ಕೋವಿಡ್ ಹೆಚ್ಚುವರಿ ಬಿಲ್: ನೊಂದ ಪತ್ರಕರ್ತನ ಕುಟುಂಬಕ್ಕೆ 3.50 ಲಕ್ಷ ರೂ ವಾಪಸ್ ಕೊಡಿಸಿದ ಕೆಯುಡಬ್ಲ್ಯೂಜೆ…

ಬೆಂಗಳೂರು, ಅಕ್ಟೋಬರ್,6,2020(www.justkannada.in):  ಕೋವಿಡ್ ಗೆ ಬಲಿಯಾದ ಪತ್ರಕರ್ತನ ಚಿಕಿತ್ಸೆಗಾಗಿ ಹೆಚ್ಚು ಬಿಲ್ ಮಾಡಿದ್ದ ಖಾಸಗಿ ಆಸ್ಪತ್ರೆಯಿಂದ ಹೆಚ್ಚುವರಿ ಹಣವನ್ನ  ನೊಂದ ಪತ್ರಕರ್ತನ ಕುಟುಂಬಕ್ಕೆ ವಾಪಸ್ ಕೊಡಿಸುವ ಮೂಲಕ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಮೆಚ್ಚುಗೆಗೆ ಪಾತ್ರವಾಗಿದೆ.jk-logo-justkannada-logo

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಕನ್ನಡ ಪ್ರಭ ಪತ್ರಿಕೆಯ ವರದಿಗಾರ ಎಸ್.ಕೆ.ಸುರೇಶ್ ಅವರು ಕೋವಿಡ್ ಗೆ ಬಲಿಯಾಗಿದ್ದು  ಇವರಿಗೆ ಚಿಕಿತ್ಸೆ ನೀಡಿದ್ದ ಬೆಂಗಳೂರಿನ ಖಾಸಗಿ ಆಸ್ಪತ್ರೆ ಹೆಚ್ಚುವರಿ ಬಿಲ್ ಮಾಡಿತ್ತು. ಸುರೇಶ್ ಅವರ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆ  13.50 ಲಕ್ಷ ರೂಪಾಯಿ ಬಿಲ್ ಮಾಡಿತ್ತು. ಈ ನಡುವೆ ಸಾಲ ಸೂಲ ಮಾಡಿದ ಸುರೇಶ್ ಅವರ ಪತ್ನಿ ಉಮಾ ಅವರು, ತನ್ನ ಒಡವೆಗಳನ್ನು ಮಾರಿ ಅದರಲ್ಲಿ 6.50 ಲಕ್ಷ ರೂಗಳನ್ನು ಆಸ್ಪತ್ರೆ ಬಿಲ್ ಪಾವತಿ ಮಾಡಿದ್ದರು.

ಆದರೂ, ಬಾಕಿ ಬಿಲ್ ಪಾವತಿಗಾಗಿ ಹಣ ಕೊಡುವಂತೆ ಆಸ್ಪತ್ರೆಯವರು ತಾಕೀತು ಮಾಡಿ ದಿನವೂ ಪೋನ್ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಬೇಸತ್ತ ಕುಟುಂಬ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರ ಗಮನಕ್ಕೆ ತಂದರು.

ಈ ಬಗ್ಗೆ ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ದೂರು ಸಲ್ಲಿಸಿ, ಸತತ ಫಾಲೊ ಅಪ್ ಮಾಡಿದ ಬಳಿಕ ತನಿಖೆ ನಡೆದು, ಸರ್ಕಾರ ನಿಗದಿ ಮಾಡಿದ ದರಕ್ಕಿಂತ ಆಸ್ಪತ್ರೆಯಲ್ಲಿ ಹೆಚ್ಚುವರಿ ಬಿಲ್  ಮಾಡಿರುವುದು ಬಯಲಾಯಿತು. ಕೆಯುಡಬ್ಲ್ಯೂಜೆ ಸತತ ಫಾಲೊ ಅಪ್ ಮಾಡಿದ ಹಿನ್ನೆಲೆಯಲ್ಲಿ ತಪ್ಪು ಅರಿವಾದ ಆ ಖಾಸಗಿ ಆಸ್ಪತ್ರೆ  ಹೆಚ್ಚುವರಿಯಾಗಿ ಪಡೆದಿದ್ದ 3.50 ಲಕ್ಷ ರೂ ಗಳನ್ನು ಚೆಕ್ ಮೂಲಕ ದಿ.ಸುರೇಶ್ ಪತ್ನಿ ಉಮಾ ಅವರಿಗೆ ಹಿಂತಿರುಗಿಸಿದೆ.covid-extra-bill-private-hospital-journalist-3-50-lakh-return-family-kuwj

ನೊಂದ, ತೀವ್ರ ಸಂಕಷ್ಟದಲ್ಲಿದ್ದ ಬಡ ಪತ್ರಕರ್ತನ ಕುಟುಂಬದ ಅಹವಾಲಿಗೆ ಕೂಡಲೇ ಸ್ಪಂದಿಸಿದ ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಅವರಿಗೆ ಹೃದಯ ಪೂರ್ವಕ ಕೃತಜ್ಞತೆಗಳನ್ನು ಸುರೇಶ್ ಕುಟುಂಬ ಸಲ್ಲಿಸಿದೆ. ಹೀಗೆ ದುಬಾರಿ ಬಿಲ್ ಗೆ ರೋಸಿ ಹೋದ ಎಷ್ಟು ಕುಟುಂಬಗಳಿವೆಯೋ? ಸರ್ಕಾರ ಈ ಬಗ್ಗೆ ಗಂಭೀರವಾಗಿ ಗಮನಹರಿಸಲಿ ಎಂದು ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಒತ್ತಾಯಿಸಿದ್ದಾರೆ.

ಹಿರಿಯ ಐಎಎಸ್‌ ಅಧಿಕಾರಿ ಹರ್ಷಗುಪ್ತ ಮತ್ತು ಹಿರಿಯ ಅಧಿಕಾರಿಗಳ ತಂಡ ದುಬಾರಿ ಬಿಲ್ ವಾಪಸ್ ಕೊಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವುದನ್ನು ಕೆಯುಡಬ್ಲ್ಯೂಜೆ ಶ್ಲಾಘಿಸಿದೆ.

Key words: covid -extra bill- private hospital- journalist-3.50 lakh –return-family  -KUWJ