‘ಅವನೇ ಶ್ರೀಮನ್ನಾರಾಯಣ’ ಬಿಡುಗಡೆಗೆ ಡೇಟ್​ ಫಿಕ್ಸ್…

ಬೆಂಗಳೂರು,ಅ,22,2019(www.justkannada.in): ರಕ್ಷಿತ್​ ಶೆಟ್ಟಿಯ ಬಹು ನಿರೀಕ್ಷಿತ ಚಿತ್ರ ‘ಅವನೇ ಶ್ರೀಮನ್ನಾರಾಯಣ’ ದ ಬಿಡುಗಡೆಯ ಡೇಟ್​ ಫಿಕ್ಸ್​ ಆಗಿದ್ದು  ಡಿಸೆಂಬರ್​​ 27ಕ್ಕೆ  ಸಿನಿಮಾ ತೆರೆಗೆ ಬರಲಿದೆ.

ಸ್ಯಾಂಡಲ್​ ವುಡ್​ ನಲ್ಲಿ ಬಹುದಿನಗಳ ನಂತರ ರಕ್ಷಿತ್​​ ತೆರೆಗೆ ಬರಲು ಸಜ್ಜಾಗಿದ್ದಾರೆ. ಕಿರಿಕ್​ ಪಾರ್ಟಿ ಯಶಸ್ವಿ ಚಿತ್ರದ ನಾಯಕ ನಟ ರಕ್ಷಿತ್​ ಶೆಟ್ಟಿ ಈಗ ಮತ್ತೆ ‘ಅವನೇ ಶ್ರೀಮನ್ನಾರಾಯಣ’ ಎನ್ನುತ್ತಾ ಪ್ರೇಕ್ಷಕರ ಮುಂದೆ ಬರುತಿದ್ದಾರೆ. ರಕ್ಷಿತ್​ ರ ಬಹು ನಿರೀಕ್ಷಿತ ಚಿತ್ರವಾಗಿರುವ ಶ್ರೀಮನ್ನಾರಾಯಣ ಚಿತ್ರೀಕರಣ ಪ್ರಾರಂಭವಾದಾಗಿನಿಂದ ಕುತೂಹಲ ಮೂಡಿಸುತ್ತಿದೆ. ರಕ್ಷಿತ್​ ಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಚಿತ್ರವು ತನ್ನ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟಾಗಿಸಿಕೊಂಡಿದೆ.

ರಕ್ಷಿತ್​ ರನ್ನು ಹೊಸ ಮ್ಯಾನರಿಸಂನಲ್ಲಿ ನೋಡಬೇಕು ಎಂದು ಕಾಯುತ್ತಿರುವ ಅಭಿಮಾನಿಗಳಿಗೆ ಈಗ ಸಂತಸದ ಸುದ್ದಿಯೊಂದು ಹೊರ ಬಿದ್ದಿದೆ. ಶ್ರೀಮನ್ನಾರಾಯಣ ವಷಾಂತ್ಯದಲ್ಲಿ ಅಂದರೆ ಡಿಸೆಂಬರ್​ 27 ರಂದು ಬೆಳ್ಳಿ ತೆರೆಗೆ ಅಪ್ಪಳಿಲಿದೆ. ಈ ಮಾಹಿತಿಯನ್ನು ಸ್ವತಃ ರಕ್ಷಿತ್​ ಅವರು ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.   “ಶ್ರೀಮನ್ನಾರಾಯಣ ಡಿಸೆಂಬರ್​ 27 ರಂದು ತೆರೆಗೆ ಬರುತ್ತಿದೆ”, ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಇದೇ ದಿನ ರಕ್ಷಿತ್​ ತಮ್ಮ ಹಿಂದಿನ ಯಶಸ್ವಿ ಚಿತ್ರವಾದ ಕಿರಿಕ್​ ಪಾರ್ಟಿ ಗೆ ಮೂರು ವರ್ಷಗಳು ತುಂಬುತ್ತವೆ. ಅದೂ ಕೂಡ ಡಿಸೆಂಬರ್​ 27 ರಂದು ಬಿಡುಗಡೆಯಾಗಿತ್ತು. ಇದರ ಬಗ್ಗೆಯೂ ರಕ್ಷಿತ್​ ಹೇಳಿಕೊಂಡಿದ್ದಾರೆ. “ನಾವು ಕಿರಿಕ್​ ಪಾರ್ಟಿಯ ಮೂರು ವರ್ಷಗಳ ಸಂಭ್ರಮವನ್ನು ಆಚರಿಸಲಿದ್ದೇವೆ”, ಎಂದು ಬರೆದುಕೊಂಡಿದ್ದಾರೆ.

ಸಚಿನ್​ ರವಿ ಅವರು ಮೊದಲ ಬಾರಿಗೆ ಆ್ಯಕ್ಷನ್​ ಕಟ್​ ಹೇಳಿರುವ  ಶ್ರೀಮನ್ನಾರಾಯಣ ಈ ಮುನ್ನ ನವೆಂಬರ್​ ಅಂತ್ಯದಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿತ್ತು. 80 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಶ್ರೀಮನ್ನಾರಾಯಣ ಚಿತ್ರಕ್ಕೆ ಪುಷ್ಕರ ಮಲ್ಲಿಖಾರ್ಜುನಯ್ಯ ಮತ್ತು ಎ ಕೆ ಪ್ರಕಾಶ್​ ಬಂಡವಾಳ ಹೂಡಿದ್ದಾರೆ. ಬಿ ಅಜನೀಶ್​ ಲೋಕನಾಥ್​ ಮತ್ತು ಚರಣ್​ ರಾಜ್​ ರಾಗ ಸಂಯೋಜನೆ ಮಾಡಿದ್ದಾರೆ.

ಶ್ರೀಮನ್ನಾರಾಯಣ ನವಿರು ಪ್ರೇಮ ಮತ್ತು ಹಾಸ್ಯ ಮಿಶ್ರಿ ಕಥೆಯಾಗಿದೆ. ಕರ್ಮ್​ ಚಾವ್ಲಾ ಅವರ ಕ್ಯಾಮರಾ ಕೈಚಳಕ ಚಿತ್ರಕ್ಕಿದೆ.  ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ರಕ್ಷಿತ್​ ಶೆಟ್ಟಿ ಮತ್ತು ಶಾನ್ವಿ ಶ್ರೀವಾಸ್ತವ್​ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಉಳಿದಂತೆ ಅಚ್ಯುತ್​ ಕುಮಾರ್​, ಪ್ರಮೋದ್​ ಶೆಟ್ಟಿ, ಬಾಲಾಜಿ ಮನೋಹರ್​ ತಾರಾಗಣದಲ್ಲಿದ್ದಾರೆ.

Key words: Date -fix – release – ‘Avane Srimannarayana-rakshith shetty