲು ಸರಕಾರ ಮತ್ತಷ್ಟು ದೃಢವಾದ ಹೆಜ್ಜೆಗಳನ್ನು ಇಡಲಿದೆ. ಇದಕ್ಕಾಗಿ, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿರುವ ಎಲ್ಲ ಅಂಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ, ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.jk-logo-justkannada-logoಭಾರತೀಯ ಶಿಕ್ಷಣ ಮಂಡಲದ ಕರ್ನಾಟಕ ಉತ್ತರ ಪ್ರಾಂತ ಹಾಗೂ ಬೆಳಗಾವಿಯ ರಾಣಿ ಚನ್ನಮ್ಮ ವಿವಿ ವತಿಯಿಂದ ಬುಧವಾರ ಏರ್ಪಡಿಸಲಾಗಿದ್ದ “ವಿಶ್ವವಿದ್ಯಾಲಯಗಳ ಏಳಿಗೆಯಲ್ಲಿ ಪ್ರಾಧಿಕಾರಿಗಳ ಪಾತ್ರ” ವಿಷಯ ಕುರಿತ ಅನ್‌ಲೈನ್ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಶಿಕ್ಷಣ ವ್ಯವಸ್ಥೆಯನ್ನು ಉನ್ನತಿಯತ್ತ ಕೊಡೊಯ್ಯಬೇಕಾದರೆ ನಾನು ಎನ್ನುವುದನ್ನು ಬಿಟ್ಟು ನಾವು ಎಂಬ ವಿಶಾಲ ತತ್ತ್ವದೊಂದಿಗೆ ಸಾಗಬೇಕು. ಆಗ ಮಾತ್ರ ಉತ್ತಮ ಫಲಿತಾಂಶ ಸಾಧಿಸಲು ಸಾಧ್ಯವಾಗುತ್ತದೆ. ವಿಶಾಲ ತಳಹದಿಯ ಮೇಲೆ ಕೆಲಸ ಮಾಡುತ್ತಿರುವ ಎಲ್ಲ ವಿವಿಗಳಲ್ಲಿ ಇಂಥ ನಡವಳಿಕೆಯಿಂದ ಮಾತ್ರ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದರು.

developmentvvsofficialsboardeducationdcm-dr-c-n-ashwaththanarayanatalk

ಶೈಕ್ಷಣಿಕ ಸುಧಾರಣೆಗಳು:

ಶೈಕ್ಷಣಿಕವಾಗಿ ನಮ್ಮ ಸರಕಾರವು ಕಳೆದ ಒಂದು ವರ್ಷದಲ್ಲಿ ಅನೇಕ ದಿಟ್ಟಹೆಜ್ಜೆಗಳನ್ನು ಇಟ್ಟಿದೆ. ಆದ್ಯತೆಯ ಮೇರೆಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡುತ್ತಿದೆ. ಎಲ್ಲ ದೃಷ್ಟಿಕೋನದಲ್ಲಿ ನೋಡಿದರೂ ಕರ್ನಾಟಕಕ್ಕೆ ಈ ನೀತಿ ದೊಡ್ಡ ಕಾಣಿಕೆ ನೀಡಲಿದೆ ಎಂದರು.

ಈ ಹಿನ್ನೆಲೆಯಲ್ಲಿ ಸರಕಾರವು ಶಿಕ್ಷಣ ನೀತಿಯನ್ನು ಅತ್ಯಂತ ಬದ್ಧತೆಯಿಂದ ಜಾರಿ ಮಾಡಲು ಮುಂದಾಗಿದೆ. ಈಗಾಗಲೇ ನೀತಿಯ ಜಾರಿಗೆ ಬೇಕಾದ ಕಾನೂನಾತ್ಮಕ-ಆಡಳಿತಾತ್ಮಕ ಬದಲಾವಣೆಗಳನ್ನು ಮಾಡಲಾಗುತ್ತಿದೆ. 2021ರ ಹೊತ್ತಿಗೆ ನೀತಿಯ ಜಾರಿ ಹಂತಹಂತವಾಗಿ ಆರಂಭವಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಅತ್ಯಂತ ಜವಾಬ್ದಾರಿಯಿಂದ ಕೆಲಸ ಮಾಡಬೇಕು

ವಿವಿಗಳ ಮಟ್ಟದಲ್ಲಿ ಪ್ರಾಧಿಕಾರಿಗಳ ಪಾತ್ರ ಬಹುಮುಖ್ಯವಾದದ್ದು. ಅದರಲ್ಲೂ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡುವ ನಿಟ್ಟಿನಲ್ಲಿ ಅತ್ಯಂತ ಜವಾಬ್ದಾರಿಯಿಂದ ಕೆಲಸ ಮಾಡಬೇಕಾಗುತ್ತದೆ. ಆ ನೀತಿಯ ಆಶಯಕ್ಕೆ ತಕ್ಕಂತೆ ಹೆಜ್ಜೆಗಳನ್ನು ಇಡಬೇಕಾಗುತ್ತದೆ ಎಂದು ಡಿಸಿಎಂ ಕಿವಿಮಾತು ಹೇಳಿದರು.

ಭಾರತವನ್ನು ಎಲ್ಲ ರೀತಿಯಲ್ಲೂ ಬದಲಿಸುವ ಶಕ್ತಿ ಶಿಕ್ಷಣ ನೀತಿಗೆ ಇದೆ

ಮುಂದಿನ ಕೆಲ ವರ್ಷಗಳಲ್ಲಿ ಭಾರತವನ್ನು ಎಲ್ಲ ರೀತಿಯಲ್ಲೂ ಬದಲಿಸುವ ಶಕ್ತಿ ಶಿಕ್ಷಣ ನೀತಿಗೆ ಇದೆ. ಸಾಮಾಜಿಕ, ಆರ್ಥಿಕ ಬದಲಾವಣೆಗಳಿಗೆ ಕಾರಣವಾಗಲಿದೆ. ಹೀಗಾಗಿ ನೀತಿಯ ಜಾರಿಯಲ್ಲಿ ನಾವೆಲ್ಲರೂ ಯೋಧರಂತೆ ಕೆಲಸ ಮಾಡಬೇಕು. ಮುಖ್ಯವಾಗಿ ಸಿಂಡಿಕೇಟ್‌ ಮತ್ತು ಅಕಾಡೆಮಿಕ್‌ ಕೌನ್ಸಿಲ್‌ಗಳು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಡಾ.ಅಶ್ವತ್ಥನಾರಾಯಣ ಒತ್ತಿ ಹೇಳಿದರು.

ಕುಶಭಾವು ಠಾಕರೆ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಸಚ್ಚಿದಾನಂದ ಜೋಶಿ ಪ್ರಧಾನ ಭಾಷಣ ಮಾಡಿದರೆ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಪ್ರಮೋದ ಗಾಯಿ, ರಾಣಿ ಚನ್ನಮ್ಮ ವಿವಿ ಕುಲಪತಿ ಪ್ರೊ.ರಾಮಚಂದ್ರ ಗೌಡ ಮಾತನಾಡಿದರು. ವಿಜಯಪುರದ ಬಿಎಲ್‌ಡಿಇ ವೈದ್ಯಕೀಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಸತೀಶ್‌ ಜಿಗಜಿನ್ನಿ ಅಧ್ಯಕ್ಷತೆ ವಹಿಸಿದ್ದರು.

ಏನಿದು ಭಾರತೀಯ ಶಿಕ್ಷಣ ಮಂಡಲ?:
ಇದೊಂದು ರಾಷ್ಟ್ರೀಯ ಮಟ್ಟದ ಸಂಸ್ಥೆಯಾಗಿದ್ದು, ಶಿಕ್ಷಣದ ಅಭಿವೃದ್ಧಿ ದಿಸೆಯಲ್ಲಿ ಕೆಲಸ ಮಾಡುತ್ತಿದೆ. ಭಾರತೀಯ ಶಿಕ್ಷಣ ಪದ್ಧತಿ, ಪರಂಪರೆ ಹಾಗೂ ಸಂಸ್ಕಾರಗಳ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಈ ಸಂಸ್ಥೆ ಮಾಡುತ್ತಿದೆ.

key words : Development-VVs-officials-Board-Education-DCM
Dr.C.N. Ashwaththanarayana-Talk