ಮಾನಹಾನಿ ಕೇಸ್: ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷರು ಮತ್ತು ನಿರ್ದೇಶಕರಿಗೆ ಷರತ್ತುಬದ್ಧ ಜಾಮೀನು

ಬೆಂಗಳೂರು,ಜನವರಿ,22,2026 (www.justkannada.in): ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಇತರ ಹನ್ನೊಂದು ಮಂದಿ ನಿರ್ದೇಶಕರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಬೆಂಗಳೂರಿನ 6ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮೆಜಿಸ್ಟ್ರೇಟ್ ನ್ಯಾಯಾಲಯ ಆದೇಶಿಸಿದೆ.

ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಮಾಜಿ ಕಾರ್ಯದರ್ಶಿ ಎ.ಎಸ್.ನಾಗರಾಜಸ್ವಾಮಿ ಅವರು ನ್ಯಾಯಾಲಯದಲ್ಲಿ ಮಾನಹಾನಿ ಖಾಸಗಿ ದೂರು ದಾಖಲಿಸಿದ್ದರು. ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷರು ಮತ್ತು ಹಿಂದಿನ ಆಡಳಿತ ಮಂಡಳಿ ನಿರ್ದೇಶಕರಾದ ಯತಿರಾಜು, ರಮೇಶ್ ಎಂ.ಶಿವಣ್ಣ, ಮುಂಜಾನೆ ಸತ್ಯ, ಕೆ. ರಾಘವೇಂದ್ರ, ಶಿವಕುಮಾರ್ ಎಂ.ಡಿ., ಸಚ್ಚಿದಾನಂದ ಕುರಗುಂದ, ಬಿ.ಎನ್. ಮೋಹನ್ ಕುಮಾರ್, ಎನ್. ವನಿತಾ, ಮಂಜುಶ್ರೀ ಕಡಕೋಳ ಹಾಗೂ ಕೆ.ಎಂ. ಪಂಕಜಾ ಅವರ ವಿರುದ್ಧ ದೂರು ದಾಖಲಾಗಿತ್ತು.
ದಿನಾಂಕ 24/09/2023ರ ಸಂಘದ ಸರ್ವಸದಸ್ಯರ ಸಭೆಯ ಸುತ್ತೋಲೆಯಲ್ಲಿ ನನಗೆ ಮಾನಹಾನಿ ಉಂಟಾಗುವಂತೆ ಸುಳ್ಳು ಆರೋಪಗಳನ್ನು ಮುದ್ರಿಸಿ, ಸದಸ್ಯರಿಗೆ ಹಂಚಿ ನನಗೆ ಮಾನಸಿಕ ಘಾಸಿ ಉಂಟು ಮಾಡಿದ್ದಾರೆ. ನಾನು 36 ವರ್ಷಕ್ಕೂ ಹೆಚ್ಚು ಅವಧಿಗೆ ಯಾವುದೇ ಆರೋಪವಿಲ್ಲದೇ ಪ್ರಾಮಾಣಿಕತೆಯಿಂದ ಹಾಗೂ ನಿಷ್ಠೆಯಿಂದ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ್ದೇನೆ. ಸೇವಾವಧಿಯಲ್ಲಿ ಗಳಿಸಿದ್ದ ವಿಶ್ವಾಸ ಹಾಗೂ ಸದಸ್ಯರ ನಂಬಿಕೆಯನ್ನು ಹಾಳು ಮಾಡುವ ದುರುದ್ದೇಶದಿಂದ ಆರೋಪಿತರು ಮಾಡಿರುವ ಅಪರಾಧಕ್ಕೆ ಶಿಕ್ಷೆ ನೀಡಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದರು.

ಮಾನಹಾನಿ ಖಾಸಗಿ ದೂರನ್ನು ವಿಚಾರಣೆ ನಡೆಸಿದ ಬೆಂಗಳೂರಿನ 6ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮೆಜಿಸ್ಟ್ರೇಟ್ ನ್ಯಾಯಾಲಯ, ಐಪಿಸಿ ಕಲಂ 500 ಅಡಿ ಶಿಕ್ಷೆಗೆ ಒಳಪಡಬಹುದಾದ ಅಪರಾಧದಡಿ ಕ್ರಿಮಿನಲ್ ದಾವೆಯನ್ನು ದಾಖಲಿಸಿಕೊಳ್ಳಲು ನಿರ್ದೇಶಿಸಿ, ಅರೋಪಿ 1 ರಿಂದ 12ರವರೆಗೆ ಎಲ್ಲರೂ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ಹೊರಡಿಸಿತ್ತು.

ಈ ಹಿನ್ನೆಲೆಯಲ್ಲಿ 12 ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿ, ಜಾಮೀನು ಅರ್ಜಿ ಕೋರಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಮಂಜನಾಥ್ ಡಿ.ಆರ್. ಅವರು ಅರ್ಜಿಯನ್ನು ಪರಿಗಣಿಸಿ, ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ತಲಾ ರೂ.2 ಸಾವಿರ ನಗದು ಭದ್ರತಾ ಠೇವಣಿ ಜೊತೆಗೆ ರೂ.25 ಸಾವಿರದ ವೈಯಕ್ತಿಕ ಬಾಂಡ್ ಪಡೆದು ಬಿಡುಗಡೆ ಮಾಡಿದ್ದಾರೆ. ಆರೋಪಿಗಳು ನ್ಯಾಯಾಲಯಕ್ಕೆ ವಿಚಾರಣೆಗೆ ತಪ್ಪದೇ ಹಾಜರಾಗುವಂತೆ ಹಾಗೂ ವಿಳಾಸದ ದಾಖಲೆ ಒದಗಿಸಲು ಆದೇಶಿಸಿ, ಮುಂದಿನ ವಿಚಾರಣೆಯನ್ನು 2026, ಫೆಬ್ರವರಿ 19ಕ್ಕೆ ನಿಗದಿಗೊಳಿದ್ದಾರೆ.

key words: Defamation case, Conditional bail, Karnataka Journalists’ Cooperative Society president