ಬಡ ವಿದ್ಯಾರ್ಥಿನಿ ಶಿಕ್ಷಣಕ್ಕೆ ಕ್ರಿಕೆಟಿಗ ರಿಷಬ್ ಪಂತ್ ಆರ್ಥಿಕ ನೆರವು: ಅಪಾರ ಮೆಚ್ಚುಗೆ

ಬಾಗಲಕೋಟೆ, ಆಗಸ್ಟ್,7,2025 (www.justkannada.in): ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದರೂ ಪದವಿ ಪ್ರವೇಶಾತಿಗೆ ಹಣವಿಲ್ಲದೇ ಪರದಾಡುತ್ತಿದ್ದ ವಿದ್ಯಾರ್ಥಿನಿಯ ಬಾಳಿಗೆ ಬೆಳಕಾದ ಭಾರತ ಕ್ರಿಕೆಟ್ ತಂಡದ ಆಟಗಾರ ರಿಷಬ್ ಪಂತ್. ಹೌದು  ಕ್ರಿಕೆಟಿಗ ರಿಷಬ್ ಪಂತ್ ಬಡ ವಿದ್ಯಾರ್ಥಿನಿಯ ಶಿಕ್ಷಣಕ್ಕೆ  ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಬೀಳಗಿ ತಾಲೂಕಿನ ರಬಕವಿ ಗ್ರಾಮದ ವಿದ್ಯಾರ್ಥಿನಿ ಜ್ಯೋತಿ ಕಣಬೂರ ಪಿಯುಸಿಯಲ್ಲಿ ಶೇ. 83 ಅಂಕ ಗಳಿಸಿದ್ದಳು. ಉನ್ನತ ಶಿಕ್ಷಣ ಪಡೆಯಬೇಕು ಎಂದು ಕನಸು ಕಂಡಿದ್ದ ವಿದ್ಯಾರ್ಥಿನಿ ಜ್ಯೋತಿಗೆ ಬಡತನ ಹಾಗೂ ಆರ್ಥಿಕ ತೊಂದರೆ ಕಾಡ ತೊಡಗಿತ್ತು.  ತಂದೆ ತೀರ್ಥಯ್ಯ ಗ್ರಾಮದಲ್ಲಿ ಚಿಕ್ಕದಾದ ಚಹಾದ ಅಂಗಡಿ ನಡೆಸುತ್ತಿದ್ದು, ಮಗಳ ಕಲಿಕೆಗೂ ಪರದಾಡುತ್ತಿದ್ದರು.

ಈ ಸಂದರ್ಭದಲ್ಲಿ ತೀರ್ಥಯ್ಯ ಅವರು ಗ್ರಾಮದವರಾದ ಗುತ್ತಿಗೆದಾರ ಅನಿಲ ಹುಣಶಿಕಟ್ಟಿ ಅವರನ್ನು ಜಮಖಂಡಿ ಬಿಎಲ್‌ಡಿಇ ಸಂಸ್ಥೆಯ ಕಾಲೇಜಿನಲ್ಲಿ ಬಿಸಿಎಗೆ ಸೀಟ್ ಕೊಡಿಸುವಂತೆ ಕೋರಿ ಕೊಂಡಿದ್ದರು. ಸೀಟ್ ಕೊಡಿಸುವ ಜತೆಗೆ ಆರ್ಥಿಕ ನೆರವು ಒದಗಿಸುವುದಕ್ಕೂ ಪ್ರಯತ್ನಿಸುವುದಾಗಿ  ಅನಿಲ್ ಭರವಸೆ ನೀಡಿದ್ದರು.

ಅನಿಲ್ ಅವರು ಈ ವಿಚಾರವನ್ನ  ರಿಷಬ್ ಪಂತ್ ಅವರಿಗೆ ಆತ್ಮೀಯರಾಗಿರುವ ತನ್ನ ಗೆಳಯನಿಗೆ ತಿಳಿಸಿದ್ದು ಅವರು ಈ ವಿಷಯವನ್ನ ರಿಷಬ್ ಪಂತ್ ಗೆ ತಿಳಿಸಿದ್ದಾರೆ. ಈ ವೇಳೆ ಕೂಡಲೇ ನೆರವಿಗೆ ಬಂದಿರುವ ರಿಷಬ್ ಪಂತ್ ಜುಲೈ 17ರಂದು ಕಾಲೇಜಿನ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಿದ್ದಾರೆ.

ವಿದ್ಯಾರ್ಥಿನಿ ಜ್ಯೋತಿಯ ಮೊದಲ ಸೆಮಿಸ್ಟರ್‌ ನ 40 ಸಾವಿರ ರೂ.ಗಳ ಶುಲ್ಕವನ್ನು ರಿಷಬ್ ಪಂತ್ ಕಟ್ಟಿದ್ದು  ಪುಟ್ಟ ಗ್ರಾಮದ ವಿದ್ಯಾರ್ಥಿನಿಗೆ ಯಾವುದೇ ಅಪೇಕ್ಷೆ ಇಲ್ಲದೆ ನೆರವು ನೀಡಿದ ರಿಷಬ್  ಪಂತ್ ಅವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

Key words: Cricketer, Rishabh Pant, financial assistance , student, education