ಮೈಸೂರಿನ ಮಹಾರಾಜ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಕಟ್ಟಡ ದುರಸ್ತಿಗೆ ಅನುದಾನ ಬಿಡುಗಡೆಗೆ ಆಗ್ರಹ.

ಮೈಸೂರು,ಜುಲೈ,14,2022(www.justkannada.in): ಮೈಸೂರಿನ ಮಹಾರಾಜ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಕಟ್ಟಡ ದುರಸ್ತಿಗಾಗಿ ಅನುದಾನ ಬಿಡುಗಡೆ ಮಾಡಲು ಸರ್ಕಾರಕ್ಕೆ ಒತ್ತಡ ಹೇರುವಂತೆ ಜಿಲ್ಲಾ ಉಸ್ತುವಾರಿ ಸಚಿವರು, ಪತ್ರಿಕಾಮಿತ್ರರು ಹಾಗೂ ಶಿಕ್ಷಣ ಇಲಾಖೆಗೆ  ಮಹಾರಾಜ ಪದವಿಪೂರ್ವ ಕಾಲೇಜು ಪ್ರೌಢಶಾಲೆ ಹಳೆಯ ವಿದ್ಯಾರ್ಥಿಗಳ ಸಂಘ ಆಗ್ರಹಿಸಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಸಂಘದ ಗೌರವಾಧ್ಯಕ್ಷರಾದ ಡಾ.ಎನ್ .ಚಂದ್ರಶೇಖರ್, ಈ ಶಾಲೆಯ ಹಳೆಯ ವಿದ್ಯಾರ್ಥಿಯಾಗಿ, ಮಾಜಿ ಪ್ರಾಚಾರ್ಯನಾಗಿ, ಶಾಲೆಯ ೧೫೦ ನೇ ವರ್ಷದ ಸಮಾರಂಭ ಮತ್ತು ೧೭೫ ನೇ ವರ್ಷದ ಸಮಾರಂಭಗಳನ್ನು ನನ್ನ ನೆತೃತ್ವದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.1975 ರಿಂದ ಸಂಸ್ಥೆಯೊಂದಿಗೆ ನಿಕಟ ಸಂಬಂಧ ಹೊಂದಿದ್ದು, ಆತ್ಮೀಯತೆ ಮತ್ತು ಕಾಳಜಿಯನ್ನು ಹೊಂದಿರುತ್ತೇನೆ. ಹಾಗೂ ಸಂಸ್ಥೆಯ ಅಭಿವೃದ್ಧಿ ಸಮಿತಿಯ ಉಪಾದ್ಯಕ್ಷನಾಗಿಯು ಕೆಲಸಮಾಡಿರುತ್ತೇನೆ. ನಾನು ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆಯ ನಿವೃತ್ತ (೨೦೦೧ರಲ್ಲಿ )ನಿರ್ದೇಶಕನಾಗಿದ್ದೇನೆ.

ಹಳೆಯ ವಿದ್ಯಾರ್ಥಿ ಸಂಘವು ಶಾಲೆಯನ್ನು ದತ್ತು ತೆಗೆದುಕೊಂಡು ಸಾಕಷ್ಟು ಸಹಾಯ ಮಾಡುತ್ತಿದೆ. ವಿಷಯಕ್ಕೆ ಸಂಬಂಧಿಸಿದಂತೆ ದಿ.27.10.2018 ರಂದು ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿಗಳಾದ(ಯೋಜನೆ) ಎಸ್.ಆರ್.ಎಸ್.ನಾಧನ್ ಅವರನ್ನು ಖುದ್ದಾಗಿ ಭೇಟಿ ಮಾಡಿದ್ದೆನು. ಅವರು ಮುಂದಿನ ಕ್ರಮ ತೆಗೆದುಕೊಳ್ಳಲು, ಸದರಿ ರಿಪೇರಿ ಮತ್ತು ಪೇಂಟಿಂಗ್ ಗೆ ತಗಲುವ ಅಂದಾಜು ವೆಚ್ಚದ ವಿವರವನ್ನು ಸಾರ್ವಜನಿಕ ಕೆಲಸಗಳ ಇಲಾಖೆ ಇಂದ ಕಳಿಸಿಕೊಡಬೇಕೆಂದು ತಿಳಿಸಿದರು. ಅದರಂತೆ ಅಂದಾಜು ವೆಚ್ಚದ(ಸುಮಾರು 1.4 ಕೋಟಿ ರೂಗಳು) ವಿವರವನ್ನು ಸಾರ್ವಜನಿಕ ಕೆಲಸಗಳ ಇಲಾಖೆ ಇಂದ ಪಡೆದು ಸಾರ್ವಜನಿಕ ಶಿಕ್ಷಣ ಇಲಾಖೆಗೆ 2019 ರಲ್ಲಿ ಕೊಟ್ಟಿರುತ್ತೇನೆ. ಈಗಾಗಲೆ ಸಂಸ್ಥೆಯ ಮುಂಭಾಗದ ಕಟ್ಟಡ ರಿಪೇರಿ ಕೆಲಸವು ಮುಗಿದಿದೆ. ಆ ಕೆಲಸಕ್ಕೆ ಬೇಕಾದ ಹಣ ಮಂಜೂರಾತಿಗೆ ಉಪವಾಸ ಸತ್ಯಾಗ್ರಹ ಮಾಡಿ ಪಡೆದುಕೊಳ್ಳಲಾಯಿತು.

ಹಳೆಯ ವಿದ್ಯಾರ್ಥಿಸಂಘ 189 ವರ್ಷ ತುಂಬಿರುವ ಮಹಾರಾಜ ಪ್ರೌಢ ಶಾಲೆಯ ಕಟ್ಟಡದ ರಿಪೇರಿಗೆ ಮುಖ್ಯ ಮಂತ್ರಿಗಳು, ಶಿಕ್ಷಣ ಮಂತ್ರಿಗಳು,ಮುಖ್ಯಕಾರ್ಯದರ್ಶಿಗಳು, ಶಿಕ್ಷಣ ಕಾರ್ಯದರ್ಶಿಗಳು, ಆಯುಕ್ತರು, ಇವರುಗಳಿಗೆ ೨೦೧೮ ರಿಂದ ಹಲವಾರು ಪತ್ರಗಳನ್ನು ಬರೆಯಲಾಗಿದೆ.

ಇಂದು (14.07.2022)ಹಳೆಯ ವಿದ್ಯಾರ್ಥಿ ಸಂಘ, ಉಪಾಧ್ಯಾಯರು ಮತ್ತು ವಿದ್ಯಾರ್ಥಿ ಸೇರಿ, ೧೮೯ವರ್ಷ ತುಂಬಿರುವ ಮಹಾರಾಜ ಪ್ರೌಢ ಶಾಲೆಯ ಸಂಸ್ಥಾಪಕರಾದ ಮಹರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ರವರ ಜಯಂತಿ ಯನ್ನು ಆಚರಿಸುತ್ತಿದ್ದೇವೆ.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಪತ್ರಿಕಾಮಿತ್ರರು ಹಾಗೂ ಇಲಾಖೆಯವರನ್ನು ಈ ಕೂಡಲೇ ರಿಪೇರಿ ಕೆಲಸ ತೆಗೆದುಕೊಳ್ಳಲು ಬೇಕಾದ ಹಣ ಬಿಡುಗಡೆ ಮಾಡಲು ಸರ್ಕಾರದ ಮೇಲೆ ಒತ್ತಡ ತರಬೇಕಾಗಿ ಕಳಕಳಿಯಿಂದ ಪ್ರಾರ್ಥಿಸುತ್ತೇವೆ. ಈಗಾಗಲೇ ತೀರ್ಮಾನಿಸಿರುವಂತೆ, ಇದೆ ಅಕ್ಟೋಬರ್ 2 ರೊಳಗೆ ಕ್ರಮ ತೆಗೆದು ಕೊಳ್ಳದೆ ಇದ್ದರೆ, ಗಾಂಧಿ ಜಯಂತಿಯಂದು ಉಪವಾಸ ಸತ್ಯಾಗ್ರಹವನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Key words: Demand –release- grant – building -repair – Maharaja College-mysore.