ಬೆಂಗಳೂರು,ಜನವರಿ,3,2026 (www.justkannada.in): ರಾಜ್ಯದ ಕೂಲಿ ಕಾರ್ಮಿಕರ ಬದುಕು ಹಾಗೂ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಮಾರಕವಾಗಿರುವ ವಿಬಿ ಜಿ ರಾಮ್ ಜಿ ಮಸೂದೆಯನ್ನು ಹಿಂಪಡೆಯುವವರೆಗೂ ಕೇಂದ್ರ ಸರ್ಕಾರದ ವಿರುದ್ದ ಹೋರಾಟ ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದರು. 
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಶಿವಕುಮಾರ್, ಈ ಮಸೂದೆ ವಿರುದ್ಧದ ಹೋರಾಟ ಕೇವಲ ಪಕ್ಷ ಅಥವಾ ಸರ್ಕಾರಕ್ಕೆ ಮಾತ್ರ ಸೀಮಿತವಲ್ಲ. ಪ್ರತಿ ಪಂಚಾಯ್ತಿಯಲ್ಲಿ ಪ್ರತಿಯೊಬ್ಬರನ್ನು ಆಹ್ವಾನ ನೀಡಿ ನಮ್ಮ ನಾಯಕರು ಸೇರಿ ಸಮಾವೇಶ ಹಾಗೂ ಗ್ರಾಮ ಸಭೆ ನಡೆಸುತ್ತೇವೆ. ಅಲ್ಲಿ ಇದರ ಬಗ್ಗೆ ಚರ್ಚೆ ಮಾಡುತ್ತೇವೆ. ನಂತರ ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಮನರೇಗಾ ಪ್ರತಿ ಕೂಲಿ ಕಾರ್ಮಿಕರ ಕುಟುಂಬಕ್ಕೆ ಶಕ್ತಿ ತುಂಬಿತ್ತು. ಇಂದಿರಾ ಆವಾಸ್, ರಾಜ್ಯ ಹಾಗೂ ಕೇಂದ್ರ ವಸತಿ ಯೋಜನೆ ಸೇರಿದಂತೆ ವಿವಿಧ ವಸತಿ ಯೋಜನೆಗಳಲ್ಲಿ ತಾನು ತನ್ನ ಮನೆ ಕಟ್ಟಿಕೊಳ್ಳಲು ಮನರೇಗಾ ಯೋಜನೆ ಕೂಲಿ ನೀಡುತ್ತಿತ್ತು. ಈಗ ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ಇಂದಿರಾ ಅವಾಸ್, ರಾಜ್ಯ ಹಾಗೂ ಕೇಂದ್ರ ಅವಾಸ್ ಯೋಜನೆಗಳ ಮನೆ ನಿರ್ಮಾಣಕ್ಕೆ ನೀಡಲಾಗುತ್ತಿದ್ದ ಕೂಲಿಯನ್ನು ತೆಗೆದುಹಾಕಲಾಗಿದೆ. ಕೇವಲ ಪ್ರಧಾನಮಂತ್ರಿ ಅವಾಸ್ ಯೋಜನೆ ಮಾತ್ರ ಅವಕಾಶ ನೀಡಿದ್ದಾರೆ ಎಂದು ಡಿಕೆ ಶಿವಕುಮಾರ್ ಗುಡುಗಿದರು.
ಬಿಜೆಪಿ ನಾಯಕರಿಗೆ ಗಾಂಧೀಜಿ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ. ತಮ್ಮ ಕಚೇರಿಗಳಲ್ಲಿ ಗಾಂಧೀಜಿ ಅವರ ಫೋಟೋ ಇಟ್ಟುಕೊಳ್ಳುವ ಯೋಗ್ಯತೆ ಕೂಡ ಅವರು ಉಳಿಸಿಕೊಂಡಿಲ್ಲ. ಅವರ ಹೆಸರನ್ನು ಯೋಜನೆಯಿಂದ ತೆಗೆದ ಮೇಲೆ ನಿಮಗೆ ಯಾವ ನೈತಿಕತೆ ಇದೆ? ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದರು.
Key words: VB Ji Ram Ji Act, withdraw, Central Government, DCM, D.K. Shivakumar







