ಮೈಸೂರು,ನವೆಂಬರ್,17,2025 (www.justkannada.in): ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ಜೈಲುಶಿಕ್ಷೆ, ದಂಡ ವಿಧಿಸಿ ಮೈಸೂರಿನ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.
ದಡಘಟ್ಟ ಗ್ರಾಮದ ಆರೋಪಿ ಕಿರಣ ಬಿನ್. ಮಂಜ ಜೈಲುಶಿಕ್ಷೆಗೆ ಗುರಿಯಾದ ಆರೋಪಿ. ಪಿರಿಯಾಪಟ್ಟಣ ತಾಲ್ಲೂಕು ಬೆಟ್ಟದಪುರ ಠಾಣಾ ವ್ಯಾಪ್ತಿಗೆ ಸೇರಿದ ಹಲಗನಹಳ್ಳಿ ಗ್ರಾಮದ ದೂರುದಾರರ ಮಗಳು ಅಪ್ರಾಪ್ತ ವಯಸ್ಸಿನ ಪಿ.ಯು.ಸಿ ವಿದ್ಯಾರ್ಥಿನಿಯಾಗಿದ್ದು, ಆಕೆಯನ್ನು ಜಾತ್ರೆಯ ಸಮಯದಲ್ಲಿ ಮಕ್ಕಳ ಆಟದ ಸಾಮಾನುಗಳನ್ನು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದ ದಡಘಟ್ಟ ಗ್ರಾಮದ ಆರೋಪಿ ಕಿರಣ ಬಿನ್. ಮಂಜ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದನು.
ಆರೋಪಿಗೆ ಈಗಾಗಲೇ ಮದುವೆಯಾಗಿದ್ದರೂ ಸಹ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ಪುಸಲಾಯಿಸಿ ದಿನಾಂಕ 23-03-2022 ರಂದು ‘ನಿಮ್ಮ ತಾಯಿ ಕರೆಯುತ್ತಿದ್ದಾರೆ’ ಎಂದು ಹೇಳಿ ಹಲಗನಹಳ್ಳಿಯಿಂದ ಕರೆದುಕೊಂಡು ಹುಬ್ಬಳ್ಳಿಗೆ ಬಂದು ಅಲ್ಲಿ ಒಂದು ಮನೆಯಲ್ಲಿ ಇರಿಸಿದ್ದನು. ಈ ಸಮಯದಲ್ಲಿ ಬಾಲಕಿಗೆ ತಾಳಿಯನ್ನು ಕಟ್ಟಿ ಬಾಲ್ಯ ವಿವಾಹ ಮಾಡಿಕೊಂಡಿದ್ದು, ನಂತರ ಅದೇ ಮನೆಯಲ್ಲಿ ಹಲವಾರು ಬಾರಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವನ್ನು ಎಸಗಿರುವುದು ಸಾಬೀತಾದ್ದರಿಂದ ಬೈಲುಕುಪ್ಪೆ ವೃತ್ತ ನಿರೀಕ್ಷಕ ಬಿ.ಜಿ.ಪ್ರಕಾಶ್ ಅವರು ಆರೋಪಿತನ ವಿರುದ್ಧ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ. ನ್ಯಾಯಾಧೀಶ ಆನಂದ್ ಪಿ. ಹೊಗಾಡೆ ಅವರು, ಆರೋಪಿತನ ವಿರುದ್ಧ ಅಪರಾಧ ಸಾಬೀತಾಗಿದೆ ಎಂದು ತಿಳಿಸಿ ಆರೋಪಿ ಕಿರಣ ಹೆಚ್.ಎಂ.ಗೆ ಪೊಕ್ಸೋ ಕಾಯಿದೆಯಡಿ ಅಪರಾಧಗಳಿಗೆ ಒಟ್ಟು 20 ವರ್ಷ ಕಠಿಣ ಸಜೆ ಹಾಗೂ 5,000/- ದಂಡ, ಬಾಲಕಿಯನ್ನು ಅಪಹರಣ ಮಾಡಿದ ಅಪರಾಧಕ್ಕೆ 10 ವರ್ಷ ಸಾದಾ ಸಜೆ ಮತ್ತು 5,000/- ದಂಡ, ಬಾಲಕಿಯನ್ನು ಬಾಲ್ಯ ವಿವಾಹ ಮಾಡಿಕೊಂಡಿರುವ ಅಪರಾಧಕ್ಕೆ 01 ವರ್ಷ ಸಾದಾ ಸಜೆ ಹಾಗೂ 5,000/- ಗಳ ದಂಡ ವಿಧಿಸಿ ತೀರ್ಪು ಪ್ರಕಟಿಸಿದರು.
ಈ ಪ್ರಕರಣದ ಅಭಿಯೋಜನೆಯನ್ನು ಕೆ.ಬಿ.ಜಯಂತಿ, ವಿಶೇಷ ಸರ್ಕಾರಿ ಅಭಿಯೋಜಕರು, ಪೋಕ್ಸೋ ವಿಶೇಷ ನ್ಯಾಯಾಲಯ, ಮೈಸೂರು ಅವರು ನಡೆಸಿದ್ದು ವಾದ ಮಂಡಿಸಿದರು.
Key words: Mysore court, sentences, accused, jail, rape, minor girl







