ದೇಶಕ್ಕೆ ಸರ್ದಾರ್ ವಲ್ಲಭಬಾಯಿ ಪಟೇಲರಂತಹ ಧೀಮಂತ ನಾಯಕತ್ವ ಅವಶ್ಯಕ : ಸಂಸ್ಕೃತಿ ಚಿಂತಕ ಚಕ್ರವರ್ತಿ ಸೂಲಿಬೆಲೆ

ಮೈಸೂರು,ಮಾರ್ಚ್,13,2021(www.justkannada.in) : ಎಲ್ಲದ್ದಕ್ಕಿಂತ ರಾಷ್ಟ್ರವೇ ದೊಡ್ಡದು ಎಂದು ನಿರೂಪಿಸಿದ್ದ, ದೇಶವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದ ಸರ್ದಾರ್ ವಲ್ಲಭಬಾಯಿ ಪಟೇಲರಂತಹ ಧೀಮಂತ ನಾಯಕತ್ವ ದೇಶಕ್ಕೆ ಅವಶ್ಯಕ ಎಂದು ಸಂಸ್ಕೃತಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

jk ನಗರದ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಶನಿವಾರ ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಎಚ್.ವಿ.ರಾಜೀವ್ ಸ್ನೇಹ ಬಳಗ, ಇನೊವೇಟಿವ್ ಮೈಸೂರು, ಭಾರತೀ ಪ್ರಕಾಶನ ವತಿಯಿಂದ ಹಮ್ಮಿಕೊಂಡ ಸಮಾರಂಭದಲ್ಲಿ ಜಿ.ಎಸ್.ಭಟ್ಟ ರಚನೆಯ ಏಕತೆಯ ಸರ್ದಾರ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಯುವಜನರಿಗೆ ಸಿನಿಮಾ ನಟರು, ಕ್ರಿಕೆಟ್ ಪಟುಗಳು ಮಾದರಿಯಾಗುತ್ತಿದ್ದು, ಯುವಜನರಿಗೆ ಮಾದರಿ ವ್ಯಕ್ತಿಗಳ ಕೊರತೆ ಇದೆ. ಇಂಥ ಹೊತ್ತಿನಲ್ಲಿ ಪಟೇಲ್ ಅವರ ಚಿಂತನೆಗಳನ್ನು ಹೆಚ್ಚಾಗಿ ಯುವಜನತೆಗೆ ತಲುಪಿಸುವ ಕಾರ್ಯವಾಗಬೇಕು. ಪಟೇಲರ ಚಿಂತನೆಗಳು ದೇಶದೆಲ್ಲೆಡೆ ವ್ಯಾಪಿಸುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಜಿ.ಎಸ್.ಭಟ್ಟ ಹೊರ ತಂದಿರುವ ಏಕತೆಯ ಸರ್ದಾರ ಕೃತಿ ನೆರವಾಗಬಲ್ಲದು ಎಂದರು.

ಇದೀಗ ದೇಶ ಸಾಗುತ್ತಿರುವ ದಿಕ್ಕೇ ಬೇರೆ
ಪ್ರಸ್ತುತ ವಿಶ್ವಕ್ಕೆ ಭಾರತ ಕೊರೊನಾ ಲಸಿಕೆ ಪೂರೈಕೆ ಮಾಡುತ್ತಿದೆ. ದೇಶಕ್ಕೆ ಇದುವರೆಗೆ ನಾಯಕತ್ವದ ಕೊರತೆ ಇತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಆಗಮನದಿಂದ ಆ ಕೊರತೆ ನೀಗಿದೆ. ಇದೀಗ ದೇಶ ಸಾಗುತ್ತಿರುವ ದಿಕ್ಕೇ ಬೇರೆಯಾಗಿದೆ. ಚೀನಾ ತಾನು ಉತ್ಪಾದಿಸುತ್ತಿರುವ ಕೊರೊನಾ ಲಸಿಕೆಯನ್ನು ನೀಡಬೇಕಾದರೆ ನಿಮ್ಮ ದೇಶದ ಭೂ ಭಾಗವನ್ನು ಅಡವಿಡಿ ಎಂದು ಕೇಳುತ್ತಿದೆ. ಆದರೆ, ಭಾರತ ಹಲವು ರಾಷ್ಟ್ರಗಳಿಗೆ ಉಚಿತವಾಗಿ ಕೊರೊನಾ ಲಸಿಕೆ ನೀಡುತ್ತಿದೆ. ಇದು ಹೊಸ ಕಲ್ಪನೆಯ ಭಾರತ, ಸರ್ದಾರ್ ಕಲ್ಪನೆಯ ಭಾರತವಾಗಿದೆ ಎಂದು ಹೇಳಿದರು.

ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಮಾತನಾಡಿ, ದೇಶದಲ್ಲಿ ಸಂಪತ್ತಿಗೆ, ಬುದ್ಧಿವಂತರಿಗೂ ಕೊರತೆ ಇಲ್ಲ. ಆದರೆ, ಉತ್ತಮ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಕೊರತೆಯಿಂದ ದೇಶ ನಿರೀಕ್ಷಿತ ಮಟ್ಟದ ಪ್ರಗತಿ ಸಾಧಿಸುತ್ತಿಲ್ಲ. ಚೀನಾ 25 ವರ್ಷಗಳ ಹಿಂದೆ ಬೆಳವಣಿಗೆ ಕಂಡಿರಲಿಲ್ಲ. ಆದರೆ, ಇಂದು ಚೀನಾ ಇಡೀ ವಿಶ್ವವವನ್ನೇ ಆವರಿಸಿಕೊಂಡಿದೆ. ಆದರೆ, ಚೀನಾಗಿಂತ ಉತ್ತಮ ಸಂಪತ್ತು, ಬುದ್ಧಿವಂತರು ನಮ್ಮಲ್ಲಿದ್ದರೂ ನಾವು ಬೆಳವಣಿಗೆ ಸಾಧಿಸಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಬೇಸರವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಚಂದ್ರಶೇಖರ್, ಸಹಕಾರಿ ಧುರೀಣ ಜಗದೀಶ್ ಹೆಬ್ಬಾರ್ ಕಾರಿಜ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಜಿ.ಎಸ್.ಭಟ್ಟ ಇತರರು ಉಪಸ್ಥಿತರಿದ್ದರು.

key words : country-Such-Sardar Vallabhbhai Patel-Leadership-Required-Culture-thinker-Emperor-Sulibele