ಮೈಸೂರು ನವೆಂಬರ್,3,2025 (www.justkannada.in): ಅಸಮಾನತೆ ನಿವಾರಣೆ ಪ್ರತಿಯೊಬ್ಬ ರಾಜಕಾರಣಿಯ ಜವಾಬ್ದಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನೂತನವಾಗಿ ಸ್ಥಾಪಿಸಿರುವ ದೇವರಾಜ ಅರಸು ಅವರ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅವಕಾಶ ವಂಚಿತರಿಗೆ ಅವಕಾಶ ಒದಗಿಸಿಕೊಡುವುದು ಪ್ರತಿಯೊಬ್ಬ ರಾಜಕಾರಣಿಯ ಹೊಣೆಗಾರಿಕೆ ಆಗಬೇಕು. ಅರಸು ಅವರು ಅತ್ಯಂತ ಕೆಳಮಟ್ಟದಲ್ಲಿರುವ ಜನ ಸಮುದಾಯಗಳ ಪ್ರತಿನಿಧಿಗಳನ್ನು ವಿಧಾನಸೌಧದ ಮೆಟ್ಟಿಲು ಹತ್ತಿಸುವಂತೆ ಮಾಡಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅರಸು ಅವರು ತಳ ಸಮುದಾಯಗಳಿಗೆ ಅವಕಾಶಗಳನ್ನು ಸೃಷ್ಟಿಸಿದರು. ಆ ಅವಕಾಶಗಳಿಂದ ಬಹಳ ಮಂದಿ ಸಮಾಜದ ಮುಖ್ಯವಾಹಿನಿಗೆ ಬಂದರು. ಸುದೀರ್ಘ ಅವಧಿಯ ಕಾಲ ಮುಖ್ಯಮಂತ್ರಿಗಳಾಗಿ ಸಮಾನ ಅವಕಾಶಗಳನ್ನು ಸೃಷ್ಟಿಸಲು ನಿರಂತರವಾಗಿ ಶ್ರಮಿಸಿದ್ದರು ಎಂದು ವಿವರಿಸಿದರು.
ಬಹುಸಂಖ್ಯಾತ ಶೂದ್ರ ಸಮುದಾಯವನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿದ್ದರಿಂದ ಅಸಮಾನತೆ ಸೃಷ್ಟಿಯಾಗಿದೆ. ನಮ್ಮ ಸರ್ಕಾರ ಅಸಮಾನತೆ ನಿವಾರಿಸಿ ಸಮಾನ ಅವಕಾಶಗಳನ್ನು ಸೃಷ್ಟಿಸಲು ನಿರಂತರವಾಗಿ ಶ್ರಮಿಸುತ್ತಿದೆ, ಜನಪರ, ಸಾಮಾಜಿಕ ನ್ಯಾಯದ ಪರ ಯೋಜನೆಗಳನ್ನು ರೂಪಿಸಿ ಜಾರಿಗೆ ತರುತ್ತಿದೆ ಎಂದರು.
ಶಿಕ್ಷಣ, ಪ್ರತಿಭೆ ಯಾರ ಸ್ವತ್ತೂ ಅಲ್ಲ. ಎಲ್ಲರಲ್ಲೂ ಪ್ರತಿಭೆ ಇದೆ. ಅಂಬೇಡ್ಕರ್ ಮತ್ತು ವಾಲ್ಮೀಕಿ, ವ್ಯಾಸರು ಇದಕ್ಕೆ ಉದಾಹರಣೆ ಎಂದರು.
ನಮ್ಮ ರಾಜ್ಯಕ್ಕೆ “ಕರ್ನಾಟಕ” ಎಂದು ನಾಮಕರಣ ಆಗಿದ್ದು ಅರಸು ಅವರ ಕಾಲದಲ್ಲಿ. ಇದರ ಸುವರ್ಣ ಸಂಭ್ರಮ ಮಾಡಿದ್ದು ನಮ್ಮ ಸರ್ಕಾರ ಎಂದು ಸ್ಮರಿಸಿದರು.
Key words: Mysore, D.Devaraj Urs, Statue, politician, CM Siddaramaiah







