ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​​ಗೆ ಅವಹೇಳನಕಾರಿ ಪದ ಬಳಕೆ ಕೇಸ್ ​: ಹೈಕೋರ್ಟ್ ಗೆ MLC ಸಿಟಿ ರವಿ ಸಲ್ಲಿಸಿದ ಅರ್ಜಿ ವಜಾ

ಬೆಂಗಳೂರು, ಮೇ,2,2025 (www.justkannada.in): ಬೆಳಗಾವಿ ಅಧಿವೇಶನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಅವರ ವಿರುದ್ಧ ಅವಹೇಳನಾಕಾರಿ ಪದ ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ವಿಧಾನ ಪರಿಷತ್​ ಸದಸ್ಯ ಸಿ.ಟಿ.ರವಿ ವಿರುದ್ಧದ ಪ್ರಕರಣ ರದ್ದುಪಡಿಸಲು ಹೈಕೋರ್ಟ್​ ನಿರಾಕರಿಸಿದೆ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಅವಹೇಳನಕಾರಿ ಪದ ಬಳಕೆ ಪ್ರಕರಣ ರದ್ದು ಕೋರಿ ವಿಧಾನಪರಿಷತ್ ಸದಸ್ಯ  ಸಿಟಿ ರವಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್  ವಜಾ ಮಾಡಿದೆ.  ಸದನದಲ್ಲಿ ಅರ್ಜಿದಾರ ಸಿಟಿ ರವಿ ಒಂದು ವೇಳೆ ಅವಹೇಳನಕಾರಿ ಪದ ಬಳಕೆ ಮಾಡಿದ್ದೇ ಆದಲ್ಲಿ ಮಹಿಳೆಯ ಘನತೆಗೆ ಧಕ್ಕೆ ತರುವಂತಾಗಿದೆ. ಅಲ್ಲದೆ, ಆ ರೀತಿಯ ಪದ ಬಳಕೆ ಮಾಡಿದ್ದೇ ಆದಲ್ಲಿ ಅದು ಸದನದಲ್ಲಿನ ಶಾಸಕರ ರಕ್ಷಣಾ ವ್ಯಾಪ್ತಿಗೆ ಬರುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಸಿಟಿ ರವಿ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ವಾದ ಮಂಡಿಸಿ, ವಿಧಾನ ಪರಿಷತ್​​ನಲ್ಲಿ ಘಟನೆ ನಡೆದಿರುವುದರಿಂದ ರವಿ ಅವರಿಗೆ ಶಾಸಕಾಂಗ ವಿನಾಯಿತಿ ಇದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.

ಈ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ದೂರುದಾರರೇ ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಪ್ರಶ್ನಿಸಿದ್ದರು. ಇದೇ ವೇಳೆ ಹೆಬ್ಬಾಳ್ಕರ್ ಪ್ರಕರಣದಲ್ಲಿ ಕಕ್ಷಿದಾರರಾಗಿ ಇರುವುದಾಗಿ ವಕೀಲರು ದೃಢಪಡಿಸಿದ್ದರು. ಈ ಎಲ್ಲಾ ವಾದ ಪ್ರತಿವಾದ ಆಲಿಸಿದ್ದ ನ್ಯಾಯಮೂರ್ತಿ ನಾಗಪ್ರಸನ್ನ ಪೀಠ, ಸಿಟಿ ರವಿ ಅವರ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.

Key words: Case, Minister, Lakshmi Hebbalkar, MLC, CT Ravi, High Court