ಪತ್ನಿ ಹತ್ಯೆ ಮಾಡಿದ್ದ ಪತಿಗೆ ಮರಣ ದಂಡನೆ ಶಿಕ್ಷೆ ಪ್ರಕಟ

ಮೈಸೂರು,ಆಗಸ್ಟ್,29,2025 (www.justkannada.in):  ಪತ್ನಿಗೆ ಮಾನಸಿಕ ದೈಹಿಕ ಕಿರುಕುಳ ನೀಡಿ ಮಚ್ಚಿನಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದ ಆರೋಪಿ ಆಕೆಯ ಪತಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ಮೈಸೂರಿನ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.

ಮಹೇಶ್ ಮರಣದಂಡನೆ ಶಿಕ್ಷೆಗೆ ಗುರಿಯಾದ ಪತಿ. ಶಿಲ್ಪ ಕೊಲೆಯಾದ ಪತ್ನಿ. 15 ಏಪ್ರಿಲ್ 2024 ರಂದು ಗಾರ್ಮೆಂಟ್ಸ್ ಗೆ ಹೋಗುತ್ತಿದ್ದ ಪತ್ನಿ ಶಿಲ್ಪಾರನ್ನ ಮಹೇಶ್ ಕೊಲೆ ಮಾಡಿ ಪರಾರಿಯಾಗಿದ್ದನು. ಈ ಸಂಬಂಧ ಶಿಲ್ಪಾ ಅವರ ತಂದೆ ಆಲನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.  ಮಹೇಶ್ ಇಸ್ಪೀಟ್ ಚಟಕ್ಕೆ ಬಿದ್ದು ಹಣ ಕಳೆದುಕೊಂಡಿದ್ದು ಮನೆಯಿಂದ ಹಣ ತರುವಂತೆ ನನ್ನ ಮಗಳಿಗೆ ಕಿರುಕುಳ ನೀಡುತ್ತಿದ್ದನು. ಅಲ್ಲದೆ ಮನೆ ಮಾರಾಟ ಮಾಡುವುದಕ್ಕೆ ಸಹಿ ಮಾಡುವಂತೆ ಒತ್ತಾಯ ಮಾಡಿ ಕಿರುಕುಳ ನೀಡಿ ಕೊಲೆ ಬೆದರಿಕೆ ಹಾಕಿದ್ದನು. ನಂತರ ಗಾರ್ಮೆಂಟ್ಸ್ ಗೆ ಹೋಗಿದ್ದ ನನ್ನ ಮಗಳು ಶಿಲ್ಪಾಳನ್ನ  15 ಏಪ್ರಿಲ್ 2024 ರಂದು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಮಹೇಶ್ ಪರಾರಿಯಾಗಿದ್ದನು ಎಂದು ದೂರಿನಲ್ಲಿ ಮೃತ ಶಿಲ್ಪಾರ ತಂದೆ ಉಲ್ಲೇಖಿಸಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ಆರೋಪಿ ವಿರುದ್ದ ದೋಷಾರೋಪಣ ಪತ್ರ ಸಲ್ಲಿಸಿದ್ದರು.  ಪ್ರಕರಣದ ವಿಚಾರಣೆ ನಡೆಸಿದ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರೂಪಾ ರವರು ಅಭಿಯೋಜನೆಯು ಹಾಜರುಪಡಿಸಿದ ಸಾಕ್ಷಾಧಾರಗಳನ್ನು ಪರಿಶೀಲಿಸಿ ಆರೋಪಿತನಿಗೆ ಕಲಂ 302 ಐಪಿಸಿ ಅಡಿಯ ಅಪರಾಧಕ್ಕೆ ಮರಣದಂಡನೆ ಶಿಕ್ಷೆ ಮತ್ತು ರೂ.1,00,000/- ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸದರಿ ಪ್ರಕರಣದಲ್ಲಿ ಮೈಸೂರಿನ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಬಿ.ಈ.ಯೋಗೇಶ್ವರ  ಅವರು ಸರ್ಕಾರದ ಪರ ವಾದ ಮಂಡಿಸಿದರು.

Key words: Death penalty, announced ,husband, murdered, wife, Mysore