ಚರಿತ್ರೆ ಮರೆತಿದ್ದ ಡಿಯರ್ ಮೀಡಿಯಾವನ್ನು ಈಗ ಗಡಬಡಿಸಿ ಎಬ್ಬಿಸಿ ಕುಳ್ಳಿರಿಸಿದ್ದು ಯಾವುದು?!

ಬೆಂಗಳೂರು,ಸೆಪ್ಟಂಬರ್,16,2025:  ಭಾರತದಲ್ಲಿ ಪತ್ರಿಕೋದ್ಯಮದ ಹುಟ್ಟು ಯಾಕಾಯಿತು ಎಂಬುದು ನೆನಪಿನ ಭಿತ್ತಿಯಿಂದ ಕಳೆದುಹೋಗಿರುವುದೇ ಭಾರತದಲ್ಲಿ ಈವತ್ತು ಮಾಧ್ಯಮಗಳ “ಡಿಯರ್‌ನೆಸ್”ಗೆ ಮೂಲ ಕಾರಣ.
ಸ್ವತಂತ್ರ ಭಾರತದಲ್ಲಿ ಪತ್ರಿಕೋದ್ಯಮವೇನೂ ಕೋಟಿಗಟ್ಟಲೆ ತೂಕದ ಬ್ಯಾಲೆನ್ಸ್ ಶೀಟ್ ಕೊಡಿಸುವ ಉದ್ಯಮ ಆಗಿರಲಿಲ್ಲ. ಆದರೆ ಯಾವತ್ತು ದೇಶ ಉದಾರೀಕರಣ ಆಯಿತೋ ಆವತ್ತಿನಿಂದ ಮೀಡಿಯಾ ಹೌಸ್‌ಗಳ ಗಮನ ಸುದ್ದಿಗಿಂತ ಹೆಚ್ಚು ತಮ್ಮ ಬ್ಯಾಲೆನ್ಸ್ ಶೀಟ್‌ ಗಳತ್ತ ತಿರುಗಿದೆ. ಆಗ ಇದ್ದ ಹಳದಿ ಪತ್ರಿಕೋದ್ಯಮಿಗಳು ಇದೇ ಪ್ರಿಂಟ್ ಮೀಡಿಯಾದವರು; ಲೈಸನ್ಸ್ ಇದ್ದೇ ರೋಲ್‌ ಕಾಲ್‌ಗೆ ಇಳಿದವರು. ಅಂದು ಅದು ಮಾಧ್ಯಮ ಕ್ಷೇತ್ರಕ್ಕೆ ಬಂದ ಕೆಲವು “ತಪ್ಪು ವ್ಯಕ್ತಿಗಳ” ಕಿತಾಪತಿ ಎಂದು ಬಿಂಬಿತವಾಯಿತೇ ಹೊರತು ಮಾಧ್ಯಮ ವ್ಯವಸ್ಥೆ ಸರಿ ಇಲ್ಲ ಎಂದು ಯಾರೂ ಹೇಳಲಿಲ್ಲ.
ಮುಂದಿನ ಹಂತದಲ್ಲಿ, ಮಾಧ್ಯಮಗಳಿಗೆ ಸುರಿಯುವ ಜಾಹೀರಾತು ಹಣದ ಬದಲು ತಾವೇ ಮಾಧ್ಯಮ ನಡೆಸಬಹುದೆಂಬ “ವ್ಯಾಪಾರೀ ಲಾಭದ” ಆಲೋಚನೆ ಬಂದ ಕೂಡಲೇ “ಆನಿ”ಗಳೆಲ್ಲ ಮಾಧ್ಯಮ ಸಂಸ್ಥೆ ಮಾಲಕರಾದರು, ತಮ್ಮ ಹಿತಾಸಕ್ತಿಗಳಿಗೆ ಬಗ್ಗದ ಕಸುಬುದಾರ ಪತ್ರಕರ್ತರನ್ನೆಲ್ಲ ಮನೆಗೆ ಅಟ್ಟಿ, ಕರಪತ್ರ ಡಿಸೈನರ್‌ ಗಳನ್ನು ಸಂಪಾದಕರೆಂದೂ, ಅವರು ಹಿಂಡು ಕಟ್ಟಿ ತಂದ ಕಾರುಕೂನರನ್ನು ಪತ್ರಕರ್ತರೆಂದೂ ಪ್ರತಿಷ್ಠಾಪಿಸಿದರು. ಜೋಳಿಗೆ ಸಂಪಾದಕರಾಗಿದ್ದವರ ಜಾಗದಲ್ಲಿ ಭರ್ಜರಿ ಕಾರು-ಬಾರು, ವಿಮಾನ ತಿರುಗಾಟದವರೆಲ್ಲ ಮಾಧ್ಯಮ ಎಂದು ಕಾಣಿಸಿಕೊಂಡರು. ಆಗಲೂ ಮಾಧ್ಯಮ ವ್ಯವಸ್ಥೆ ಸರಿ ಇಲ್ಲ ಎಂದು ಯಾರೂ ಹೇಳಲಿಲ್ಲ.
ಟೆಲಿವಿಷನ್ ಚಾನೆಲ್ ‌ಗಳು ಆರಂಭಗೊಂಡಾಗ, ಪತ್ರಕರ್ತರಿಗಿಂತ ಹೆಚ್ಚಾಗಿ, ಊರೂರುಗಳಲ್ಲಿ ಸ್ಟುಡಿಯೋ ಮಾಲಕರು, ವೀಡಿಯೊಗ್ರಾಫರ್‌ ಗಳೆಲ್ಲ ಮೂತಿಗೆ ಮೈಕ್ ಹಿಡಿದು ಬೈಟ್ ಕೇಳುವ ಕೆಲಸಕ್ಕೆ ಇಳಿದರು. ಅವರಿಗೆ ಸುದ್ದಿಗಿಂತ ನೋಡುಗರ ತುರಿಕೆ, ತಮ್ಮ ಸುಪ್ತವಾಗಿದ್ದ ಹಣಕಿಕ್ಕುವ ರೋಗ ಕೆದಕುವುದಕ್ಕೇ ಹೆಚ್ಚು ಆಸಕ್ತಿ ಹುಟ್ಟಿತು. ಬಹುತೇಕ ಮಂದಿಗೆ ಸಂಬಳ ಇಲ್ಲದಿದ್ದರೂ “ದುಡಿಯುವ” ತಂತ್ರ, ಕೈಚಳಕಗಳೆಲ್ಲ ಚೆನ್ನಾಗಿ ಮೈಗತವಾದವು. ಆಗ ಅದೆಲ್ಲ ತಪ್ಪು ಎಂದು ಅನ್ನಿಸಲಿಲ್ಲ. ಈಗ ಸ್ವರ ಎತ್ತುತ್ತಿರುವ ಚಾನೆಲ್ “ಮಾಲಕರು” (ಮಾಲಕರೆಂದರೆ ಆ ಹೆಸರಿಟ್ಟುಕೊಂಡವರೇ ಹೊರತು ದುಡ್ಡು ತೊಡಗಿಸಿದವರಲ್ಲ!) ಆಗ ಮಾಧ್ಯಮ ವ್ಯವಸ್ಥೆ ಸರಿ ಇಲ್ಲ ಎಂದು ಹೇಳಲಿಲ್ಲ.
ಇಂದು ತಂತ್ರಜ್ಞಾನ ಬೆಳೆದಿದೆ, ಸ್ಮಾರ್ಟ್ ಫೋನ್ ಇರುವ ಪ್ರತಿಯೊಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಚಾನೆಲ್ ಹೊಂದಬಲ್ಲರು, ಸುದ್ದಿ ಪ್ರಸಾರ ಮಾಡಬಲ್ಲರು, ಟಿವಿ ಚಾನೆಲ್-ಪತ್ರಿಕೆಗಳಿಗೆ ಅವರ ಹತ್ತು ಪಟ್ಟು “ಇಂಪ್ಯಾಕ್ಟ್” ಮಾಡಿ ತೋರಿಸಬಲ್ಲರು. ಇದು ಈಗ “ಮಾಧ್ಯಮ” ಎಂಬ ಕಿರೀಟ ಧರಿಸಿಕುಳಿತಿರುವವರೆಲ್ಲರ ಹೊಟ್ಟೆ ಉರಿಗೆ ಕಾರಣ ಆಗಿದೆ. ಆ ಕಾರಣಕ್ಕೇ, ಮಾಧ್ಯಮ ಸಂಘದವರು ಯು ಟ್ಯೂಬ್ ಚಾನೆಲ್ ಗಳಿಗೆಲ್ಲ ಲೈಸನ್ಸ್ ಅಳವಡಿಸಿ ಎಂದು ಸರ್ಕಾರಕ್ಕೆ ಅಲವತ್ತುಕೊಳ್ಳುತ್ತಿರುವುದು ತಮಾಷೆ ಆಗಿ ಕಾಣಿಸುತ್ತಿದೆ.
ಸುಳ್ಳು ಸುದ್ದಿ, ರೋಲ್‌ ಕಾಲ್, ವದಂತಿ, ಅಜೆಂಡಾ ಪ್ರಚಾರ ಇವಕ್ಕೆಲ್ಲ “ಭಾರತೀಯ ನ್ಯಾಯಸಂಹಿತೆ”ಯ ಅಡಿಯಲ್ಲಿ ಕಠಿಣ ಕಾನೂನುಗಳು ಈಗಾಗಲೇ ಇವೆ. ಮುಲಾಜಿಲ್ಲದೇ, ಅದು ಯಾವ ರೀತಿಯ (ಟಿವಿ, ಪತ್ರಿಕೆ, ವೆಬ್, ಯುಟ್ಯೂಬ್, ಐಟಿ ಸೆಲ್) ಮಾಧ್ಯಮ ಆಗಿದ್ದರೂ ಅದನ್ನು ಕಾನೂನಿನ ಚೌಕಟ್ಟಿನೊಳಗೆ, ನೈತಿಕ ಚೌಕಟ್ಟಿನೊಳಗೆ, ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುವಂತೆ ಮಾಡುವುದು ಸರ್ಕಾರದ “ಕಾನೂನು-ಸುವ್ಯವಸ್ಥೆ” ಜವಾಬ್ದಾರಿ. ಅದರಲ್ಲಿ ಎರಡು ಮಾತಿಲ್ಲ.
ಆದರೆ, ವಿದೇಶೀ ಮೂಲ ಹೊಂದಿ ಭಾರತದಲ್ಲಿ ಕಾರ್ಯಾಚರಿಸುತ್ತಿರುವ ಬೃಹತ್ ಕಾರ್ಪೋರೇಷನ್‌ಗಳಿಗೆ ಕಡಿವಾಣ ಹಾಕಲು ಜಗತ್ತಿನಾದ್ಯಂತ ಸರ್ಕಾರಗಳೆಲ್ಲ ಏದುಸಿರು ಬಿಡುತ್ತಿವೆ. ಕೋಟ್ಯಂತರ ಡಾಲರ್ ದಂಡ ಹೇರಿದರೆ ಕ್ಷಣಾರ್ಧದಲ್ಲಿ ಅದನ್ನು ಮುಖಕ್ಕೆ ಎಸೆದು, ತಾವು ಮಾಡುವುದನ್ನೇ ಮುಂದುವರಿಸುವ ತಾಕತ್ತಿರುವ ಸಂಸ್ಥೆಗಳವು. ಅದನ್ನು ಆ ಸಂಸ್ಥೆಗಳು ಮಾಡಿಯೂ ತೋರಿಸಿವೆ. ರಾಜ್ಯ ಸರ್ಕಾರವೊಂದಕ್ಕೆ ಇವರಿಗೆ ಕಡಿವಾಣ ಹಾಕುವ ವಿಚಾರದಲ್ಲಿ ಇರುವ ಅಧಿಕಾರಗಳು ಸೀಮಿತ.
ಮಾಧ್ಯಮ ಎಂದು ಕರೆಸಿಕೊಂಡವರು “ಸ್ವಯಂ ನಿಯಂತ್ರಣ” “ಸ್ವಯಂ ನೈತಿಕ ಜವಾಬ್ದಾರಿ” ಹೊಂದುವ ಬದಲು, ನಮ್ಮ ಸ್ಪರ್ಧಿಗಳಿಗೆ ಕಾನೂನಿನ ನಿಯಂತ್ರಣ ಹೇರಿ ಎಂದು ಸರ್ಕಾರಕ್ಕೆ ಮನವಿ ಮಾಡುವುದೇ ಹಾಸ್ಯಾಸ್ಪದ. ನಿಯಮಗಳು ಜಗತ್ತಿನ ಚರಿತ್ರೆಯಲ್ಲಿ ಎಂದೂ ಪತ್ರಿಕೋದ್ಯಮವನ್ನು ನಿಯಂತ್ರಿಸಿದ್ದೇ ಇಲ್ಲ. “ನಿಯಮೋಲ್ಲಂಘನೆಯೇ ಸುದ್ದಿ ಸಾಗಬೇಕಾದ ನೈತಿಕ ಹಾದಿ” ಎಂಬುದು ಪತ್ರಿಕೋದ್ಯಮದ ಬಾಲಪಾಠ. ಇದನ್ನು ಈ ಮಹಾಶಯರಿಗೆಲ್ಲ ವಿವರಿಸುವವರು ಯಾರು?!!
ಕೃಪೆ
ರಾಜಾರಾಂ ತಳ್ಳೂರ್
key words: Dear Media,  forgotten, history, Journalism