ಪ್ರಧಾನಿ ಮೋದಿ ಭೇಟಿ ವೇಳೆ ಶಿಷ್ಟಾಚಾರ ಪಾಲನೆ ಮಾಡಿಲ್ಲ ಎಂದ ಆರ್.ಅಶೋಕ್ ಗೆ ಡಿಸಿಎಂ ಡಿಕೆ.ಶಿವಕುಮಾರ್ ತಿರುಗೇಟು..

ಬೆಂಗಳೂರು, ಆಗಸ್ಟ್,26,2023(www.justkannada.in):  ಪ್ರಧಾನಿ ನರೇಂದ್ರ ಮೋದಿ ಇಂದು  ಬೆಂಗಳೂರಿಗೆ ಭೇಟಿ ನೀಡಿದ ವೇಳೆ ರಾಜ್ಯ ಕಾಂಗ್ರೆಸ್ ಸರ್ಕಾರ ಶಿಷ್ಟಾಚಾರ ಪಾಲನೆ ಮಾಡಿಲ್ಲ ಎಂದು ಆರೋಪಿಸಿದ ಮಾಜಿ ಸಚಿವ ಆರ್ ಅಶೋಕ್ ಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಡಿ.ಕೆ ಶಿವಕುಮಾರ್,  ಯಾರಿಗೆ ಎಷ್ಟು ಗೌರವ ಕೋಡಬೇಕೆಂದು ನಮಗೆ ಗೊತ್ತಿದೆ. ರಾಜಕೀಯ ಪ್ರಜ್ಞೆ, ಸಮಯ ಪ್ರಜ್ಞೆ ಎಲ್ಲವೂ ಇದೆ. ಅಶೋಕ್ ಅವರಿಗೆ ಸ್ವಲ್ಪ ಸಮಸ್ಯೆ ಇದ್ದಂತಿದೆ. ರಾಜಕೀಯ ಪ್ರಜ್ಞೆ, ಸಮಯ ಪ್ರಜ್ಞೆ ಎಲ್ಲವೂ ನಮಗೆ ಇದೆ ಎಂದು ಟಾಂಗ್ ನೀಡಿದರು.

ಪ್ರಧಾನಮಂತ್ರಿ ಕಚೇರಿಯಿಂದ ನಮಗೆ ಕರೆ ಬಂದಿತ್ತು. ಪ್ರಧಾನಿಯವರ ಸ್ವಾಗತಕ್ಕೆ ಬರುವುದು ಬೇಡ ಎಂದು ಕೇಂದ್ರ ಸರ್ಕಾರವೇ ನಮಗೆ ಹೇಳಿತ್ತು. ಹಾಗಾಗಿ ಸರ್ಕಾರದ ವತಿಯಿಂದ ಪ್ರಧಾನಿ ಮೋದಿ ಅವರ ಸ್ವಾಗತ ಮಾಡಿಸಿದ್ದೇವೆ. ಯಾರಿಗೆ ಎಷ್ಟು ಗೌರವ ಕೋಡಬೇಕು ಅಂತಾ ನಮಗೆ ಗೊತ್ತಿದೆ. ಬೇರೆ ರಾಜ್ಯಗಳ ರೀತಿ ಅಲ್ಲ ನಮ್ಮ ಸಂಸ್ಕೃತಿ. ರಾಜಕೀಯ ಭಿನ್ನಾಭಿಪ್ರಾಯ ಇದ್ದರೂ ಪ್ರಧಾನಿ ಅವರಿಗೆ ಗೌರವ ಕೊಡುತ್ತೇವೆ ಎಂದು ಡಿಕೆ ಶಿವಕುಮಾರ್​ ಹೇಳಿದ್ದಾರೆ.

ಬಿಜೆಪಿ ನಾಯಕರಾದ ರೇಣುಕಾಚಾರ್ಯ,  ಶಾಸಕ ಶಿವರಾಂ  ಹೆಬ್ಬಾರ್ ಅವರು ಸಿಎಂ ಸಿದ್ಧರಾಮಯ್ಯರನ್ನ ಭೇಟಿ ಮಾಡಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ ಶಿವಕುಮಾರ್,  ಶಾಸಕರ ಕ್ಷೇತ್ರದಲ್ಲಿ ಜನರ ಸಮಸ್ಯೆ ಇರುತ್ತೆ. ಅಧಿಕಾರದಲ್ಲಿರುವ ನಾಯಕರ ಭೇಟಿ ಮಾಡ್ತಾರೆ. ಸರ್ಕಾರದ ಬಳಿ ಕ್ಷೇತ್ರದ ಕೆಲಸ ಮಾಡಿಸಿಕೊಳ್ಳುತ್ತಾರೆ.  ಭೇಟಿ ಮಾಡುವುದರಲ್ಲಿ ತಪ್ಪೇನಿದೆ..? ಎಸ್.ಟಿ ಸೋಮಶೇಖರ್ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಇದೆ. ಹೀಗಾಗಿ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದೇನೆ. ಪ್ರೀತಿ, ಸ್ನೇಹ, ಬಾಂಧವ್ಯ ಬೇರೆ. ರಾಜಕೀಯ ಬೇರೆ.  ನಮಗೆ ಅಪರೇಷನ್ ಹಸ್ತ ಮಾಡುವ ಅವಶ್ಯಕತೆ ಇಲ್ಲ. ಮಾಡಲ್ಲ ಎಂದು ಸ್ಪಷ್ಟನೆ ನೀಡಿದರು.

Key words: DCM -DK. Shivakumar – R. Ashok – protocol – visit -PM Modi.