ಮುಷ್ಕರ ವೇಳೆ ವಜಾಗೊಂಡಿದ್ದ ಐದನೂರು ಮಂದಿ ಸಿಬ್ಬಂದಿ ವಾಪಾಸ್ ಬರಲು  ಡಿಸೆಂಬರ್ ಗಡುವು – ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ.

ಬೆಂಗಳೂರು,ಡಿಸೆಂಬರ್, 17,2022(www.justkannada.in): ಕಳೆದ ಕೋವಿಡ್ ಸಂದರ್ಭದಲ್ಲಿ ಮುಷ್ಕರದಲ್ಲಿ ಭಾಗವಹಿಸಿ ವಜಾಗೊಂಡಿದ್ದ ಎರಡು ಸಾವಿರ ಬಿಎಂಟಿಸಿ ಸಿಬ್ಬಂದಿಗಳಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದ ಐದನೂರು ಮಂದಿ ಸಿಬ್ಬಂದಿಗಳನ್ನು ಶೀಘ್ರವೇ ವಾಪಾಸ್ ತೆಗೆದುಕೊಳ್ಳಲಾಗುವುದು ಎಂದು ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ತಿಳಿಸಿದರು.

ಬೆಂಗಳೂರಿನ ಶಾಂತಿನಗರ ಕಚೇರಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ  ಅವರು, ವಜಾಗೊಂಡು ನ್ಯಾಯಾಲಯದ ಮೊರೆ ಹೋಗಿರುವ ಐದನೂರು ಮಂದಿ ಸಿಬ್ಬಂದಿಗಳು ಡಿಸೆಂಬರ್ ಅಂತ್ಯದೊಳಗೆ ನಮ್ಮ ಕಚೇರಿಯಲ್ಲಿಯೇ ನಡೆಯುವ ಲೋಕ ಆದಾಲತ್ ನಲ್ಲಿ ಭಾಗವಹಿಸಿ ತಮ್ಮ ಪ್ರಕರಣವನ್ನು ಬಗೆಹರಿಸಿಕೊಂಡು ಕೆಲಸಕ್ಕೆ ವಾಪಾಸ್ ತೆರಳಲು ಅವಕಾಶ ನೀಡಲಾಗಿದೆ. ಇದು ಡಿಸೆಂಬರ್ ಅಂತ್ಯದೊಳಗೆ ಮಾತ್ರ ಅಷ್ಟರೊಳಗೆ ಯಾರು ಬರುವುದಿಲ್ಲವೋ ಅವರಿಗೆ ಅವಕಾಶ ಇರುವುದಿಲ್ಲ ಎಂದು ಹೇಳಿದರು.

ಬೆಂಗಳೂರಿನಲ್ಲಿ ಬಿಎಂಟಿಸಿ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡಲಾಗಿದೆ. ಸುಮಾರು 2 ಸಾವಿರ ನೂತನ ಬಸ್ ಗಳನ್ನು ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಿಡಲಾಗಿದೆ ಎಂದು ತಿಳಿಸಿದರು.

ಬಿಎಂಟಿಸಿ ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್ ಸುದ್ದಿಗಾರರೊಂದಿಗೆ ಮಾತನಾಡಿ, ಬಿಎಂಟಿಸಿ ಬಸ್ ಗಳ ಮೇಲಿನ ಅಪಘಾತ ದೂರುಗಳ ಪತ್ತೆಗಾಗಿ ಬಸ್ ಗಳ ಮುಂಭಾಗ ಹಾಗು ಹಿಂಭಾಗ ಸಿಸಿ ಕ್ಯಾಮರಾಗಳನ್ನು ಅಳವಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ನಾಡೋಜ ಡಾ.ಮನು ಬಳಿಗಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ರಾದ ಪದ್ಮಶ್ರೀ ಡಾ.ದೊಡ್ಡ ರಂಗೇಗೌಡ ಅವರಿಗೆ ಗೌರವಾಭಿನಂದನೆ ಸಲ್ಲಿಸಲಾಯಿತು.

ಇದೇ ಸಂದರ್ಭದಲ್ಲಿ ಸಿಬ್ಬಂದಿಗಳಿಗೆ ಕನ್ನಡ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಿಎಂಟಿಸಿ ಭದ್ರತಾ ವಿಭಾಗದ ನಿರ್ದೇಶಕಿ ರಾಧಿಕಾ.ಜಿ. ವ.ಚ. ಚನ್ನೇಗೌಡ ಮತ್ತಿತರರು ಹಾಜರಿದ್ದರು.

Key words: December – deadline – five hundred -staff – return- BMTC -Chairman -Nandish Reddy